ಶೌಚಾಲಯಗಳಿಲ್ಲದೇ ಜನರ ಪರದಾಟ

ಮಂಗಳವಾರ, ಮಾರ್ಚ್ 26, 2019
26 °C
ಕೊಳ್ಳೇಗಾಲ: ಕಾರ್ಯನಿರ್ವಹಿಸುತ್ತಿರುವುದು ಒಂದೇ ಒಂದು ಶೌಚಾಲಯ, ಮೂತ್ರ ವಿಸರ್ಜನೆಗೆ ಬಯಲೇ ಗತಿ

ಶೌಚಾಲಯಗಳಿಲ್ಲದೇ ಜನರ ಪರದಾಟ

Published:
Updated:
Prajavani

ಕೊಳ್ಳೇಗಾಲ: ನಗರಸಭೆಯ ವ್ಯಾಪ್ತಿಯಲ್ಲಿ ಸರಿಯಾದ ಸಾರ್ವಜನಿಕ ಶೌಚಾಲಯಗಳಿಲ್ಲದೆ, ಸಾರ್ವಜನಿಕರು ಅದರಲ್ಲೂ ದಿನನಿತ್ಯ ವಿವಿಧ ಕಡೆಗಳಿಂದ ನಗರಕ್ಕೆ ಬರುವುವರಿಗೆ ತೀವ್ರ ತೊಂದರೆಯಾಗುತ್ತಿದೆ.

ಶೌಚಾಲಯಗಳು ಇಲ್ಲದಿರುವುದರಿಂದ ಜನರು ಬಹಿರ್ದೆಸೆಗಾಗಿ ಬಯಲನ್ನೇ ಅವಲಂಬಿಸಬೇಕಾಗಿದೆ. ಇದರಿಂದ ಎಲ್ಲೆಂದರಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. 

ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಗುರುತಿಸಿಕೊಂಡಿರುವ ಕೊಳ್ಳೇಗಾಲ ನಗರಕ್ಕೆ ದಿನಂಪ್ರತಿ ವಿವಿಧ ವ್ಯವಹಾರಗಳಿಗಾಗಿ ಸಾವಿರಾರು ಜನರು ಭೇಟಿ ನೀಡುತ್ತಾರೆ. ರಾಷ್ಟ್ರೀಯ ಹೆದ್ದಾರಿ 209 ನಗರದ ಮೂಲಕವೇ ಹಾದು ಹೋಗುವುದರಿಂದ ಬಸ್‌ಗಳಲ್ಲಿ, ವಾಹನಗಳಲ್ಲಿ ಸಾಕಷ್ಟು ಮಂದಿ ಇಲ್ಲಿ ಸಂಚರಿಸುತ್ತಾರೆ. 

ಸುಪ್ರಸಿದ್ದ ಮಹದೇಶ್ವರ ಬೆಟ್ಟ, ಚಿಕ್ಕಲ್ಲೂರು, ಕುರುಬನಕಟ್ಟೆ ಮಠ ಸೇರಿದಂತೆ ಪ್ರಸಿದ್ದ ಧಾರ್ಮಿಕ ತಾಣಗಳು ಹಾಗೂ ಗಗನಚುಕ್ಕಿ, ಭರಚುಕ್ಕಿ, ಹಾಗೂ ಹೊಗೇನಕಲ್ ಜಲಪಾತಗಳಂತಹ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವವರು ಇಲ್ಲಿಗೆ ಬರುತ್ತಾರೆ. ಹಾಗಾಗಿ, ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಅಗತ್ಯ ಇಲ್ಲಿ ಹೆಚ್ಚಿದೆ. 

ಕೊಳ್ಳೇಗಾಲವು ಪುರಸಭೆಯಿಂದ ನಗರಸಭೆಗೆ ಬಡ್ತಿ ಪಡೆದು 10 ವರ್ಷಗಳೇ ಸಂದಿವೆ. ಆದರೂ ನಗರಕ್ಕೆ ಮೂಲ ಸೌಕರ್ಯಗಳು ಇನ್ನೂ ಸಿಕ್ಕಿಲ್ಲ. ಅದರಲ್ಲೂ ಸಾರ್ವಜನಿಕ ಶೌಚಾಲಯಗಳ ಕೊರತೆ ಬಹುವಾಗಿ ಕಾಡುತ್ತಿದೆ. 

ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ಮತ್ತು ಚೌಡೇಶ್ವರಿ ಕಲ್ಯಾಣ ಮಂಟಪ ರಸ್ತೆಯಲ್ಲಿ  ಶೌಚಾಲಯಗಳನ್ನು ನಿರ್ಮಿಸಲಾಗಿತ್ತು.

ಆದರೆ, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯ ಸಂದರ್ಭದಲ್ಲಿ ವೇಳೆ ಆಸ್ಪತ್ರೆ ಆವರಣದಲ್ಲಿದ್ದ ಶೌಚಾಲಯವನ್ನು ನೆಲಸಮಗೊಳಿಸಲಾಯಿತು. ನೂತನ ಬಸ್ ನಿಲ್ದಾಣ ಕಾಮಗಾರಿ  ಪ್ರಗತಿಯಲ್ಲಿರುವುದರಿಂದ ಅಲ್ಲಿರುವ ಶೌಚಾಲಯ ಈಗ ಬಳಕೆಗೆ ಮುಕ್ತವಾಗಿಲ್ಲ.

ಸದ್ಯ, ಚೌಡೇಶ್ವರಿ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಶೌಚಾಲಯ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಆದರೆ, ಅದು ನಿರ್ವಹಣೆಯ ಕೊರತೆಯನ್ನು ಎದುರಿಸುತ್ತಿದೆ. ಶೌಚಾಲಯ ಶುಚಿಯಾಗಿಲ್ಲ. ಗಬ್ಬು ನಾರುತ್ತದೆ. 

ನಗರದ ವಿವಿಧ ಕಡೆಗಳಲ್ಲಿ ಸುಸಜ್ಜಿತ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ನಗರಸಭೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ. 

ರಸ್ತೆಯಲ್ಲೇ ಮೂತ್ರ ವಿಸರ್ಜನೆ

ಶೌಚಾಲಯಗಳು ಇಲ್ಲದ ಕಾರಣ ಸಾರ್ವಜನಿಕರು ತಾತ್ಕಾಲಿಕ ಬಸ್ ನಿಲ್ದಾಣ, ವಾಟರ್ ಟ್ಯಾಂಕ್, ಐಬಿ ರಸ್ತೆ, ಆರ್.ಎಂ.ಸಿ. ರಸ್ತೆ, ತಾಲ್ಲೂಕು ಕಚೇರಿ ಎದುರು, ಎಲ್.ಐ.ಸಿ ಸಮೀಪ ರಸ್ತೆ, ಬಸ್ತೀಪುರ ರಸ್ತೆ, ಮಹದೇಶ್ವರ ಕಾಲೇಜು ರಸ್ತೆಗಳು ಬಯಲು ಶೌಚಾಲಯ ಆಗಿ ಪರಿವರ್ತನೆಯಾಗಿವೆ. 

ಕೆಲವರು ರಸ್ತೆ ಬದಿಯಲ್ಲಿರುವ ಗೋಡೆಗಳಿಗೆ ಮೂತ್ರ ಮಾಡುತ್ತಾರೆ. ಇದರಿಂದ ಸಾರ್ವಜನಿಕರಿಗೆ ರಸ್ತೆಯಲ್ಲಿ ಓಡಾಡುವುದು ತೊಂದರೆಯಾಗುತ್ತಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !