ಬಿಜೆಪಿಯಿಂದ ಸಂವಿಧಾನ ಬದಲು ಖಚಿತ: ಸಿದ್ದರಾಮಯ್ಯ ವ್ಯಂಗ್ಯ

ಬುಧವಾರ, ಏಪ್ರಿಲ್ 24, 2019
29 °C
ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮೋದಿ ವಿರುದ್ಧ ವಾಗ್ದಾಳಿ

ಬಿಜೆಪಿಯಿಂದ ಸಂವಿಧಾನ ಬದಲು ಖಚಿತ: ಸಿದ್ದರಾಮಯ್ಯ ವ್ಯಂಗ್ಯ

Published:
Updated:
Prajavani

ಕೊಳ್ಳೇಗಾಲ: ‘ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಆಗುವುದು ಖಂಡಿತ‌’ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು.

ನಗರದ ನ್ಯಾಷನಲ್ ಮಿಡ್ಲಿ ಸ್ಕೂಲ್ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘5 ವರ್ಷಗಳ ಬಿಜೆಪಿ ಸರ್ಕಾರ ಸಂವಿಧಾನದ ಆಧಾರದಲ್ಲಿ ಇಟ್ಟುಕೊಂಡು ಕೆಲಸ ಮಾಡಿಲ್ಲ. ಈ ದೇಶದ ಧರ್ಮಶಾಸ್ತ್ರ ಸಂವಿಧಾನ. ಈ ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು’ ಎಂದು ಅವರು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಸುತ್ತುವುದರಲ್ಲಿ ಮತ್ತು ಸುಳ್ಳು ಹೇಳುವುದರಲ್ಲಿ ನಂ 1. ಮೋದಿ ಸರ್ಕಾರ ದೇಶದ ಬಡಜನರಿಗೆ, ರೈತರಿಗೆ ಅನ್ಯಾಯ ಮಾಡಿದೆ. ಅವರು ದೇಶದ ಕಾವಲುಗಾರ ಅಲ್ಲ; ದೇಶದಲ್ಲಿರುವ 15 ಜನ ಶ್ರೀಮಂತರಿಗೆ ಮಾತ್ರ ಕಾವಲುಗಾರ’ ಎಂದು ವಾಗ್ದಾಳಿ ನಡೆಸಿದರು.

‘ಕೋಮುವಾದಿ ಬಿಜೆಪಿಗೆ ಯಾರೂ ಮತ ನೀಡಬಾರದು. ಮೀಸಲಾತಿ ಬೇಕೆಂದರೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಬಿಜೆಪಿಗೆ ಮತ ಹಾಕಬಾರದು. ಇಡೀ ಜಗತ್ತು ಭಾರತದ ಚುನಾವಣೆಯನ್ನು ಗಮನಿಸುತ್ತಿದೆ. ಅಂಬೇಡ್ಕರ್ ರಚಿಸಿರುವ ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಅಪಾಯದ ಬಗ್ಗೆ ಎಲ್ಲರೂ ಚಿಂತಿಸಬೇಕು’ ಎಂದು ಹೇಳಿದರು.

‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಮೋದಿ ಮತ್ತು ಯಡಿಯೂರಪ್ಪ ರಾಜ್ಯದ 28 ಕ್ಷೇತ್ರಗಳಲ್ಲೂ ಒಬ್ಬನೇ ಒಬ್ಬ ಹಿಂದುಳಿದ ವರ್ಗ, ಅಲ್ಪಸಂಖ್ಯಾತನಿಗೆ ಟಿಕೆಟ್ ನೀಡಿಲ್ಲ. ಬಾಯಿಬಡುಕ ಈಶ್ವರಪ್ಪ ಕುರುಬ ಸಮುದಾಯದ ಒಬ್ಬನಿಗೆ ಟಿಕೆಟ್ ಕೊಡಿಸಿಲ್ಲ. ಹಿಂದುಳಿದ ವರ್ಗದವರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ, ರೈತರಿಗೆ ಏನನ್ನೂ ನೀಡದ ಮೋದಿ ಅವರಿಗೆ ಮತ ಹಾಕಬೇಕೆ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಮುಖಂಡ ಎಚ್.ಸಿ.ಮಹದೇವಪ್ಪ, ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿ ಆರ್.ಧ್ರುವನಾರಾಯಣ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕ ನರೇಂದ್ರ, ಮುಖಂಡರಾದ ಕಾಗಲವಾಡಿ ಶಿವಣ್ಣ, ಎ.ಆರ್.ಕೃಷ್ಣಮೂರ್ತಿ, ಎಸ್.ಜಯಣ್ಣ, ಎಸ್.ಬಾಲರಾಜು, ವಸಂತಿ ಶಿವಣ್ಣ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸವರಾಜು, ಮರುಗದಮಣಿ, ಲೇಖಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜೇಂದ್ರ, ಉಪಾಧ್ಯಕ್ಷೆ ಲತಾ ರಾಜಣ್ಣ, ಜೆ.ಡಿ.ಎಸ್.ಮುಖಂಡರಾದ ಶಿವಮಲ್ಲು, ಅಜೀಕ್, ಚಾಮರಾಜು, ಚಾಮುಲ್ ಅಧ್ಯಕ್ಷ ಗುರುಮಲ್ಲಪ್ಪ ಸೇರಿದಂತೆ ಇತರರು ಇದ್ದರು.

 ‘ಮೋದಿಯೇ ದಾಳಿ ಮಾಡಿದ್ದಾರಾ?’

‘ನರೇಂದ್ರ ಮೋದಿ ಅವರು ಮತ ಪಡೆಯುವುದಕ್ಕಾಗಿ ಸರ್ಜಿಕಲ್ ಸ್ಟ್ರೈಕ್ ನಾನೇ ಮಾಡಿಸಿದ್ದು ಎಂದು ಹೇಳುತ್ತಾರಲ್ಲಾ, ಅವರೇನು ದಾಳಿ ಮಾಡುವುದಕ್ಕೆ ಬಂದೂಕು ತೆಗೆದುಕೊಂಡು ಹೋಗಿದ್ದರ? ಯುಪಿಎ ಅವಧಿಯಲ್ಲಿ 15ಕ್ಕೂ ಹೆಚ್ಚು ಸರ್ಜಿಕಲ್‌ ದಾಳಿ ನಡೆದಿದೆ. ಆಗ ಮೋದಿ ಎಲ್ಲಿದ್ದರು’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸಂಸದರು ಏನೂ ಕೆಲಸ ಮಾಡಿಲ್ಲ. ಅದಕ್ಕೆ ಅವರು ಮೋದಿ ಹೆಸರು ಹೇಳುತ್ತಿದ್ದಾರೆ. ಮೋದಿ ಅವರು ಮಾಡಿರುವ  ಒಳ್ಳೆಯ ಕೆಲಸಗಳೇನು? ನಿರುದ್ಯೋಗಿ ಯುವಕ ಯುವತಿಯರಿಗೆ ಎರಡು ಕೋಟಿ ಉದ್ಯೋಗ ಕೊಡುತ್ತೇನೆ ಎಂದು ರೈಲು ಬಿಟ್ಟಿದ್ದಾರೆ. ಕಪ್ಪು ಹಣ ತರಲಿಲ್ಲ’ ಎಂ‌ದು ವ್ಯಂಗ್ಯವಾಡಿದರು.

ಚುನಾವಣೆ ಬಳಿಕ ಸರ್ಕಾರ ಪತನವಾಗಲಿದೆ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಮೈತ್ರಿ ಸರ್ಕಾರ ರಚನೆ ಆದಾಗಿಂದಲೂ ಈ ಸರ್ಕಾರ ಬೀಳುತ್ತದೆ ಎಂದು ಯಡಿಯೂರಪ್ಪ ಹೇಳುತ್ತಲೇ ಇದ್ದಾರೆ. ನನಗೂ ಕೇಳಿ ಕೇಳಿ ಸಾಕಾಗಿ ಹೋಗಿದೆ‌’ ಎಂದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !