ಬುಧವಾರ, ನವೆಂಬರ್ 20, 2019
22 °C

ಕೊನೆಯ ತರ್ಪಣ

Published:
Updated:
Prajavani

ಗಂಟೆ ಬಾರಿಸುತ್ತಲೇ ಇದೆ
ಕತ್ತಲಿನ ದಪ್ಪ ಗೋಡೆಗೆ
ಮರ ನಿಶ್ಚಲ ಹಕ್ಕಿ ಮೌನ
ಎಲ್ಲರ ಎದೆಗೂಡು ಹಿಮಗಡ್ಡೆ

ಯಾವ ಸೂಚನೆ?
ಬಿಸಿಯುಸಿರ ಅಡವಿಟ್ಟುಕೊಂಡ ನೀನು
ಕಿವುಡಾಗಿದ್ದೀಯೇನು?
ಅಥವಾ
ಕೂತಲ್ಲೇ ಹಿಮಗಟ್ಟಿದ್ದೀಯೋ?

ನಿನ್ನೆ ಬೆಳಗಿನಿಂದ
ಮೊದ ಮೊದಲು
ತೆಳು ರೆಂಬೆಗಳಿಗೆ ಬೂದು ಬಣ್ಣದ ಚಿಟ್ಟೆ ಜೋತು
ರೆಕ್ಕೆ ಮರೆತವರಂತೆ ಮಂಪರಿನಲ್ಲಿದ್ದವು
ಬಿಸಿಲೇರಿದರೂ ಮಿಸುಕಲಿಲ್ಲ
ಏನೋ ಎಡವಟ್ಟಿರಬೇಕೆಂದು
ಹಗಲು ನೂಕಿ
ಇರುಳ ಬಾಗಿಲಿಗೆ ಬಂದರೆ
ಯಾವ ಲೋಹದ ಝಣಪೋ!
ಗಂಟೆ ತಡೆದ ಈ ಗಂಟೆ ಸದ್ದು

ಎಲ್ಲವೂ ಕುಸಿತ
ಕೊಡುವರಿಲ್ಲದೆ ಕೊಳ್ಳುವರಿಲ್ಲದೆ
ಜೀವ ಪ್ರೇಮ!

ಋತುಮಾನಗಳ ಮೈಯಡರಿದ ತಣುವಿಗೆ
ಆಸನಕೆ ರೂಪಿಸಿದ ಸಂಚುಗಾರರು
ಪರ ವಿರೋಧದ ಮೊನಚು ಕಳೆದು
ಸುಕ್ಕಾಗಿ ಸುರುಟುತ್ತಿರುವ
ಪುಪ್ಪಸಗಳ ಹಿಡಿದು
ಬಿದ್ದು ಒದ್ದಾಡುತ್ತಿರುವರು
ರಣರಂಗದ ಗಾಯಾಳುಗಳಂತೆ

ಅಹ! ಹದ್ದಿನ ರೆಕ್ಕೆಯ ಮೇಲೆ ಸಹ್ಯಾದ್ರಿ ಸಾಲು
ಕಟ್ಟಿಲ್ಲದ ನದಿ ದಂಡೆಗೊಂದೊಂದು ಗದ್ದೆ ಹೊಲ
ನೇಗಿಲಯೋಗಿಯ ಗೀತೆ
ಮತ್ತೆ ಕೊಟ್ಟೀತೆ
ಅನ್ನ
ಪ್ರೀತಿ
ಕರುಣೆ
ಮತ್ತು
ಈ ಪಾತಕಿಗಳಿಗೊಂದು ಕೊನೆಯ ತರ್ಪಣ?

ಪ್ರತಿಕ್ರಿಯಿಸಿ (+)