ಮಂಗಳವಾರ, ಅಕ್ಟೋಬರ್ 22, 2019
21 °C
ಯುವತಿಯ ಖಾಸಗಿ ಫೋಟೊ ಅಪ್‌ಲೋಡ್ ಮಾಡಿದ್ದ

ಮಾಜಿ ಸ್ನೇಹಿತೆಗೆ ಕಿರುಕುಳ: ಸಿಇಒ ಬಂಧನ

Published:
Updated:
Prajavani

ಬೆಂಗಳೂರು: ಮಾಜಿ ಸ್ನೇಹಿತೆಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿ ಅವರ ಮನೆಗೂ ಹೋಗಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ರಾಹುಲ್‌ಕುಮಾರ್ ಸಿಂಗ್ (28) ಎಂಬಾತನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಯಾದ ರಾಹುಲ್‌ಕುಮಾರ್, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ನವೋದ್ಯಮ ಕಂಪನಿಯೊಂದರ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ). ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಯುವತಿ ಹಾಗೂ ಆರೋಪಿ ಪಾಲುದಾರಿಕೆಯಲ್ಲಿ ಕಂಪನಿಯೊಂದನ್ನು ಆರಂಭಿಸಿದ್ದರು. ಯುವತಿಯ ಸಾಮಾಜಿಕ ಜಾಲತಾಣಗಳ ಪಾಸ್‌ವರ್ಡ್‌ಗಳನ್ನು ಆರೋಪಿ ತಿಳಿದುಕೊಂಡಿದ್ದ. ಅವರಿಬ್ಬರ ನಡುವೆ ವೈಮನಸ್ಸು ಉಂಟಾಗಿ ಕೆಲ ತಿಂಗಳ ಹಿಂದಷ್ಟೇ ಬೇರೆ ಬೇರೆ ಆಗಿದ್ದರು. ಕೋಪಗೊಂಡಿದ್ದ ಆರೋಪಿ, ಯುವತಿಯ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳಿಗೆ ಲಾಗ್‌–ಇನ್ ಆಗಿ ಖಾಸಗಿ ಫೋಟೊಗಳನ್ನು ಅಪ್‌ಲೋಡ್‌ ಮಾಡಿದ್ದ’ ಎಂದರು.

‘ಆತನ ವಿರುದ್ಧ ಸೆಪ್ಟೆಂಬರ್ 12ರಂದೇ ಯುವತಿ ಎಚ್‌ಎಸ್‌ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದರು. ಅದಾದ ನಂತರವೂ ಆರೋಪಿ ಯುವತಿಯನ್ನು ಹಿಂಬಾಲಿಸಲಾರಂಭಿಸಿದ್ದ. ಅಶ್ಲೀಲ ಸಂದೇಶವನ್ನೂ ಕಳುಹಿಸುತ್ತಿದ್ದ. ಕೋರಮಂಗಲದಲ್ಲಿರುವ ಯುವತಿ ಮನೆಗೂ ಅಕ್ರಮವಾಗಿ ಪ್ರವೇಶಿಸಿ ಬೆದರಿಕೆ ಹಾಕಲಾರಂಭಿಸಿದ್ದ. ನೊಂದ ಯುವತಿ, ಆರೋಪಿ ವಿರುದ್ಧ ಕೋರಮಂಗಲ ಠಾಣೆಗೆ ಎರಡನೇ ದೂರು ನೀಡಿದ್ದರು.’ 

’ಲೈಂಗಿಕ ದೌರ್ಜನ್ಯ, ಜೀವ ಬೆದರಿಕೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)