ಮೀಸಲು ಕ್ಷೇತ್ರ ‘ಕೈ’ ವಶಕ್ಕೆ ಕೆಪಿಸಿಸಿ ಕಾರ್ಯತಂತ್ರ..!

7
ಜಿಲ್ಲೆಯ ಪ್ರಮುಖರಾದ ಸಚಿವ ಶಿವಾನಂದ ಎಸ್.ಪಾಟೀಲ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಗೈರು

ಮೀಸಲು ಕ್ಷೇತ್ರ ‘ಕೈ’ ವಶಕ್ಕೆ ಕೆಪಿಸಿಸಿ ಕಾರ್ಯತಂತ್ರ..!

Published:
Updated:

ವಿಜಯಪುರ: ಎರಡು ದಶಕದಿಂದ ಬಿಜೆಪಿಯ ಭದ್ರಕೋಟೆಯಾಗಿರುವ ವಿಜಯಪುರ ಲೋಕಸಭಾ ಕ್ಷೇತ್ರವನ್ನು ತನ್ನ ‘ಕೈ’ ವಶಪಡಿಸಿಕೊಳ್ಳಲು ಕೆಪಿಸಿಸಿ ಕಾರ್ಯತಂತ್ರ ರೂಪಿಸಲು ಚಾಲನೆ ನೀಡಿದೆ.

ರಾಜ್ಯದ 27 ಲೋಕಸಭಾ ಕ್ಷೇತ್ರಗಳ ಚುನಾವಣಾ ತಯಾರಿಗಾಗಿ, ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿದ್ದ ಕೆಪಿಸಿಸಿ, ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದ ಸಭೆಯನ್ನು ವಿವಿಧ ಕಾರಣಗಳಿಂದ ಹಲ ಬಾರಿ ಮುಂದೂಡಿತ್ತು.

ಬೆಳಗಾವಿಯಲ್ಲಿ ಮಂಗಳವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆದ ಬೆನ್ನಿಗೆ, ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಪೂರ್ವಭಾವಿ ಸಭೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನಡೆಸಿದರು. ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಾಥ್‌ ನೀಡಿದರು ಎಂಬುದು ಗೊತ್ತಾಗಿದೆ.

ಲೋಕಸಭೆ ಗೆಲುವು ಏಕಿಲ್ಲ ?

‘ವಿಜಯಪುರ ಜಿಲ್ಲೆಯಲ್ಲಿ ಈಚೆಗೆ ನಡೆದ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಲ ಕಡಿಮೆಯಾದರೂ ಸಾಧನೆ ಕಳಪೆಯಲ್ಲ. ಬಿಜೆಪಿಗೆ ಸಮನಾಂತರ ಪೈಪೋಟಿ ನೀಡಿದ್ದೇವೆ.

ವಿಧಾನ ಪರಿಷತ್ ಚುನಾವಣೆ ಗೆದ್ದುಕೊಂಡಿದ್ದೇವೆ. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಪಟ್ಟಣ ಪಂಚಾಯ್ತಿ, ಮಹಾನಗರ ಪಾಲಿಕೆ ಆಡಳಿತ ‘ಕೈ’ ವಶದಲ್ಲಿದೆ. ಇಷ್ಟಿದ್ದರೂ ಲೋಕಸಭೆ ಚುನಾವಣೆ ಏಕೆ ಗೆಲ್ಲುತ್ತಿಲ್ಲ ? ಎಂಬ ವಿಷಯ ಸಭೆಯಲ್ಲಿ ಚರ್ಚೆಯಾಯ್ತು’ ಎಂದು ಸಭೆಯಲ್ಲಿ ಭಾಗಿಯಾಗಿದ್ದ ಜಿಲ್ಲೆಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಆಡಳಿತವಿದೆ. ದೇಶದಲ್ಲಿ ಬದಲಾವಣೆ ಗಾಳಿ ಬೀಸಿದೆ. ಪ್ರತಿ ಕ್ಷೇತ್ರ ಗೆಲ್ಲಬೇಕಾದ ಅನಿವಾರ್ಯತೆ ಕಾಂಗ್ರೆಸ್‌ಗಿದೆ. ಆದ್ದರಿಂದ ಜಿಲ್ಲೆಯ ಮುಖಂಡರು ತಮ್ಮ ವೈಯಕ್ತಿಕ ಪ್ರತಿಷ್ಠೆ ತೊರೆದು, ಪಕ್ಷಕ್ಕಾಗಿ ಲೋಕಸಭಾ ಕ್ಷೇತ್ರ ಗೆಲ್ಲಲು ಆದ್ಯತೆ ನೀಡಬೇಕಿದೆ’ ಎಂದು ದಿನೇಶ್‌ ಗುಂಡೂರಾವ್ ಪಕ್ಷದ ಪದಾಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದರು ಎನ್ನಲಾಗಿದೆ.

ಪಾಟೀಲತ್ರಯರ ಗೈರು

ಬಸವನಬಾಗೇವಾಡಿ ಶಾಸಕ, ಆರೋಗ್ಯ ಸಚಿವ ಶಿವಾನಂದ ಎಸ್.ಪಾಟೀಲ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಸಭೆಗೆ ಹಾಜರಾಗಿಲ್ಲ. ಇದು ಜಿಲ್ಲಾ ಕಾಂಗ್ರೆಸ್‌ ಘಟಕದಲ್ಲಿ ಹಲವು ಅನುಮಾನಗಳಿಗೆ ಆಸ್ಪದ ನೀಡಿದೆ.

ಜಿಲ್ಲಾ ಕಾಂಗ್ರೆಸ್‌ನ ಬಣ ರಾಜಕಾರಣದ ಮುಂದುವರಿದ ಭಾಗ ಇದು ಎಂಬುದು ಒಂದೆಡೆ ಕೇಳಿ ಬಂದರೆ, ಇನ್ನೊಂದೆಡೆ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವ ಎಂ.ಬಿ.ಪಾಟೀಲ ಸಭೆಯಿಂದ ದೂರ ಉಳಿದಿದ್ದಾರೆ. ಇವರನ್ನು ಸಹೋದರ ಸುನೀಲಗೌಡ ಪಾಟೀಲ ಹಿಂಬಾಲಿಸಿದ್ದಾರೆ ಎಂಬುದು ಜಿಲ್ಲಾ ರಾಜಕಾರಣದ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ವಿಧಾನಪರಿಷತ್ ಸದಸ್ಯರಾದ ಎಸ್.ಆರ್.ಪಾಟೀಲ, ಪ್ರಕಾಶ ರಾಠೋಡ, ಮಾಜಿ ಸಚಿವ ಸಿ.ಎಸ್.ನಾಡಗೌಡ, ಮಾಜಿ ಶಾಸಕರಾದ ಡಾ.ಮಕ್ಬೂಲ್ ಎಸ್.ಬಾಗವಾನ, ಪ್ರೊ.ರಾಜು ಆಲಗೂರ, ಶರಣಪ್ಪ ಸುಣಗಾರ, ಮನೋಹರ ಐನಾಪುರ, ಜಿಲ್ಲಾ ಘಟಕ–ಅಂಗ ಘಟಕದ ಪ್ರಮುಖರು, ಬಿಸಿಸಿ ಅಧ್ಯಕ್ಷರು, ಕೆಪಿಸಿಸಿ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ನಾಲ್ಕು ಚುನಾವಣೆಯಲ್ಲಿ ಬಿಜೆಪಿ ಮೇಲುಗೈ

ವಿಜಯಪುರ ನಗರ ಶಾಸಕರಾಗಿದ್ದ ಬಸನಗೌಡ ಪಾಟೀಲ ಯತ್ನಾಳ 1999ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಇದೇ ಅವಧಿಯಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಸಂಪುಟದಲ್ಲಿ ರೈಲ್ವೆ, ಜವಳಿ ಖಾತೆಯ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದರು.

2004ರ ಲೋಕಸಭಾ ಚುನಾವಣೆಯಲ್ಲಿ ಪುನರಾಯ್ಕೆಯಾಗಿದ್ದರು. ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಪರಿಶಿಷ್ಟ ಜಾತಿಗೆ ವಿಜಯಪುರ ಲೋಕಸಭಾ ಕ್ಷೇತ್ರ ಮೀಸಲಾಯಿತು. 1998ರಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ವಲಸೆ ಹೋಗಿ, ಹ್ಯಾಟ್ರಿಕ್ ವಿಜಯಭೇರಿ ಬಾರಿಸಿದ್ದ ರಮೇಶ ಜಿಗಜಿಣಗಿ 2009ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಸಂಸದರಾಗಿದ್ದರು. 2014ರಲ್ಲಿ ಮತ್ತೊಮ್ಮೆ ಆಯ್ಕೆಯಾಗಿದ್ದು, ಇದೀಗ ಕೇಂದ್ರದಲ್ಲಿ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಖಾತೆಯ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದೀಗ ಬಿಜೆಪಿಯಲ್ಲಿನ ಬಣ ರಾಜಕಾರಣ, ತಿಕ್ಕಾಟ ತೀವ್ರ ಸ್ವರೂಪ ಪಡೆದಿದ್ದು, ಈ ಆಂತರಿಕ ಬೇಗುದಿಯ ಲಾಭವನ್ನು ಕಾಂಗ್ರೆಸ್‌ ತನ್ನ ಗೆಲುವನ್ನಾಗಿ ಪರಿವರ್ತಿಸಿಕೊಳ್ಳಲು ಕಾರ್ಯತಂತ್ರ ರೂಪಿಸುತ್ತಿದೆ ಎಂಬುದು ಕೆಪಿಸಿಸಿ ಮೂಲಗಳಿಂದ ತಿಳಿದು ಬಂದಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !