ಶುಕ್ರವಾರ, ಸೆಪ್ಟೆಂಬರ್ 20, 2019
22 °C
ರಾಸಾಯನಿಕ ಗೊಬ್ಬರ ಬಳಸಿ ಕೈ ಸುಟ್ಟುಕೊಂಡಿದ್ದ ರೈತ ಇಳಂಗೋ‌

ಸಾವಯವ ಪದ್ಧತಿಯಲ್ಲಿ ಬಾಳೆ ಕೃಷಿ

Published:
Updated:
Prajavani

ಹನೂರು: ಹೆಚ್ಚಿನ ಇಳುವರಿ ಪಡೆಯುವ ಸಲುವಾಗಿ ರೈತರು ರಾಸಾಯನಿಕ ಗೊಬ್ಬರದ ಮೊರೆ ಹೋಗುತ್ತಿರುವ ಇಂದಿನ ದಿನಗಳಲ್ಲಿ ಇಲ್ಲೊಬ್ಬರು ಇರುವ ಅಲ್ಪನೀರಿನಲ್ಲೇ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಪಟ್ಟಣದ ರೈತ ಇಳಂಗೋ ಅವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮೂಲಕ ಬಾಳೆ ಬೆಳೆಯುತ್ತಿದ್ದಾರೆ. ಈ ಹಿಂದೆ ಇದೇ ಜಮೀನಿನಲ್ಲಿ ಬಾಳೆ ಬೆಳೆದು ಕೈಸುಟ್ಟುಕೊಂಡಿದ್ದ ಅವರು, ಈ ಬಾರಿ ತನ್ನದೇ ಆಲೋಚನೆಯಲ್ಲಿ ರಾಸಾಯನಿಕ ಗೊಬ್ಬರ ಬಳಸದೆ ಬಾಳೆ ಕೃಷಿ ಮಾಡುತ್ತಿದ್ದಾರೆ.

ಕಳೆದ ವರ್ಷ ಇದೇ ಜಮೀನಿನಲ್ಲಿ ರಾಸಾಯನಿಕ ಗೊಬ್ಬರ ಬಳಸಿ ಬಾಳೆ ಬೆಳೆದಿದ್ದರು. ನಿರೀಕ್ಷೆ ಮಟ್ಟದಲ್ಲಿ ಇಳುವರಿ ಬಂದಿರಲಿಲ್ಲ. ಈ ಬಾರಿ, ಅದೇ ಬಾಳೆ ಗಿಡಗಳನ್ನು ಕತ್ತರಿಸಿ ಜಮೀನಿನಲ್ಲೇ ತಿಂಗಳುಗಟ್ಟಲೆ ಕೊಳೆಯಲು ಬಿಟ್ಟು, ಈಗ ಇದೇ ಜಮೀನಿನಲ್ಲಿ ಹೊಸದಾಗಿ ಬಾಳೆಗಿಡಗಳನ್ನು ಹಾಕಿದ್ದಾರೆ. ಗಿಡಗಳು ಸಮೃದ್ಧವಾಗಿ ಬೆಳೆದಿವೆ. ಬಾಳೆದಿಂಡು, ಎಲೆ ಹಾಗೂ ಕೊಟ್ಟಿಗೆ ಗೊಬ್ಬರ ಬಳಸಿದ ಪರಿಣಾಮ ಕಡಿಮೆ ನೀರಿನಲ್ಲೂ ಗಿಡಗಳು ಯಾವುದೇ ರೋಗಬಾಧೆಯಿಲ್ಲದೆ ಉತ್ತಮವಾಗಿ ಬೆಳೆದು ನಿಂತಿವೆ.

ಕಡಿಮೆ ಖರ್ಚು: ಬಿತ್ತನೆ ಮಾಡುವ ಸಂದರ್ಭದಲ್ಲಿ ಅವರು ಹೆಚ್ಚು ಖರ್ಚು ಮಾಡಿಲ್ಲ. ಕೂಲಿಯಾಳುಗಳು, ಯಂತ್ರಗಳನ್ನೂ ಬಳಸಿಲ್ಲ. ಗಿಡಗಳ ನಡುವೆ ಆರು ಅಡಿ ಅಂತರ ಇಟ್ಟಿದ್ದಾರೆ. ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ.

‘ಆರಂಭದಲ್ಲಿ ನನ್ನ ಕೃಷಿ ಪದ್ಧತಿಯನ್ನು ನೋಡಿ ಕೆಲವು ಸ್ನೇಹಿತರು ನಕ್ಕಿದ್ದರು. ಬಿತ್ತನೆಗೂ ಮುನ್ನ ಜಮೀನನ್ನು ಹದಗೊಳಿಸುವ ಬದಲು, ಹಳೆಯ ಬಾಳೆದಿಂಡು, ಕಳೆಗಳಿಂದ ಕೂಡಿದ ಅಸ್ತವ್ಯಸ್ತವಾಗಿದ್ದ ಜಮೀನಿನಲ್ಲೇ ಕೃಷಿ ಮಾಡಲು ಮುಂದಾಗಿರುವ ಬಗ್ಗೆ ಗೇಲಿ ಮಾಡಿದರು. ಆದರೆ, ಇದಾವುದಕ್ಕೂ ಸೊಪ್ಪು ಹಾಕದೆ ನನ್ನ ಆಲೋಚನೆಗೆ ತಕ್ಕಂತೆ ಕೃಷಿ ಮಾಡಲು ಮುಂದಾದೆ’ ಎಂದು ಇಳಂಗೋ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ಬೆಳೆದಿದ್ದ ಗಿಡಗಳನ್ನು ಕತ್ತರಿಸಿ ಜಮೀನಿನಲ್ಲೇ ಹಾಕಿದೆ. ಅದು ಕೊಳೆತು ಗೊಬ್ಬರವಾಗಿ ಪರಿಣಮಿಸಿತು. ಜತೆಗೆ, ನಿಯಮಿತವಾಗಿ ಕೊಟ್ಟಿಗೆ ಗೊಬ್ಬರವನ್ನು ಬಳಸತೊಡಗಿದೆ. ಬೇಸಿಗೆಯಾಗಿರುವುದರಿಂದ ಕೊಳವೆಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇರುವ ಅಲ್ಪ ನೀರಿನಲ್ಲೇ ಹನಿ ನೀರಾವರಿ ಪದ್ಧತಿ ಬಳಸಿಕೊಂಡೆ. ಈಗ ಗಿಡಗಳು ಉತ್ತಮವಾಗಿ ಬೆಳೆದು ಗೊನೆ ಬಿಡುವ ಹಂತಕ್ಕೆ ಬಂದಿವೆ. ಕೆಲವೇ ದಿನಗಳಲ್ಲಿ ಗೊನೆ ಬಿಡುವುದರಿಂದ ನೀರಿನ ಅಗತ್ಯ ಹೆಚ್ಚಾಗಬಹುದು. ಅದಕ್ಕೂ ಬೇಕಾದ ಎಲ್ಲ ತಯಾರಿ ಮಾಡಿಕೊಂಡಿದ್ದೇನೆ’ ಎಂದು ಅವರು ವಿವರಿಸಿದರು.

Post Comments (+)