ಗುಣಮಟ್ಟದ ತಳಿಗೆ ವರ್ಷಕ್ಕೂ ಮೊದಲೇ ಬುಕ್ಕಿಂಗ್‌

ಸೋಮವಾರ, ಜೂನ್ 17, 2019
23 °C
ಯಳಂದೂರು: ತೆಂಗಿನ ಸಸಿಗಳ ಬೆಳೆಗಾರ ಚಾಮಲಾಪುರ ಸಿದ್ಧಲಿಂಗಸ್ವಾಮಿ

ಗುಣಮಟ್ಟದ ತಳಿಗೆ ವರ್ಷಕ್ಕೂ ಮೊದಲೇ ಬುಕ್ಕಿಂಗ್‌

Published:
Updated:
Prajavani

ಯಳಂದೂರು: ವಾಣಿಜ್ಯ ಬೆಳೆ ತೆಂಗಿಗೆ ವರ್ಷಪೂರ್ತಿ ಬೇಡಿಕೆ ಇದೆ. ಪಾನೀಯ, ಎಣ್ಣೆ, ಕೊಬ್ಬರಿ, ಕೈಗಾರಿಕೆಗೆ ಕಚ್ಚಾವಸ್ತು ಪೂರೈಕೆ, ಕೊಬ್ಬು ಮತ್ತು ಪೌಷ್ಟಿಕ ಆಹಾರದ ಮೂಲವೂ ಆಗಿದೆ.

ತಾಲ್ಲೂಕಿನ ಚಾಮಲಾಪುರ ಗ್ರಾಮದ ಸಿದ್ಧಲಿಂಗಸ್ವಾಮಿ ಅವರು ಹೆಚ್ಚು ಇಳುವರಿ ನೀಡುವ ಹಾಗೂ ದೀರ್ಘಕಾಲ ಬರುವ ತೆಂಗು ತಳಿಗಳನ್ನು ಬೆಳೆಸುವ ಕೃಷಿಕ. ಇವರು ನಾಟಿ ಮಾಡುವ ತಳಿಯ ಸಸಿಗಳಿಗೆ ತುಂಬಾ ಬೇಡಿಕೆ. ಜನರು ವರ್ಷಕ್ಕೂ ಮೊದಲೇ ಹಣ ಕೊಟ್ಟು‌ ಗಿಡಗಳನ್ನು ಕಾಯ್ದಿರಿಸುತ್ತಾರೆ.

‘ತೆಂಗನ್ನು ವಿವಿಧ ಮಣ್ಣಿನಲ್ಲಿ ಬೆಳೆಯಬಹುದು. ನೀರು ಬಸಿದು ಹೋಗುವ ಮರಳುಮಿಶ್ರಿತ ಗೋಡು ಹಾಗೂ ಕೆಂಪುಗೋಡು ಮಣ್ಣಿನಲ್ಲಿ ಸಮೃದ್ಧವಾಗಿ ಫಸಲು ಕೊಡುತ್ತದೆ. ಬೇಸಿಗೆಯಲ್ಲಿ ನೀರು ಅವಶ್ಯಕ. ಉಷ್ಣವಲಯದ ಬೆಳೆಯಾದ್ದರಿಂದ ಪ್ರಕಾಶಮಾನ ಬೆಳಕು ಬೀಳುವಂತೆ ತೋಟ ಸಿದ್ಧಪಡಿಸಬೇಕು’ ಎಂದು ಸಿದ್ಧಲಿಂಗಸ್ವಾಮಿ ಹೇಳುತ್ತಾರೆ.

‘ಜೂನ್–ಜುಲೈ ತಿಂಗಳು ನಾಟಿ ಮಾಡಲು ಸೂಕ್ತ ಸಮಯ. ಬಿತ್ತನೆ ಸಸಿಗಳನ್ನು ಆಯ್ಕೆ ಮಾಡುವ ಮುನ್ನ 3 ತಲೆಮಾರು ಕಂಡ ವೃಕ್ಷಗಳ ಕಾಯಿಗಳನ್ನು ಆಯ್ದು ಕೊಳ್ಳುವುದು ಒಳಿತು’ ಎನ್ನುತ್ತಾರೆ ಅವರು.

‘ತೋಟದಲ್ಲಿ 900 ಕಲ್ಪವೃಕ್ಷಗಳಿವೆ. 200 ಮರಗಳಿಗೆ 80 ವರ್ಷ ಮೀರಿವೆ. ಈ ಮರಗಳಿಂದ ಸಂಗ್ರಹಿಸಿದ ತೆಂಗಿನಕಾಯಿಗಳನ್ನು ಬಿತ್ತನೆಗೆ ಬಳಸುತ್ತೇವೆ. ದೀಪಾವಳಿ ತಿಂಗಳು ನಾಟಿ ಮಾಡಿದರೆ, ಜೂನ್‌ ಮಾಸಾಂತ್ಯಕ್ಕೆ ನಾಟಿಗೆ ಸಿದ್ಧವಾಗುತ್ತವೆ. ಮುಂಗಾರು ಜುಲೈ ವೇಳೆಗೆ ನೆಲ ಮುಟ್ಟಿರುತ್ತದೆ. ಇದು ಬಿತ್ತನೆಗೆ ಸಕಾಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆಯ್ಕೆ ಹೇಗೆ?: ವೃಕ್ಷಗಳು 70 ವರ್ಷ ಮೀರಿದರೆ ಇವುಗಳಿಂದ ಸಂಗ್ರಹಿಸಿದ ಬಿತ್ತನೆ ತೆಂಗು 6 ರಿಂದ 7 ವರ್ಷಗಳಲ್ಲಿ ಫಸಲು  ಬರುತ್ತದೆ. ಇವುಗಳ ಆಯಸ್ಸು 100 ವರ್ಷಕ್ಕೂ ಹೆಚ್ಚು. ಇವು ಕುಟುಂಬದ 3 ತಲೆಮಾರುಗಳನ್ನು ಪೋಷಿಸುತ್ತವೆ. ಹೈಬ್ರೀಡ್‌ ನಾಟಿ 3 ವರ್ಷಕ್ಕೆ ಫಲ ಕಚ್ಚಿ 30 ರಿಂದ 40 ವರ್ಷಕ್ಕೆ ಆಯಸ್ಸು ಮುಗಿಯುತ್ತದೆ. ಹೀಗಾಗಿ, ಕೃಷಿಕರು ದೀರ್ಘಾವಧಿ ಇಳುವರಿ ನೀಡುವ ಸ್ಥಳೀಯ ಸಸಿಗಳನ್ನೇ ಆಯ್ಕೆ ಮಾಡಿಕೊಂಡು ಹೆಚ್ಚು ನಾಟಿ ಮಾಡುತ್ತಾರೆ.

‘ವರ್ಷದಲ್ಲಿ 2 ಬಾರಿ ತೆಂಗು ಸಂಗ್ರಹಿಸಬಹುದು. 900ಕ್ಕೂ ಹೆಚ್ಚು ಮರಗಳಿಂದ 60 ಸಾವಿರ ತೆಂಗು ಕೈಸೇರುತ್ತದೆ. ಕೆಜಿಗೆ ₹20ಕ್ಕೆ ಧಾರಣೆ ಇದ್ದರೂ, ವಾರ್ಷಿಕ ₹8 ರಿಂದ ₹10 ಲಕ್ಷ ವರಮಾನ ಕೈಸೇರುತ್ತದೆ. ಗಿಡಕ್ಕೆ ₹80 ರಿಂದ ₹100 ಬೆಲೆ ಇದೆ’ ಎನ್ನುತ್ತಾರೆ ಅವರು.

ಎಳನೀರು ಮಾರಾಟದಿಂದ ಮರ ಬಳಲುತ್ತದೆ

‘ತೆಂಗು ಬೆಳೆದ ಅನೇಕ ರೈತರು ಎಳನೀರು ತೆಗೆದು ಮಾರಾಟ ಮಾಡುತ್ತಾರೆ. ಇದರಿಂದ ಮರಗಳು ಬೇಗ ಬಳಲುತ್ತವೆ ಎನುವುದು ಅವರ ಅರಿವಿಗೆ ಬರುವುದಿಲ್ಲ. ನಂತರ ಕೆಲವೇ ವರ್ಷಗಳಲ್ಲಿ ಫಲವತ್ತತೆ ಕುಸಿಯುತ್ತದೆ. ಕೊಳ್ಳುವವರು ಮರದ ಮೇಲೇರಿ ಹೊಂಬಾಳೆ ತುಳಿದು ಫಲವತ್ತತೆ ತಪ್ಪಿಸುತ್ತಾರೆ. ಗರಿ, ಮಟ್ಟೆಯಿಂದ ಬರುವ ಆದಾಯವೂ ಕೈತಪ್ಪುತ್ತದೆ’ ಎಂದು ಸಿದ್ದಲಿಂಗಸ್ವಾಮಿ ಹೇಳುತ್ತಾರೆ.

‘ವರ್ಷಪೂರ್ತಿ ಮರದಿಂದ ಎಳನೀರು ತೆಗೆಯಬಾರದು. ತೆಂಗು ತೋಟಕ್ಕೆ ಹಟ್ಟಿ ಗೊಬ್ಬರ ಪೂರೈಸಬೇಕು. ಆದರೆ, ಜಾನುವಾರುಗಳನ್ನು ತಾಕಿನಲ್ಲಿ ನಿಲ್ಲಿಸಬಾರದು, ಇವು ವಿಸರ್ಜಿಸುವ ಸಗಣಿಯನ್ನು ಅರಸಿ ಬರುವ ದುಂಬಿಗಳು ತೆಂಗಿನ ಸುಳಿ ಕೊರೆದು ಮರವನ್ನೇ ನಾಶಮಾಡುತ್ತವೆ. ತೋಟದಲ್ಲಿ ಚಂಬೆ, ಹುರುಳಿ, ಉದ್ದು ಬಿತ್ತನೆ ಮಾಡಬೇಕು. ನಂತರ ಹಸಿರು ಗೊಬ್ಬರವಾಗಿ ಮಣ್ಣಿಗೆ ಸೇರಿಸಬೇಕು. ತೇವಾಂಶ ನೋಡಿಕೊಂಡು ನೀರು ಪೂರೈಸಿದರೆ ಐದಾರು ವರ್ಷಕ್ಕೆ ಉತ್ತಮ ಫಸಲು ತೆಗೆಯಬಹುದು’ ಎನ್ನುವುದು ಅವರ ಸಲಹೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !