ಬುಧವಾರ, ಸೆಪ್ಟೆಂಬರ್ 18, 2019
21 °C

ರೈತರೇ ಕಂಡುಕೊಂಡ ಶಬ್ದ, ಮುಖವಾಡ ತಂತ್ರ, ವನ್ಯ ಜೀವಿಗಳಿಂದ ರಕ್ಷಿಸಲು ಸರಳ ಉಪಾಯ

Published:
Updated:
Prajavani

ಯಳಂದೂರು: ಕಾನನದ ಸುತ್ತಮುತ್ತಲ ಕೃಷಿಕರು ವನ್ಯ ಜೀವಿಗಳನ್ನು ಕಾಯುತ್ತಲೇ ಇರಬೇಕು. ಅದರಲ್ಲೂ ಹಣ್ಣು ಮತ್ತು ಕಬ್ಬು ಬೆಳೆಗಳಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಆನೆ, ನವಿಲು, ಕರಡಿಗಳಿಂದ ಬೆಳೆ ರಕ್ಷಿಸುವುದೇ ಸವಾಲು. ಇವುಗಳ ಜೊತೆ ಮಂಗಳ ಹಾವಳಿ ಬೇರೆ. ಹಾಗಾಗಿ, ರೈತರು ತಮ್ಮ ಬೆಳೆಗಳನ್ನು ವನ್ಯಜೀವಿಗಳಿಂದ ರಕ್ಷಿಸಲು ತಮ್ಮದೇ ಆದ ಉಪಾಯಗಳನ್ನು ಹುಡುಕುತ್ತಾ ಇರುತ್ತಾರೆ. 

ಪ್ರಾಣಿಗಳು ಜಮೀನಿನ ಹತ್ತಿರ ಸುಳಿಯದಂತೆ ಮಾಡಲು ಯಳಂದೂರು ತಾಲ್ಲೂಕಿನ ಗುಂಬಳ್ಳಿ ಮತ್ತು ಗೌಡಹಳ್ಳಿ ರೈತರು ಹಲವು ಆವಿಷ್ಕಾರಗಳನ್ನು ಮಾಡಿದ್ದಾರೆ. ಸ್ಥಳೀಯವಾಗಿಯೇ ಲಭ್ಯವಿರುವಂತಹ ವಸ್ತುಗಳಿಂದ ಸರಳ ಉಪಕರಣಗಳನ್ನು ತಯಾರಿಸಿಕೊಂಡಿದ್ದಾರೆ. 

ಈ ಭಾಗದಲ್ಲಿ ಹಲವು ರೈತರು ಜಮೀನಿನ ಸುತ್ತಲೂ ಹೆಚ್ಚು ವೆಚ್ಚ ಮಾಡಿ ಕಲ್ಲು ನೆಟ್ಟು ತಂತಿ ಬೇಲಿ ಹಾಕಿದ್ದಾರೆ. ಇನ್ನೂ ಕೆಲವರು ಸೋಲಾರ್‌ ಬೇಲಿ ಮೊರೆ ಹೋಗಿದ್ದಾರೆ. ಅರಣ್ಯ ಇಲಾಖೆ ಕೂಡ ಕಾಡಂಚಿನಲ್ಲಿ ಸಿಮೆಂಟ್‌ ಬ್ಲಾಕ್‌ ಹಾಕಿ ಅನ್ನದಾತರಿಗೆ ನೆರವಾಗಿದೆ. ಆದರೂ, ಹಂದಿ ಮತ್ತು ಕಿರುಬನ ಹಾವಳಿ ತಡೆಗಟ್ಟಲು ಸಾಧ್ಯವಾಗಿಲ್ಲ. ಇದನ್ನು ಮನಗಂಡ ಬೇಸಾಯಗಾರರು ಅಟ್ಟಣೆ, ಬಾಟಲಿ, ಕಲ್ಲು, ಕೋತಿಗಳ ಮುಖವಾಡ ಬಳಸಿ ಪ್ರಾಣಿಗಳಿಂದ ಬೆಳೆ ರಕ್ಷಿಸುತ್ತಿದ್ದಾರೆ. 

‘ನೋ ಕಾಸ್ಟ್‌ ಅಂಡ್‌ ಲೋ ಕಾಸ್ಟ್‌’ (ಖರ್ಚೇ ಇಲ್ಲ ಮತ್ತು ಕಡಿಮೆ ವೆಚ್ಚ) ಎಂಬುದು ಇಲ್ಲಿಯ ರೈತರು ಬೆಳೆ ರಕ್ಷಣೆಗೆ ಅನುಸರಿಸಿರುವ ತಂತ್ರ. ಜೋರಾಗಿ ಗಾಳಿ ಬೀಸಿದಾಗ ಶಬ್ದ ಹೊರಹೊಮ್ಮಿಸುವ ತಂತ್ರವನ್ನು ಸ್ಥಳೀಯ ಮಹಿಳೆಯರೇ ಕಂಡು ಕೊಂಡಿದ್ದಾರೆ.

ಜಮೀನಿನ ಸುತ್ತಲೂ ಇರುವ ಮರಗಳ ಟೊಂಗೆಗಳಿಗೆ ಬಾಟಲಿಯನ್ನು ತೂಗುಬಿಟ್ಟಿದ್ದಾರೆ. ನಡುವೆ ಗಾಳಿಗೆ ಹಾರಾಡುವ ಪ್ಲಾಸ್ಟಿಕ್‌ ಬಾಟಲಿ ಕಟ್ಟಿದ್ದಾರೆ. ಇವೆರಡರ ನಡುವೆ ಕಲ್ಲನ್ನು ಕಟ್ಟಿದ್ದಾರೆ. ಹಗುರ ಪ್ಲಾಸ್ಟಿಕ್‌ ಗಾಳಿಗೆ ತೂರುವಾಗ ನಡುವೆ ಕಟ್ಟಿದ ಕಲ್ಲು ಬಾಟಲಿಗೆ ತಾಗಿ ‘ಠಣ್’ ಶಬ್ದ ಹೊಮ್ಮಿಸುತ್ತದೆ.

‘ರಾತ್ರಿ ಮತ್ತು ಹಗಲು ಗಾಳಿ ಬೀಸುತ್ತಲೇ ಇರುತ್ತದೆ. ಇದರಿಂದ ಹೊಲದ ಎಲ್ಲೆಡೆ ಹತ್ತಾರು ಶಬ್ದ ಕೇಳಿ ಬರುವುದರಿಂದ ಪಕ್ಷಿಗಳು ಮತ್ತು ರಾತ್ರಿ ಆನೆಗಳು ಬೆಳೆಯ ಹತ್ತಿರ ಸುಳಿಯುವುದಿಲ್ಲ. ಮನೆಯ ಬಳಿ ಬೆಂಕಿ ಹಾಕಿ ಹೊಗೆ ಬರುವಂತೆ ಮಾಡುತ್ತೇವೆ. ಇದರಿಂದ ಜನ ವಸತಿ ಇರುವುದರ ಸುಳಿವು ದೊರೆತು ವನ್ಯಜೀವಿಗಳು ಓಡಿ ಹೋಗುತ್ತವೆ’
ಎಂದು ಹೇಳುತ್ತಾರೆ ಗುಂಬಳ್ಳಿ ಸುವರ್ಣಮ್ಮ.

‘ಬೆಟ್ಟದ 8 ಕಿ.ಮೀ ರಸ್ತೆ ವ್ಯಾಪ್ತಿಯ ಹೊಲಗಳಲ್ಲಿ ಕಪಿಗಳ ಹಾವಳಿ ವಿಪರೀತ. ತೆಂಗು ಮತ್ತು ತರಕಾರಿ ತಾಕುಗಳ ಸಮೀಪದಲ್ಲೇ ಬೀಡು ಬಿಡುವ ಅವು, ಬೆಳೆ ಕೈಸೇರದಂತೆ ಮಾಡುತ್ತವೆ. ಇವುಗಳನ್ನು ಓಡಿಸುವುದೇ ಸವಾಲು. ಹಾಗಾಗಿ, ಚಿಂಪಾಂಜಿ, ಗೊರಿಲ್ಲಾ ಮುಖವಾಡವನ್ನು ಧರಿಸಿ ಜಮೀನಿನಲ್ಲಿ ಅಡ್ಡಾದಿಡ್ಡಿ ಓಡುತ್ತಿದ್ದರೆ, 50 ಮೀಟರ್ ದೂರದಿಂದಲೇ ಮಂಗಗಳು ಹಾರಿ ಹೋಗುತ್ತವೆ’ ಎಂದು ಯರಗಂಬಳ್ಳಿ ಸುರೇಶ್ ಹೇಳಿದರು.

‘ಚಿಂಪಾಂಜಿ ಮುಖವಾಡಗಳನ್ನು ಮಂಗಗಳಿಗೆ ಕಾಣಿಸದಂತೆ ಧರಿಸಬೇಕು. ಮೈ ತುಂಬ ಮನುಷ್ಯನ ಗುರುತು ಸಿಗದಂತೆ ಬಟ್ಟೆಯಿಂದ ಮುಚ್ಚಿಕೊಳ್ಳಬೇಕು. ಹಾಗಾದಾಗ ಮಾತ್ರ ಕೋತಿಗಳನ್ನು ಅಟ್ಟಬಹುದು. ಅವು ನಾವು ವೇಷ ಹಾಕುತ್ತಿರುವುದನ್ನು ನೋಡಿದರೆ ಹೆದರುವುದಿಲ್ಲ’ ಎಂದು ತಮ್ಮ ಅನುಭವವನ್ನು ಅವರು ವಿವರಿಸಿದರು.

ಎಚ್ಚರಿಕೆಯಿಂದ ಇರುವುದು ಮುಖ್ಯ

ಇತ್ತೀಚಿಗೆ ಹಂದಿಗಳು ಹೆಚ್ಚು ಬೆಳೆ ಹಾನಿಮಾಡುತ್ತವೆ. ಚಿರತೆಗಳು ಕೋಳಿ ಹಿಡಿಯಲು ಬರುತ್ತವೆ. ಕರಡಿಗಳು ಜೇನು ಸವಿಯಲು ಬರುತ್ತವೆ. ಕೆಲವು ಹಿಡುವಳಿದಾರರು ರಸಾಯನಿಕಗಳನ್ನು ಮಣ್ಣಿನಲ್ಲಿ ಇಟ್ಟು ಕೊಲ್ಲುತ್ತಾರೆ. ಕೆಲವರು ಬಲೆ ಬಿಟ್ಟು ಪ್ರಾಣಿಗಳು ಉರುಳಿನಲ್ಲಿ ಸಿಲುಕಿಸುವಂತೆ ಮಾಡುತ್ತಾರೆ. ಇದರಿಂದ ರೈತರಿಗೆ ಹೆಚ್ಚು ಅಪಾಯ. ಇದನ್ನು ತಪ್ಪಿಸಲು ರೈತರು ಪರಿಸರ ಸ್ನೇಹಿ, ಅಪಾಯ ರಹಿತ ಉಪಕರಣಗಳನ್ನು ಮಾಡಿಕೊಂಡರೆ ಯಾರಿಗೂ ತೊಂದರೆ ಇಲ್ಲ.

‘ಯಾವ ಜೀವಿ ಬರುತ್ತದೆ ಮತ್ತು ಯಾವ ಬೆಳೆ ಮೆಲ್ಲುತ್ತವೆ ಎಂಬುದನ್ನು ಚಿಂತಿಸಿ ಉಪಾಯ ಮಾಡಬೇಕು. ಆನೆ ಮತ್ತು ಹುಲಿ ಹೊಲಗದ್ದೆಗಳ ಬಳಿ ಬಂದಾಗ ಎಷ್ಟೇ ತೊಂದರೆ ಇದ್ದರೂ ಹತ್ತಿರ ಸುಳಿಯಬಾರದು. ಒಮ್ಮೊಮ್ಮೆ ನಮ್ಮ ತಂತ್ರಗಳ ಬಳಕೆ ಪುನರಾವರ್ತನೆಯಾದಾಗ ವನ್ಯ ಜೀವಿಗಳು ತಮ್ಮ ವರ್ತನೆ ಬದಲಿಸುವ ಸಾಧ್ಯತೆ ಇರುತ್ತದೆ’ ಎಂದು ಹೇಳುತ್ತಾರೆ ಕೃಷಿ ಅಧಿಕಾರಿಗಳು.

 

Post Comments (+)