ಮಂಗಳವಾರ, ಅಕ್ಟೋಬರ್ 15, 2019
26 °C
ಬಿರುಸುಕೊಂಡ ಕೃಷಿ ಚಟುವಟಿಕೆ, ವಿವಿಧ ಬೆಳೆಗಳ ಬಿತ್ತನೆ

ಮಳೆ: ರೈತರಲ್ಲಿ ಉತ್ತಮ ಇಳುವರಿಯ ಆಶಾಭಾವ

Published:
Updated:
Prajavani

ಕೊಳ್ಳೇಗಾಲ: ಈ ವರ್ಷದ ಮುಂಗಾರು ಅವಧಿಯಲ್ಲಿ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದರಿಂದ ನೀರಾವರಿ ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಇದ್ದಾರೆ.

ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶದಲ್ಲಿ ಕೊಳ್ಳೇಗಾಲ ಕಸಬಾ ಮತ್ತು ಪಾಳ್ಯ ಹೋಬಳಿಗಳು ಇವೆ. ಕಳೆದ ವರ್ಷವೂ ಉತ್ತಮ ಮಳೆಯಾಗಿತ್ತು. ಉತ್ತಮ ಆದಾಯವೂ ರೈತರ ಕೈ ಸೇರಿತ್ತು. ಈ ವರ್ಷವೂ ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗಿದೆ. ಜೂನ್‌ 1ರಿಂದ ಸೆಪ್ಟೆಂಬರ್‌ 30ರ ನಡುವಿನ ಅವಧಿಯಲ್ಲಿ ತಾಲ್ಲೂಕಿನಲ್ಲಿ 320 ಮಿ.ಮೀ ವಾಡಿಕೆ ಮಳೆ ಬೀಳುತ್ತದೆ. ಈ ವರ್ಷ 338 ಮಿ.ಮೀ ಮಳೆಯಾಗಿದೆ. ಒಟ್ಟಾರೆಯಾಗಿ ಶೇ 6ರಷ್ಟು ಹೆಚ್ಚು ಮಳೆಯಾಗಿದೆ.

ಕೆರೆಗಳು ಭರ್ತಿ, ನಾಲೆಗೂ ನೀರು: ಉತ್ತಮ ಮಳೆಯಾದ ಕಾರಣ ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯಗಳು ಭರ್ತಿಯಾಗಿವೆ. ತಾಲ್ಲೂಕಿನ ಗುಂಡಾಲ್ ಜಲಾಶಯವು ಭರ್ತಿಯಾಗಿರುವ ಕಾರಣ ಸುತ್ತಮತ್ತಲ ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ಇದರ ಜೊತೆಗೆ ಜಲಾಶಯಗಳಿಂದ ನಾಲೆಗಳಿಗೂ ನೀರು ಹರಿಸಲಾಗಿದೆ.

ನಾಲೆಗಳಿಂದ ನೀರು ಹೆಚ್ಚಾಗಿ ಹೊರಬರುತ್ತಿದ್ದ ಕಾರಣ ರೈತರು ತಮ್ಮ ಜಮೀನುಗಳ ಹಳ್ಳಗಳಲ್ಲಿ ನೀರನ್ನು ಸಂಗ್ರಹಿಸುತ್ತಿದ್ದಾರೆ. ಕೆಲವು ದಿನಗಳಿಂದ ರಾತ್ರಿ ಸಮಯದಲ್ಲಿ ಮಳೆಯಾಗುತ್ತಿದೆ.

ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶದ ಜನರು ಭತ್ತ, ರಾಗಿ, ಬಾಳೆ, ಕಬ್ಬು, ಜೋಳ, ಹುರುಳಿ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಭತ್ತವನ್ನು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು, ನಂತರ ಸ್ಥಾನದಲ್ಲಿ ಮುಸುಕಿನ ಜೋಳವಿದೆ.

‘ಕೆಲ ಭಾಗದಲ್ಲಿ ಇನ್ನೂ ಭತ್ತದ ನಾಟಿ ಮುಂದುವರೆಸಿದ್ದಾರೆ. ಒಂದು ವಾರದಿಂದ ಯೂರಿಯಾ, ಪೊಟ್ಯಾಷ್ ಹಾಗೂ ಇತರೆ ರಸಗೊಬ್ಬರಗಳಿಗೆ ಹೆಚ್ಚು ಬೇಡಿಕೆ ಇದ್ದ ಕಾರಣ ಸೂಸೈಟಿ ಮೂಲಕ ವಿತರಣೆ ಮಾಡಲಾಗಿದೆ’ ಎಂದು ಕೃಷಿ ಅಧಿಕಾರಿ ರಮೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

12,630 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ

ತಾಲ್ಲೂಕಿನ ರೈತರು 12,630 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. 7,500 ಹೆಕ್ಟೇರ್ನಲ್ಲಿ ಭತ್ತ, 2,570 ಹೆಕ್ಟೇರ್ ಮುಸುಕಿನ ಜೋಳ , ಕಬ್ಬು 700 ಹೆಕ್ಟೇರ್, ರಾಗಿ 750 ಹೆಕ್ಟೇರ್, ಹುರುಳಿ 200 ಹೆಕ್ಟೇರ್‌ಗಳಲ್ಲಿ ಬೆಳೆದಿದ್ದಾರೆ.

***

ಉತ್ತಮ ಮಳೆಯಾದ ಕಾರಣ ಈ ಭಾಗದಲ್ಲಿ ಉತ್ತಮ ಬಿತ್ತನೆಯಾಗಿದೆ. ರೈತರಿಗೆ ಈ ಬಾರಿ ಹೆಚ್ಚು ಆದಾಯ ಬರುವ ನಿರೀಕ್ಷೆಯೂ ಇದೆ.

ಪರಮೇಶ್, ಸಹಾಯಕ ಕೃಷಿ ನಿರ್ದೇಶಕ

***

ತಾಲ್ಲೂಕಿನ ಎಲ್ಲ ಕೆರೆಗಳು ತುಂಬಿರುವುದರಿಂದ ಹಾಗೂ ನಾಲೆಗಳಿಗೆ ನೀರು ಬಿಟ್ಟಿರುವುದರಿಂದ ಬೆಳೆಗಳನ್ನು ಬೆಳೆದಿದ್ದೇವೆ. ಉತ್ತಮ ಇಳುವರಿ ಸಿಗುವ ವಿಶ್ವಾಸದಲ್ಲಿದ್ದೇವೆ
ಮಹದೇವಯ್ಯ, ಕೆಂಪನ ಪಾಳ್ಯ ಗ್ರಾಮದ ರೈತ

Post Comments (+)