ಪೊಲೀಸ್ ಇತಿಹಾಸದಲ್ಲೇ ಮೊದಲ ಪ್ರಕರಣ: ಒಂದೇ ಠಾಣೆಯ 71 ಪೊಲೀಸರ ಎತ್ತಂಗಡಿ

7
ಮಹಿಳೆಯನ್ನು ಥಳಿಸಿ ಸುದ್ದಿಯಾಗಿದ್ದ ಕೆ.ಎಸ್.ಲೇಔಟ್ ಠಾಣೆ

ಪೊಲೀಸ್ ಇತಿಹಾಸದಲ್ಲೇ ಮೊದಲ ಪ್ರಕರಣ: ಒಂದೇ ಠಾಣೆಯ 71 ಪೊಲೀಸರ ಎತ್ತಂಗಡಿ

Published:
Updated:

ಬೆಂಗಳೂರು: ಗುಂಪುಗಾರಿಕೆಯಿಂದ ನಲುಗಿದ್ದ ನಗರದ ಕುಮಾರಸ್ವಾಮಿ ಲೇಔಟ್ ಠಾಣೆಯಿಂದ 71 ಪೊಲೀಸರನ್ನು ಏಕಕಾಲಕ್ಕೆ ಸಾಮೂಹಿಕವಾಗಿ ಎತ್ತಂಗಡಿ ಮಾಡಲಾಗಿದ್ದು, ಪೊಲೀಸ್ ಇಲಾಖೆ ಇತಿಹಾಸದಲ್ಲಿ ಒಂದೇ ಠಾಣೆಯಿಂದ ಇಷ್ಟೊಂದು ಪ್ರಮಾಣದಲ್ಲಿ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದು ಇದೇ ಮೊದಲು. 

ಚಿತ್ತೂರಿನ ಮಹಿಳೆ ಹಾಗೂ ಅವರ ಸಂಬಂಧಿಕರನ್ನು ಥಳಿಸಿದ ಘಟನೆಯಿಂದಾಗಿ ಈ ಠಾಣೆ ಇತ್ತೀಚೆಗೆ ಸುದ್ದಿಯಲ್ಲಿತ್ತು. ಪ್ರಕರಣದ ವಿವರಗಳು ಮಾಧ್ಯಮಕ್ಕೆ ಸೋರಿಕೆಯಾಗಲು ಠಾಣೆಯೊಳಗಿನ ಆಂತರಿಕಕಚ್ಚಾಟವೇ ಕಾರಣ ಎಂದು ದೂರಲಾಗಿತ್ತು. 

ಜ. 20ರಂದು ಮಹಿಳೆ ಹಾಗೂ ಸಂಬಂಧಿಕರನ್ನು ಎಎಸ್‌ಐ ರೇಣುಕಯ್ಯ ಠಾಣೆಯಲ್ಲೇ ಥಳಿಸಿದ್ದರು. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ರೇಣುಕಯ್ಯ ಅವರನ್ನು ಅಮಾನತು ಮಾಡಲಾಗಿತ್ತು. ಈಗ ಇನ್‌ಸ್ಪೆಕ್ಟರ್ ಹಾಗೂ ಮೂವರು ಪಿಎಸ್‌ಐಗಳನ್ನು ಹೊರತುಪಡಿಸಿ ಕಾನ್‌ಸ್ಟೆಬಲ್‌, ಹೆಡ್‌ ಕಾನ್‌ಸ್ಟೆಬಲ್‌ ಹಾಗೂ ಎಎಸ್‌ಐಗಳನ್ನೆಲ್ಲ ವರ್ಗಾವಣೆ ಮಾಡಲಾಗಿದೆ.

ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಸಲ್ಲಿಸಿದ್ದ ವರದಿ ಆಧರಿಸಿ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್‌ ಅವರು ಸಿಬ್ಬಂದಿಯ ವರ್ಗಾವಣೆ ಆದೇಶ ಹೊರಡಿಸಿದ್ದಾರೆ.

‘ಠಾಣೆಯಲ್ಲಿ ಹೊಸ ಹಾಗೂ ಜನಸ್ನೇಹಿ ವಾತಾವರಣ ನಿರ್ಮಿಸುವ ಉದ್ದೇಶದಿಂದ ಈ ವರ್ಗಾವಣೆ ಮಾಡಲಾಗಿದೆ. ಇದು ಯಾವುದೇ ರೀತಿಯ ಶಿಸ್ತುಕ್ರಮವಲ್ಲ. ಬೆಂಗಳೂರು ಸಿಟಿ ಪೊಲೀಸರಿಗೆ ಒಳ್ಳೆಯ ಹೆಸರು ಬರಬೇಕು ಎಂಬುದಷ್ಟೇ ನಮ್ಮ ಉದ್ದೇಶ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದರು.

‘ಠಾಣೆಯಲ್ಲಿ ಗುಂಪುಗಾರಿಕೆ ಇರಬಾರದು. ಒಬ್ಬರ ವಿರುದ್ಧ ಶಿಸ್ತುಕ್ರಮ ಜರುಗಿಸಿದರೆ, ಬೇರೆಯವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲವೆಂಬ ದೂರುಗಳು ಕೇಳಿಬರುತ್ತವೆ. ಹೀಗಾಗಿ, ಚಾಲ್ತಿಯಲ್ಲಿರುವ ನಿಯಮದನ್ವಯ ಠಾಣೆಯ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಕಮಿಷನರ್‌ ಅವರಿಗೆ ವರದಿ ನೀಡಲಾಗಿತ್ತು. ಅದನ್ನು ಪರಿಶೀಲಿಸಿ ಅವರು ಆದೇಶ ಹೊರಡಿಸಿದ್ದಾರೆ’ ಎಂದು ಹೇಳಿದರು.

‘ಎನ್‌ಕೆ’, 'ಎಸ್‌ಕೆ' ಗುಂಪುಗಾರಿಕೆ: ಠಾಣೆಯಲ್ಲಿರುವ ಉತ್ತರ ಕರ್ನಾಟಕದ ಸಿಬ್ಬಂದಿ ‘ಎನ್‌ಕೆ’ (ನಾರ್ಥ್ ಕರ್ನಾಟಕ) ಹಾಗೂ ದಕ್ಷಿಣ ಕರ್ನಾಟಕದ ಸಿಬ್ಬಂದಿ 'ಎಸ್‌ಕೆ' (ಸೌಥ್ ಕರ್ನಾಟಕ) ಎಂದು ಗುಂಪುಗಾರಿಕೆ ಮಾಡುತ್ತಿದ್ದಾರೆ. ಕೆಲಸದ ಹಂಚಿಕೆ, ಗಸ್ತು ನಿಯೋಜನೆ, ರಜೆ ಮಂಜೂರು... ಸೇರಿ ವೃತ್ತಿ ವಿಚಾರದಲ್ಲಿ ಎರಡೂ ಬಣಗಳ ನಡುವೆ ಕಿತ್ತಾಟ ನಡೆಯುತ್ತಿತ್ತು.

ಎದುರಾಳಿ ಬಣದ ಎಸ್‌ಐವೊಬ್ಬರನ್ನು ಸಂಕಷ್ಟದಲ್ಲಿ ಸಿಲುಕಿಸುವುದಕ್ಕಾಗಿ 2018ರ ಜೂನ್‌ನಲ್ಲಿ ನಾಲ್ವರು ಕಾನ್‌ಸ್ಟೆಬಲ್‌ಗಳು ಠಾಣೆಯಲ್ಲಿದ್ದ ರೈಫಲ್ ಕದ್ದು ಮುಚ್ಚಿಟ್ಟಿದ್ದರು. ಅದಾದ ನಂತರ ಠಾಣೆಯ ಸಿಬ್ಬಂದಿ ನಡುವಿನ ಆಂತರಿಕ ಕಲಹ ಮತ್ತಷ್ಟು ಹೆಚ್ಚಾಗಿತ್ತು. ಜನರು ಸಹ ಆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅದೇ ಕಾರಣಕ್ಕೆ ಠಾಣೆಯ ಸಿಬ್ಬಂದಿಯನ್ನು ಸಾಮೂಹಿಕವಾಗಿ ವರ್ಗ ಮಾಡಿ ದಕ್ಷಿಣ ವಿಭಾಗದ ಬೇರೆ ಬೇರೆ ಠಾಣೆಗಳಿಗೆ ಕಳುಹಿಸಲಾಗಿದೆ. 

ಇನ್‌ಸ್ಪೆಕ್ಟರ್‌ ಅಧಿಕಾರ ಸ್ವೀಕಾರ: ಕುಮಾರಸ್ವಾಮಿ ಲೇಔಟ್ ಠಾಣೆಯ ಇನ್‌ಸ್ಪೆಕ್ಟರ್‌ ಆಗಿ ಹಜರೇಶ್‌ ಎ. ಕಿಲ್ಲೇದಾರ್ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು. ಮಹಿಳೆಯನ್ನು ಥಳಿಸಿದ ಘಟನೆ ನಡೆಯುವುದಕ್ಕೂ ಮುನ್ನವೇ ಠಾಣೆಯ ಹಿಂದಿನ ಇನ್‌ಸ್ಪೆಕ್ಟರ್‌ ವರ್ಗಾವಣೆಯಾಗಿದ್ದರು.

ಈಗ ಠಾಣೆಗೆ ಹೊಸದಾಗಿ ನಿಯೋಜನೆಗೊಂಡಿರುವ ಸಿಬ್ಬಂದಿ, ಶುಕ್ರವಾರದಿಂದ ಒಬ್ಬೊಬ್ಬರಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಮಹಿಳೆಯ ಕುತ್ತಿಗೆ ಹಿಡಿದು ತಳ್ಳುತ್ತಿರುವ ಎಎಸ್‌ಐ ರೇಣುಕಯ್ಯ (ಎಡಚಿತ್ರ), ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ

 

ಬರಹ ಇಷ್ಟವಾಯಿತೆ?

 • 49

  Happy
 • 5

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !