ಕೆಎಸ್‌ಆರ್‌ಟಿಸಿ ಕೆಲಸಕ್ಕೆ ನಕಲಿ ನೇಮಕಾತಿ ಪತ್ರ

7
ಉಪ ಮುಖ್ಯ ಭದ್ರತಾ ಅಧಿಕಾರಿಯಿಂದ ಮೂವರ ವಿರುದ್ಧ ದೂರು

ಕೆಎಸ್‌ಆರ್‌ಟಿಸಿ ಕೆಲಸಕ್ಕೆ ನಕಲಿ ನೇಮಕಾತಿ ಪತ್ರ

Published:
Updated:

ಬೆಂಗಳೂರು: ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಸಹಾಯಕ ಆಡಳಿತ ಅಧಿಕಾರಿ ಹುದ್ದೆ ಗಿಟ್ಟಿಸಿಕೊಳ್ಳುವುದಕ್ಕಾಗಿ ನಕಲಿ ನೇಮಕಾತಿ ಆದೇಶ ಪತ್ರ ಹಾಜರುಪಡಿಸಿದ್ದ ಅಶ್ವಿನ್ ಮೆಲಿಟೋನ್ ಸಿಕ್ವೆರಾ ಎಂಬುವರು ನಿಗಮದ ಅಧಿಕಾರಿಗಳ ಕೈಗೆ ಸಿಕ್ಕಿಬಿದಿದ್ದಾರೆ.

ಆ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿರುವ ಕೆಎಸ್ಆರ್‌ಟಿಸಿಯ ಉಪ ಮುಖ್ಯ ಭದ್ರತಾ ಅಧಿಕಾರಿ ಎಚ್‌.ಬಿ.ಶಿವಪ್ರಕಾಶ್‌, ‘ನಕಲಿ ನೇಮಕಾತಿ ಆದೇಶ ಪತ್ರ ಸೃಷ್ಟಿಸಿ ವಂಚಿಸಿರುವ ಅಶ್ವಿನ್ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಸ್ನೇಹಿತ ಸೈರಿಯಲ್, ಪುನೀತ್ ಸೈಸರ್ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿದ್ದಾರೆ.

‘ಸಹಾಯಕ ಆಡಳಿತ ಅಧಿಕಾರಿ ಹುದ್ದೆ ಭರ್ತಿಗೆ ಇತ್ತೀಚೆಗಷ್ಟೇ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಜ. 10ರಂದು ಮಧ್ಯಾಹ್ನ 2 ಗಂಟೆಗೆ ಶಾಂತಿನಗರದಲ್ಲಿರುವ ನಿಗಮದ ಕಚೇರಿಗೆ ಬಂದಿದ್ದ ಅಶ್ವಿನ್, ಅಧಿಕಾರಿ ಹುದ್ದೆಗೆ ನೇಮಕವಾಗಿರುವುದಾಗಿ ಹೇಳಿ ನೇಮಕಾತಿ ಆದೇಶ ‍ಪತ್ರ ಹಾಜರುಪಡಿಸಿದ್ದರು’ ಎಂದು ಶಿವಪ್ರಕಾಶ್‌ ದೂರಿನಲ್ಲಿ ತಿಳಿಸಿದ್ದಾರೆ.

‘ಕರ್ನಾಟಕ ಸರ್ಕಾರದ ಲಾಂಛನ ಸಮೇತ ರಸ್ತೆ ಸಾರಿಗೆ ಇಲಾಖೆ ಎಂದು ಆದೇಶ ಪತ್ರದಲ್ಲಿ ಬರೆಯಲಾಗಿತ್ತು. ಆ ಪತ್ರದಲ್ಲಿ ಕೆಎಸ್‌ಆರ್‌ಟಿಸಿ ಲಾಂಛನ ಹಾಗೂ ನೇಮಕಾತಿ ಪ್ರಾಧಿಕಾರದ ಮುಖ್ಯಸ್ಥರ ಸಹಿಯೂ ಇರಲಿಲ್ಲ. ಅವಾಗಲೇ ಅದು ನಕಲಿ ಎಂಬುದು ತಿಳಿಯಿತು’.

‘ಆ ಬಗ್ಗೆ ಅಶ್ವಿನ್‌ ಅವರನ್ನು ವಿಚಾರಿಸಲಾಗಿತ್ತು. ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜು ಮತ್ತು ಕೆಎಸ್‌ಆರ್‌ಟಿಸಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಉಮಾಶಂಕರ್ ಹೆಸರುಗಳಿದ್ದ ಪತ್ರ ಹಾಗೂ ನಕಲಿ ನೇಮಕಾತಿ ಆದೇಶ ಪತ್ರಗಳು ಅವರ ಬಳಿ ಸಿಕ್ಕವು’ ಎಂದು ಶಿವಪ್ರಕಾಶ್ ತಿಳಿಸಿದ್ದಾರೆ.

ಆರೋಪಿ ವಿಚಾರಣೆ: ‘ಅಶ್ವಿನ್, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನಿವಾಸಿ. ಪ್ರಕರಣ ಸಂಬಂಧ ಅವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆದಿದ್ದೇವೆ’ ಎಂದು ವಿಲ್ಸನ್ ಗಾರ್ಡನ್ ಪೊಲೀಸರು ಹೇಳಿದರು.

‘ಅಶ್ವಿನ್‌ಗೆ ಕೆಲಸದ ಆಮಿಷವೊಡ್ಡಿದ್ದ ಪುನೀತ್‌ ಸೈಸರ್, ₹2 ಲಕ್ಷ ಪಡೆದಿದ್ದ. ನಕಲಿ ನೇಮಕಾತಿ ಆದೇಶ ಪತ್ರವನ್ನು ಆತನೇ ಅಂಚೆಯ ಮೂಲಕ ಕಳುಹಿಸಿದ್ದ. ಅದನ್ನು ಪಡೆದಿದ್ದ ಅಶ್ವಿನ್, ಕೆಲಸಕ್ಕೆ ಹಾಜರಾಗಲು ಬಂದಿದ್ದರು. ಅವಾಗಲೇ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ’ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !