ಶನಿವಾರ, ಜುಲೈ 31, 2021
28 °C

ಕೂಡಿಯ ಮಾಲಾಶ್ರೀ ಕರಾಟೆ ಕ್ವೀನ್‌

ದಸ್ತಗೀರ ನದಾಫ್ ಯಳಸಂಗಿ Updated:

ಅಕ್ಷರ ಗಾತ್ರ : | |

ನಟ ಶಂಕರ್‌ನಾಗ್‌ಗೆ ಕರಾಟೆ ಕಿಂಗ್ ಎನ್ನುತ್ತಿದ್ದೆವು. ಈಗ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕೂಡಿ ಗ್ರಾಮದ ಯುವತಿ ಮಾಲಾಶ್ರೀಯನ್ನು ಆ ಭಾಗದ ಮಂದಿ ‘ಕರಾಟೆ ಕ್ವೀನ್’ ಎನ್ನುತ್ತಾರಂತೆ. ಏಕೆಂದರೆ, ಆಕೆ ಸಣ್ಣ ವಯಸ್ಸಿನಲ್ಲಿ ಕರಾಟೆ ಸ್ಪರ್ಧೆಯಲ್ಲಿ ಜಿಲ್ಲೆಯಿಂದ ಅಂತರರಾಷ್ಟ್ರೀಯ ಮಟ್ಟದವರೆಗೂ ನಡೆದಿರುವ ಪಂದ್ಯಗಳಲ್ಲಿ ಸ್ಪರ್ಧಿಸಿ, ಪದಕಗಳನ್ನು ಗೆದ್ದುತಂದಿದ್ದಾರೆ. ಇದು ಹೈದರಾಬಾದ್ ಕರ್ನಾಟಕದ ಹೆಮ್ಮೆ ಎನ್ನುತ್ತಾರೆ ಆ ಮಂದಿ...!

ಹೀಗೆ ಕರಾಟೆಯಲ್ಲಿ ಸಾಧನೆ ಮಾಡಿರುವ, ಮಾಲಾಶ್ರೀ ಕೃಷಿಕರಾದ ರಾಜೇಂದ್ರ ಹರಳಯ್ಯ ಮತ್ತು ರೇಣುಕಾ ದಂಪತಿಯ ಮೂರನೇಯ ಪುತ್ರಿ. ಹತ್ತನೆಯ ತರಗತಿಯಲ್ಲಿ ಕರಾಟೆ ಕಲಿಯುತ್ತಿದ್ದ ಇವರು, ಅನಿವಾರ್ಯ ಕಾರಣಗಳಿಂದ ಅದನ್ನು ಅರ್ಧಕ್ಕೆ ಮೊಟಕುಗೊಳಿಸ ಬೇಕಾಯಿತು. ಆದರೆ, ಮಗಳ ಆಸಕ್ತಿ ಗಮನಿಸಿದ ತಾಯಿ ಕರಾಟೆ ಕಲಿಕೆಗೆ ಪ್ರೋತ್ಸಾಹ ನೀಡಿದರು. ತಾಯಿಯ ಬೆಂಬಲ, ಮುಂದೆ ಮಗಳ ದೊಡ್ಡ ಸಾಧನೆಗೆ ಪ್ರೇರಣೆಯಾಯಿತು.

ಪದಕದ ಬೇಟೆ ಶುರು...

ಪಿಯುಸಿ ಓದುತ್ತಿರುವ ವೇಳೆ ಕಲಬುರ್ಗಿಯಲ್ಲಿ ‘ಜೆನ್ ಶಿಟೋ ರಿಯೋ’ ಎಂಬ ಕರಾಟೆ ಶಾಲೆಗೆ ಸೇರಿದ ಮಾಲಾಶ್ರಿ, ನೆನಸಾಯಿ ದಶರಥ ದೂಮನ್ ಹಾಗೂ ಮನೋಹರ್ ಅವರ ಮಾರ್ಗದರ್ಶನದೊಂದಿಗೆ ಅಭ್ಯಾಸ ಮುಂದುವರಿಸಿದರು. ಆ ವೇಳೆಯಲ್ಲೇ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ‍‘ಕಟಾ’ ವಿಭಾಗದಲ್ಲಿ ಚಿನ್ನದ ಪದಕ ಪಡೆದರು. ಇಲ್ಲಿಂದ ಶುರುವಾದ ಮಾಲಾಶ್ರೀಯ ‘ಪದಕಗಳ ಬೇಟೆ’ ರಾಜ್ಯ, ರಾಷ್ಟ್ರಮಟ್ಟದಿಂದ ಅಂತರರಾಷ್ಟ್ರೀಯಮಟ್ಟದವರೆಗೂ ತಲುಪಿದೆ. 

ಪ್ರಸ್ತುತ ಕಲಬುರ್ಗಿ ನಗರದ ಗೋದುತಾಯಿ ಕಲಾ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಬಿ.ಎ. ಅಭ್ಯಾಸ ಮಾಡುತ್ತಿರುವ ಮಾಲಾಶ್ರೀ, ಇಲ್ಲಿವರೆಗೆ ಭಾಗವಹಿಸಿದ ಎಲ್ಲ ಕ್ರೀಡಾಕೂಟಗಳಲ್ಲೂ ಒಂದಲ್ಲ ಒಂದು ಪದಕ ಗಳಿಸುತ್ತಾ ಬಂದಿದ್ದಾರೆ.

ಪದಕಗಳ ಪಟ್ಟಿ

2015-16ರಲ್ಲಿ ಸೇಡಂ ನಲ್ಲಿ ನಡೆದ 3ನೇ ಉತ್ತರ ಕರ್ನಾಟಕ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ. 2016-17ರಲ್ಲಿ ಯಾದಗಿರಿ ಅಖಿಲ ಭಾರತ ಕರಾಟೆ ಚಾಂಪಿಯನ್‌ಲ್ಲಿ ಕಂಚಿನ ಪದಕ, 2016ರಲ್ಲಿ ಗುಲ್ಬರ್ಗಾದಲ್ಲಿ ನಡೆದ 4ನೇ ಉತ್ತರ ಕರ್ನಾಟಕ ಕರಾಟೆ ಚಾಂಪಿಯನ್‍ಶಿಪ್‌ನ ಫೈಟ್ ವಿಭಾಗದಲ್ಲಿ ಚಿನ್ನ, ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ಬೆಂಗಳೂರಿನಲ್ಲಿ 2016ರಲ್ಲಿ ನಡೆದ 8ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನ ಕಟಾ ವಿಭಾಗದಲ್ಲಿ (45 ಕೆಜಿ) ಬೆಳ್ಳಿ ಪದಕ, 2017ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ದಸರಾ ಕ್ರೀಡಾಕೂಟ ಫೈಟ್ ವಿಭಾದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಮೈಸೂರಿನಲ್ಲಿ 2018ರಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯದ ಫೈಟ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. 2018ರಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಏಷ್ಯಾ ಫೆಸಿಫಿಕ್ ಕರಾಟೆ ಚಾಂಪಿಯನ್‌ಶಿಪ್‌ನ ‘ಕಟಾ’ ಮತ್ತು ‘ಫೈಟ್’ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಒಲಿಂಪಿಕ್ಸ್‌ ಕನಸು

‘ಕರಾಟೆ ಸ್ಪರ್ಧೆಗಿಳಿದಾಗ ಎದುರಾಳಿಯನ್ನು ಪಟ್ಟುಗಳ ಮೂಲಕ ಸಮರ್ಥವಾಗಿ ಎದುರಿಸಲು ತನ್ನ ತಾಯಿ ನೀಡಿದ ಶಕ್ತಿಯೇ ಕಾರಣ’ ಎನ್ನುತ್ತಾರೆ ಮಾಲಾಶ್ರೀ. ಈ ಎಲ್ಲ ಪದಕಗಳ ಹಿಂದೆ ತಂದೆ–ತಾಯಿಯ ಪ್ರೀತಿ ಹಾರೈಕೆಗಳಿವೆ ಎಂದು ನೆನಪಿಸಿಕೊಳ್ಳುತ್ತಾರೆ.

ಇಷ್ಟೆಲ್ಲ ಸಾಧನೆ ಮಾಡಿರುವ ಪದಕಗಳನ್ನು ಪಡೆದಿರುವ ಮಾಲಾಶ್ರೀಗೆ ಒಲಿಂಪಿಕ್ಸ್ ಪಂದ್ಯಗಳಲ್ಲಿ ಭಾಗವಹಿಸಿ, ಪದಕ ಗೆಲ್ಲುವ ಕನಸಿದೆ. ‘ಇಷ್ಟು ದೊಡ್ಡ ಸಾಧನೆಗೆ ಸಹಕಾರಬೇಕಿದೆ’ ಎಂದು ಮನವಿ ಮಾಡುತ್ತಾರೆ ಮಾಲಾಶ್ರೀ ಪೋಷಕರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು