ಕಸದಿಂದ ಕುಂದಲಹಳ್ಳಿ ಕೆರೆಗೆ ಆಪತ್ತು

ಸೋಮವಾರ, ಏಪ್ರಿಲ್ 22, 2019
29 °C
ಕೆರೆ ಬದಿಯ ಜಾಗದಲ್ಲಿ ಕಸ ಸುರಿದು ಬೆಂಕಿ ಹಾಕುತ್ತಿರುವ ಆರೋಪ

ಕಸದಿಂದ ಕುಂದಲಹಳ್ಳಿ ಕೆರೆಗೆ ಆಪತ್ತು

Published:
Updated:
Prajavani

ಬೆಂಗಳೂರು: ದೊಡ್ಡನೆಕ್ಕುಂದಿ ವಾರ್ಡ್‌ನ ಕುಂದಲಹಳ್ಳಿ ಕೆರೆ ಬದಿಯ ಖಾಲಿ ಜಾಗದಿಂದ ಮಾಯವಾಗಿದ್ದ ಕಸದ ಸಮಸ್ಯೆ ಈಗ ಮತ್ತೆ ಪ್ರತ್ಯಕ್ಷವಾಗಿದೆ.

ವಾರ್ಡ್‌ನಲ್ಲಿ ಉತ್ಪತ್ತಿಯಾಗುವ ಕಸವನ್ನು ಸಂಗ್ರಹಿಸುವ ಗುತ್ತಿಗೆದಾರರು ರಾತ್ರೋರಾತ್ರಿ ಇಲ್ಲಿಗೆ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಅದರಲ್ಲಿ ಮರುಬಳಕೆಯಾಗುವ ಪ್ಲಾಸ್ಟಿಕ್‌ ಮತ್ತು ಲೋಹದ ವಸ್ತುಗಳನ್ನು ಬೇರ್ಪಡಿಸಿಕೊಂಡು, ಕಸವನ್ನು ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.

‘ಕಸಕ್ಕೆ ಕೆಲವೊಮ್ಮೆ ಬೆಂಕಿ ಸಹ ಹಚ್ಚುತ್ತಾರೆ. ಇದರಿಂದ ದಟ್ಟಹೊಗೆ ಎದ್ದು, ಸುತ್ತಲಿನ ನಿವಾಸಿಗಳಿಗೆ ಬಹಳ ತೊಂದರೆ ಆಗುತ್ತಿದೆ. ಕಸದ ದುರ್ವಾಸನೆಯೂ ಹಬ್ಬುತ್ತಿದೆ’ ಎಂದು ಸ್ಥಳೀಯರೊಬ್ಬರು ತಿಳಿಸಿದರು.

‘ಈ ಕುರಿತು ಕಸ ವಿಲೇವಾರಿಯ ಗುತ್ತಿಗೆದಾರರ ಸಿಬ್ಬಂದಿಯನ್ನು ಪ್ರಶ್ನಿಸಿದರೆ, ನಮಗೆ ಧಮಕಿ ಹಾಕುತ್ತಾರೆ’ ಎಂದು ಅವರು ಅಳಲು ಹೇಳಿಕೊಂಡರು.

‘ಎರಡು ತಿಂಗಳ ಹಿಂದೆ ಇದೇ ಸಮಸ್ಯೆ ಉಲ್ಬಣಿಸಿದಾಗ ಪಾಲಿಕೆ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶ ಮಾಡಿ ಕಸ ವಿಲೇವಾರಿ ಗುತ್ತಿಗೆದಾರರಿಗೆ ಖಡಕ್‌ ಸೂಚನೆ ನೀಡಿದ್ದರು. ಆದ್ದರಿಂದ ಕೆಲವು ದಿನಗಳ ಕಾಲ ಈ ಸಮಸ್ಯೆ ಮರೆಯಾಗಿತ್ತು. ಎರಡು ವಾರಗಳ ಹಿಂದಿನಿಂದ ಕಸ ತಂದು ಸುರಿಯುತ್ತಿದ್ದಾರೆ. ಈಗ ಕಸದ ಸಮಸ್ಯೆ ಮತ್ತೆ ಪ್ರತ್ಯಕ್ಷವಾಗಿ ಜನರನ್ನು ಬಾಧಿಸುತ್ತಿದೆ’ ಎಂಬುದು ಸ್ಥಳೀಯರ ಆರೋಪ.

‘ಕಸದ ರಾಶಿ ಪ್ರತಿದಿನ ಬೆಳೆಯುತ್ತಿದೆ. ಅನಿರೀಕ್ಷಿತವಾಗಿ ಮಳೆಯೇನಾದರೂ ಬಂದರೆ, ಕಸದ ರಾಶಿಯಿಂದ ರಚ್ಚು ಹರಿದುಹೋಗಿ ಕೆರೆಗೆ ಸೇರುತ್ತದೆ. ಅದರಿಂದ ಕೆರೆ ಮಲಿನಗೊಂಡು, ಜಲಚರಗಳ ಉಳಿವಿಗೆ ಕುತ್ತು ಬರಲಿದೆ’ ಎಂದು ಸ್ಥಳೀಯರಾದ ಗಿಲ್ಬರ್ಟ್‌ ಆತಂಕ ವ್ಯಕ್ತಪಡಿಸಿದರು.

‘ವಾರ್ಡ್‌ನಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಕಸವನ್ನು ವಿಂಗಡಣೆ ಮಾಡಲು ಕೆರೆ ಬದಿಯ ಖಾಸಗಿ ಜಾಗವನ್ನು ಗುರುತಿಸಿಲ್ಲ. ಕಸವನ್ನು ಬೆಲ್ಲಹಳ್ಳಿ, ಸುಬ್ಬರಾಯನಪಾಳ್ಯ ಮತ್ತು ಚಿಕ್ಕನಾಗಮಂಗಲಕ್ಕೆ ಸಾಗಿಸಲು ಗುತ್ತಿಗೆದಾರರೊಂದಿಗೆ ಒಪ್ಪಂದ ಆಗಿದೆ’ ಎಂದು ಬಿಬಿಎಂಪಿಯ ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದರು.

ಕ್ರಮಕ್ಕೆ ಸೂಚಿಸುತ್ತೇನೆ: ಆಯುಕ್ತ

‘ರಾತ್ರಿವೇಳೆ ಗಸ್ತು ತಿರುಗಿ ಕುಂದಲಹಳ್ಳಿಯಲ್ಲಿನ ಕಸದ ಸಮಸ್ಯೆಯನ್ನು ಪರಿಶೀಲಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ಬಿಬಿಎಂಪಿಯ ಹೆಚ್ಚುವರಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಡಿ.ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಖಾಸಗಿ ಜಾಗದಲ್ಲಿಯೂ ಕಸ ವಿಂಗಡಣೆ ಮಾಡಲು ಸಹ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕು. ಈ ಪ್ರದೇಶದಲ್ಲಿ ಗುತ್ತಿಗೆದಾರರು ನಿಯಮವೇನಾದರೂ ಉಲ್ಲಂಘನೆ ಮಾಡಿದ್ದರೆ, ಇದಕ್ಕೆ ಖಾಲಿ ಜಾಗದ ಮಾಲೀಕರು ಸಹಕಾರ ನೀಡಿದ್ದರೆ, ಆ ಬಗ್ಗೆ ಕ್ರಮ ಜರುಗಿಸುತ್ತೇವೆ’ ಎಂದು ಅವರು ತಿಳಿಸಿದರು.

‘ಸಮಸ್ಯೆಯ ಪರಿಹಾರಕ್ಕೆ ಕೆರೆ ಸುತ್ತಲಿನ ಪ್ರದೇಶದಲ್ಲಿ ಮಾರ್ಷಲ್‌ಗಳನ್ನು ನಿಯೋಜಿಸಲು ತಿಳಿಸುತ್ತೇನೆ’ ಎಂದು ಹೇಳಿದರು.

ಅಂಕಿ–ಅಂಶ

24,752

ದೊಡ್ಡನೆಕ್ಕುಂದಿ ವಾರ್ಡ್‌ನಲ್ಲಿನ ಮನೆಗಳು

5 ಟನ್‌

ಈ ವಾರ್ಡ್‌ನಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಕಸ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !