ಕಾರ್ಮಿಕರ ದಿನವೂ ತಪ್ಪದ ಕೂಲಿ ಗೋಳು !

ಭಾನುವಾರ, ಮೇ 26, 2019
30 °C

ಕಾರ್ಮಿಕರ ದಿನವೂ ತಪ್ಪದ ಕೂಲಿ ಗೋಳು !

Published:
Updated:
Prajavani

ವಿಜಯಪುರ: ಜಿಲ್ಲೆಯಲ್ಲಿನ ಭೀಕರ ಬರದಿಂದ ಹೊಟ್ಟೆಪಾಡಿಗಾಗಿ ದೂರದ ಪ್ರದೇಶಗಳಿಂದ ನಗರಕ್ಕೆ ಕೂಲಿ ಅರಸಿ ಬಂದಿದ್ದ ಅಸಂಖ್ಯಾತ ಕೂಲಿ ಕಾರ್ಮಿಕರಿಗೆ, ಕಾರ್ಮಿಕರ ದಿನವಾದ ಬುಧವಾರವೂ ಕೆಲಸದ ಗೋಳು ತಪ್ಪಲಿಲ್ಲ.

ಚಡಚಣ, ಇಂಡಿ, ದೇವರಹಿಪ್ಪರಗಿ, ಬಸವನಬಾಗೇವಾಡಿ ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಬಂದಿದ್ದ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ; ನಗರದ ಗೋದಾವರಿ ಹೋಟೆಲ್‌ ಮುಂಭಾಗ ಕೂಲಿಗಾಗಿ ನೆತ್ತಿ ಸುಡುವ ಬಿಸಿಲಿನಲ್ಲೂ ಕಾದು ಸುಸ್ತಾದರೂ, ಕೆಲಸ ಸಿಗದೆ ಬಾಡಿದ ಮುಖಗಳೊಂದಿಗೆ ಬರಿಗೈಯಲ್ಲಿ ಮನೆಯತ್ತ ಹೆಜ್ಜೆ ಹಾಕಿದರು.

‘ಹೊಲದಾಗ ನಾಲ್ಕು ಎಕರೆ ಕಬ್ಬು ಐತಿ. ಬೋರಿಗಿ ನೀರು ಹೋಗಿ ಎಲ್ಲಾ ಒಣಗೈತಿ. ಕೂಲಿ ಮಾಡಿ ಹೊಟ್ಟಿ ತುಂಬಿಸಿಕೊಳ್ಳಾಕ ದಿನಾ ಆಲಮೇಲದಿಂದ ಬರ್ತಿನಿ. ಕೆಲಸ ಸಿಕ್ರೆ ₹ 400 ರಿಂದ ₹ 500 ಪಗಾರ ಸಿಗ್ತಾದ. ಮೈಮ್ಯಾಗ ಹಿಡಿದ ಮಾಡಿದ್ರ ಇನ್ನೂ ಜಾಸ್ತಿ ಪಗಾರ ಹಾಕೋಬಹುದು. ಆದ್ರ ಪ್ರತಿ ದಿನ ಕೆಲಸ ಸಿಗೋದೆ ಬಹಳ ಕಷ್ಟ’ ಎನ್ನುತ್ತಾರೆ ಕೂಲಿ ಕಾರ್ಮಿಕ ಹಣಮಂತ ಅಂಗಡಿ.

‘ದೊಡ್ಡ ಪಗಾರ ಐತಿ ಅಂಥ್‌ 10 ವರ್ಷಗಳಿಂದ ಕೂಲಿ ಕೆಲಸ ಮಾಡಾಕ ವಿಜಾಪುರಕ್ಕೆ ಬರ್ತೀದಿನಿ. ವಾರದಾಗ ಮೂರ್ನಾಲ್ಕು ದಿನ ಕೆಲಸ ಸಿಕ್ಕರೆ ದೊಡ್ಡದು. ಇವತ್ತು ಮುಂಜಾನೆ 9ರೊಳಗ ಬಂದೀನಿ. ಸೂರ್ಯ ನೆತ್ತಿಮ್ಯಾಗ ಬಂದ್ರೂ ಯಾರು ಕೆಲಸಕ್ಕೆ ಕರಿತಿಲ್ಲ. ಮಧ್ಯಾಹ್ನ 3 ರವರೆಗೆ ನೋಡ್ತೀನಿ ಸಣ್ಣಪುಟ್ಟ ಕೆಲಸ ಸಿಕ್ಕರೆ ₹ 100, ₹ 200 ಪಗಾರ ಆದ್ರೂ ತಗೊಂಡ ಹೋಗ್ತೀನಿ’ ಎಂದು ಚಡಚಣದ ಬಸವರಾಜ ಪೂಜಾರಿ ತಿಳಿಸಿದರು.

‘ತಪ್ಪದೆ ದಿನಾ ಕೂಲಿ ಕೆಲಸಕ್ಕೆ ಬರ್ತಿನಿ. ದೌಡ ಕೆಲಸ ಬಂತಂದ್ರೆ ನಾಲ್ಕೈದು ನೂರು ಪಗಾರ ಬರ್ತಾದ. ಲೇಟಾಗಿ ಸಿಕ್ಕರೆ ₹ 100, ₹ 150 ಕೊಟ್ಟು ಕಳಿಸ್ತಾರ. ನಮ್ಮ ಕಡೆ ಗಾಡಿ ಮ್ಯಾಲ್‌ ಯಾರಾದ್ರೂ ಬಂದ್ರೆ ಸಾಕು, ಗುಂಪುಗಟ್ಟಲೆ ಕೂಲಿಕಾರರು ಮುಗಿಬೀಳ್ತಾರ. ಹೊಟ್ಟಿ ತುಂಬಿಸಿಕೊಳ್ಳಾಕ ಈ ನರಕಯಾತನೆ ದಿನಾ ತಪ್ಪಿದಲ್ರಿ’ ಎಂದು ತೊರವಿಯ ಶಂಕರ ಬಿರಾದಾರ ತಮ್ಮ ಯಾತನೆ ತೋಡಿಕೊಂಡರು.

‘ಮನೆ, ಕಟ್ಟಡ ನಿರ್ಮಾಣಕ್ಕೆ ಉಸುಕು–ಸಿಮೆಂಟ್‌ ಮಿಶ್ರಣ ಮಾಡಿ ಕೊಡುವುದು, ರಸ್ತೆ ಕಾಮಗಾರಿ, ಪ್ಲಾಸ್ಟರ್‌ ಮಾಡುವುದೇ ಹೆಚ್ಚಿನ ಪ್ರಮಾಣದಲ್ಲಿ ಸಿಗುವ ಕೆಲಸ. ಇದಕ್ಕೆ ಅವಶ್ಯಕವಿರುವ ಉಸುಕು ಬರುವುದು ನಿಂತರೆ, ಈ ಕೆಲಸಗಳು ಸಹ ಸಂಪೂರ್ಣ ನಿಂತು ಬಿಡುತ್ತವೆ. ಆಗ ಕೆಲಸಕ್ಕಾಗಿ ಬಹಳ ಕಷ್ಟ ಅನುಭವಿಸಬೇಕಾಗುತ್ತದೆ’ ಎಂದು ಕಾರ್ಮಿಕ ದಶರಥ ಮಳಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !