ಶುಕ್ರವಾರ, ಆಗಸ್ಟ್ 23, 2019
21 °C
ಸಂತೇಮರಹಳ್ಳಿ: ದಿನವೂ ಸಮಸ್ಯೆ ಎದುರಿಸುತ್ತಿರುವ ಕಬಿನಿ ವಸತಿಗೃಹಗಳ ಹಿಂಭಾಗದ ಬಡಾವಣೆ ನಿವಾಸಿಗಳು

20 ವರ್ಷ ಕಳೆದರೂ ಸಿಗದ ಮೂಲಸೌಕರ್ಯ

Published:
Updated:
Prajavani

ಸಂತೇಮರಹಳ್ಳಿ:‌ ಕಬಿನಿ ವಸತಿಗೃಹಗಳ ಹಿಂಭಾಗವಿರುವ ಬಡಾವಣೆ ನಿರ್ಮಾಣಗೊಂಡು ಇಪ್ಪತ್ತು ವರ್ಷ ಕಳೆದಿದ್ದರೂ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ಬಡಾವಣೆಗೆ ಸರಿಯಾದ ಚರಂಡಿ ವ್ಯವಸ್ಥೆ, ಕುಡಿಯುವ ನೀರು, ರಸ್ತೆ ಹಾಗೂ ಬೀದಿದೀಪಗಳಿಲ್ಲ. 

ಚರಂಡಿ ಇಲ್ಲದಿರುವ ಕಾರಣದಿಂದ ಮನೆಗಳ ಕೊಳಚೆ ನೀರು ರಸ್ತೆಯಲ್ಲೆಲ್ಲಾ ಹರಿಯುತ್ತಿದೆ. ಖಾಲಿ ನಿವೇಶನಗಳಿಗೆ ಚರಂಡಿ ನೀರನ್ನು ಹರಿಬಿಡಲಾಗುತ್ತಿದೆ. ಕೊಚ್ಚೆ ನೀರು ನಿಂತಲ್ಲಿಯೇ ನಿಂತು ದುರ್ವಾಸನೆ ಬರುತ್ತಿದ್ದು, ಸೊಳ್ಳೆ ಕ್ರಿಮಿ ಕೀಟಗಳು ಈ ಜಾಗವನ್ನು ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿವೆ. ಬಡಾವಣೆ ನಿವಾಸಿಗಳು ರೋಗರುಜಿನಗಳ ಭಯದಲ್ಲಿ ವಾಸಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. 

30 ಮನೆಗಳಿರುವ, 200ಕ್ಕೂ ಹೆಚ್ಚು ಜನರು ವಾಸಿಸುತ್ತಿರುವ ಬಡಾವಣೆಗೆ ಸಾರ್ವಜನಿಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಮನೆಗಳಿಗೆ ಸಂಪರ್ಕ ಕಲ್ಪಿಸಿರುವ ನಲ್ಲಿಗಳಿಗೆ ಎರಡು ದಿನಗಳಿಗೊಮ್ಮೆ ಕುಡಿಯುವ ನೀರು ಬಿಡಲಾಗುತ್ತಿದ್ದು, ನಿವಾಸಿಗಳು ನೀರನ್ನು ಸಂಗ್ರಹಿಸಿಕೊಟ್ಟುಕೊಳ್ಳಬೇಕಾಗಿದೆ. ಕಿರು ನೀರು ಸರಬರಾಜು ಘಟಕದ ವತಿಯಿಂದ ತೊಂಬೆಗಳನ್ನು ಅಳವಡಿಸಿಲ್ಲ. ಸಾರ್ವಜನಿಕವಾಗಿ ನಲ್ಲಿಗಳನ್ನು ಅಳವಡಿಸಿಲ್ಲ.

ಬಡಾವಣೆಯ ಸನಿಹದಲ್ಲಿ ಚುಂಗಡಿಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಡಾವಣೆಗೆ ಹೊಂದಿಕೊಂಡಂತೆ ಕಿರುನೀರು ಸರಬರಾಜು ಘಟಕದಿಂದ ತೊಂಬೆಯೊಂದನ್ನು ನಿರ್ಮಿಸಿ ಪೈಪ್‍ಲೈನ್ ಅಳವಡಿಸಿ 2 ವರ್ಷ ಕಳೆದಿದೆ. ಇದುವರೆಗೂ ನೀರು ತುಂಬಿಸಿಲ್ಲ. ತೊಂಬೆಗೆ ನೀರು ತುಂಬಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದರೂ ಗ್ರಾಮ ಪಂಚಾಯಿತಿ ಆಡಳಿತ ಗಮನ ಹರಿಸಿಲ್ಲ ಎಂದು ನಿವಾಸಿಗಳು ದೂರುತ್ತಾರೆ.

ರಸ್ತೆಯೂ ಸರಿ ಇಲ್ಲ: ರಸ್ತೆ ದುರಸ್ತಿಪಡಿಸದ ಕಾರಣ ಮಳೆಗಾಲದಲ್ಲಿ ರಸ್ತೆಯಲ್ಲೇ ನೀರು ನಿಲ್ಲುತ್ತದೆ. ಮನೆಗಳಿಗೂ ಮಳೆ ನೀರು ನುಗ್ಗುವಂತಹ ಪರಿಸ್ಥಿತಿ ಉಂಟಾಗುತ್ತದೆ. ಚರಂಡಿಯೂ ಇಲ್ಲದೆ ಇರುವುದರಿಂದ ಚರಂಡಿ ನೀರು ಮಳೆ ನೀರಿನೊಂದಿಗೆ ಬೆರೆತು ಮನೆಗಳ ಮುಂಭಾಗ ಬಂದು ನಿಲ್ಲುತ್ತದೆ. ಈ ಕೊಳಚೆ ನೀರನ್ನೇ ತುಳಿದುಕೊಂಡು ನಿವಾಸಿಗಳು ತಿರುಗಾಡಬೇಕಾಗಿದೆ.

‘ವಿದ್ಯುತ್ ಕಂಬಗಳಿಗೆ ದೀಪಗಳನ್ನು ಅಳವಡಿಸಿಲ್ಲ. ರಾತ್ರಿ ಸಮಯದಲ್ಲಿ ನಿವಾಸಿಗಳು ಕತ್ತಲೆಯಲ್ಲೇ ಸಂಚರಿಸಬೇಕಾಗಿದೆ. ಬಡಾವಣೆಯಲ್ಲಿರುವ ಸಮಸ್ಯೆಗಳನ್ನು ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಪಂಚಾಯಿತಿ ಅಧಿಕಾರಿಗಳು ಹಾಗೂ ಸದಸ್ಯರು ಈ ಬಗ್ಗೆ ಗಮನಹರಿಸಬೇಕು’ ಎಂದು ಸ್ಥಳೀಯ ನಿವಾಸಿ ಸಂಪತ್ತು ಒತ್ತಾಯಿಸಿದರು. 

Post Comments (+)