ತನಿಖೆ ವಿಳಂಬ; ಮಹಿಳೆ ಆತ್ಮಹತ್ಯೆ

7
ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾದ ಮಹಿಳೆ

ತನಿಖೆ ವಿಳಂಬ; ಮಹಿಳೆ ಆತ್ಮಹತ್ಯೆ

Published:
Updated:

ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ ಪ್ರಿಯಕರನ ವಿರುದ್ಧ ದೂರು ಕೊಟ್ಟರೂ ಪೊಲೀಸರು ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಬೇಸರಗೊಂಡು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಂದ್ರಾಲೇಔಟ್ ಸಮೀಪದ ಭೈರವೇಶ್ವರ ನಗರದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ‘ರವಿಕಿರಣ್ ಎಂಬಾತನ ವಿರುದ್ಧ ದೂರು ಕೊಟ್ಟಿದ್ದೇನೆ. ನೀವು (ಪೊಲೀಸರು) ಆತನನ್ನು ಬಂಧಿಸುತ್ತಿಲ್ಲ. ಈಗ ನಾನು ಸಾಯಲು ನಿರ್ಧರಿಸಿದ್ದೇನೆ. ಇನ್ನಾದರೂ ಆತನನ್ನು ಬಂಧಿಸಿ ಕಾನೂನು ‍ಪ್ರಕಾರ ಶಿಕ್ಷೆ ಆಗುವಂತೆ ಮಾಡಿ’ ಎಂದು ಆ ಮಹಿಳೆ, ಇನ್‌ಸ್ಪೆಕ್ಟರ್‌ ವೀರೇಂದ್ರ ಪ್ರಸಾದ್‌ ಅವರಿಗೆ ಡೆತ್‌ನೋಟ್‌ನಲ್ಲಿ ಮನವಿ ಮಾಡಿದ್ದಾರೆ‌‌.

ಮಾಗಡಿ ತಾಲ್ಲೂಕು ಹೊಸಪಾಳ್ಯ ಗ್ರಾಮದ ಮಹಿಳೆ, ನಗರದ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಅವರಿಗೆ ಸಂಬಂಧಿ ಯುವಕನ ಜತೆ ವಿವಾಹವಾಗಿತ್ತು. ಆದರೆ, ಕೆಲವೇ ದಿನಗಳಲ್ಲೇ ದಾಂಪತ್ಯದಲ್ಲಿ ಬಿರುಕು ಉಂಟಾಗಿ ಪತಿಯನ್ನು ತೊರೆದ ಅವರು, ನಂತರ ಭೈರವೇಶ್ವರ ನಗರದ ತಮ್ಮ ಚಿಕ್ಕಮ್ಮನ ಮನೆಗೆ ಬಂದು ಉಳಿದುಕೊಂಡಿದ್ದರು.

ಈ ನಡುವೆ ಅವರಿಗೆ ದೊರಸ್ವಾಮಿಪಾಳ್ಯದ ರವಿಕಿರಣ್ ಎಂಬಾತನೊಂದಿಗೆ ಪ್ರೇಮವಾಯಿತು. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಆತ, ಮದುವೆ ಆಗುವುದಾಗಿ ನಂಬಿಸಿ ಮಹಿಳೆ ಜತೆ ಲೈಂಗಿಕ ಕ್ರಿಯೆ ನಡೆಸಿದ್ದ ಎನ್ನಲಾಗಿದೆ.

ಅವರಿಬ್ಬರು ಪ್ರೀತಿಸುತ್ತಿರುವ ವಿಚಾರ ಎರಡೂ ಕುಟುಂಬಗಳಿಗೂ ಗೊತ್ತಿತ್ತು. ಇತ್ತೀಚೆಗೆ ತನ್ನಿಂದ ದೂರವಾಗಲು ಯತ್ನಿಸುತ್ತಿದ್ದ ಇನಿಯನ ಮೇಲೆ ಬೇಸರಗೊಂಡಿದ್ದ ಮಹಿಳೆ, ಇದೇ ವಿಚಾರವಾಗಿ ಹಲವು ಸಲ ಭೇಟಿಯಾಗಿ ಮನವೊಲಿಕೆಗೂ ಯತ್ನಿಸಿದ್ದಳು. ಆದರೆ, ಪ್ರಯೋಜನ ಆಗಿರಲಿಲ್ಲ. ಹೀಗಾಗಿ, ರವಿಕಿರಣ್ ವಿರುದ್ಧ ಅತ್ಯಾಚಾರ ಹಾಗೂ ವಂಚನೆ ಆರೋಪಗಳಡಿ ದೂರು ಕೊಟ್ಟಿದ್ದರು.

ಇನ್‌ಸ್ಪೆಕ್ಟರ್ ಭೇಟಿ ಬಳಿಕ ಆತ್ಮಹತ್ಯೆ: ಶುಕ್ರವಾರ ಬೆಳಿಗ್ಗೆ ಠಾಣೆಗೆ ತೆರಳಿ ಇನ್‌ಸ್ಪೆಕ್ಟರ್ ವೀರೇಂದ್ರ ಪ್ರಸಾದ್ ಅವರನ್ನು ಭೇಟಿಯಾಗಿದ್ದ ಮಹಿಳೆ, ಆರೋಪಿ ವಿರುದ್ಧ ಕ್ರಮ ಜರುಗಿಸದ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಮಾತಿಗೆ, ‘ಎಫ್‌ಐಆರ್ ದಾಖಲಾದ ದಿನದಿಂದಲೂ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಮೊಬೈಲ್ ಸ್ವಿಚ್ಡ್‌ಆಫ್ ಮಾಡಿಕೊಂಡು ಓಡಾಡುತ್ತಿದ್ದಾನೆ. ಕರೆ ವಿವರಗಳ ಮಾಹಿತಿ(ಸಿಡಿಆರ್) ಕೂಡ ಸಂಗ್ರಹಿಸಿದ್ದೇವೆ. ಸದ್ಯದಲ್ಲೇ ಸಿಕ್ಕಿ ಬೀಳುತ್ತಾನೆ’ ಎಂದು ಹೇಳಿ ಕಳುಹಿಸಿದ್ದರು.

ಠಾಣೆಯಿಂದ ಮನೆಗೆ ಮರಳಿದ ಸಂತ್ರಸ್ತೆ, ಕೋಣೆಗೆ ತೆರಳಿ ನೇಣು ಹಾಕಿಕೊಂಡಿದ್ದಾರೆ. ಅವರ ಚಿಕ್ಕಮ್ಮ ಸ್ಥಳೀಯರ ನೆರವಿನಿಂದ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !