ದಾನ ಮಾಡಿ ಅಮೃತಧಾರೆ

7

ದಾನ ಮಾಡಿ ಅಮೃತಧಾರೆ

Published:
Updated:
Deccan Herald

ಅವಧಿಪೂರ್ವ ಹುಟ್ಟಿದ ಹಾಗೂ ಕಡಿಮೆ ತೂಕದ ಮಕ್ಕಳಿಗೆ ಸ್ತನ್ಯಪಾನ ಅತ್ಯವಶ್ಯ. ಆದರೆ ಅವಧಿಪೂರ್ವ ಪ್ರಸವ ಪ್ರಕರಣಗಳಲ್ಲಿ ತಾಯಿ ಶಿಶುವಿನ ಅಗತ್ಯ ಪೂರೈಸುವಷ್ಟು ಹಾಲನ್ನು ಹೊಂದಿರುವುದಿಲ್ಲ. ಅಂತಹ ತಾಯಂದಿರಿಗೆ ಎದೆಹಾಲಿನ ಬ್ಯಾಂಕ್‌ ಆಶಾಕಿರಣ. ನಗರದ ಫೋರ್ಟಿಸ್‌ ಲಾಫೆಮ್ಮೆ ಆಸ್ಪತ್ರೆಯಲ್ಲಿ ಒಂದು ವರ್ಷದ ಹಿಂದೆ ಎದೆಹಾಲಿನ ಬ್ಯಾಂಕ್‌ ‘ಅಮರ’ ಆರಂಭಗೊಂಡಿದ್ದು, ಇದುವರೆಗೂ ಅವಧಿಪೂರ್ವ ಜನಿಸಿದ 160 ಶಿಶುಗಳಿಗೆ 269 ಲೀಟರ್‌ ಹಾಲು ಪೂರೈಸಿದೆ.

ಈಚೆಗೆ ಆಸ್ಪತ್ರೆಯಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹದಲ್ಲಿ ಬ್ಯಾಂಕ್‌ ಮುಖ್ಯಸ್ಥ ಡಾ. ಶ್ರೀಕಾಂತ್‌ ಮಣಿಕಾಂತಿ ಅವರು ‘ಅಮರ’ ಕುರಿತಾಗಿ ಮಾಹಿತಿ ಹಂಚಿಕೊಂಡರು. ‘ಒಂದು ವರ್ಷದಲ್ಲಿ 69 ತಾಯಂದಿರು ಬ್ಯಾಂಕ್‌ಗೆ ಎದೆಹಾಲು ದಾನ ಮಾಡಿದ್ದಾರೆ. ಈ ಆಸ್ಪತ್ರೆಯಿಂದ ಅಗತ್ಯವಿರುವ ನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಈ ಹಾಲನ್ನು ಪೂರೈಸಲಾಗಿದೆ’ ಎಂದು ವಿವರಣೆ
ನೀಡಿದರು. 

ಆಸ್ಪತ್ರೆಯಿಂದ ಎದೆಹಾಲು ಪಡೆಯಲು ಕೆಲವು ನಿಯಮಗಳಿವೆ. ಮಕ್ಕಳು 34 ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಜನಿಸಿರಬೇಕು. ತಾಯಿಗೆ ಅನಾರೋಗ್ಯ ಕಾರಣದಿಂದ ಸ್ತನ್ಯಪಾನ ಮಾಡಿಸಲು ಅಸಾಧ್ಯ ಎಂಬ ಸಂದರ್ಭ‌ಗಳನ್ನು ಗಮನದಲ್ಲಿಟ್ಟುಕೊಂಡು ಹಾಲನ್ನು ಪೂರೈಸಲಾಗುವುದು ಎಂದು ಅವರು ತಿಳಿಸುತ್ತಾರೆ. 

‘ಎದೆಹಾಲು ಮಕ್ಕಳಿಗೆ ಅಗತ್ಯವಿರುವ ಎಲ್ಲ ಪೌಷ್ಠಿಕಾಂಶಗಳನ್ನು ಹೊಂದಿರುತ್ತದೆ. ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ. ಇಂತಹ ಅಮೂಲ್ಯ ಗುಣಗಳಿರುವ ಹಾಲಿನ ದಾನದ ಬಗ್ಗೆ ಕೆಲವು ಮಿಥ್ಯೆಗಳಿವೆ’ ಎಂಬುದು ಸ್ತ್ರೀರೋಗ ತಜ್ಞೆ ಪ್ರತಿಮಾ ರೆಡ್ಡಿ ಮಾತು.

‘ಹಾಲು ದಾನ ಮಾಡಿದರೆ ಹಾಲು ಉತ್ಪತ್ತಿ ಕಡಿಮೆಯಾಗಬಹುದು, ತನ್ನ ಮಗುವಿಗೆ ಹೊಟ್ಟೆ ತುಂಬಲ್ಲ ಎಂಬ ಭಯ ಕೆಲ ತಾಯಂದಿರದು. ಆದರೆ ಎದೆಹಾಲು ಉತ್ಪತ್ತಿ ಆಗುತ್ತಲೇ ಇರುತ್ತದೆ. ತಮ್ಮ ಮಗುವಿಗೆ ಹೊಟ್ಟೆ ತುಂಬಿದ ನಂತರ, ಕೆಲವು ತಾಯಂದಿರು ಹಾಲನ್ನು ಚೆಲ್ಲುತ್ತಾರೆ. ಹೆಚ್ಚುವರಿ ಹಾಲನ್ನು ಚೆಲ್ಲುವ ಬದಲು ದಾನ ಮಾಡುವುದು ಒಳ್ಳೆಯ ಕೆಲಸ’ ಎನ್ನುತ್ತಾರೆ ಅವರು.

‘ಸ್ತನ್ಯಪಾನ ಪ್ರಾಮುಖ್ಯತೆ, ಎದೆಹಾಲು ದಾನದ ಜಾಗೃತಿ ಹೆಚ್ಚಾಗಬೇಕು’ ಎಂದು ಹೇಳುವ ಅವರು, ‘ಹಾಲನ್ನು ದಾನ ಮಾಡಬಯಸುವ ತಾಯಂದಿರು ಆಸ್ಪತ್ರೆಗೆ ಬರಬೇಕಾಗಿಲ್ಲ. ಅವರು ತಿಳಿಸಿದರೆ ಆಸ್ಪತ್ರೆಯ ಲ್ಯಾಬ್‌ ಸಿಬ್ಬಂದಿ ಮನೆಗೆ ಹೋಗಿ ಅವರ ರಕ್ತ ಪರೀಕ್ಷಿಸಿ, ಹಾಲು ಸಂಗ್ರಹಿಸಲು ಪಂಪ್‌ ನೀಡಿ 100 ಮಿ.ಲೀನ 5 ಬಾಟಲಿಗಳನ್ನು ನೀಡುತ್ತಾರೆ. ಮಹಿಳೆ ಆ ಬಾಟಲಿಗಳಲ್ಲಿ ಹಾಲು ತುಂಬಿಸಿ ಫ್ರೀಝರ್‌ನಲ್ಲಿ ಇಡಬೇಕು.’

‘5 ಬಾಟಲಿ ಪೂರ್ತಿ ಆದ ನಂತರ ಸಿಬ್ಬಂದಿ ಅದನ್ನು ವಾಪಸ್‌ ಸಂಗ್ರಹಿಸುತ್ತಾರೆ.  ಅನಂತರ ಅದನ್ನು ಆಸ್ಪತ್ರೆಗೆ ತಂದು, ವಿವಿಧ ಪರೀಕ್ಷೆಗೊಳಪಡಿಸಿ, ಅದರಲ್ಲಿರುವ ಪೋಷಕಾಂಶಗಳ ಪಟ್ಟಿ ಮಾಡಿ ಅದರ ಮೇಲೆಯೇ ವಿವರ ಬರೆಯಲಾಗುತ್ತದೆ. ಎಷ್ಟು ದಿನಗಳವರೆಗೆ ಉಪಯೋಗಿಸಬಹುದು ಎಂಬ ವಿವರವನ್ನೂ ಬರೆದಿಡಲಾಗುತ್ತದೆ. ತಾಯಿ ಹಾಲನ್ನು ಫ್ರೀಝರ್‌ನಲ್ಲಿ -20ಡಿಗ್ರಿ ಸೆಲ್ಸಿಯಸ್‍ನಲ್ಲಿ 6 ತಿಂಗಳು ಸಂಗ್ರಹಿಸಿಡಬಹುದು. ಅನಂತರ ಅದನ್ನು ಸಂಸ್ಕರಿಸಿ, ಅಗತ್ಯ ಇರುವ ಆಸ್ಪತ್ರೆಗೆ ಪೂರೈಕೆ ಮಾಡಲಾಗುತ್ತದೆ. ಆದರೆ ನೇರವಾಗಿ ಪೋಷಕರಿಗೆ ನೀಡುವುದಿಲ್ಲ’ ಎನ್ನುತ್ತಾರೆ.

‘ಎದೆಹಾಲು ಕುಡಿಸುವುದು ಅತಿಸಾರ ಮತ್ತು ನ್ಯೂಮೋನಿಯಾಗಳಿಂದ ಮಕ್ಕಳ ಸಾವನ್ನು ತಪ್ಪಿಸುತ್ತದೆ. ಸೂಕ್ತವಾಗಿ ಎದೆಹಾಲು ಸಿಗದೆ ಮಕ್ಕಳು ಸಾಯುವ ದೇಶಗಳಲ್ಲಿ ನಮ್ಮ ದೇಶ ಮುಂಚೂಣಿಯಲ್ಲಿದೆ. ಎದೆಹಾಲಿನ ಬ್ಯಾಂಕ್‌ನಿಂದ ಈ ಸಮಸ್ಯೆ ದೂರವಾಗಬಹುದು’ ಎಂದು ಶ್ರೀಕಾಂತ್‌ ಅವರು ಮಾಹಿತಿ
ನೀಡುತ್ತಾರೆ. 

ಹಾಗಂತ ಹಾಲು ದಾನ ಪಡೆಯುವ ಪೋಷಕರು ಭಯಪಡಬೇಕಾಗಿಲ್ಲ. ಪರೀಕ್ಷೆ ಮಾಡಿಯೇ ಹಾಲು ಸಂಗ್ರಹ ಮಾಡಲಾಗಿರುತ್ತದೆ. ಧೂಮಪಾನ ಅಥವಾ ಮಾದಕ ವಸ್ತು ವ್ಯಸನ ಹೊಂದಿದ ತಾಯಂದಿರ ಹಾಲನ್ನು ಸ್ವೀಕರಿಸುವುದಿಲ್ಲ. ಹೆಪಟೈಟಿಸ್‌, ಎಚ್‌ಐವಿಯಂತಹ ಕಾಯಿಲೆ ಇರುವ ಮಹಿಳೆಯ ಹಾಲನ್ನೂ ಸಂಗ್ರಹಿಸುವುದಿಲ್ಲ’ ಎನ್ನುತ್ತಾರೆ ಅವರು.

ಎದೆ ಹಾಲು ದಾನ ಮಾಡಲು ಇಚ್ಛಿಸುವ ತಾಯಂದಿರು ಆಸ್ಪತ್ರೆಯ 9999287636  ಕರೆ ಮಾಡಬಹುದು. 


–‘ಅಮರ’ದಲ್ಲಿ ಸಂಗ್ರಹಿಸಲಾಗಿರುವ ಎದೆಹಾಲು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !