ನಕಲಿ ಸಹಿ ಬಳಸಿ ಕೆರೆ ಒತ್ತುವರಿ!

7

ನಕಲಿ ಸಹಿ ಬಳಸಿ ಕೆರೆ ಒತ್ತುವರಿ!

Published:
Updated:

ಬೆಂಗಳೂರು: ಯಲಚೇನಹಳ್ಳಿ ಅಣ್ಣಯ್ಯಪ್ಪ ಕೆರೆಯ ಮೀಸಲು ಪ್ರದೇಶವನ್ನು ಕಬಳಿಸಲು ಭೂಗಳ್ಳರು ನಕಲಿ ಸರ್ವೆ ನಕಾಶೆ, ತಹಶೀಲ್ದಾರ್‌ ಅವರ ಸಹಿ ಹಾಗೂ ಮೊಹರು ಬಳಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಕಲಿ ಮಾಡಿರುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ನಗರ ಜಿಲ್ಲೆಯ ಭೂದಾಖಲೆಗಳ ಜಂಟಿ ನಿರ್ದೇಶಕ ಜಯಪ್ರಕಾಶ್‌ ಅವರು ಇಲಾಖೆಯ ಸಹಾಯಕ ನಿರ್ದೇಶಕರಿಗೆ ಅಕ್ಟೋಬರ್‌ 31ರಂದು ಸೂಚನೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ‘‍ಪ್ರಜಾವಾಣಿ’ಗೆ ಲಭ್ಯವಾಗಿವೆ.

‘ಕೆರೆಯ ಮೀಸಲು ಪ್ರದೇಶವನ್ನು ಕಬಳಿಕೆ ಮಾಡಲಾಗಿದೆ. ಸರ್ಕಾರಿ ಕಾಲುದಾರಿ ಬಳಸಿಕೊಂಡು ಕಟ್ಟಡ ನಿರ್ಮಾಣ ಮಾಡಲಾಗಿದೆ. ಬಿಬಿಎಂಪಿಯ ನಗರ ಯೋಜನಾ ಜಂಟಿ ನಿರ್ದೇಶಕರ ಸರ್ವೆ ನಕಾಶೆ ನಕಲಿಯಾಗಿದೆ. ಈ ಬಗ್ಗೆ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಜಂಟಿ ನಿರ್ದೇಶಕರು ಕೋರಿದ್ದರು. ತಮ್ಮ ಸಹಿ ಹಾಗೂ ಮೊಹರು ನಕಲಿ ಎಂದು ಬೆಂಗಳೂರು ದಕ್ಷಿಣ ತಹಶೀಲ್ದಾರ್‌ ತಿಳಿಸಿದ್ದಾರೆ. ಈ ಸಂಬಂಧ ತಹಶೀಲ್ದಾರ್‌ ಜತೆಗೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಅವರು ತಿಳಿಸಿದ್ದಾರೆ.

ಕೆರೆಯ ನೈರುತ್ಯ ದಿಕ್ಕಿನಲ್ಲಿ ಅಕ್ರಮ ಕಟ್ಟಡ ನಿರ್ಮಾಣ ವಿಚಾರವು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಸದಸ್ಯರ ಗಮನಕ್ಕೆ 2015ರಲ್ಲಿ ಬಂದಿತ್ತು. ‘ಕಾಲುದಾರಿಯನ್ನು ಕಬಳಿಸಲಾಗಿದೆ. ಇದು ಒಂದು ಎಕರೆ ಸರ್ಕಾರಿ ಭೂಮಿಗೆ ಏಕೈಕ ಸಂಪರ್ಕ ರಸ್ತೆ. ಭೂಕಬಳಿಕೆಯಿಂದ ಆಸುಪಾಸಿನ ನಿವಾಸಿಗಳಿಗೆ ತೊಂದರೆ ಉಂಟಾಗಿದೆ. ಜಲಮೂಲದ 30 ಮೀಟರ್‌ ಮೀಸಲು ಪ್ರದೇಶದೊಳಗೆ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗಿದೆ’ ಎಂಬುದನ್ನು ವೇದಿಕೆಯ ಸದಸ್ಯರು ಗುರುತಿಸಿದ್ದರು.

‘2015ರ ಸೆಪ್ಟೆಂಬರ್‌ 9ರಂದು ಬಿಎಂಟಿಎಫ್‌ಗೆ ದೂರು ನೀಡಿದೆವು. ಪ್ರಕರಣದ ಬಗ್ಗೆ ಹತ್ತು ಹಲವು ಸಲ ವಿಚಾರಿಸಿದೆವು. ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಉತ್ತರಿಸಿದರು. ಅಧಿಕಾರಿಗಳು ಎಫ್‌ಐಆರ್‌ ದಾಖಲಿಸುವ ಬದಲು ಕಟ್ಟಡ ಮಾಲೀಕನಿಗೆ ಪರೋಕ್ಷ ಸಹಾಯ ಮಾಡುತ್ತಾ ಬಂದರು. 2017ರ ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳಲ್ಲಿ ಮತ್ತೆರಡು ದೂರುಗಳನ್ನು ಸಲ್ಲಿಸಿದೆವು. ಹಲವು ತಿಂಗಳು ಕಳೆದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ’ ಎಂದು ವೇದಿಕೆಯ ನಗರ ಜಿಲ್ಲಾ ಘಟಕದ ಅಧ್ಯಕ್ಷ ವಿ.ಆರ್‌.ಮರಾಠೆ ತಿಳಿಸಿದರು.

‘2018ರ ಅಕ್ಟೋಬರ್‌ನಲ್ಲಿ ಬಿಎಂಟಿಎಫ್‌ ಇನ್‌ಸ್ಪೆಕ್ಟರ್ ಸವಿತಾ ಅವರನ್ನು ಭೇಟಿ ಮಾಡಿ ವಿಚಾರಿಸಿದೆವು. ಪಾಲಿಕೆಯ ನಗರ ಯೋಜನಾ ಜಂಟಿ ನಿರ್ದೇಶಕರ (ಜೆಟಿಡಿಪಿ) ವರದಿಯ ಆಧಾರದಲ್ಲಿ ಪ್ರಕರಣವನ್ನು ಕೆಲವು ತಿಂಗಳ ಹಿಂದೆಯೇ ಮುಕ್ತಾಯ ಮಾಡಿದ್ದೇವೆ ಎಂಬ ಉತ್ತರ ನೀಡಿದರು. ಈ ಮಾತು ಕೇಳಿ ಆಶ್ಚರ್ಯಚಕಿತರಾದೆವು. ಸತ್ಯಾಸತ್ಯತೆ ಪರಿಶೀಲಿಸಲು ಜೆಟಿಡಿಪಿ ವರದಿ ಹಾಗೂ ನಕಾಶೆ ಕೇಳಿದೆವು’ ಎಂದು ವಿವರಿಸಿದರು.

‘ಈ ಅಕ್ರಮದಲ್ಲಿ ನಗರ ಯೋಜನಾ ವಿಭಾಗದ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಮಾಹಿತಿ ನಮಗೆ ಇತ್ತು. ಹೀಗಾಗಿ, ನಮ್ಮ ಬಳಿ ಇದ್ದ ದಾಖಲೆ ಹಾಗೂ ಜೆಟಿಡಿಪಿ ವರದಿಯ ತುಲನೆ ಮಾಡಿದೆವು. ಮೇಲ್ನೋಟಕ್ಕೆ ದಾಖಲೆ ನಕಲಿ ಎಂದು ಗೊತ್ತಾಯಿತು. ಈ ಹಿನ್ನೆಲೆಯಲ್ಲಿ ಭೂಮಾಪಕರು ಹಾಗೂ ತಹಶೀಲ್ದಾರ್‌ ಅವರನ್ನು ವಿಚಾರಿಸಿದೆವು. ಅಲ್ಲಿಯೂ ಅದೇ ರೀತಿಯ ಉತ್ತರ ಬಂತು’ ಎಂದು ಅವರು ಹೇಳಿದರು.

*
ಅಕ್ರಮದಲ್ಲಿ ಭಾಗಿಯಾದ ನಗರ ಯೋಜನಾ ವಿಭಾಗದ ಅಧಿಕಾರಿಗಳು, ಬಿಎಂಟಿಎಫ್‌ ಅಧಿಕಾರಿಗಳು ಹಾಗೂ ಕಟ್ಟಡದ ಮಾಲೀಕರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು.
-ವಿ.ಆರ್‌.ಮರಾಠೆ, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ನಗರ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !