ಶುಕ್ರವಾರ, ಆಗಸ್ಟ್ 23, 2019
21 °C
ಆಗಸ್ಟ್‌ 9ರಿಂದ 18ರವರೆಗೆ ನಡೆಯಲಿದೆ

‘ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ’: ಜಯಚಾಮರಾಜ ಒಡೆಯರ್‌ಗೆ ಪುಷ್ಪ ನಮನ

Published:
Updated:
Prajavani

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಈ ಸಾಲಿನ ‘ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ’ ಇದೇ 8ರಿಂದ 19ರವರೆಗೆ ನಡೆಯಲಿದೆ. ಮೈಸೂರು ಸಂಸ್ಥಾನದ ಜಯಚಾಮರಾಜ ಒಡೆಯರ್‌ ಅವರ ಜನ್ಮಶತಮಾನೋತ್ಸವ ಅಂಗವಾಗಿ ಈ ಬಾರಿಯ ಪ್ರದರ್ಶನದಲ್ಲಿ ಅವರ ಜೀವನಚಿತ್ರಣ, ಸಾಧನೆಗಳು ಅನಾವರಣಗೊಳ್ಳಲಿವೆ.

ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾಸಂಘದ ವತಿಯಿಂದ ಆಯೊಜಿಸುವ ಈ ಫಲಫುಷ್ಪ ಪ್ರದರ್ಶನದ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ನಿರ್ದೇಶಕ ಎಂ.ವಿ.ವೆಂಕಟೇಶ್‌, ‘ಈ ಬಾರಿಯ ಫಲಪುಷ್ಪ ಪ್ರದರ್ಶನ ಜಯಚಾಮರಾಜ ಒಡೆಯರ್‌ ಅವರಿಗೆ ಅರ್ಪಿಸಲಿದ್ದೇವೆ’ ಎಂದು ತಿಳಿಸಿದರು. 

‘ಪ್ರದರ್ಶನವನ್ನು ಆಗಸ್ಟ್‌ 9ರಂದು ಬೆಳಿಗ್ಗೆ 11ಗಂಟೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಭಾಗವಹಿಸಲಿದ್ದಾರೆ. ಉದ್ಘಾಟನೆ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಸ್ಥಾಪಿತವಾದ ‘ಮೈಸೂರು ಬ್ಯಾಂಡ್‌ ವಾದನ’ ವಿಶೇಷ ಆಕರ್ಷಣೆ ಆಗಿರಲಿದೆ’ ಎಂದರು.

ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್‌, ‘ಪ್ರದರ್ಶನಕ್ಕಾಗಿ ಈ ಬಾರಿ ವಿವಿಧ ಬಣ್ಣಗಳ 5.50 ಲಕ್ಷ ಗುಲಾಬಿ ಹಾಗೂ ಇತರೆ 92 ಬಗೆಯ 2.5ಲಕ್ಷ ಹೂಗಳನ್ನು ಬಳಸಲಾಗುತ್ತದೆ. ಇದರಲ್ಲಿ ಕೀಟ ಭಕ್ಷಕ ಗಿಡಗಳು ಈ ಬಾರಿಯ ವಿಶೇಷ. ಹೂಗಳನ್ನು ನಂದಿ ಗಿರಿಧಾಮ, ಕೆಮ್ಮಣ್ಣುಗುಂಡಿ, ಚಿಕ್ಕಮಗಳೂರು, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪುಣೆ, ಹಾಗೂ ಥಾಯ್ಲೆಂಡ್‌ಗಳಿಂದ ತರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಗಾಜಿನ ಮನೆಯ ಹೊರಾಂಗಣದಲ್ಲಿ ಹೂಗಳು ಹರಿಯುವಂತಹ ರಚನೆ (ಮೆಗಾ ಫ್ಲೋರಲ್‌ ಫ್ಲೋ) ಇರಲಿದೆ. ಹೂವಿನ ನವಿಲು, ಹೃದಯಾಕಾರದ ಕಮಾನುಗಳು, ತೂಗುವ ಮತ್ತು ಬಾಗುವ ಹೂಗಳ ಅಲಂಕಾರ, ಭಾರಿ ಗಾತ್ರದ ಎಲೆ ಜಾತಿಗಳ ಪ್ರದರ್ಶನ ಹಾಗೂ ಹೂಕುಂಡಗಳ ಪ್ರದರ್ಶನ, ಲಾಲ್‌ಬಾಗ್‌ ತರಬೇತಿ ಕೇಂದ್ರದಿಂದ ತರಕಾರಿ ಮತ್ತು ಮನೆಯಂಗಳದಲ್ಲಿ ಭೂದೃಶ್ಯ ಪ್ರಾತ್ಯಕ್ಷಿಕೆಗಳು ಇರಲಿವೆ’ ಎಂದರು. 

ಲಾಲ್‌ಬಾಗ್‌ನ ಆಯ್ದ ಪ್ರದೇಶಗಳಲ್ಲಿ ತೋಟಗಾರಿಕೆ ಇಲಾಖೆಯ ಕುಟೀರ, ಜಯಚಾಮರಾಜ ಒಡೆಯರ್‌ ಅವರ ಛಾಯಾಚಿತ್ರ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನ, ಭೌಗೋಳಿಕ ಸೂಚ್ಯಂಕ ಹೊಂದಿರುವ ತೋಟಗಾರಿಕೆ ಬೆಳೆಗಳ ಪ್ರದರ್ಶನ, ಫಲಭರಿತ ತರಕಾರಿ ಗಿಡಗಳ ಜೋಡಣೆ ಪ್ರವಾಸಿಗರ ಮನತಣಿಸಲಿದೆ.

ಸಸ್ಯಪ್ರೇಮಿಗಳಿಗಾಗಿ ಸಸ್ಯ ಸಂತೆ, ವಾದ್ಯರಂಗ ಕಾರ್ಯಕ್ರಮಗಳು, ಹಳೆಯ ಮರಗಳ ಆಕರ್ಷಕ ಮರ ಕೆತ್ತನೆ ಕಲಾಕೃತಿಗಳ ಪ್ರದರ್ಶನವನ್ನೂ ಕಣ್ತುಂಬಿಕೊಳ್ಳಬಹುದು. 

ಉದ್ಯಾನದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಸಾರ್ವಜನಿಕರು ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಉದ್ಯಾನದ ಒಳಗೆ ತರಬಾರದು. ಪ್ರವೇಶ ದರ ವಯಸ್ಕರಿಗೆ ₹70 ಹಾಗೂ 12 ವರ್ಷದೊಳಗಿನ ಮಕ್ಕಳಿಗೆ ₹20. ಶಾಲಾ ಮಕ್ಕಳಿಗೆ ಆಗಸ್ಟ್‌ 9, 13, 14, 16, 17ರಂದು ಉಚಿತ ಪ್ರವೇಶ ಕಲ್ಪಿಸಲಾಗಿದೆ. 

‘ ಫಲಪುಷ್ಪ ಪ್ರದರ್ಶನದ ವೇಳೆ ಈ ಬಾರಿ ಸಾಲು ಸಾಲು ರಜೆ ಇರುವುದರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ. ಇದಕ್ಕಾಗಿ ಇಲಾಖೆಯಿಂದ 350ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ತಪಾಸಣೆ ಮಾಡಲಿದ್ದು, ಸಾರ್ವಜನಿಕರು ಸಹಕರಿಸಬೇಕು’ ಎಂದು ಬೆಂಗಳೂರು ದಕ್ಷಿಣ ವಲಯ ಡಿಸಿಪಿ ರೋಹಿಣಿ ಕಟೋಚ್‌ ಸೆಪಟ್‌ ಮನವಿ ಮಾಡಿದರು.

ಫಲಪುಷ್ಪ ಪ್ರದರ್ಶನದ ಆಕರ್ಷಣೆಗಳು

-ಜಯಚಾಮರಾಜ ಒಡೆಯರ್ ಪುತ್ಥಳಿ

-ಮೈಸೂರಿನ ಜಯಚಾಮರಾಜ ವೃತ್ತದ ಮಾದರಿ

-ಪುಷ್ಪ ಸಿಂಹಾಸನ ಮತ್ತು ಆನೆಗಳು

-ಸಂಗೀತ ವಾದ್ಯಗಳ ಮಾದರಿಗಳ ಪುಷ್ಪ ಪ್ರದರ್ಶನ

-ಮೈಸೂರು ಸಂಸ್ಥಾನದ ಅಭಿವೃದ್ಧಿ ಕಾರ್ಯಗಳ ಅನಾವರಣ

-ಛಾಯಾಚಿತ್ರ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನ

-ಗಾಜಿನ ಮನೆಯಲ್ಲಿ ಹೂವಿನ ಪಿರಮಿಡ್‌ಗಳು

-ಇಂಡೋ–ಅಮೆರಿಕನ್‌ ಹೂಗಳ ಪ್ರದರ್ಶನ

-ವರ್ಟಿಕಲ್ ಗಾರ್ಡನ್‌ ಮಾದರಿಯ ಪ್ರದರ್ಶನ 

-ಮೈಸೂರು ಬ್ಯಾಂಡ್‌ ವಾದನ, ಬಿಎಸ್‌ಎಫ್ ಬ್ಯಾಂಡ್‌, ಮದ್ರಾಸ್‌ ಬ್ಯಾಂಡ್‌ಗಳ ಹಿಮ್ಮೇಳ

ಭದ್ರತಾ ಕ್ರಮಗಳು

-ಉದ್ಯಾನದಲ್ಲಿ 37 ಕಡೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಅಳವಡಿಕೆ

-ಅರೆ ವೈದ್ಯಕೀಯ ಸಿಬ್ಬಂದಿಯನ್ನು ಒಳಗೊಂಡ 5 ಆ್ಯಂಬುಲೆನ್ಸ್‌

-ಗಾಜಿನ ಮನೆ ಬಳಿ 1 ಅಗ್ನಿಶಾಮಕ ವಾಹನ ವ್ಯವಸ್ಥೆ

-ಉದ್ಯಾನದಲ್ಲಿ 100 ಸಿಸಿಟಿವಿ ಕ್ಯಾಮೆರಾ ಅಳವಡಿಕೆ

-ಅಪಾಯಕಾರಿ ಮರಗಳ ಕೊಂಬೆ ತೆರವಿಗೆ ವಿಶೇಷ ಕಾರ್ಯಪಡೆ  

-ಜೇನು ಕೃಷಿ ಸಹಾಯಕ, ಹಾವು ಹಿಡಿಯುವವರು, ಈಜು ಪರಿಣಿತರ ನಿಯೋಜನೆ 

ವಾಹನ ನಿಲುಗಡೆ ಎಲ್ಲಿ? 

-ಅಲ್‌ ಅಮೀನ್‌ ಕಾಲೇಜು ಮೈದಾನ

-ಶಾಂತಿನಗರ ಬಸ್‌ನಿಲ್ದಾಣದ ಬಹುಮಹಡಿ ವಾಹನ ನಿಲ್ದಾಣ

-ಜೆ.ಸಿ.ರಸ್ತೆಯ ಮಯೂರ ರೆಸ್ಟೊರೆಂಟ್‌ ಬಳಿಯ ಪಾಲಿಕೆ ಕಟ್ಟಡ

-ಎಂ.ಎಚ್‌.ಮರಿಗೌಡ ಸ್ಮಾರಕ ಭವನ (ಶಾಲಾವಾಹನ, ಅಂಗವಿಕಲರ ವಾಹನಗಳ ನಿಲುಗಡೆಗೆ)

ವಿವಿಧ ಸ್ಪರ್ಧೆಗಳು

ಆಗಸ್ಟ್‌ 10 ಹಾಗೂ 11ರಂದು ಲಾಲ್‌ಬಾಗ್‌ನ ಎಂ.ಎಚ್‌.ಮರಿಗೌಡ ಸ್ಮಾರಕ ಭವನದಲ್ಲಿ ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್‌, ಡಚ್‌ ಹೂವಿನ ಜೋಡಣೆ, ಥಾಯ್‌ ಕಲೆ, ಜಾನೂರು ಒಣಹೂವಿನ ಜೋಡಣೆ ಕಲೆಗಳ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಗಸ್ಟ್‌ 14ರಂದು ಬಹುಮಾನ ವಿತರಣೆ ನಡೆಯಲಿದೆ.

ಪ್ರ‌ದರ್ಶನದಲ್ಲಿರುವ ಪುಷ್ಪಗಳು

ಗುಲಾಬಿ, ಸೇವಂತಿ, ದಾಸವಾಳ, ಪಾಯಿನ್‌ಸಿಟಿಯಾ, ಗ್ಲಾಕ್ಸಿನಿಯಾ, ಡಾರ್ಫ್‌ ಇಕ್ಸೋರಾ, ಪೆರಿನಿಯಲ್‌ ಸೂರ್ಯಕಾಂತಿ, ಮೆಡಿನೆಲ್ಲಾ, ಅಂಥೊರಿಯಂ, ಸಿಂಬಿಡಿಯಂ ಆರ್ಕಿಡ್ಸ್, ವಿಂಕಾ, ಬೋಗನ್ವಿಲ್ಲಾ, ಇಂಪೇಷನ್ಸ್, ಲಿಲ್ಲಿ, ಬೆಗೋನಿಯಾ, ಕಾರ್ನೇಷನ್‌, ಸೈಕ್ಲೊಮನ್‌, ಪೆಟೂನಿಯ, ಡೇಲಿಯ, ಸ್ಟಾಟಿಸ್‌, ಲಿಲಿಯಂ, ಪ್ಯಾನ್ಸಿ, ಇಂಪೇಷನ್ಸ್‌, ಅಗಪಾಂಥಸ್‌, ವಿಂಕಾ, ಕರ್ಕುಮಾ, ಬ್ರಾಸಿಕಾ, ಚೆಂಡುಹೂ, ಜಿರೇನಿಯಂ, ಫೈರ್‌ಬುಷ್‌, ಬಾಲ್ಸಂ, ಅಜಿರೇಟಂ, ಜೆರ್ಬೆರಾ ಹಾಗೂ ಎಲೆ ಜಾತಿಯ ಗಿಡಗಳು.

Post Comments (+)