ಲಾಲ್‌ಬಾಗ್‌: ಬಾಯಾರಿ ಬರುವವರಿಗೆ ನೀರಿಲ್ಲ...

ಭಾನುವಾರ, ಮಾರ್ಚ್ 24, 2019
33 °C
ಸಾರ್ವಜನಿಕರನ್ನು ಸ್ವಾಗತಿಸಿದ ಖಾಲಿ ಬಾಟಲಿಗಳು

ಲಾಲ್‌ಬಾಗ್‌: ಬಾಯಾರಿ ಬರುವವರಿಗೆ ನೀರಿಲ್ಲ...

Published:
Updated:
Prajavani

ಬೆಂಗಳೂರು: ಸಾವಿರಾರು ಗಿಡ–ಮರಗಳನ್ನು ಒಡಲೊಳು ತುಂಬಿಕೊಂಡಿರುವ ತಾಣ ಲಾಲ್‌ಬಾಗ್‌. ಆದರೆ, ಬಿಸಿಲಿನಿಂದ ಬಳಲಿ ನೆರಳನರಸಿ ಇಲ್ಲಿಗೆ ಬರುವವರು ದಾಹ ತಣಿಸಿಕೊಳ್ಳಲು ಕುಡಿಯುವ ನೀರಿಗಾಗಿ ಪರದಾಡುವಂತಹ ಸ್ಥಿತಿ ಎದುರಾಗಿದೆ.

‘ಬೇಸಿಗೆಯ ಆರಂಭದಲ್ಲಿಯೇ ಇಂತಹ ಸ್ಥಿತಿ ಬಂದರೆ, ಮುಂದಿನ ಗತಿ ಏನಪ್ಪ? ಬೆಳಗಿನ ಹೊತ್ತು ನೂರಾರು ಜನ ವಾಯುವಿಹಾರಕ್ಕೆ ಬರುತ್ತೇವೆ. ಇಲ್ಲಿಯೇ ಕುಳಿತು, ಯೋಗ, ಧ್ಯಾನ ಮಾಡಿ ಮರಳುತ್ತೇವೆ. ಈ ವೇಳೆ ಬಾಯಾರಿಕೆಯಾದರೆ ನೀರಿನ ಖಾಲಿ ಕ್ಯಾನ್‌ಗಳನ್ನೇ ನೋಡುವಂತಾಗಿದ್ದು, ನೀರು ಎಲ್ಲಿದೆ ಎಂದು ಅರಸಿಕೊಂಡು ಹೋಗುವ ದುಸ್ಥಿತಿ ಎದುರಾಗಿದೆ’ ಎಂದು ಲಾಲ್‌ಬಾಗ್‌ ನಡಿಗೆದಾರರ ಸಂಘದ ಸದಸ್ಯರೊಬ್ಬರು ವ್ಯವಸ್ಥೆಯನ್ನು ದೂರಿದರು.

‘ಉದ್ಯಾನದಲ್ಲಿ ವಿಹರಿಸುತ್ತಿದ್ದ ವೇಳೆ, ಸಾರ್ವಜನಿಕರೊಬ್ಬರು ತಮ್ಮ ಮಗುವಿಗೆ ತಿಂಡಿ ತಿನ್ನಿಸುತ್ತಿದ್ದರು. ಮಗು ನೀರು ಕೇಳಿತು, ಬಾಟಲಿಯಲ್ಲಿದ್ದ ನೀರು ಖಾಲಿಯಾಗಿತ್ತು. ಸುತ್ತಮುತ್ತ ನಾಲ್ಕಾರು ಕಡೆ ನೀರಿಗಾಗಿ ಹುಡುಕಾಡಿದರು. ಕೊನೆಗೆ ಎಲ್ಲಿಯೂ ಸಿಗದೇ ಹಾಗೆಯೇ ಮರಳಿದ ಘಟನೆ ಶನಿವಾರ ನಡೆಯಿತು’ ಎಂದು ನಡಿಗೆದಾರರ ಸಂಘದ ಅಧ್ಯಕ್ಷ ಎಚ್‌.ಕೆಂಪಣ್ಣ ಹೇಳಿದರು.  

ಈ ಕುರಿತು ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್‌, ‘ಉದ್ಯಾನದಲ್ಲಿ 7 ಕಡೆ ಕುಡಿಯುವ ನೀರಿಗಾಗಿ ಶಾಶ್ವತ ಸಂಪರ್ಕ ಇರುವ ಕೊಳಾಯಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, 5 ಕಡೆ ಕ್ಯಾನ್‌ಗಳ ಮೂಲಕ ನೀರು ಒದಗಿಸಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಬಹುಶಃ ನೀರು ಖಾಲಿಯಾಗಿದ್ದ ವೇಳೆ ಅವರು ಹೋಗಿರಬಹುದು. ಸಿಬ್ಬಂದಿ ನೀರಿನ ಕ್ಯಾನ್‌ ತರುವುದು ತಡವಾಗಿರಬಹುದು’ ಎಂದರು.

‘ಉದ್ಯಾನದಲ್ಲಿ ಎರಡು ಕಡೆ ಆರ್‌ಒ (ರಿವರ್ಸ್‌ ಒಸ್ಮೋಸಿಸ್‌) ಕುಡಿಯುವ ನೀರಿನ ಘಟಕಗಳಿವೆ. ಗಾಜಿನ ಮನೆ ಸಮೀಪ ಇರುವ ಘಟಕದಿಂದಲೇ ತಾತ್ಕಾಲಿಕ ಕುಡಿಯುವ ನೀರಿನ ವ್ಯವಸ್ಥೆಗೆ ನೀರು ಪೂರೈಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಉದ್ಯಾನದಲ್ಲಿ ಕುಡಿಯಲು ನೀರೇ ಇಲ್ಲ ಎನ್ನುವ ಆರೋಪ ಶುದ್ಧ ಸುಳ್ಳು. ಇಲ್ಲಿ, ₹10 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವಿದೆ. ಅಲ್ಲದೇ, ಹಲವೆಡೆ ಕುಡಿಯುವ ನೀರಿನ ಕೊಳಾಯಿ ವ್ಯವಸ್ಥೆ ಮಾಡಲಾಗಿದೆ. ಯಾರಾದರೂ ಕಿಡಿಗೇಡಿಗಳು ನೀರಿನ ಟ್ಯಾಂಕರ್‌ ವಾಲ್‌ ತಿರುವಿದ್ದರೆ, ನೀರು ಬರದೇ ಇದ್ದಿರಬಹುದು. ಈ ಬಗ್ಗೆ ಕ್ರಮ ವಹಿಸುತ್ತೇವೆ’ ಎಂದು ಇಲಾಖೆಯ ಉಪನಿರ್ದೇಶಕ (ಲಾಲ್‌ಬಾಗ್‌) ಚಂದ್ರಶೇಖರ್‌ ಹೇಳಿದರು.

‘ಉದ್ಯಾನಕ್ಕೆ ಬೆಳಗಿನ ಹೊತ್ತು ವಾಯುವಿಹಾರಕ್ಕೆ ಬರುವ ನಡಿಗೆದಾರರ ಯಾವುದೇ ನೀರಿನ ಬಾಟಲಿಗಳನ್ನು ಒಳಗಡೆ ತರಲು ನಿರ್ಬಂಧಿಸಿಲ್ಲ. 9 ಗಂಟೆಯ ನಂತರ ಉದ್ಯಾನಕ್ಕೆ ಬರುವ ಸಾರ್ವಜನಿಕರು ಪ್ಲಾಸ್ಟಿಕ್‌ ಬಾಟಲಿಗಳನ್ನು ಒಳಗಡೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ’ ಎಂದೂ ಅವರು ತಿಳಿಸಿದರು. 

*****
ಇಲ್ಲಿ, ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಉದ್ಯಾನಕ್ಕೆ ಭೇಟಿ ನೀಡುವವರ ಸಂಖ್ಯೆಯೂ ಕ್ಷೀಣಿಸುತ್ತಿದೆ
-ಎಚ್‌.ಕೆಂಪಣ್ಣ, ಲಾಲ್‌ಬಾಗ್‌ ನಡಿಗೆದಾರರ ಸಂಘದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !