ಸಂಸದರ ಮನೆ ಬಾಗಿಲಿಗೆ ಭೂವಿವಾದ!

7
ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಸೋದರರು

ಸಂಸದರ ಮನೆ ಬಾಗಿಲಿಗೆ ಭೂವಿವಾದ!

Published:
Updated:
ಕೆ.ಎಚ್‌.ಮುನಿಯಪ್ಪ

ಬೆಂಗಳೂರು: ‘ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ಅವರ ಬೆಂಬಲಿಗರು ನಕಲಿ ದಾಖಲೆ ಸೃಷ್ಟಿಸಿ ನಮ್ಮ ಜಮೀನು ಲಪಟಾಯಿಸಿದ್ದಾರೆ’ ಎಂದು ಆರೋಪಿಸಿ ರಾಜು ಹಾಗೂ ಮುನಿರಾಜು ಎಂಬ ಸೋದರರು ಭಾನುವಾರ ಬೆಳಿಗ್ಗೆ ಸಂಸದರ ಮನೆ ಎದುರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.

ಈ ಆರೋಪ ತಳ್ಳಿ ಹಾಕಿದ ಸಂಸದರು, ‘ಜಮೀನು ವಿವಾದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ. ಅದನ್ನು ತಪ್ಪಿಸಲು ಗೊತ್ತಿರುವವರೇ ಯಾರೋ ಈ ರೀತಿ ಷಡ್ಯಂತ್ರ ಮಾಡಿದ್ದಾರೆ’ ಎಂದರು.

ಭಾನುವಾರ ಬೆಳಿಗ್ಗೆ ಸಂಜಯನಗರದ ಸಂಸದರ ಮನೆ ಬಳಿ ಬಂದ ಸೋದರರು, ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಗಲಾಟೆ ಮಾಡುತ್ತಿದ್ದರು. ಆ ಶಬ್ದ ಕೇಳಿ ಮುನಿಯಪ್ಪ ಹೊರಗೆ ಬಂದರು. ಬೆಂಕಿ ಹಚ್ಚಿಕೊಳ್ಳುವುದಾಗಿ ಅವರು ಪೊಟ್ಟಣ ತೆಗೆಯುತ್ತಿದ್ದಂತೆಯೇ, ಸಂಸದರ ಬೆಂಬಲಿಗರು ಪೊಟ್ಟಣ ಕಿತ್ತುಕೊಂಡರು. ಇದರಿಂದ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಮುನಿಯಪ್ಪ ಅವರೇ ಮಧ್ಯಪ್ರವೇಶಿಸಿ ಜಗಳ ಬಿಡಿಸಿದರು.

‘ವಿವಾದ ಬಗೆಹರಿಸುವುದಾಗಿ 11 ವರ್ಷಗಳಿಂದ ಸತಾಯಿಸುತ್ತಿದ್ದೀರಿ. ನಾವು ಕೂಲಿ ಮಾಡಿಕೊಂಡು ಬದುಕುತ್ತಿದ್ದೇವೆ. ನಮ್ಮ ಭೂಮಿ ಲಪಟಾಯಿಸಿದರೆ, ನಾವೇನು ಮಣ್ಣು ತಿನ್ನಬೇಕಾ? ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ ನಾವಿಬ್ಬರೂ ಇಲ್ಲೇ ಪ್ರಾಣ ಬಿಡುತ್ತೇವೆ’ ಎಂದು ಸೋದರರು ಬೆದರಿಸಿದರು. ಅದಕ್ಕೆ ಮುನಿಯಪ್ಪ, ‘ಭೂ ವ್ಯಾಜ್ಯವಾದರೆ ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳಿ. ನನ್ನ ಮನೆ ಮುಂದೆ ಬಂದು ಗಲಾಟೆ ಮಾಡಿದರೆ ಪರಿಹಾರ ಸಿಗಲ್ಲ. ಜಮೀನು ಯಾರಿಗೆ ಸಿಗಬೇಕು ಎಂಬುದನ್ನು ನ್ಯಾಯಾಲಯವೇ ನಿರ್ಧರಿಸುತ್ತದೆ’ ಎಂದರು.

ಗಲಾಟೆ ಜೋರಾದಾಗ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅವರನ್ನು ಅಲ್ಲಿಂದ ಕಳುಹಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸೋದರರು, ‘ಯಲಹಂಕ ಸಮೀಪದ ವೆಂಕಟಾಲ ಬಳಿ ನಾವು 1.5 ಎಕರೆ ಜಮೀನನ್ನು ಹೊಂದಿದ್ದೇವೆ. ಸಂಸದರು ಹಾಗೂ ಬೆಂಬಲಿಗರು ನಕಲಿ ದಾಖಲೆ ಸೃಷ್ಟಿಸಿ 2007ರಲ್ಲಿ ಅದನ್ನು ಕೋಲಾರ ರಾಮ್‌ ಪ್ರಸಾದ್ ಎಂಬ ವ್ಯಕ್ತಿಗೆ ಮಾರಿದ್ದಾರೆ. ಅದರ ಮೌಲ್ಯ ₹ 20 ಕೋಟಿ ಅಂದಿನಿಂದಲೂ ಹೋರಾಟ ಮಾಡುತ್ತಿದ್ದೇವೆ. ಜಮೀನು ವಾಪಸ್ ಕೊಡಿಸುವುದಾಗಿ ಸಂಸದರು ಸುಳ್ಳು ಹೇಳುತ್ತಲೇ ಬಂದಿದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !