ಭಾನುವಾರ, ನವೆಂಬರ್ 17, 2019
23 °C
ಪ್ಲಾಸ್ಟಿಕ್‌ ಮುಕ್ತ ಪ್ಲಾಟ್‌ಫಾರಂ: ಗರ್ಗ್‌

ಲಾಂಡ್ರಿ ಮೇಲ್ದರ್ಜೆಗೆ: ಅಜಯ್‌ಕುಮಾರ್ ಸಿಂಗ್

Published:
Updated:

ಮೈಸೂರು: ‘ಮೈಸೂರು ರೈಲ್ವೆ ವಿಭಾಗದ ಲಾಂಡ್ರಿಯನ್ನು ಮೇಲ್ದರ್ಜೆಗೇರಿಸಲಾಗಿದೆ’ ಎಂದು ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯ್‌ಕುಮಾರ್ ಸಿಂಗ್ ತಿಳಿಸಿದರು.

ಮೈಸೂರು ರೈಲ್ವೆ ನಿಲ್ದಾಣದ ಹೊರ ಆವರಣದಲ್ಲಿ ಸ್ವಚ್ಛತಾ ಪಾಕ್ಷಿಕಕ್ಕೆ ಸೋಮವಾರ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘ಲಾಂಡ್ರಿ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಾಗಿದೆ. ಇದರಿಂದ ರೈಲ್ವೆಗೆ ಉಳಿತಾಯ ಹೆಚ್ಚಾಗುವ ಜತೆ, ದೂರುಗಳು ಕಡಿಮೆಯಾಗಲಿವೆ’ ಎಂದು ಹೇಳಿದರು.

‘ದೇಶದಲ್ಲಿನ ಉಳಿದ ನಗರಗಳಿಗೆ ಹೋಲಿಸಿದರೆ ಮೈಸೂರು, ಇಲ್ಲಿನ ರೈಲ್ವೆ ನಿಲ್ದಾಣ ಸ್ವಚ್ಛತೆಯಲ್ಲಿ ಉತ್ತಮ ಸ್ಥಾನ ಗಳಿಸಿವೆ. ಸೌಂದರ್ಯೀಕರಣವೂ ಪೂರ್ಣಗೊಳ್ಳುತ್ತಿದೆ. ಪ್ರಧಾನಿಯವರ ಆಶಯದಂತೆ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘ಮೈಸೂರು ರೈಲ್ವೆ ನಿಲ್ದಾಣ ಸೇರಿದಂತೆ ವಿಭಾಗ ವ್ಯಾಪ್ತಿಯ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್‌ ಮುಕ್ತ ಪ್ಲಾಟ್‌ಫಾರಂ ನಿರ್ಮಿಸುವ ಸಂಕಲ್ಪದೊಂದಿಗೆ ಕಾರ್ಯ ನಿರ್ವಹಿಸಲಾಗುತ್ತಿದೆ’ ಎಂದು ಮೈಸೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗರ್ಗ್‌ ತಿಳಿಸಿದರು.

‘ಪ್ರಯಾಣಿಕರು ಪ್ಲಾಟ್‌ಫಾರಂಗೆ ಪ್ಲಾಸ್ಟಿಕ್‌ ತರುವುದನ್ನೇ ನಿಷೇಧಿಸಲಾಗಿದೆ. ಪ್ಲಾಟ್‌ಫಾರಂ ಒಳಗಿನ ಅಂಗಡಿ ಮಳಿಗೆಗಳಲ್ಲೂ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗುವುದು’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಾಮರ್ಥ್ಯ ದ್ವಿಗುಣ: ‘ರೈಲಿನಲ್ಲಿ ಬಳಸುವ ಬಟ್ಟೆಗಳನ್ನು ಹೊರಗಡೆ ಲಾಂಡ್ರಿಗೆ ಕೊಡಲಾಗುತ್ತಿತ್ತು. ಇದಕ್ಕಾಗಿ ಎರಡು ವರ್ಷಕ್ಕೆ ₹ 1.2 ಕೋಟಿ ಪಾವತಿಸಲಾಗುತ್ತಿತ್ತು. ಇದೀಗ ನಮ್ಮಲ್ಲೇ ಎರಡು ಹೊಸ ವಾಷರ್ ಮೆಷಿನ್, ಒಂದು ಹೊಸ ಡ್ರಯರ್ ಅಳವಡಿಸಲಾಗಿದೆ. ಅಷ್ಟೇ ಸಿಬ್ಬಂದಿ ಮೂಲಕ ವಾಷಿಂಗ್ ಕೆಲಸ ನಡೆಸುತ್ತಿದ್ದು, ಮೈಸೂರು ವಿಭಾಗಕ್ಕೆ ಇದರಿಂದ ಸಾಕಷ್ಟು ಉಳಿತಾಯವಾಗಲಿದೆ’ ಎಂದು ಹಿರಿಯ ಡಿಎಂಇ ಬಿ.ಆಂಜನೇಯುಲು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)