ಅವಳಿ ಜಿಲ್ಲೆ: ಕೊನೆ ಕ್ಷಣದಲ್ಲಿ ರಂಗೇರಿದ ಅಖಾಡ; ಪ್ರತಿಷ್ಠೆಯ ಕಣ

7
ಸ್ಥಳೀಯ ಸಂಸ್ಥೆಗಳಿಂದ ಬಿಜಾಪುರ ದ್ವಿಸದಸ್ಯ ವಿಧಾನ ಪರಿಷತ್‌ನ ಒಂದು ಕ್ಷೇತ್ರಕ್ಕೆ ಸೆ.6ರಂದು ಮತದಾನ

ಅವಳಿ ಜಿಲ್ಲೆ: ಕೊನೆ ಕ್ಷಣದಲ್ಲಿ ರಂಗೇರಿದ ಅಖಾಡ; ಪ್ರತಿಷ್ಠೆಯ ಕಣ

Published:
Updated:

ವಿಜಯಪುರ: ಮತದಾನದ ದಿನ ಸಮೀಪಿಸುತ್ತಿದ್ದಂತೆ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಇದೇ 6ರಂದು ಬಿಜಾಪುರ ದ್ವಿಸದಸ್ಯ ವಿಧಾನ ಪರಿಷತ್‌ನ ಒಂದು ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆ ಅಖಾಡವೂ ರಂಗೇರಿದೆ.

ಬಿಜೆಪಿ ತನ್ನ ಅಭ್ಯರ್ಥಿ ಘೋಷಿಸಿದ ಬಳಿಕ ‘ಡಮ್ಮಿ’, ಏಕಪಕ್ಷೀಯ ಚುನಾವಣೆ ಎಂದೇ ಬಿಂಬಿತಗೊಂಡಿದ್ದ ಕಣದಲ್ಲೀಗ ಕಂಪನ ಶುರುವಾಗಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವಳಿ ಜಿಲ್ಲೆಯ ಕಾಂಗ್ರೆಸ್‌, ಜೆಡಿಎಸ್‌ ಶಾಸಕರ ಕ್ಷೇತ್ರದಲ್ಲೇ ಚುನಾವಣಾ ಪ್ರಚಾರ ನಡೆಸಿದ ನಂತರ ಚಿತ್ರಣ ಕೊಂಚ ಬದಲಾಗಿದೆ.

ಕಾಂಗ್ರೆಸ್‌ನ ಪ್ರಭಾವಿ ಮುಖಂಡ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಪರಿಷತ್‌ ಚುನಾವಣೆ ಮೂಲಕ ಸಕ್ರಿಯ ರಾಜಕಾರಣಕ್ಕೆ ತನ್ನ ಸಹೋದರ ಸುನೀಲಗೌಡ ಬಿ.ಪಾಟೀಲರನ್ನು ಪರಿಚಯಿಸಿದ್ದು, ಗೆಲುವು ಇದೀಗ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಅಭ್ಯರ್ಥಿ ಘೋಷಣೆಗೂ ಮುನ್ನವೇ ಜಿಲ್ಲೆಯೂ ಸೇರಿದಂತೆ ನೆರೆಯ ಬಾಗಲಕೋಟೆ ಜಿಲ್ಲೆಯಲ್ಲೂ ತಮ್ಮದೇ ಸಂಪರ್ಕ ಜಾಲದ ಮೂಲಕ ಎಂ.ಬಿ.ಪಾಟೀಲ, ಹೆಚ್ಚಿನ ಮತದಾರರಾಗಿರುವ ಗ್ರಾಮ ಪಂಚಾಯ್ತಿ ಸದಸ್ಯರ ‘ಮತ ಭದ್ರ’ ಮಾಡಿಕೊಂಡಿದ್ದು, ಮೇಲುಗೈ ಸಾಧಿಸಿದ್ದರು.

ನಂತರದ ದಿನಗಳಲ್ಲೂ ಪ್ರತಿಯೊಬ್ಬ ಮತದಾರರನ್ನು ತಮ್ಮ ಜಾಲದ ಮೂಲಕ ಸತತ ಸಂಪರ್ಕವಿಟ್ಟುಕೊಂಡಿದ್ದು, ಕಮಲ ಪಾಳೆಯದಲ್ಲಿ ಸಾಕಷ್ಟು ನಡುಕ ಸೃಷ್ಟಿಸಿತ್ತು. ಕೊನೆ ಕ್ಷಣದಲ್ಲಿ ಈ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ಸ್ವೀಕರಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಂತ್ರಗಾರಿಕೆ ರೂಪಿಸಲು ಪಕ್ಷದ ಪ್ರಧಾನ ಕಾರ್ಯದರ್ಶಿ, ತಮ್ಮ ಆಪ್ತ ಒಡನಾಡಿ ಎನ್‌.ರವಿಕುಮಾರ್‌ ಅವರನ್ನು ಸೋಮವಾರ ವಿಜಯಪುರ, ಬಾಗಲಕೋಟೆಗೆ ಕಳುಹಿಸಿಕೊಟ್ಟಿದ್ದಾರೆ.

ರವಿಕುಮಾರ್‌ ಪಕ್ಷದ ಮಂಡಲ ಪ್ರಮುಖರು, ಜಿಲ್ಲಾ ಘಟಕದ ಹಾಗೂ ರಾಜ್ಯ ಘಟಕದ ಅವಳಿ ಜಿಲ್ಲೆಯ ಪದಾಧಿಕಾರಿಗಳ ಪ್ರತ್ಯೇಕ ಸಭೆ ನಡೆಸಿದ್ದು, ಪ್ರತಿ ಜಿಲ್ಲಾ ಪಂಚಾಯ್ತಿಗೆ ಐವರು ಪ್ರಮುಖರ ತಂಡ ರಚಿಸಿ, ಜವಾಬ್ದಾರಿ ನೀಡಿದ್ದಾರೆ. ಇದು ಯಶಸ್ವಿಯಾದರೆ ಕಾಂಗ್ರೆಸ್‌ನ ನಾಗಾಲೋಟಕ್ಕೆ ತಡೆಯಾಗಲಿದೆ ಎಂಬ ಮಾತುಗಳು ಕಮಲ ಪಾಳೆಯದಿಂದ ಕೇಳಿ ಬರುತ್ತಿವೆ.

ಯತ್ನಾಳ ಉಸ್ತುವಾರಿ

ಎಂ.ಬಿ.ಪಾಟೀಲ ತಮ್ಮ ಸಂಪರ್ಕ ಜಾಲದ ಮೂಲಕ ಈಗಾಗಲೇ ಅವಳಿ ಜಿಲ್ಲೆಯ ಮತದಾರರ ನೇರ ಸಂಪರ್ಕದಲ್ಲಿದ್ದಾರೆ. ಸಣ್ಣ ವ್ಯತ್ಯಾಸವಾದರೂ ಸ್ವತಃ ಪರಿಹರಿಸಿ, ಗೆಲುವಿನ ರಣತಂತ್ರ ರೂಪಿಸಿದ್ದಾರೆ. ಪಾಟೀಲರ ರಾಜಕೀಯ ತಂತ್ರಗಾರಿಕೆ, ಕೈ ಚಳಕ, ಚಾಕಚಕ್ಯತೆಯ ಬಿಸಿ ಅನುಭವಿಸಿರುವ ಬಿಜೆಪಿ ಇದಕ್ಕೆ ಪ್ರತಿಯಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಪ್ರಮುಖ ಜವಾಬ್ದಾರಿ ನೀಡಿದೆ ಎಂಬುದು ಮೂಲಗಳಿಂದ ಖಚಿತಪಟ್ಟಿದೆ.

‘ವಿಜಯಪುರ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯ್ತಿ ಸದಸ್ಯರನ್ನು ಯತ್ನಾಳ ಸಂಪರ್ಕ ಜಾಲ ತಲುಪಲಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ತಲುಪಿದೆ ಎಂಬುದರ ಮೇಲುಸ್ತುವಾರಿ, ಕಾಂಗ್ರೆಸ್‌ ಸದಸ್ಯರ ಮನವೊಲಿಕೆಯ ಕೆಲಸವನ್ನು ಜಿಲ್ಲಾ ಪಂಚಾಯ್ತಿಗೊಂದರಂತೆ ನೇಮಿಸಿರುವ ಪ್ರಮುಖರ ತಂಡ ನಿರ್ವಹಿಸಲಿದೆ.

ನೆರೆಯ ಬಾಗಲಕೋಟೆ ಜಿಲ್ಲೆಯಲ್ಲಿ ಐವರು ಶಾಸಕರು, ಸಂಸದರು ಚುನಾವಣಾ ಚುಕ್ಕಾಣಿ ವಹಿಸಿದ್ದು, ಇವರೇ ಎಲ್ಲದರ ಸಾರಥ್ಯ ನಡೆಸಲಿದ್ದಾರೆ. ಶಾಸಕರಿಲ್ಲದ ಎರಡು ಕ್ಷೇತ್ರಗಳಿಗೆ (ಬಾದಾಮಿ, ಜಮಖಂಡಿ) ಯತ್ನಾಳ ಸಂಪರ್ಕ ಜಾಲ ಬಳಸಿಕೊಳ್ಳಲಾಗುತ್ತಿದೆ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !