ಕೋರ್ಟ್‌ ಮೇ ದೇರ್‌ ಜರೂರ್ ಹೈ, ಅಂಧೇರ್‌ ನಹೀ...: ಹೈಕೋರ್ಟ್‌

7
ಖಾತೆ ಮಾಡಿಕೊಡಲು ಕೋರಿದ ಅರ್ಜಿದಾರರಿಗೆ ಭರವಸೆ

ಕೋರ್ಟ್‌ ಮೇ ದೇರ್‌ ಜರೂರ್ ಹೈ, ಅಂಧೇರ್‌ ನಹೀ...: ಹೈಕೋರ್ಟ್‌

Published:
Updated:
HIGH COURT

ಬೆಂಗಳೂರು: ಕೋರ್ಟ್‌ ಮೇ ದೇರ್‌ ಜರೂರ್‌ ಹೈ, ಲೇಕಿನ್‌ ಅಂಧೇರ್‌ ನಹೀ...! (ಕೋರ್ಟ್‌ನಲ್ಲಿ ವಿಳಂಬವೇನೋ ಇದೆ ನಿಜ, ಆದರೆ, ಕತ್ತಲೆಯಂತೂ ಇಲ್ಲ...!)

ಪಟ್ಟಂದೂರು ಅಗ್ರಹಾರ ಕೆರೆಯ ಜಮೀನಿನಲ್ಲಿ ಖಾತೆ ಮಾಡಿಕೊಡಲು ಕೋರಿರುವ ಅರ್ಜಿದಾರರ ಪರ ವಕೀಲ ಪಿ.ಎನ್‌.ಮನಮೋಹನ್ ಅವರಿಗೆ ನ್ಯಾಯಮೂರ್ತಿ ಆರ್.ಎಸ್‌.ಚೌಹಾಣ್‌ ನೀಡಿದ ಭರವಸೆಯ ಮಾತುಗಳಿವು.

ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್‌ಫೀಲ್ಡ್‌ನ ಎ.ಶಕುಂತಲಾ ಸೇರಿದಂತೆ ಆರು ಜನರು ಸಲ್ಲಿಸಿರುವ ನ್ಯಾಯಾಂಗ ನಿಂದನಾ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಎಸ್.ಚೌಹಾಣ್ ಹಾಗೂ ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅಡ್ವೊಕೇಟ್‌ ಜನರಲ್‌ ಉದಯ್ ಹೊಳ್ಳ ಅವರು, ‘ಸ್ವಾಮಿ, ಅರ್ಜಿಗೆ ಸಂಬಂಧಿಸಿದಂತೆ ಆದೇಶ ಪಾಲಿಸಲು ಈ ಮುನ್ನ ನ್ಯಾಯಪೀಠ ನೀಡಿರುವ ನಿರ್ದೇಶನವನ್ನು ಹಿಂಪಡೆಯುವಂತೆ ಕೋರಲಾಗುವುದು. ಅದಕ್ಕಾಗಿ ಕಾಲಾವಕಾಶ ಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮನಮೋಹನ್, ‘ಸ್ವಾಮಿ, ಅರ್ಜಿದಾರರ ಪರ ಸುಪ್ರೀಂ ಕೋರ್ಟ್‌ ಈಗಾಗಲೇ ತೀರ್ಪು ನೀಡಿ ಸಾಕಷ್ಟು ಸಮಯವಾಗಿದೆ. ಆದರೂ, ರಾಜ್ಯ ಸರ್ಕಾರ ತೀರ್ಪು ಪಾಲಿಸುತ್ತಿಲ್ಲ. ಈ ಮೊದಲು ಕೋರ್ಟ್‌ ನಿರ್ದೇಶನ ಪಾಲಿಸುತ್ತೇವೆ ಎಂದಿದ್ದ ಸರ್ಕಾರ ಈಗ ಮತ್ತೆ ನಿರ್ದೇಶನ ಹಿಂಪಡೆಯಲು ಕೋರಲಾಗುವುದು ಎಂದು ಹೇಳುತ್ತಿದೆ. ಇದು ಸರಿಯಲ್ಲ. ಪ್ರಕರಣವನ್ನು ವಿಳಂಬಗೊಳಿಸಲಾಗುತ್ತಿದೆ’ ಎಂದರು.

ಇದಕ್ಕೆ ನ್ಯಾಯಮೂರ್ತಿ ಚೌಹಾಣ್‌, ‘ಕೋರ್ಟ್‌ ಮೇ ದೇರ್ ಹೈ, ಲೇಕಿನ್‌ ಅಂಧೇರ್‌ ನಹೀ... ಎಂದು ತುಸು ನಗುವಿನೊಂದಿಗೆ ಹೇಳಿದರು.

ಅಂತೆಯೇ ಸರ್ಕಾರದ ನಡೆಯನ್ನು, ಸರ್ಕಾರ ಕಾ ಮತಲಬ್‌, ಸರಕ್‌ ಸರಕ್‌ ಕೇ ಜಾನಾ.... (ಸರ್ಕಾರ ಎಂದರೆ ಒತ್ತುತ್ತಾ, ಒತ್ತುತ್ತಾ ಸರಿಯುವುದು...) ಎಂದರು.

ವಿಚಾರಣೆಯನ್ನು ಜುಲೈ 12ಕ್ಕೆ ಮುಂದೂಡಲಾಗಿದೆ.

‘ಪಟ್ಟಂದೂರು ಅಗ್ರಹಾರ ಗ್ರಾಮದ ಸರ್ವೇ ನಂ.54ರಲ್ಲಿ 11 ಎಕರೆ 20 ಗುಂಟೆ ಜಮೀನಿನನ್ನು ಅರ್ಜಿದಾರರ ಹೆಸರಿಗೆ ನೀಡುವಂತೆ ಸಿವಿಲ್‌ ಕೋರ್ಟ್‌ ನೀಡಿರುವ ಡಿಕ್ರಿ ಆದೇಶ ಪಾಲಿಸುತ್ತಿಲ್ಲ’ ಎಂದು ಆಕ್ಷೇಪಿಸಿ ಈ ಸಿವಿಲ್‌ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲಾಗಿದೆ.

‘ಸರ್ವೇ ನಂ 54ರ ಪ್ರದೇಶವು 1859ರ ಸರ್ಕಾರಿ ದಾಖಲೆಗಳಲ್ಲಿ ಹಾಗೂ ಬಿ.ಖರಾಬ್‌ ಜಮೀನು ಎಂದೇ ಗುರುತಿಸಲಾಗಿದೆ. ಹಾಗಾಗಿ ಬಿ.ಖರಾಬ್ ಜಮೀನನ್ನು ಈಗ ಹಿಡುವಳಿ ಜಮೀನು ಎಂದು ಪರಿವರ್ತಿಸಲು ಸರ್ಕಾರದಿಂದ ಪ್ರತ್ಯೇಕ ಆದೇಶದ ಅಗತ್ಯವಿದೆ. ಅಷ್ಟಕ್ಕೂ ಇದು ಕೆರೆಯ ಜಾಗ’ ಎಂಬುದು ಸರ್ಕಾರದ ವಾದ.

ಇದೇ ಪ್ರಕರಣದಲ್ಲಿ ವಕೀಲೆ ಜಯ್ನಾ ಕೊಠಾರಿ ಸೇರ್ಪಡೆ ಅರ್ಜಿ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !