ತಂತ್ರಗಾರಿಕೆಯಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಮುಂಚೂಣಿ..!

7
ಲೋಕಸಭಾ ಚುನಾವಣೆ; ಕಮಲ ಪಾಳೆಯದ ಗೊಂದಲ ದೂರ

ತಂತ್ರಗಾರಿಕೆಯಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಮುಂಚೂಣಿ..!

Published:
Updated:
Prajavani

ವಿಜಯಪುರ: ಸಂಸದ, ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ನೀಡಬಾರದು ಎಂಬ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಬೆಂಬಲಿಗರ ಬೇಡಿಕೆಯನ್ನು ಕಮಲ ಪಾಳೆಯದ ಹೈಕಮಾಂಡ್‌ ತಿರಸ್ಕರಿಸಿದೆ.

ಜಿಗಜಿಣಗಿಗೆ ಮತ್ತೆ ಮಣೆ ಹಾಕಿದರೆ, ಚುನಾವಣೆಯಿಂದ ದೂರ ಉಳಿಯುವುದಾಗಿ ಗೌಡರ ಬೆಂಬಲಿಗ ಪಡೆ ಘೋಷಿಸಿದ್ದರೂ; ಇದ್ಯಾವುದನ್ನು ಪರಿಗಣಿಸದೆ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸ್ವತಃ ಜಿಗಜಿಣಗಿ ಜತೆ ಚರ್ಚಿಸಿ, ಚುನಾವಣಾ ತಯಾರಿ ನಡೆಸಿಕೊಳ್ಳುವಂತೆ ಸೂಚಿಸಿದ್ದಾರೆ ಎಂಬುದು ಗೊತ್ತಾಗಿದೆ.

ಅಮಿತ್‌ ಶಾ ಸೂಚನೆ ಬಳಿಕವೇ ರಮೇಶ ಜಿಗಜಿಣಗಿ ತಾವೇ ಮುಂದಿನ ಚುನಾವಣೆ ಅಭ್ಯರ್ಥಿ ಎಂಬುದನ್ನು ಎಲ್ಲೆಡೆ ಘೋಷಿಸಿಕೊಂಡಿದ್ದಾರೆ. ಇದರ ಜತೆಗೆ ತಮ್ಮದೇ ತಂತ್ರಗಾರಿಕೆ ಹೆಣೆಯುವಲ್ಲಿ ನಿರತರಾಗಿದ್ದು, ಕ್ಷೇತ್ರದಿಂದ ಹ್ಯಾಟ್ರಿಕ್‌ ಗೆಲುವು ಸಾಧಿಸಲು, ಅಗತ್ಯ ಸಿದ್ಧತೆ ನಡೆಸಿಕೊಂಡಿದ್ದಾರೆ ಎಂದು ಜಿಗಜಿಣಗಿ ಆಪ್ತ ವಲಯ ಖಚಿತಪಡಿಸಿದೆ.

ಕಾಂಗ್ರೆಸ್‌ನಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಇನ್ನು ಯಾವ ಪ್ರಕ್ರಿಯೆ ನಡೆದಿಲ್ಲ. ಪ್ರತಿಷ್ಠೆಯ ಕಣದಲ್ಲಿ ಗೆಲುವಿಗಾಗಿ ಮಾಜಿ ಶಾಸಕ ರಾಜು ಆಲಗೂರ ಅವರನ್ನೇ ಕಣಕ್ಕಿಳಿಸಲು ಪ್ರಭಾವಿ ಮುಖಂಡರ ಗುಂಪು ತೆರೆಮರೆಯಲ್ಲಿ ಯತ್ನ ನಡೆಸಿದೆ. ಇದಕ್ಕೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬೆಂಬಲ ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆ ನಡೆದಿದೆ ಎನ್ನಲಾಗಿದೆ.

‘ಕೈ’ ಪಾಳೆಯದಲ್ಲಿ ಹಲವು ಆಕಾಂಕ್ಷಿಗಳಿದ್ದು, ಯಾರಿಗೆ ಬಿ ಫಾರ್ಮ್‌ ಸಿಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಇದೀಗ ಆಕಾಂಕ್ಷಿಗಳು ಸಹ ಕಾಂಗ್ರೆಸ್‌ ಮುಖಂಡರ ಬೆನ್ನಿಗೆ ಬಿದ್ದು ಟಿಕೆಟ್‌ ಲಾಬಿ ಆರಂಭಿಸಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕಮಲ ಪಾಳೆಯದ ಹುರಿಯಾಳು ರಮೇಶ ಜಿಗಜಿಣಗಿ ತಮ್ಮ ರಾಜಕೀಯ ಅನುಭವದ ದಾಳ ಉರುಳಿಸುವ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ.

ಜಿಗಜಿಣಗಿ ಇನ್‌ ಒನ್‌ ಮ್ಯಾನ್‌ ಆರ್ಮಿ..!
‘ನಾಲ್ಕು ದಶಕದ ರಾಜಕೀಯ ಅನುಭವ ಹೊಂದಿರುವ ರಮೇಶ ಜಿಗಜಿಣಗಿ ರಾಜ್ಯ ಹಾಗೂ ಕೇಂದ್ರದಲ್ಲಿ ಸಚಿವರಾಗಿ ಅಧಿಕಾರದ ಸವಿಯುಂಡವರು. ಪಕ್ಷಾತೀತವಾಗಿ ಅಜಾತಶತ್ರು. ಎಲ್ಲರ ಆಪತ್ಬಾಂಧವ. ವೈಯಕ್ತಿಕ ನಂಟು ಉಳಿಸಿಕೊಂಡವರು.

ಅಧಿಕಾರದ ಅವಧಿಯಲ್ಲೂ ದರ್ಪದಿಂದ ಮೆರೆದವನಲ್ಲ. ಎಲ್ಲರೊಟ್ಟಿಗೂ ಗೌಡ್ರೇ, ಬೀಗ್ರೇ, ಯಪ್ಪ–ಯಣ್ಣ–ಯವ್ವ ಎಂದುಕೊಂಡೇ ಗೆಲುವಿನ ಮೆಟ್ಟಿಲುಗಳನ್ನು ಏರಿದವರು. ಇಂದಿಗೂ ಈ ನಡೆಯಲ್ಲಿ ಕೊಂಚವೂ ಬದಲಾಗಿಲ್ಲ.

ಹಲ ಬಾರಿ ಈ ಬಗ್ಗೆ ಕೇಳಿದರೂ; ನನ್ನ ಗುರು ರಾಮಕೃಷ್ಣ ಹೆಗಡೆ ‘ರಮೇಶ ನೀ ಎಂದೆಂದೂ ಬದಲಾಗಬೇಡ. ಇದ್ದಂಗೆ ಇರು. ಎಲ್ಲವೂ ನಿನ್ನನ್ನು ಹುಡುಕಿಕೊಂಡು ಬರುತ್ತೆ ಎಂದಿದ್ದರು. ಗುರುವಾಣಿಯಂತೆ ನಾನಿರುವೆ ಎಂದು ತಮ್ಮ ಅತ್ಯಾಪ್ತ ಒಡನಾಡಿಗಳ ಬಳಿ ಹೇಳಿಕೊಂಡಿದ್ದಾರೆ’ ಎಂದು ಜಿಗಜಿಣಗಿ ಆಪ್ತರೊಬ್ಬರು ತಿಳಿಸಿದರು.

‘ಜಿಗಜಿಣಗಿ ಒನ್‌ ಮ್ಯಾನ್‌ ಆರ್ಮಿ ಇದ್ದಂತೆ. ಯಾರಿಗೂ ತನ್ನ ಗುಟ್ಟು ಬಿಟ್ಟುಕೊಡಲ್ಲ. ಎಲ್ಲೆಲ್ಲಿಗೆ ಯಾರ್‌್ಯಾರನ್ನು ಕರೆದೊಯ್ಯಬೇಕು. ಯಾವ ಸಂದರ್ಭ ಯಾರ ಜತೆ ಎಷ್ಟು ಒಡನಾಟ ಹೊಂದಿರಬೇಕು. ಅತ್ಯಾಪ್ತತೆಯ ಎಲ್ಲೆ ಎಷ್ಟಿರಬೇಕು ? ಎಂಬುದನ್ನು ಸೂಕ್ಷ್ಮವಾಗಿ ನಿಭಾಯಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಚಾಣಾಕ್ಷ.

ಕೆಲ ದಿನಗಳ ಹಿಂದಷ್ಟೇ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಕರೆದುಕೊಂಡು, ತೊನಶ್ಯಾಳದ ಗೌಡರ ಹೊಲಕ್ಕೆ ಸೀತನಿ ತಿನ್ನಲು ಹೋಗಿ ಬಂದಿದ್ದ. ಮತ್ತೊಂದೆಡೆಗೆ ಮತ್ತೊಬ್ಬರನ್ನು ಕರೆದೊಯ್ದಿದ್ದ. ಹಲವೆಡೆ ತಾನೊಬ್ಬನೇ ಹೋಗಿ ಗಾಣಿಗೇರ, ಪಂಚಮಸಾಲಿ, ರಡ್ಡಿ, ಕುರುಬ ಗೌಡರನ್ನು ಭೇಟಿಯಾಗಿ ಆ ಊರ ಮತ ಗಟ್ಟಿ ಮಾಡಿಕೊಳ್ಳುವ, ಮುನಿಸಿದ್ದರೆ ಸರಿಪಡಿಸಿಕೊಳ್ಳುವ ತಂತ್ರಗಾರಿಕೆಯಲ್ಲಿ ಈಗಾಗಲೇ ತಲ್ಲೀನನಾಗಿದ್ದಾನೆ’ ಎಂದು ಜಿಗಜಿಣಗಿಯ ರಾಜಕೀಯ ಒಡನಾಡಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮನದ ತುಂಬಾ ನೋವು ತುಂಬಿದೆ..!
‘ಹತ್ತು ಚುನಾವಣೆ ಮಾಡಿರುವೆ. ಒಮ್ಮೆಯೂ ಬಜಾರ್‌ನಲ್ಲಿ ಪಟ್ಟಿ ಎತ್ತಲಿಲ್ಲ. ಅಧಿಕಾರದ ಅಹಂನಲ್ಲಿ ಯಾರೊಬ್ಬರಿಂದ ಹಣ ವಸೂಲಿ ಮಾಡಲಿಲ್ಲ. ನನ್ನ ಒಳ್ಳೆಯತನ ಬೆನ್ನತ್ತಿ ದುಡ್ಡು ಕೊಟ್ಟವರು ಹಲವೂರ ಗೌಡರು. ಅದನ್ನು ನಾನು ಮುಟ್ಟಲಿಲ್ಲ. ಚುನಾವಣೆ ಹೊಣೆ ಹೊತ್ತವರಿಗೆ ನೀಡಿದ್ದೆ.

ನಾನು ಮೂರುವರೆ ದಶಕದ ಹಿಂದೆಯೇ ಮಂತ್ರಿಯಾದೆ. ಯಾರೊಬ್ಬರೂ ನನ್ನ ಬಳಿ ಬಂದು ಹೂವಿನ ಹಾರ ಹಾಕಲಿಲ್ಲ. ಆದರೆ ಉಳಿದ ಎಲ್ಲರಿಗೂ ಬಾಜಾ–ಭಜಂತ್ರಿ ಬಾರಿಸಿದರು. ಯಾಕೆ ನಾನೊಬ್ಬ ದಲಿತನೆಂದು ನನ್ನನ್ನು ಎಲ್ಲ್ರೂ ಒಟ್ಟಾಗಿ ದೂರವಿಟ್ರಾ ? ಹೊಲೆಯ ಮಂತ್ರಿಯಾಗಿದ್ದು ನಿಮಗೆ ಹೊಟ್ಟೆಕಿಚ್ಚಾ ? ಈ ವಿಷಯದಲ್ಲಿ ಹೆಚ್ಚಿಗೆ ಮಾತನಾಡಲು ಮನಸ್ಸಿಗೆ ನೋವಾಗುತ್ತೆ. ನನ್ನ ತಂದೆ–ತಾಯಿ ನೀಡಿದ ಸಂಸ್ಕಾರದಲ್ಲಿ ಇಂದಿಗೂ ಊರ ಗೌಡ್ರರನ್ನು ಅಭಿಮಾನದಿಂದ ಕಾಣುವೆ’ ಎಂದು ರಮೇಶ ಜಿಗಜಿಣಗಿ ಮನದಾಳದ ಮಾತುಗಳನ್ನು ಸೊಲ್ಲಾಪುರ–ವಿಜಯಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೀಕ್ಷಣೆ ಬಳಿಕ ಹಂಚಿಕೊಂಡರು.

‘ತಾಳ್ಮೆ ಹೊಂದಿರುವೆ. ನನ್ನ ಶಕ್ತಿ ಇದೇ ಆಗಿದೆ. ನನ್ನ ಅಂತರಾತ್ಮ ಹೇಳುತ್ತಿದೆ. ಇದೀಗ ಹೊಂದಿರುವ ಅಧಿಕಾರಕ್ಕಿಂತ ಇನ್ನೂ ಹೆಚ್ಚಿನ ಉನ್ನತ ಹುದ್ದೆ ಹೊಂದುವೆ ಎಂದು. ನನ್ನ ರಾಜಕೀಯ ಗುರು ರಾಮಕೃಷ್ಣ ಹೆಗಡೆ ಅವರ ಕನಸು ಇದೇ ಆಗಿತ್ತು. ಸಿದ್ಧಗಂಗೆಯ ಮಹಾತ್ಮ ಸಹ ಇದೇ ಭಾವನೆ ಹೊಂದಿದ್ದರು’ ಎಂದು ಜಿಗಜಿಣಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !