ಚರ್ಮ ವಾದ್ಯಗಳ ಸರದಾರ

7

ಚರ್ಮ ವಾದ್ಯಗಳ ಸರದಾರ

Published:
Updated:
Deccan Herald

ಅದು 6 ಅಡಿ X 8 ಅಡಿ ಸುತ್ತಳತೆಯ ಪುಟ್ಟ ಕೊಠಡಿ. ಮೂರು ಗೋಡೆಗಳ ಜತೆಗೆ, ಸೂರನ್ನೂ ಅಲಂಕರಿಸಿದ ತರಹೇವಾರಿ ಚರ್ಮ ವಾದ್ಯಗಳು. ಕೊಠಡಿಯ ಒಳಗೆ ವಾದ್ಯಗಳನ್ನು ತುಂಬಿರುವ ಕಾರಣ, ಜಾಗ ಸಾಕಾಗದೇ ಕೊಠಡಿಯ ಹೊರಗೇ ಕುಳಿತು ವಾದ್ಯಗಳ ರಿಪೇರಿ ಮಾಡುತ್ತಿರುತ್ತಾರೆ 64ರ ಹರೆಯದ ಮಾರುತಿ ಬಗರಿಕಾರ. ಇದು ಅವರು 48 ವರ್ಷಗಳಿಂದ ಕೈಗೊಂಡಿರುವ ತೊಗಲು ವಾದ್ಯಗಳ ಸೇವೆ !

ಹುಬ್ಬಳ್ಳಿ ಶಹರದ ಗೋಪನಕೊಪ್ಪದ ಗೊಲ್ಲರ ಓಣಿಯಲ್ಲಿದೆ ಇಂಥದ್ದೊಂದು ಅಪರೂಪದ, ಪುಟ್ಟ ವಾದ್ಯಗಳ ತಯಾರಿಸುವ ಕೊಠಡಿ. ಇದಕ್ಕೆ ಹೆಸರಿಟ್ಟಿಲ್ಲ. ಪ್ರಚಾರವೂ ಇಲ್ಲ. ಆದರೆ, ಮಾರುತಿಯವರ ಕಸುಬಿನ ಕೀರ್ತಿಯೇ ಗ್ರಾಹಕರನ್ನು ಕರೆತರುತ್ತದೆ.

ಹಿಂಬದಿಯಲ್ಲಿ ಮಾರುತಿ ಅವರ ಆರು ಚದುರದ ಮನೆಯಿದೆ. ಅದರ ಒಂದು ಭಾಗದ ಕೋಣೆಯಲ್ಲಿ ಹದಿಮೂರು ತರಹದ ವಾದ್ಯಗಳಿವೆ. ಅದರಲ್ಲಿ ತಬಲಾ, ಡಗ್ಗಾ, ಹಲಗೆ (ತಮಟೆ), ಡೋಲಕ್‌, ಮೃದಂಗ, ಜಗ್ಗಲಗಿ, ಹಾರ್ಮೊನಿಯಂ, ತಂತಿ ವಾದ್ಯಗಳಾದ ತಂಬೂರಿ, ವೀಣೆ, ಸಿತಾರ್‌, ವಯಲಿನ್‌ ಪ್ರಮುಖ ವಾದ್ಯಗಳು. ಅವೆಲ್ಲವನ್ನೂ ಒಪ್ಪವಾಗಿ ಜೋಡಿಸಲಾಗಿದೆ. ಆ ಪರಿಕರಗಳ ನಡುವೆಯೇ ಜಾಗ ಮಾಡಿಕೊಂಡು ಕುಳಿತು ವಾದ್ಯಗಳನ್ನು ಸಿದ್ಧಪಡಿಸುತ್ತಾರೆ ಮಾರುತಿ. ಇಲ್ಲವೇ ಅಂಗಡಿಯ ಮುಂದೆಯೇ ವಾದ್ಯಗಳ ರಿಪೇರಿಯಲ್ಲಿ ತೊಡಗುತ್ತಾರೆ.

ಕಲಾವಿದರೇ ಗ್ರಾಹಕರು

ಕಲಾವಿದರು, ನಾಟಕ ಕಂಪನಿಯವರು, ಭಜನಾ ಸಂಘದವರೇ ಇವರ ಕಾಯಂ ಗ್ರಾಹಕರು. ಮಾರುಕಟ್ಟೆಗಾಗಿ ಹುಡುಕಾಡುವುದಿಲ್ಲ. ಕಲಾವಿದರು ಬೇಡಿಕೆ ಇಟ್ಟರೆ, ಅಂಥ ವಾದ್ಯಗಳನ್ನು ಮಾಡಿಕೊಡುತ್ತಾರೆ. ‘ಚರ್ಮವಾದ್ಯ
ಗಳೆಂದರೆ ಸಂತೆ, ಜಾತ್ರೆಗೆ ತೆಗೆದುಕೊಂಡು ಹೋಗಿ ಗುಡ್ಡೆ ಹಾಕಿಕೊಂಡು ಮಾರುವ ಸರಕುಗಳಲ್ಲ. ಅವುಗಳನ್ನು ನುಡಿಸುವ ಕಲಾವಿದರು, ಸಂಗೀತ ಸಾಧಕರು ಬರುವವರೆಗೆ ನಾವು ಕಾಯಲೇಬೇಕು. ಯಾವ ವಾದ್ಯಗಳ ಮೇಲೆ ಯಾವ ಕಲಾವಿದರ ಋಣವಿರುತ್ತದೋ ಬಲ್ಲವರಾರು’ ಎನ್ನುತ್ತಾ ಮೂರೇ ವಾಕ್ಯಗಳಲ್ಲಿ ಚರ್ಮವಾದ್ಯಗಳ ವ್ಯಾಪಾರದ ಅಂತರಂಗವನ್ನು ತೆರೆದಿಡುತ್ತಾರೆ ಮಾರುತಿ.

ಸಣ್ಣಾಟ, ದೊಡ್ಡಾಟ, ನಾಟಕ, ಯಕ್ಷಗಾನ, ವೀರಗಾಸೆ, ಭಜನೆ, ಗಾಯನ, ನೃತ್ಯ ಮತ್ತಿತರ ಕಲಾ ಪ್ರಕಾರಗಳಲ್ಲಿ ಚರ್ಮವಾದ್ಯಗಳು ಅನುರಣಿಸುತ್ತವೆ. ಹಬ್ಬ–ಹರಿದಿನ, ಜಾತ್ರೆ, ಉತ್ಸವ, ಮೆರವಣಿಗೆಗಳಿಗೆ ಹೊಸ ಮೆರುಗನ್ನು ನೀಡುತ್ತವೆ. ಮನುಷ್ಯನ ಹುಟ್ಟಿನಿಂದ ಅಂತಿಮ ಯಾತ್ರೆಯವರೆಗೆ, ಅವನ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ಒಂದೊಂದು ಚರ್ಮವಾದ್ಯದ ನಾದ ವಿಭಿನ್ನ ಮತ್ತು ಅನೂಹ್ಯ. ಹಾಗಾಗಿಯೇ ತೊಗಲು ವಾದ್ಯಗಳು ಈ ನೆಲದ ಸಂಸ್ಕೃತಿಯ ಪ್ರತೀಕವೂ ಹೌದು. 

ಸಂಗೀತ ಜ್ಞಾನ ಅಗತ್ಯ

‘ಚರ್ಮವಾದ್ಯಗಳನ್ನು ಸಿದ್ಧಪಡಿಸಲು ಕರಕೌಶಲವಿದ್ದರೆ ಸಾಲದು, ಸಂಗೀತ ಜ್ಞಾನವೂ ಬೇಕು’ ಎನ್ನುತ್ತಾರೆ ಮಾರುತಿ. ‘ಒಂದು ತಬಲಾ ತಯಾರಿಗೆ ಅಗತ್ಯವಿರುವ ಚರ್ಮ, ಗಟ್ಟಿ, ಪಡಗ, ಕರಣಿ, ಬಾರ್‌ (ಚರ್ಮದ ದಾರ)ಗಳನ್ನು ಮಟ್ಟಸವಾಗಿ ಜೋಡಿಸಬೇಕು. ನಂತರ ತಬಲಾವನ್ನು ನುಡಿಸಿ ನಾದ ಹೊಮ್ಮಿಕೆಯನ್ನು ಪರೀಕ್ಷಿಸಬೇಕು. ಸರಿ ಕಾಣದಿದ್ದರೆ, ಬಾರ್‌ಗಳನ್ನು ಸರಿಯಾಗಿ ಬಿಗಿದು, ಗಟ್ಟಿಗಳನ್ನು ಸರಿಯಾಗಿ ಕೂರಿಸಬೇಕು. ಅಪಶ್ರುತಿ ಬಾರದಂತೆ ಎಚ್ಚರಿಕೆ ವಹಿಸಬೇಕು. ಸಂಗೀತ ಪರಿಕರಗಳಿಗೆ ಅಂತಿಮವಾಗಿ ಟ್ಯೂನಿಂಗ್‌ ಮಾಡುವುದು ತುಂಬಾ ಮುಖ್ಯ. ಇದಕ್ಕೆ ಶೃತಿಜ್ಞಾನ ಅಗತ್ಯ’ ಎಂದು ಅವರು ಪ್ರತಿಪಾದಿಸುತ್ತಾರೆ.

ಆಂಧ್ರ ಮೂಲದ ಚನ್ನದಾಸ ಸಮುದಾಯಕ್ಕೆ ಸೇರಿದ ಮಾರುತಿ ಅವರು ಸಂಗೀತ ಶಾಲೆಯಿಂದ ಸ್ವರಜ್ಞಾನ ಕಲಿತವರಲ್ಲ. ಮನೆಯಲ್ಲೇ ಕುಲಕಸುಬನ್ನು ಮಾಡುತ್ತಿದ್ದ ತಂದೆ ಹನುಮಂತಪ್ಪ ಬಗರಿಕಾರರ ಜತೆ ಕುಳಿತು ‘ಸರಿಗಮಪ’ ಅರ್ಥಮಾಡಿಕೊಂಡವರು. ಹಲವು ವಾದ್ಯಗಳನ್ನು ತಕ್ಕಮಟ್ಟಿಗೆ ನುಡಿಸುತ್ತಾರೆ. ಅಪ್ಪನ ದುಡಿಮೆ ಹೊಟ್ಟೆ–ಬಟ್ಟೆಗೆ ಸಾಲದಿದ್ದಾಗ 4ನೇ ತರಗತಿಯಲ್ಲೇ ಶಾಲೆಗೆ ಬೆನ್ನು ಹಾಕಿ, ವಾದ್ಯ ತಯಾರಿಕೆಗೆ ಮಣೆ ಹಾಕಿದರು. 16ನೇ ವಯಸ್ಸಿನಲ್ಲೇ ಮುಂಬೈ, ಬೆಂಗಳೂರು ಸುತ್ತಾಡಿ, ವಾದ್ಯ ತಯಾರಿಕೆ ಮತ್ತು ರಿಪೇರಿ ಕಲಿತು, ಮತ್ತೆ ಹುಬ್ಬಳ್ಳಿಗೆ ಮರಳಿ ಅಪ್ಪನ ದುಡಿಮೆಗೆ ಹೆಗಲು ಕೊಟ್ಟರು.

ಮಾರುತಿ ಅವರಿಗೆ ಐವರು ಪುತ್ರರು ಮತ್ತು ಮೂವರು ಪುತ್ರಿಯರು. ಪತ್ನಿ, ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳಿರುವ ತುಂಬು ಸಂಸಾರ. ಇಬ್ಬರು ಹೆಣ್ಣುಮಕ್ಕಳಿಗೆ ಮದುವೆಯಾಗಿದೆ. ಕಿರಿಯ ಮಗಳು ಮನೆಯಲ್ಲೇ ಇದ್ದಾರೆ. ಮೂವರು ಪುತ್ರರಿಗೂ ವಿವಾಹವಾಗಿದೆ. ಮಕ್ಕಳು ಗಾರೆ ಕೆಲಸಕ್ಕೆ ಹೋಗುತ್ತಾರೆ. 3ನೇ ಪುತ್ರ ಬಾಬು ಮಾತ್ರ ತಂದೆಗೆ ಕೆಲಸದಲ್ಲಿ ಕೈಜೋಡಿಸಿದ್ದಾರೆ. ಪತ್ನಿ ಯಲ್ಲವ್ವ ಕೂಡ ಪತಿಯ ಕಸುಬಿಗೆ ನೆರವಾಗುತ್ತಾರೆ. ಇವರ ಮನೆಯಲ್ಲಿ ಕಿರಿಯ ಪುತ್ರ ಹನುಮಂತ ಎಸ್ಸೆಸ್ಸೆಲ್ಸಿ ಓದಿದ್ದಾರೆ. ಉಳಿ ದವರು ಪ್ರಾಥಮಿಕ ಶಾಲೆಯನ್ನೂ ದಾಟಿದವರಲ್ಲ. ಬಡತನವನ್ನೇ ಹಾಸಿ, ಹೊದ್ದು ಮಲಗುವ ಇವರ ಕುಟುಂಬಕ್ಕೆ ತಂದೆಯ ಕಲಾಸೇವೆಯೇ ಶ್ರೀರಕ್ಷೆ.

ಬೆಳಗೆದ್ದು ಗವಾಯಿಗಳ ನೆನೆದು...

ಪ್ರತಿನಿತ್ಯ ಸಂಗೀತ ದಾಸೋಹಿ ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ನಮಸ್ಕರಿಸಿ, ಕಾಯಕ ಆರಂಭಿಸುತ್ತಾರೆ. ‘ದೃಷ್ಟಿ ಇಲ್ಲದಿದ್ದರೂ ಅನೇಕ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದ ಗವಾಯಿಗಳ ಸಾಧನೆ ಪವಾಡವೇ ಸರಿ. ಅವರ ಆದರ್ಶವೇ ನಮಗೆ ದಾರಿದೀಪ’ ಎಂದು ನಂಬಿದ್ದಾರೆ ಮಾರುತಿ.

ಐದಾರು ತಿಂಗಳಿಗೊಮ್ಮೆ ರೈಲಿನಲ್ಲಿ ಮೀರಜ್‌, ಕೊಲ್ಹಾಪುರಕ್ಕೆ ಹೋಗಿ, ಚರ್ಮವಾದ್ಯಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು ತರುತ್ತಾರೆ. ಇಲ್ಲಿ ವಾದ್ಯಗಳನ್ನು ಸಿದ್ಧಪಡಿಸಿ, ಮಾರಾಟ ಮಾಡುತ್ತಾರೆ. ‘ಒಂದು ತಬಲಾಕ್ಕೆ ಮುಚ್ಚಳಿಕೆ ಹಾಕಲು ಮೂರು ದಿನ ಬೇಕು. ಅದಕ್ಕೆ ಒಂದು ಸಾವಿರ ರೂಪಾಯಿ ಸಿಗುತ್ತದೆ. ಪ್ಲಾಸ್ಟಿಕ್‌, ಫೈಬರ್‌ ವಾದ್ಯಗಳ ಸ್ಪರ್ಧೆಯಲ್ಲಿ ಚರ್ಮವಾದ್ಯಗಳನ್ನು ಕೇಳುವವರೇ ಇಲ್ಲದಂತಾಗಿದೆ. ಹಾಗಾಗಿ ವ್ಯಾಪಾರವೂ ಕಡಿಮೆ. ತಿಂಗಳಿಗೆ ಐದಾರು ಸಾವಿರ ರೂಪಾಯಿ ಸಿಕ್ಕರೆ ಅದೇ ಹೆಚ್ಚು. ಆದರೆ, ಕುಲಕಸುಬನ್ನು ಬಿಡಲು ಮನಸ್ಸಿಲ್ಲ. ಇಲ್ಲಿ ಲಾಭ–ನಷ್ಟದ ಲೆಕ್ಕಾಚಾರಕ್ಕಿಂತ ಮನಸ್ಸಿಗೆ ಸಿಗುವ ಸಂತೃಪ್ತಿ ದೊಡ್ಡದು’ ಎಂದು ಕಸುಬಿನ ಬಗ್ಗೆ ಪ್ರೀತಿಯಿಂದ ಮಾತನಾಡುತ್ತಾರೆ ಮಾರುತಿ.

ರಿಪೇರಿಗೆ ಬಂದ ವಾದ್ಯಗಳನ್ನು ದುರಸ್ತಿಗೊಳಿಸಿ, ಅವುಗಳಿಗೆ ಜೀವ ತುಂಬುತ್ತಾರೆ. ತಬಲಾ ವಾದಕರಾದ ರಘುನಾಥ ನಾಕೋಡ, ಬಾಲಚಂದ್ರ ನಾಕೋಡ ಸೇರಿದಂತೆ ಹಲವಾರು ಕಲಾವಿದರಿಗೆ ಅವರು ಒಪ್ಪುವ ಹಾಗೆ ವಾದ್ಯಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ವಾದ್ಯ ತಯಾರಿಕೆ, ಸ್ವರ ಸೇವೆಯಲ್ಲಿ ಅರ್ಧ ಶತಮಾನ ತಲುಪುತ್ತಿರುವ ಈ ಹಿರಿಯ ಜೀವ ಇವತ್ತಿಗೂ ಎಲೆ ಮರೆ ಕಾಯಿಯ ಹಾಗೆ ಉಳಿದಿದ್ದಾರೆ. ಮಾರುತಿ ಅವರ ಸಂಪರ್ಕಕ್ಕೆ ಮೊ: 91480 89727.

ಚಿತ್ರಗಳು: ಲೇಖಕರವು

**

ಸಂಗೀತ ದೇವರ ಭೇಟಿ!

‘20 ವರ್ಷಗಳ ಹಿಂದೆ, ಹುಬ್ಬಳ್ಳಿಯ ಕಾರ್ಯಕ್ರಮವೊಂದಕ್ಕೆ ಬಂದಿದ್ದ ತಬಲಾ ಮಾಂತ್ರಿಕ ಜಾಕೀರ್‌ ಹುಸೇನ್‌ ಅವರನ್ನು ಭೇಟಿಯಾಗಿ ಪರಿಚಯ ಮಾಡಿಕೊಂಡೆ. ಅವರೊಂದಿಗೆ ಫೋಟೊ ತೆಗೆಸಿಕೊಳ್ಳುವ ಅವಕಾಶ ಸಿಕ್ಕಿತು. ‘ಬಾಂಬೆಗೆ ಬನ್ನಿ ನಿಮ್ಮಂಥ ಕಲಾವಿದರಿಗೆ ಒಳ್ಳೆಯ ಭವಿಷ್ಯವಿದೆ’ ಅಂತ ಜಾಕೀರ್‌ ಹುಸೇನ್‌ ಹೇಳಿದ್ದರು. ಕಾರಣಾಂತರದಿಂದ ಅಲ್ಲಿಗೆ ಹೋಗಲು ಆಗಲಿಲ್ಲ. ಆದರೆ, ದೇವರನ್ನೇ ನೋಡಿದಂಥ ಅನುಭವವಾಯ್ತು’ ಅಂತ ಅಂದಿನ ಫೋಟೊವನ್ನು ಹಿಡಿದುಕೊಂಡು ಮಾರುತಿ ಭಾವುಕರಾದರು.

ಮಾರುತಿ ಅವರಿಗೆ ಡಾ.ರಾಜ್‌ ಅವರ ಮೇಲೂ ಅಪಾರವಾದ ಪ್ರೀತಿ, ಅಭಿಮಾನ. ಒಮ್ಮೆ ಧಾರವಾಡ ಜಿಲ್ಲೆ ಕುಂದಗೋಳದ ನಾಡಿಗೇರ ವಾಡೆಗೆ, ಪತ್ನಿ ಪಾರ್ವತಮ್ಮ, ಶಿವರಾಜ್‌ಕುಮಾರ್‌ ಮತ್ತು ಪುನೀತ್‌ರಾಜ್‌ಕುಮಾರ್‌ರೊಂದಿಗೆ ಬಂದಿದ್ದ ರಾಜ್‌ಕುಮಾರ್‌ ಅವರೊಂದಿಗೆ ಫೋಟೊ ತೆಗೆಸಿಕೊಂಡದ್ದನ್ನು ಮಾರುತಿ ಸ್ಮರಿಸಿದರು. ಅದಕ್ಕೆ ಅವರ ಕೈಯಲ್ಲಿದ್ದ ಫೋಟೊ ಸಾಕ್ಷಿಯಾಗಿತ್ತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !