ಉಪನ್ಯಾಸಕರ ನಿಯೋಜನೆ, ವಿದ್ಯಾರ್ಥಿಗಳಿಗೆ ವೇದನೆ

ಬುಧವಾರ, ಏಪ್ರಿಲ್ 24, 2019
24 °C
ಚುನಾವಣೆ ಕರ್ತವ್ಯಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನಿಯೋಜನೆ, ಸರಿಯಾಗಿ ನಡೆಯದ ತರಗತಿಗಳು

ಉಪನ್ಯಾಸಕರ ನಿಯೋಜನೆ, ವಿದ್ಯಾರ್ಥಿಗಳಿಗೆ ವೇದನೆ

Published:
Updated:
Prajavani

ಚಿಕ್ಕಬಳ್ಳಾಪುರ: ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜು ಉಪನ್ಯಾಸಕರನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದ ಕಾರಣಕ್ಕೆ ಆ ಕಾಲೇಜುಗಳಲ್ಲಿ ಕಳೆದ ಕೆಲ ದಿನಗಳಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭೆ ವ್ಯಾಪ್ತಿಯ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು ತಾಲ್ಲೂಕುಗಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 17 ಉಪನ್ಯಾಸಕರನ್ನು ಮಾರ್ಚ್ 10 ರಿಂದ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಆ ಎಲ್ಲ ಶಿಕ್ಷಕರು ಬೋಧಿಸುವ ವಿಷಯಗಳ ತರಗತಿಗಳು ವೇಳಾಪಟ್ಟಿಯಂತೆ ನಡೆಸಲು ಆಗಿಲ್ಲ. ಹೀಗಾಗಿ, ಸದ್ಯ ವಿದ್ಯಾರ್ಥಿಗಳು ಒಂದು ತರಗತಿಗೆ ಕುಳಿತರೆ, ಮುಂದಿನ ಮೂರು ತರಗತಿಗಳ ಶಿಕ್ಷಕರಿಲ್ಲದೆ ಮನೆಗೆ ವಾಪಾಸಾಗುವ ಸ್ಥಿತಿ ನಿರ್ಮಾಣವಾಗಿದೆ.

ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಅರ್ಥಶಾಸ್ತ್ರ, ಗಣಕಯಂತ್ರ, ಭೌತಶಾಸ್ತ್ರ ಸೇರಿದಂತೆ ಅನೇಕ ವಿಷಯಗಳ ತರಗತಿಗಳು ಸುಮಾರು ಒಂದು ತಿಂಗಳಿಂದ ನಡೆಯುತ್ತಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಪ್ರಾಂಶುಪಾಲರ ಬಳಿ ಹೋಗಿ ಅಳಲು ತೋಡಿಕೊಂಡರೆ, ಅವರು ಸಹ ಮೇಲಾಧಿಕಾರಿಗಳ ಆದೇಶ ಪಾಲಿಸಲೇಬೇಕಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ 33 ಉಪನ್ಯಾಸಕರಲ್ಲಿ 4, ಬಾಗೇಪಲ್ಲಿ 9 ಉಪನ್ಯಾಸಕರಲ್ಲಿ 5 ಮತ್ತು ಗೌರಿಬಿದನೂರಿನಲ್ಲಿ 22 ಉಪನ್ಯಾಸಕರ ಪೈಕಿ 6 ಜನರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಕೇವಲ ಎರಡ್ಮೂರು ತರಗತಿಗಳಿಗೆ ಹಾಜರಾಗಿ ವಾಪಾಸಾಗುತ್ತಿದ್ದಾರೆ.

ಚಿಕ್ಕಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 33 ಜನ ಉಪನ್ಯಾಸಕರಿದ್ದಾರೆ. ಈ ಪೈಕಿ 4 ಜನ ಉಪನ್ಯಾಸಕರನ್ನು ಈಗಾಗಲೇ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇನ್ನುಳಿದ 29 ಜನ ಉಪನ್ಯಾಸಕರನ್ನು ಮತಗಟ್ಟೆ ಅಧಿಕಾರಿಗಳನ್ನಾಗಿ (ಪಿಆರ್ಒ) ನೇಮಕ ಮಾಡಲಾಗಿದೆ. ಈ ಉಪನ್ಯಾಸಕರು ತರಬೇತಿ, ಸಭೆ ಮುಂದಾದ ಕಾರಣಗಳಿಗೆ ಸರಿಯಾಗಿ ತರಗತಿಗಳನ್ನು ನಡೆಸಲು ಆಗುತ್ತಿಲ್ಲ. ಇದರ ಪರಿಣಾಮ, ವಿದ್ಯಾರ್ಥಿಗಳ ಮೇಲಾಗುತ್ತಿದೆ.

ಮೊದಲೇ ಕೆಲ ವಿಷಯಗಳ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಇಂತಹ ಸಂದರ್ಭದಲ್ಲಿ ಇರುವ ಉಪನ್ಯಾಸಕರನ್ನು ಚುನಾವಣೆ ಕೆಲಸಕ್ಕೆ ನಿಯೋಜಿಸಿರುವುದರಿಂದ ವಿದ್ಯಾರ್ಥಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪಾಠವನ್ನು ಹೇಳಿ ಕೊಡುವವರು ಇಲ್ಲದೆ ಕೆಲ ವಿಷಯಗಳ ಬಗ್ಗೆ ಆಸಕ್ತಿ ಕಳೆದು ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

‘ನಾವು ದೂರದ ಹಳ್ಳಿಗಳಿಂದ ಕಾಲೇಜಿಗೆ ಬರುತ್ತೇವೆ. ಆದರೆ ಸುಮಾರು ಒಂದು ತಿಂಗಳಿಂದ ಸರಿಯಾಗಿ ಪಾಠ, ಪ್ರವಚನಗಳು ನಡೆಯುತ್ತಿಲ್ಲ. ಪ್ರಾಂಶುಪಾಲರಿಗೆ ವಿಚಾರಿಸಿದರೆ ಉಪನ್ಯಾಸಕರು ಚುನಾವಣೆ ಕೆಲಸದಲ್ಲಿ ತೊಡಗಿದ್ದಾರೆ ಎಂದು ಹೇಳಿದರು. ಕೆಲ ತರಗತಿಗಳು ನಡೆಯದ ಕಾರಣ ಕಾಲೇಜಿನಲ್ಲಿ ಸುಮ್ಮನೆ ಕುಳಿತು ಮನೆಗೆ ಮರಳುತ್ತಿದ್ದೇವೆ’ ಎಂದು ವಿದ್ಯಾರ್ಥಿನಿ ಶಿಲ್ಪಾ ತಿಳಿಸಿದರು.

‘ಈಗ ಚುನಾವಣೆ ನೆಪದಲ್ಲಿ ತರಗತಿಗಳು ನಡೆಯುವುದಿಲ್ಲ. ಈಗ ಬಾಕಿ ಉಳಿದ ತರಗತಿಗಳನ್ನು ಕೊನೆಗೆ ವಿಶೇಷ ತರಗತಿಗಳನ್ನು ತೆಗೆದುಕೊಂಡು ಬೋಧಿಸುತ್ತಾರೆ. ಆಗ ಎಲ್ಲಾ ವಿಷಯಗಳನ್ನು ಒಂದೇ ಬಾರಿ ಪಾಠ ಮಾಡುವುದರಿಂದ ನಮಗೆ ಸರಿಯಾಗಿ ಅರ್ಥವಾಗುವುದಿಲ್ಲ. ಒತ್ತಡವಾಗುತ್ತದೆ. ಅದರ ಪರಿಣಾಮ ಪರೀಕ್ಷೆಯ ಮೇಲಾಗುತ್ತದೆ’ ಎಂದು ವಿದ್ಯಾರ್ಥಿ ಎಸ್. ಆರ್.ವಿಶ್ವೇಶ್ ಹೇಳಿದರು.

‘ನಾವು ಮಧ್ಯಾಹ್ನ 2 ರಿಂದ ರಾತ್ರಿ 10ರ ವರೆಗೆ ಚೆಕ್‌ಪೋಸ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ರಾತ್ರಿ ವೇಳೆ ಮನೆ ತಲುಪಲು ಯಾವುದೇ ವಾಹನಗಳು, ಬಸ್‌ಗಳು ಇರುವುದಿಲ್ಲ. ಹೀಗಾಗಿ ರಾತ್ರಿ ಅಲ್ಲೇ ಮಲಗಿ ಬೆಳಿಗ್ಗೆ ಎದ್ದು ಕಾಲೇಜಿನ ಕಡೆ ಹೋದರೆ ಅಲ್ಲಿ ಪಾಠ ಮಾಡುವ ಹುಮ್ಮಸ್ಸು ಇರುವುದಿಲ್ಲ. ನಮ್ಮ ಸಮಸ್ಯೆ ಯಾರಿಗೂ ಅರ್ಥವಾಗುತ್ತಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಉಪನ್ಯಾಸಕರೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !