ಏಕಾಂಗಿ ಸಂಚಾರಿ...

7

ಏಕಾಂಗಿ ಸಂಚಾರಿ...

Published:
Updated:

‘ನನ್ನ ಬರ್ತಡೇಗೆ ಲಡಾಖ್‌ನಲ್ಲಿರಬೇಕು. ವಿಶ್ವದ ಅತಿ ಎತ್ತರದ ಮೋಟರಬಲ್ ರಸ್ತೆಯಲ್ಲೇ ಸಾಗಿ, ಆ ಗುರಿ ತಲುಪಲೇಬೇಕು. ಕನ್ನಡದ ಬಾವುಟ ಹಿಡಿದು ಸೆಲ್ಫಿ ತಗೋಬೇಕು. ಇದೇ ನನ್ನ ಗುರಿಯಾಗಿತ್ತು. ಬೈಕ್ ಕಿಕ್ ಮಾಡಿ, ರೈಡ್ ಆರಂಭಿಸಿದೆ. ಅನೇಕ ಅಡೆತಡೆಗಳ ನಡುವೆಯೂ ಗುರಿ ತಲುಪಿದೆ. ಕನ್ನಡದ ಬಾವುಟ ಹಿಡಿದು ಸೆಲ್ಫಿ ತೆಗೆದುಕೊಂಡೆ...’

ಬೆಂಗಳೂರಿನ ರಾಘವೇಂದ್ರ ಬೈಕ್‌ನಲ್ಲಿ ಏಕಾಂಗಿಯಾಗಿ ಲಡಾಖ್ ತಲುಪಿದ ಬಗೆಯನ್ನು ಹೀಗೆ ಸಿನಿಮಾ ಕಥೆ ರೀತಿಯಲ್ಲಿ ವಿವರಿಸುತ್ತಿದ್ದಾಗ, ‘ಮುಂದೇನಾಯಿತು ಹೇಳಿ’ ಎಂದು ಕೇಳುವಷ್ಟು ಕುತೂಹಲ ಮೂಡುತ್ತಿತ್ತು. ನನ್ನ ಅಚ್ಚರಿ ಪ್ರಶ್ನೆಗಳನ್ನು ಕೇಳುತ್ತಾ ಸಾಹಸ ಪಯಣದ ಮಾತು ಮುಂದುವರಿಸಿದರು.

‘ಬೈಕ್ ಏರಿ ಕರ್ನಾಟಕದಿಂದ ಕಾಶ್ಮೀರದತ್ತ ಹೊರಟೆ. ಮುಕ್ಕಾಲು ಭಾಗ ಪ್ರವಾಸ ಮುಗಿದಿತ್ತು. 60 ಕಿ.ಮೀ ಕ್ರಮಿಸಿದರೆ ನನ್ನ ಕನಸಿನ ಲಡಾಖ್ ತಲುಪುತ್ತಿದ್ದೆ. ಅಷ್ಟರಲ್ಲಿ ಹಿಮಪಾತ ಅಡ್ಡಿಯಾಯಿತು. ಮನಾಲಿಯಿಂದ ರೋಹ್ಟನ್‌ ಪಾಸ್‌ಗೆ ಹೋಗುವ ಮಾರ್ಗ ಬಂದ್ ಆಯಿತು. ‘ವಾಪಸ್‌ ಹೋಗಿ ಬಿಡ್ಲಾ’ ಅಂತ ಒಮ್ಮೆ ಯೋಚನೆ ಮಾಡಿದೆ.

‘ನೋ.. ಅದು ಸಾಧ್ಯವೇ ಇಲ್ಲ. ಇಷ್ಟು ಸಮೀಪಕ್ಕೆ ಬಂದು ಹಿಂತಿರುವುಗುವುದೇ’ ಎಂದು ಮನಸ್ಸಿನಲ್ಲಿ ಪ್ರಶ್ನಿಸಿಕೊಂಡೆ. ಮುಂದಿನ ದಾರಿಯ ಬಗ್ಗೆ ಸ್ಥಳೀಯರ ಸಲಹೆ ಕೇಳಿದೆ. ಅವರ ಮಾರ್ಗಸೂಚಿಯಂತೆ ಪರ್ಯಾಯ ದಾರಿ ಕುಂಝುಮ್‌  ಪಾಸ್ ಕಡೆಗೆ ಬೈಕ್‌ ತಿರುಗಿಸಿದೆ.

ಸ್ಪಿತಿ ವ್ಯಾಲಿಯಿಂದ ಗ್ಲೇಸಿಯರ್‌ ಪಾಯಿಂಟ್‌ ಮೂಲಕ ಹೊರಟೆ. ಅದು ಜೋರಾಗಿ ಗಾಳಿ ಬೀಸುವ ತಾಣ. ಹೆಚ್ಚು ವೇಗವಾಗಿ ಹೋಗುವಂತಿಲ್ಲ. ಬರೀ 5 ಕಿ.ಮೀ ವೇಗದಲ್ಲಿ ಸಾಗಬೇಕು! ಅಲ್ಲಿಂದ 0.4 ಡಿಗ್ರಿಯಷ್ಟು ಕನಿಷ್ಠ ತಾಪಮಾನದ ಖಾರ್ದೂಂಗ್ಲಾ ಮಾರ್ಗವನ್ನೂ ದಾಟಿಬಿಟ್ಟೆ. ನನ್ನ ದುರಾದೃಷ್ಟ ಆ ರಸ್ತೆಯೂ ಬಂದ್‌ ಆಗಿತ್ತು. ಛೇ... ಮತ್ತೆ ನಿರಾಸೆ. ಆದರೂ, ಲಡಾಖ್ ತುದಿಗೇರುವ ಆಸೆ ಬತ್ತಲಿಲ್ಲ. ನನ್ನ ರಾಯಲ್‌ ಎನ್‌ಫೀಲ್ಡ್‌ ಮತ್ತೆ ತಿರುಗಿಸಿ, ಬಂದ ದಾರಿಯಲ್ಲೇ ಕುಂಝುಮ್‌ಗೆ ವಾಪಸ್ ಆಗಿ ಶಿಮ್ಲಾ ದಾರಿ ಹಿಡಿದೆ. ಅಲ್ಲಿಂದ ಪಠಾಣ್‌ಕೋಟ್‌-ಝೋಝಿಲಾ ಮಾರ್ಗವಾಗಿ ಕಾರ್ಗಿಲ್‌ಗೆ ಮುಟ್ಟಿದೆ.

ಸಮಸ್ಯೆಗಳನ್ನು ಎದುರಿಸಿದ ಮೇಲೆ ಆರು ದಿನಗಳು ಪ್ರಯಾಣಿಸಿದೆ. ಹೆಚ್ಚುವರಿಯಾಗಿ ಕ್ರಮಿಸಿದ್ದು 2,097 ಕಿ.ಮೀ! 60 ಕಿ.ಮೀನಲ್ಲಿ ತಲುಪುವ ಲಡಾಖ್, 600 ಕಿ.ಮೀನಷ್ಟು ಸುತ್ತು ಹಾಕಿ ಹೋಗುವಂತಾಯಿತು. ಆದರೂ ಪರಿಶ್ರಮ ಫಲಕೊಟ್ಟಿತು. ವಿಶ್ವದ ಅತಿ ಎತ್ತರದ ಮೋಟಾರಬಲ್ ರಸ್ತೆಯಲ್ಲಿ ಕನ್ನಡದ ಬಾವುಟ ಹಿಡಿದು ನಿಂತೆ. ಹಾರುತ್ತಿದ್ದ ಬಾವುಟ ಜನ್ಮದಿನದ ಶುಭಾಶಯ ಹೇಳಿದಂತೆ ಭಾಸವಾಯಿತು’ ಎಂದು ರಾಘವೇಂದ್ರ ಅವರು ಸೋಲೊ ಬೈಕ್ ಟೂರ್ ಕಥೆ ಹೇಳಿ ಮುಗಿಸಿದಾಗ, ಇವರ ಸಾಹಸ ಯಾವುದೇ ಥ್ರಿಲ್ಲರ್ ಸಿನಿಮಾಗಿಂತ ಕಡಿಮೆ ಇಲ್ಲ ಎನ್ನಿಸಿತು.

ಕೆ ಟು ಕೆ ಪಯಣ
ಬೆಂಗಳೂರಿನ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿ ಮಾಡುತ್ತಿರುವ ಎಸ್.ಎಚ್.ರಾಘವೇಂದ್ರ ಹವ್ಯಾಸಿ ಬೈಕ್ ರೈಡರ್. ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350 ಸಿಸಿ ಬೈಕ್‌ನಲ್ಲಿ ಒಂಟಿಯಾಗಿ ದೇಶದ ಹಲವು ತಾಣಗಳನ್ನು ಸುತ್ತಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಸಿಕ್ಕಿಂ, ನೇಪಾಳದ ಮೂಲಕ ಭೂತಾನ್‌ ಸೇರಿದಂತೆ 7,874 ಕಿ.ಮೀ ಪ್ರಯಾಣ ಮಾಡಿದ್ದಾರೆ. ಇದು ಅವರ ಲೇಟೆಸ್ಟ್ ಪ್ರವಾಸಗಳಲ್ಲಿ ಒಂದು.

ಕಳೆದ ವರ್ಷ ಕರ್ನಾಟಕದಿಂದ ಕಾಶ್ಮೀರಕ್ಕೆ 10,572 ಕಿ.ಮೀನಷ್ಟು ಸೋಲೋ ಬೈಕ್ ರೈಡಿಂಗ್ ಪ್ರವಾಸ ಮಾಡಿದ್ದಾರೆ. ಈ ಪ್ರವಾಸದಲ್ಲೇ ಅವರಿಗೆ ಹಿಮಪಾತ, ರಸ್ತೆ ಬಂದ್‌ನಂತಹ ಕಠಿಣ ಅನುಭವಗಳಾಗಿರುವುದು. ಆದರೆ, ಅಂಥ ಅಡೆತಡೆಗಳನ್ನು ಇವರು ಸಕಾರಾತ್ಮಕವಾಗಿ ಸ್ವೀಕರಿಸಿದ್ದಾರೆ. ‘ಹಿಮಪಾತವಾಗಿ ಮಾರ್ಗ ಬಂದ್ ಆಗಿದ್ದರಿಂದ ಹೆಚ್ಚು ದೂರ ಪ್ರಯಾಣಿಸಬೇಕಾಯಿತು. ಆದರೆ ನನಗೆ ಬೇಸರವಾಗಲಿಲ್ಲ. ಬದಲಾಗಿ, ಬೇರೆ ಪ್ರದೇಶಗಳನ್ನು ನೋಡುವ ಅವಕಾಶ ಸಿಕ್ಕಿತು’ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ಕಡಿಮೆ ಖರ್ಚಿನ ಪ್ರವಾಸ!
ಬೈಕ್ ರೈಡಿಂಗ್ ಹವ್ಯಾಸ ದುಬಾರಿಯೇ. ಆದರೆ ಕಡಿಮೆ ಖರ್ಚಿನಲ್ಲೂ ಪ್ರವಾಸ ಕೈಗೊಳ್ಳಬಹುದು ಎಂದು ರಾಘವೇಂದ್ರ ಪ್ರತಿಪಾದಿಸುತ್ತಾರೆ. ಅವರು ಭೂತಾನ್ ಪ್ರವಾಸವನ್ನು ₹70 ಸಾವಿರದಿಂದ ₹75 ಸಾವಿರ ಖರ್ಚಿನಲ್ಲಿ ಪೂರೈಸಿದ್ದಾರೆ. ಪ್ರವಾಸ ಯಶಸ್ವಿಯಾಗ­ಬೇಕಾದರೆ, ಅಚ್ಚುಕಟ್ಟಾಗಿ ಯೋಜನೆ ರೂಪಿಸಬೇಕು. ಆಗ ಖರ್ಚು ಕಡಿಮೆ ಮಾಡಬಹುದು ಎಂಬುದು ಅವರ ಅಭಿಪ್ರಾಯ.

‘ಮಳೆ ಬರುತ್ತಿದೆ, ಬಿಸಿಲು ಹೆಚ್ಚಾಗಿದೆ ಎಂದರೆ ಗುರಿ ತಲುಪುವುದು ಕಷ್ಟ. ನಾನಂತೂ, ಎಂಥ ಸಮಸ್ಯೆಗಳಿದ್ದರೂ ಪ್ರಯಾಣ ಮುಂದುವರಿಸುತ್ತೇನೆ. ಅಂಥ ಹವಾಮಾನ ಏರಿಳಿತಗಳನ್ನು ಎದುರಿಸುವಂತಹ ಪರಿಕರಗಳನ್ನು ಇಟ್ಟುಕೊಂಡಿರುತ್ತೇನೆ. ಇಂಥ ಜರ್ನಿ ಜೀವನದಲ್ಲಿ ಮರೆಯಲಾಗದ ಕ್ಷಣಗಳನ್ನು ಕಟ್ಟಿಕೊಟ್ಟಿದೆ’ ಎಂದು ನಸುನಗುತ್ತಾರೆ ರಾಘವೇಂದ್ರ.

ಭೂತಾನ್ ಪ್ರವಾಸವನ್ನು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಅಂತ್ಯಗೊಳಿಸಿದ್ದಾರೆ. ಅಲ್ಲಿಂದ ಮೂರೇ ದಿನಗಳಲ್ಲಿ ಬೆಂಗಳೂರು ತಲುಪಿದ್ದಾರೆ. ಈ ಮೂರು ದಿನಗಳಲ್ಲಿ ಅವರು ಕ್ರಮಿಸಿದ್ದು ಒಟ್ಟು 2625 ಕಿ.ಮೀ! ಈ ಯಶಸ್ಸಿಗೆ ನಿಖರ ಯೋಜನೆಯೇ ಕಾರಣ ಎಂಬುದು ಅವರ ಅಭಿಪ್ರಾಯ.

ಪೂರ್ವ ಮಾಹಿತಿ ಇರಬೇಕು
ಬೈಕ್ ಪ್ರಯಾಣ ಆರಂಭಿಸುವ ಮುನ್ನ, ತಲುಪಬೇಕಾದ ಸ್ಥಳದ ಬಗ್ಗೆ ಮಾಹಿತಿ ಪಡೆಯಬೇಕು. ಜಮ್ಮು-ಕಾಶ್ಮೀರ, ಈಶಾನ್ಯ ರಾಜ್ಯಗಳ ಕೆಲವು ಸ್ಥಳಗಳನ್ನು ಪ್ರವೇಶಿಸುವ ಮುನ್ನ ಅಲ್ಲಿನ ಪ್ರವಾಸೋದ್ಯಮ ಇಲಾಖೆಯ ಅನುಮತಿ ಪಡೆಯುವುದು ಅಗತ್ಯ.

ಸಿಕ್ಕಿಂ ರಾಜ್ಯದ ನಾತುಲಾ ಪಾಸ್‌ ಮೂಲಕ ಪ್ರಯಾಣಿಸುವ ಮುನ್ನ ಅಲ್ಲಿನ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯಬೇಕು. ಅದಕ್ಕಾಗಿ ಒಂದು ದಿನ ಮೊದಲೇ ಅರ್ಜಿ ಕೊಡಬೇಕು. ನಾವು ಯಾವ ದಿನ ಯಾವ ಪ್ರದೇಶದಲ್ಲಿ ಇರುತ್ತೇವೆ ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಿರಬೇಕು. ಮಿಲಿಟರಿಯೇ ಈ ಎಲ್ಲ ಅನುಮತಿ ಪತ್ರಗಳನ್ನು ಪರಿಶೀಲಿಸಲಿದೆ ಎಂದು ಪ್ರಯಾಣದ ವೇಳೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನೂ ರಾಘವೇಂದ್ರ ವಿವರಿಸುತ್ತಾರೆ.

ಬೈಕ್ ಪ್ರಯಾಣವೇ ಖುಷಿ: ಬೈಕ್‌ನಲ್ಲಿ ಕರ್ನಾಟಕದಿಂದ ಕಾಶ್ಮೀರಕ್ಕೆ ಹೋಗಲು ಹಲವು ದಿನಗಳು ಬೇಕಾಗುತ್ತದೆ. ಈ ಸಂದರ್ಭದಲ್ಲಿ ಅಲ್ಲಿನ ವಾತಾವರಣಕ್ಕೆ ದೇಹ ಹೊಂದಿಕೊಳ್ಳುವುದು ಕಷ್ಟವಾಗುವುದಿಲ್ಲ. ಹಾಗಾಗಿ, ವಿಮಾನಕ್ಕಿಂತ ಬೈಕ್‌ನಲ್ಲಿಯೇ ಸಾಗುವುದು ಉತ್ತಮ. ‘ನನಗಂತೂ ಎಲ್ಲೂ ಆರೋಗ್ಯ ಕೈಕೊಟ್ಟಿಲ್ಲ. ಈ ವಿಷಯದಲ್ಲಿ ನಾನು ಲಕ್ಕಿ’ ಎನ್ನುತ್ತಾರೆ ಅವರು.

ಬೈಕ್ ಪ್ರಯಾಣ ರಾಘವೇಂದ್ರ ಅವರಿಗೆ ಥ್ರಿಲ್ ನೀಡುವ ಜತೆಗೆ ವಿಶಿಷ್ಟ ಅನುಭವಗಳನ್ನೂ ಕಟ್ಟಿಕೊಟ್ಟಿದೆ. ‘ಕಾಶ್ಮೀರ ಪ್ರಯಾಣದ ವೇಳೆ ಕಾರ್ಗಿಲ್‌ ತಲುಪಿದಾಗ, ಅಲ್ಲಿಗೆ ಬೆಂಗಳೂರಿನಿಂದ ಬಂದಿದ್ದ ಕುಟುಂಬದವರು ನನ್ನಬೈಕ್‌ ನೋಂದಣಿ ಸಂಖ್ಯೆ ನೋಡಿ, ‘ಓ, ನೀವೂ ಕರ್ನಾಟಕದವರು’ ಎಂದು ಗುರುತಿಸಿ, ಮಾತನಾಡಿಸಿದರು. ಅಷ್ಟು ದೂರದಲ್ಲಿ ಕನ್ನಡಿಗರು ಸಿಕ್ಕಿದ್ದೂ ಖುಷಿಯ ಸಂಗತಿ’ ಎನ್ನುತ್ತಾ ಸಂತಸ ಹಂಚಿಕೊಂಡರು.

ಬೈಕ್ ರೈಡಿಂಗ್ ಮತ್ತು ಸಂಚಾರದ ನಿಯಮಗಳ ಪಾಲನೆ ಬಗ್ಗೆ ಎಚ್ಚರಿಕೆ ನೀಡುವ ಅವರು, 'ಬೆಂಗಳೂರಿನ ರಸ್ತೆಯಲ್ಲಿ ವಾಹನ ಓಡಿಸುವುದು ಕಷ್ಟ. ಹೆದ್ದಾರಿಯಲ್ಲಿ ಆರಾಮಾಗಿ ಬೈಕ್‌ ಓಡಿಸಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ, ಹೆದ್ದಾರಿಯಲ್ಲಿಯೇ ಅಪಾಯ ಹೆಚ್ಚು. ಹೀಗಾಗಿ ನಾನು, ಹೆದ್ದಾರಿ ಬದಿಯ ಬಿಳಿ ಪಟ್ಟಿಯನ್ನು ಸರಿಯಾಗಿ ಅನುಸರಿಸುತ್ತೇನೆ. ಯಾವ ಹೆದ್ದಾರಿಯಲ್ಲಿ ಬಿಳಿ ಪಟ್ಟಿ ಇರುತ್ತದೋ, ಆ ರಸ್ತೆ ಸಂಪೂರ್ಣ ಚೆನ್ನಾಗಿದೆ ಎಂದೇ ಅರ್ಥ. ಆ ಪಟ್ಟಿಯನ್ನು ಅನುಸರಿಸಿ ಬೈಕ್‌ ಚಲಾಯಿಸುತ್ತಿದ್ದರೆ ಯಾವುದೇ ಅಪಾಯವಿಲ್ಲ' ಎನ್ನುತ್ತಾರೆ.

ಸೋಲೊ ಬೈಕ್ ರೈಡಿಂಗ್ - ಸಿದ್ಧತೆ ಹೇಗಿರಬೇಕು?
ಕರ್ನಾಟಕದಿಂದ ಕಾಶ್ಮೀರಕ್ಕೆ ಒಬ್ಬರೇ ಬೈಕ್‌ನಲ್ಲಿ (ಸೋಲೊ ಬೈಕ್ ರೈಡಿಂಗ್) ಹೋಗಬೇಕೆಂದು ನಿರ್ಧಾರ ಮಾಡುವವರಿಗೆ ಮೊದಲು ಆತ್ಮವಿಶ್ವಾಸ ಮತ್ತು ಧೈರ್ಯ ಇರಬೇಕು. ಅಲ್ಲದೆ, ಗಾಡಿಗೆ (ಬೈಕ್‌) ಮರ್ಯಾದೆ ಕೊಟ್ಟರೆ ಅದೂ ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಬರುತ್ತದೆ ಎಂಬ ನಂಬಿಕೆ ಇರಬೇಕು. ಈ ನಿಟ್ಟಿನಲ್ಲಿ ಗಾಡಿ (ಬೈಕ್) ಮತ್ತು ಬಾಡಿ (ನಮ್ಮ ದೇಹ) ಎರಡನ್ನೂ ಅಣಿಗೊಳಿಸಿಕೊಳ್ಳುವುದು ಅವಶ್ಯ ಎನ್ನುವ ರಾಘವೇಂದ್ರ, ಬೈಕ್‌ ಎಕ್ಸ್‌ಪೆಡಿಷನ್‌ ಕೈಗೊಳ್ಳುವವರಿಗೆ ಅವರು ಕೆಲವೊಂದು ಸಲಹೆಗಳನ್ನು ನೀಡುತ್ತಾರೆ. 
* ದೀರ್ಘ ಪ್ರಯಾಣ ಕೈಗೊಳ್ಳುವುದಕ್ಕೂ ಮೊದಲು ಬೈಕ್‌ ಸರ್ವೀಸ್‌ ಮಾಡಿಸಬೇಕು. 
* ಸರ್ವೀಸ್ ವೇಳೆ ಬೈಕ್‌ನ ಟೈಯರ್‌, ಬ್ರೇಕಿಂಗ್‌ ಲೈನ್‌, ಆಕ್ಸಿಲೇಟರ್‌ ಕೇಬಲ್‌, ಕ್ಲಚ್‌ ಕೇಬಲ್‌ ಪರೀಕ್ಷಿಸಿ, ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು
* ಆಕ್ಸಿಲೇಟರ್‌ ಕೇಬಲ್‌, ಕ್ಲಚ್‌ ತುಂಡಾಗುವುದು ಸಾಮಾನ್ಯ. ಇದಕ್ಕಾಗಿ ರೂಟಿಂಗ್‌ ಮಾಡಿಸಿಕೊಳ್ಳಬೇಕು. ಅಂದರೆ, ಕ್ಲಚ್‌ ಕೇಬಲ್‌ ಜೊತೆಗೆ ಇನ್ನೊಂದು ಕೇಬಲ್‌ ಹಾಕಿಕೊಳ್ಳಬೇಕು. ಒಂದು ಕಟ್‌ ಆದರೆ, ಇನ್ನೊಂದು ನೆರವಿಗೆ ಬರುತ್ತದೆ.
* ಸ್ಪಾರ್ಕ್‌ ಪ್ಲಗ್‌, ಫ್ಯೂಜ್‌, ಟೈರ್‌ ಟ್ಯೂಬ್‌, ಚೈನ್‌ ಪಾಕೆಟ್‌ಗಳಂತಹ ಅಗತ್ಯ ಬಿಡಿಭಾಗಗಳನ್ನು ಒಯ್ಯಬೇಕು. 
* ಚಾಲನಾ ಪರವಾನಗಿ, ಆರ್‌ಸಿ, ಇನ್ಷುರೆನ್ಸ್‌, ಎಮಿಷನ್‌ನಂತಹ ಅಗತ್ಯ ದಾಖಲೆಯ ಮೂಲ ಹಾಗೂ ನಕಲು ಪ್ರತಿಗಳನ್ನು ಇಟ್ಟುಕೊಂಡಿರಬೇಕು. 
* ಎಲ್ಲ ರಾಜ್ಯಗಳಲ್ಲೂ ಪ್ರವಾಸೋದ್ಯಮ ಅಭಿವೃದ್ಧಿಯಾಗಿದೆ. ಹಾಗಾಗಿ, ಎಲ್ಲೆಡೆಯೂ ಎಲ್ಲ ರೀತಿಯ ಆಹಾರ ಸಿಗುತ್ತದೆ. ಆದರೂ, ಡ್ರೈ ಫ್ರೂಟ್ಸ್‌, ಫ್ರೂಟ್‌ ಜ್ಯೂಸ್‌, ಎನರ್ಜಿ ಡ್ರಿಂಕ್‌, ಗ್ಲೂಕೋಸ್‌ ಅನ್ನು ನಮ್ಮ ಜತೆಯಲ್ಲೇ ತೆಗೆದುಕೊಂಡು ಹೋಗುವುದು ಉತ್ತಮ.

ಕಾಶ್ಮೀರದಲ್ಲಿ ಪ್ರವಾಸಿಗರಿಗೆ ಭಯವಿಲ್ಲ
ಕಾಶ್ಮೀರದಲ್ಲಿ ಗಲಾಟೆ ಜಾಸ್ತಿ. ಅಲ್ಲಿಗೆ ಪ್ರವಾಸಕ್ಕೆ ಹೋದರೆ ತೊಂದರೆ ಎಂಬ ಕಲ್ಪನೆ ಬಹಳಷ್ಟು ಜನರಲ್ಲಿದೆ. ಅಲ್ಲಿ ಗಲಾಟೆ ಇರುವುದು ನಿಜ. ಅದು ಅಲ್ಲಿನ ಜನ ಹಾಗೂ ಸರ್ಕಾರ, ಸೇನೆಯ ನಡುವೆ. ಆದರೆ, ಪ್ರವಾಸಿಗರಿಗೆ ಅಲ್ಲಿ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ ರಾಘವೇಂದ್ರ. 

 ‘ನಾನು ಕಾಶ್ಮೀರಕ್ಕೆ ಹೋದಾಗ ಅಂದು ಕರ್ಫ್ಯೂ ಜಾರಿಯಲ್ಲಿತ್ತು. ಸರ್ಕಾರಿ ಹಾಗೂ ಮಿಲಿಟರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಆದರೆ, ಅಲ್ಲಿ ನಮ್ಮಂಥ ಟೂರಿಸ್ಟ್‌ಗಳಿಗೆ ಯಾವುದೇ ತೊಂದರೆಯಾಗಲಿಲ್ಲ. ಕಾಶ್ಮೀರ ಸುರಕ್ಷಿತವಲ್ಲ ಎಂಬುದನ್ನು ತಲೆಯಿಂದ ತೆಗೆದು ಹಾಕಿ, ಪ್ರಯಾಣ ಬೆಳೆಸಬೇಕು’ ಎಂದು ಸಲಹೆ ನೀಡುತ್ತಾರೆ.

*

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !