ದೇವರಕಾಡು ಕಣಿವೆ ದಾರಿಯಲ್ಲಿ...

7

ದೇವರಕಾಡು ಕಣಿವೆ ದಾರಿಯಲ್ಲಿ...

Published:
Updated:
Deccan Herald

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ದೇವರಮನೆ ಪ್ರಾಕೃತಿಕ ಸಿರಿಯ ಮನಮೋಹಕ ತಾಣ. ಮಲೆನಾಡಿಗರು ಸಾಂಪ್ರದಾಯಿಕವಾಗಿ ಮನೆದೇವರೆಂದು ಪೂಜಿಸುವ ಕಾಲಭೈರವನ ಐತಿಹಾಸಿಕ ಕಲ್ಲಿನ ದೇಗುಲ ಇಲ್ಲಿದೆ. ಸುಗ್ಗಿ ಉತ್ಸವ, ಕೃಷಿಪ್ರಧಾನ ಆಚರಣೆಗಳು ಇಲ್ಲಿ ನಡೆಯುತ್ತವೆ. ಪಶ್ಚಿಮಘಟ್ಟದ ಶೋಲಾಕಾಡಿನ ಬೆಟ್ಟಗುಡ್ಡಗಳ ನಡುವೆ ಮೈಚಾಚಿಕೊಂಡಿರುವ ಈ ದೇಗುಲಕ್ಕೆ ದೇವರಮನೆ ಎಂಬ ಹೆಸರು ನಿಜಕ್ಕೂ ಒಪ್ಪುತ್ತದೆ. ಇಂತಹ ದೇವರಮನೆ, ದೇವರಕಾಡಿನ ಕಣಿವೆ ಕಾಲುದಾರಿಯಲ್ಲಿ ನಡೆದುಕೊಂಡೇ ಒಮ್ಮೆ ಏಕಾಂಗಿ ಚಾರಣ ಮಾಡಿದ್ದೆ.

ಕ್ಷೇತ್ರಕಾರ್ಯ ಮಾಡುವ ಸಂಶೋಧನಾಸಕ್ತಿಯಿಂದ ಇದು ಅನಿವಾರ್ಯ ಕೂಡ ಆಗಿತ್ತು. ತೇಜಸ್ವಿಯವರ ಕರ್ವಾಲೋ ಕಾದಂಬರಿಯಲ್ಲಿ ಪ್ರಸ್ತಾಪಗೊಂಡಿರುವ ಗುತ್ತಿ ಊರು ಸೇರಿದಂತೆ ತ್ರಿಪುರ, ಕೊಟ್ರಕೆರೆ, ಹೆಸಗೂಡು, ಹಳ್ಳಿಬೈಲು, ಮೂಲರಹಳ್ಳಿ ಹೆಸರಿನ ಇಲ್ಲಿನ ಸುತ್ತಮುತ್ತಲ ಸ್ಥಳಗಳು ಹೃದಯಂಗಮವಾಗಿದೆ. ಇದೆಲ್ಲವನ್ನು ಕಾಯುವ ಪರಿಸರದ ಒಡೆಯ ದೇವರಮನೆಯ ಕಾಲಭೈರವ. ಶಿವನು ರೈತರ ನೇಗಿಲಮಿತ್ರ ಎತ್ತಿನೊಂದಿಗೆ ಮೊದಲಬಾರಿಗೆ ಬಂದಿಳಿದ ಪ್ರದೇಶವಿದು ಎಂಬ ಐತಿಹ್ಯ ಕೂಡ ಇಲ್ಲಿಗಿದೆ.

ಬಾಲ್ಯದ ದಿನಗಳಲ್ಲಿ ನನ್ನಜ್ಜ ಸುಬ್ಬೇಗೌಡರಿಗೆ ನನ್ನ ಓರಗೆಯ ಮಕ್ಕಳು ‘ಜೈರುದ್ರ ಭೈರವ’ ಎಂದೇ ಬಿರುದು ನೀಡಿದ್ದರು. ಕಾರಣ, ಅವರು ಹೇಳಿಕೊಡುತ್ತಿದ್ದ ಜಾನಪದ ಸಂಗತಿಗಳು ಅಷ್ಟೊಂದು ಆಕರ್ಷಕವಾಗಿದ್ದವು. ಇಂತಹ ಜಾನಪದ ಮಾಹಿತಿದಾರ ಅಜ್ಜನ ಕಿರುಬೆರಳು ಹಿಡಿದು ದೇವರಮನೆಗೆ ಹೋಗುತ್ತಿದ್ದ ನನಗೆ ಅದೇನೋ ಒಂಥರ ಖುಷಿಯಾಗುತ್ತಿತ್ತು. ಬೆಟ್ಟದ ಕಣಿವೆಯ ಕಾಲುದಾರಿಯಲ್ಲಿ ಭೈರವನ ಕುರಿತಾದ ವರ್ಣನಾತೀತಾ ಕಥೆಗಳನ್ನು ಹೇಳುತ್ತ ಜೊತೆಗೆ ಸಾಗುತ್ತಿದ್ದ ಅಜ್ಜನ ಜೀವನಪ್ರೀತಿಯೂ ವರ್ಣರಂಜಿತವೇ. ಹೀಗಾಗಿ ನನಗೆ ನಂತರದ ದಿನಗಳಲ್ಲಿ ಸಂಶೋಧನಾಸಕ್ತಿಯಿಂದ ದೇವರಮನೆಗೆ ಏಕಾಂಗಿಯಾಗಿ ಹೋಗಿ ‘ಸಾವಿರ.. ಸಾವಿರ.. ಶರಣು’ ಎಂಬ ಸಂಶೋಧನಾಕೃತಿ ಬರೆಯಲು ಆಸಕ್ತಿ ಮೂಡಿತು.
–ಸಂಪತ್ ಬೆಟ್ಟಗೆರೆ, ಮೂಡಿಗೆರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !