ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರದಲ್ಲಿ ಶಕ್ತಿಪೇಯ ಸೆಕ್‌ಮಾಯ್

Last Updated 9 ಜುಲೈ 2022, 20:00 IST
ಅಕ್ಷರ ಗಾತ್ರ

ಮಣಿಪುರದ ಸೆಕ್‍ಮಾಯ್ ಪ್ರಾಂತ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಯಾರಾಗುವುದರಿಂದ ಸೆಕ್‍ಮಾಯ್ ಎಂದೇ ಜನಪ್ರಿಯವಾಗಿದೆ. ಇದು ಜನರು ತಮ್ಮ ದೈನಂದಿನ ಜೀವನದಲ್ಲಿ ಮತ್ತು ಮಾರಾಟಕ್ಕೆ ಬಳಸುವ ಮದ್ಯ.

ನಸುಕಿನ ನಾಲ್ಕು ಗಂಟೆಗೆಲ್ಲ ಬೆಳ್ಳಂಬೆಳಗು! ಹಾಸಿಗೆಯಲ್ಲಿ ಮಲಗಿ ಮುಸುಕು ಎಷ್ಟೇ ಗಟ್ಟಿಯಾಗಿ ಹೊದ್ದರೂ ಹಟ ಬಿಡದ ಸೂರ್ಯ ಕಿಟಕಿಯಿಂದಲೇ ಚುಚ್ಚತೊಡಗಿದ್ದ. ಇದೆಂಥ ಮಣಿಪುರ ಎಂದು ಗೊಣಗುತ್ತಲೇ ನಮ್ಮ ಪ್ರವಾಸ, ರಾಜಧಾನಿ ಇಂಫಾಲದಿಂದಲೇ ಆರಂಭವಾಗಿತ್ತು. ಇದೇ ಸೂರ್ಯ, ಸಂಜೆ ನಾಲ್ಕಕ್ಕೆಲ್ಲಾ ಕರಾರುವಾಕ್ಕಾಗಿ ತನ್ನ ಪಾಳಿ ಮುಗಿಸುತ್ತಿದ್ದ. ಆನಂತರ ಬಹುಪಾಲು ಜನಜೀವನ ಸ್ತಬ್ಧ! ಹಾಗಾಗಿ ನಾವೂ ಬೇಗನೇ ಎದ್ದು ಆದಷ್ಟೂ ತಿರುಗುವ ಪ್ರಯತ್ನ ನಡೆಸಿದ್ದೆವು.

ಜತೆಯಲ್ಲಿದ್ದ ಗೆಳತಿ, ಬಹುಶಃ ಇಲ್ಲಿಯ ಜನ ಬೇಗ ಮನೆಗೆ ಹೋಗಿ ಎಣ್ಣೆ ಹಾಕಿ ಮಲಗುತ್ತಾರೇನೋ ಎಂದು ತಮಾಷೆ ಮಾಡಿದಳು. ನಮ್ಮ ಗೈಡ್ ‘ಮಣಿಪುರ ಡ್ರೈ ಸ್ಟೇಟ್; ಆದರೆ ಹತ್ತಿರದ ಕೆಲವು ಸಾಂಪ್ರದಾಯಿಕ ಪುಟ್ಟ ಹಳ್ಳಿಗಳಲ್ಲಿ ಲೋಕಲ್ ಶರಾಬು, ಅದೂ ಮಹಿಳೆಯರೇ ಮಾಡುವಂಥದ್ದು, ಸಿಗುತ್ತದೆ’ ಎಂಬ ವಿವರಣೆ ಕೊಟ್ಟ. ಕಾಫಿಕುಡುಕರಾದ ನಮಗೆ ಶರಾಬ್ ಕುಡಿಯಲು ಬೇಕಿರಲಿಲ್ಲ. ಆದರೆ, ಇಲ್ಲಿನ ಸಾಂಪ್ರದಾಯಿಕ ಹಳ್ಳಿ ಮತ್ತು ಮಹಿಳೆಯರೇ ಮಾಡುವ ಶರಾಬು ನೋಡುವ ಉಮೇದಿಗೆ ಬಿದ್ದು ಹೊರಟೇ ಬಿಟ್ಟೆವು.

ಇಂಫಾಲದಿಂದ ಪೂರ್ವಕ್ಕೆ ಕೇವಲ ಇಪ್ಪತ್ತೈದು ಕಿ.ಮೀ. ದೂರದಲ್ಲಿರುವ ಆಂಡ್ರೊ ಹೆಸರಿನ ಈ ಹಳ್ಳಿ ‘ಪರಿಶಿಷ್ಟ ಜಾತಿಗಳ ಜನರ ಸಾಂಪ್ರದಾಯಿಕ ಹಳ್ಳಿ’ ಎಂದು ಗುರುತಿಸಲ್ಪಟ್ಟಿದೆ. ಹೋಗುವ ದಾರಿ ಕಿರಿದು, ವಾಹನ ದಟ್ಟಣೆಯೂ ಹೆಚ್ಚು. ಹೀಗಾಗಿ ಮುಕ್ಕಾಲು ತಾಸಿನ ಪಯಣ. ನೊಂಗ್‌ ಮೈಚಿಂಗ್ ಪರ್ವತಶ್ರೇಣಿಯ ತಪ್ಪಲಲ್ಲಿರುವ ಈ ಹಳ್ಳಿಯ ಹೆಸರು ಹಾಂಡ್ರೊ ಎಂಬ ಪದದಿಂದ ಬಂದಿದೆ; ಅಂದರೆ ಹಿಂದಿರುಗಿದ ಹಳ್ಳಿಯ ಜನ ಎಂದರ್ಥ. ಇಲ್ಲಿರುವ ಜನ ಲೋಯಿಸ್ ಎಂಬ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು ಮಣಿಪುರದ ಮೂಲನಿವಾಸಿಗಳು ಎನ್ನಲಾಗಿದೆ. ಲೋಯಿಸ್ ಎಂದರೆ ಅಧೀನರು ಎಂದರ್ಥ. ಬಹಳ ಹಿಂದೆ ಇಲ್ಲಿನ ಸ್ಥಳೀಯ ದೊರೆ ಇವರನ್ನು ಹೊರಗೆ ಹಾಕಿದ್ದ. ಅದೆಷ್ಟೋ ಶತಮಾನಗಳ ನಂತರ ಮರಳಿ ತಮ್ಮ ಮೂಲಸ್ಥಾನಕ್ಕೆ ಮರಳಿದ ಕಾರಣ ಈ ಹಳ್ಳಿಗೆ ಅದೇ ಹೆಸರು. ಆಂಡ್ರೊ ಭೇಟಿ, ನಿಜಕ್ಕೂ ಪ್ರಕೃತಿ –ಇತಿಹಾಸ-ಕರಕುಶಲ ಕಲೆಯ ಆಸಕ್ತರು ಮತ್ತು ಪಾನಪ್ರಿಯರಿಗೆ ಅವಿಸ್ಮರಣೀಯ ಅನುಭವವೇ ಸರಿ!

ಇಲ್ಲಿರುವ ಮುಟ್ವಾ ಮ್ಯೂಸಿಯಂ ವಿಶಿಷ್ಟವಾಗಿದೆ. ಮ್ಯೂಸಿಯಂ ಎಂದರೆ ಒಂದು ಕಟ್ಟಡವಲ್ಲ; ಬದಲಿಗೆ ಸಾಂಪ್ರದಾಯಿಕ ಹಲವು ಬಿದಿರು-ಕಟ್ಟಿಗೆಯ ಮನೆಗಳು! ಮಣಿಪುರಿಯ ವಿವಿಧ ಬುಡಕಟ್ಟು ಜನಾಂಗಗಳಾದ ಮೈತೈ, ಕುಕಿ, ಟಂಗಕೈ –ಜನ ಕಟ್ಟುವ ಸಾಂಪ್ರದಾಯಿಕ ಶೈಲಿಯ ಮನೆಗಳ ಪ್ರತಿಕೃತಿಗಳು ಇಲ್ಲಿವೆ. ಪ್ರತೀ ಮನೆಯ ಒಳಗೆ ಆ ಜನಾಂಗದ ಪರಂಪರೆ- ಜನಜೀವನ ಬಿಂಬಿಸುವ ವಸ್ತುಗಳಿವೆ. ಗೊಂಬೆಮನೆ ಇಲ್ಲಿನ ಮತ್ತೊಂದು ಆಕರ್ಷಣೆ. ಒಳಗೆ ಇಪ್ಪತ್ತೊಂಬತ್ತು ಗೊಂಬೆಗಳಿದ್ದು ಅವು ಮಣಿಪುರದ ಮುಖ್ಯ ಬುಡಕಟ್ಟು ಜನಾಂಗ ಮತ್ತು ಅವುಗಳ ಸಂಕರವನ್ನು ಪ್ರತಿನಿಧಿಸುತ್ತವೆ.

ಚಾರಾಯ್ ತಬಾ

ಹಳ್ಳಿಯನ್ನು ಪ್ರವೇಶಿಸುವಾಗಲೇ ಮನೆಗಳ ಮುಂದೆ ಮಣ್ಣಿನ ಪಾತ್ರೆಗಳನ್ನು ಬಿಸಿಲಲ್ಲಿ ಹರವಿರುವುದನ್ನು ಕಾಣಬಹುದು. ಈ ಹಳ್ಳಿಯ ಪ್ರಮುಖ ಉದ್ಯೋಗವಿದು. ಚಾರಾಯ್ ತಬಾ ಎಂದು ಕರೆಯಲಾಗುವ ಈ ಕರಕುಶಲ ಕಲೆಯನ್ನು ಮದುವೆಯಾದ ಮಹಿಳೆಯರು ಮಾತ್ರ ಮಾಡುವುದಕ್ಕೆ ಅರ್ಹರು. ‘ಥೌ ಚಂಬಾ’ ಎಂಬ ವಿಶೇಷ ಆಚರಣೆ ನಂತರ ವಿವಾಹಿತ ಮಹಿಳೆಯರು ಈ ಮಣ್ಣಿನ ಪಾತ್ರಗಳನ್ನು ತಯಾರಿಸಲು ಅನುಮತಿ ಸಿಗುತ್ತದೆ. ಆಶ್ಚರ್ಯವೆಂದರೆ ತಾಯಿಯಿಂದ ಮಗಳಿಗಲ್ಲ, ಅತ್ತೆಯಿಂದ ಸೊಸೆಗೆ ಈ ಕಲೆಯನ್ನು ಕಲಿಸಲಾಗುತ್ತದೆ!

ವಿಶಿಷ್ಟ ವಿನ್ಯಾಸದ ಮಣ್ಣಿನ ಪಾತ್ರೆಗಳ ತಯಾರಿಕೆಯಲ್ಲಿ ಇಲ್ಲಿನ ಜನ ಸಿದ್ಧಹಸ್ತರು. ಸಾಧಾರಣವಾಗಿ ಮಣ್ಣಿನಿಂದ ಮಡಕೆ ತಯಾರಿಸುವಾಗ ಮಣ್ಣಿಗೆ ರೂಪ ಕೊಡಲು ಚಕ್ರವನ್ನು ಬಳಸಲಾಗುತ್ತದೆ. ಇಲ್ಲಿ
ಹಾಗಲ್ಲ, ಸಮತಟ್ಟಾದ ಮರದ ಕೋಲನ್ನು (ಬ್ಯಾಟ್) ಉಪಯೋಗಿಸುತ್ತಾರೆ. ಮೆದು ಮಣ್ಣಿನ ಮೇಲೆ ಪಟಪಟ ಬಡಿಯುತ್ತಾ ಸರಸರನೇ ಬೇಕಾದ ಆಕಾರಕ್ಕೆ ತರುವ ರೀತಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಹೀಗೆ ತಯಾರಿಸಿ ಬಿಸಿಲಲ್ಲಿ ನಾಲ್ಕು ದಿನ ಒಣಗಿಸಿದ ವಸ್ತುಗಳಿಗೆ ಹೆಚ್ಚಿನ ಹೊಳಪು ನೀಡಲು ಅಲ್ಲೇ ಸಿಗುವ ಮರದ ತೊಗಟೆಯ ನೈಸರ್ಗಿಕ ಬಣ್ಣ ಲೇಪಿಸುತ್ತಾರೆ. ಈ ಮಣ್ಣಿನ ಪಾತ್ರೆ-ಮಡಕೆಗಳನ್ನು ಗಿಡಗಳ ಬೀಜ ಸಂರಕ್ಷಿಸಿ ಇಡಲು, ಕುಡಿಯುವ ನೀರು- ಅಡುಗೆ ಮತ್ತು ಸ್ಥಳೀಯ ಅಕ್ಕಿಯ ವೈನ್ ಇವುಗಳನ್ನು ಸಂಗ್ರಹಿಸಲು ಉಪಯೋಗಿಸಲಾಗುತ್ತದೆ.

ಮಣಿಪುರದಲ್ಲಿ ಅಧಿಕೃತವಾಗಿ ಪರಿಶಿಷ್ಟ ಜಾತಿಗಳ ಹಳ್ಳಿಗಳು ಎಂದು ಎಂಟು ಗ್ರಾಮಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಈ ಆಂಡ್ರೊ ಮುಖ್ಯವಾದದ್ದು. ಅಕ್ಕಿ ಇಲ್ಲಿನ ಪ್ರಮುಖ ಕೃಷಿ ಉತ್ಪನ್ನ. ಹೀಗಾಗಿ ಅಕ್ಕಿಯನ್ನೇ ಬಳಸಿ ತಯಾರಿಸಲಾಗುವ ಮದ್ಯ (ಮಣಿಪುರಿ ಭಾಷೆಯಲ್ಲಿ ಯು) ಸಾಮಾಜಿಕ- ಧಾರ್ಮಿಕ-ಸಾಂಸ್ಕೃತಿಕ ಆಚರಣೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಮದ್ಯಗಳಲ್ಲಿ ಮೂರು ವಿಧ. ಪುಕ್ಯು ಮತ್ತು ವೈಯು ಎಂಬ ಪೇಯಗಳನ್ನು ಧಾರ್ಮಿಕ ಆಚರಣೆಗಳಲ್ಲಿ ಉಪಯೋಗಿಸಲು, ಅಂದರೆ ಸ್ವಂತ ಬಳಕೆಗಾಗಿ ಮಾತ್ರ, ತಯಾರಿಸಲಾಗುತ್ತದೆ. ಮೂರನೆಯದ್ದು ಮದ್ಯಸಾರದ ಅಂಶ ಹೆಚ್ಚಿರುವ ಲೆಯು. ಮಣಿಪುರದ ಸೆಕ್‍ಮಾಯ್ ಪ್ರಾಂತ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಯಾರಾಗುವುದರಿಂದ ಸೆಕ್‍ಮಾಯ್ ಎಂದೇ ಜನಪ್ರಿಯವಾಗಿದೆ. ಇದು ಜನರು ತಮ್ಮ ದೈನಂದಿನ ಜೀವನದಲ್ಲಿ ಮತ್ತು ಮಾರಾಟಕ್ಕೆ ಬಳಸುವ ಮದ್ಯ.

ಸೆಕ್‍ಮಾಯ್ ತಯಾರಿಸಲು ಸ್ಥಳೀಯವಾಗಿ ಬೆಳೆದ ಅಂಟು ಅಕ್ಕಿಯೇ ಅತ್ಯುತ್ತಮ. ಯಾವುದೇ ರೀತಿಯ ಪಾಲಿಶ್ ಮಾಡದ ಅಕ್ಕಿಯಲ್ಲಿ ವಿಟಮಿನ್, ಪ್ರೋಟಿನ್ ಅಂಶಗಳಿದ್ದು, ಅದರಿಂದ ತಯಾರಾದ ಸೆಕ್‍ಮಾಯ್ ಆರೋಗ್ಯಕ್ಕೂ ಒಳ್ಳೆಯದು ಎಂಬ
ನಂಬಿಕೆ ಜನರದ್ದು. ಅಕ್ಕಿಯೊಂದಿಗೆ ಔಷಧೀಯ ಗುಣಗಳಿರುವ ಬಳ್ಳಿ ಯಾಂಗ್ಲಿಯನ್ನು ಸೇರಿಸಲಾಗುತ್ತದೆ.

ಮೊದಲು ಯಾಂಗ್ಲಿಯ ದಂಟುಗಳನ್ನು ಕೆಲದಿನಗಳ ಕಾಲ ನೀರಿನಲ್ಲಿ ಮುಳುಗಿಸಿ ಇಡಲಾಗುತ್ತದೆ. ಈ ನೀರನ್ನು ಅಂಟು ಅಕ್ಕಿಯೊಂದಿಗೆ ಅರೆದು ಹಮೈ ಎಂಬ ಮಿಶ್ರಣ (ಯೀಸ್ಟ್) ತಯಾರು ಮಾಡಿ ಅದನ್ನು ರೊಟ್ಟಿಯಂತೆ ತಟ್ಟುತ್ತಾರೆ. ಈ ಹಮೈ ಉತ್ತಮ ಗುಣಮಟ್ಟದಾಗಿದ್ದರೆ ಮದ್ಯದ ತೀಕ್ಷ್ಣತೆ ಹೆಚ್ಚುತ್ತದೆ. ನಂತರ ಬೇಯಿಸಿದ ಅಕ್ಕಿ ಮತ್ತು ಈ ರೊಟ್ಟಿ ಸೇರಿಸಿ ಅದನ್ನು ಐದಾರು ದಿನಗಳ ಕಾಲ ಹುದುಗು ಬರಿಸಲಾಗುತ್ತದೆ. ಇದರಿಂದ ಬಟ್ಟಿ ಇಳಿಸಿದ ದ್ರವವೇ ಸೆಕ್‍ಮಾಯ್! ಇದರಲ್ಲಿ ಮದ್ಯಸಾರದ ಅಂಶ ಶೇಕಡಾ 5-15 ರಷ್ಟಿದ್ದು ವೊಡ್ಕಾ ಮತ್ತು ಜಪಾನಿನ ಜನಪ್ರಿಯ ಮದ್ಯ ಸಾಕೆಗೆ ತುಲನೆ ಮಾಡಲಾಗುತ್ತದೆ.

ಸೆಕ್‍ಮಾಯ್ ತಯಾರಿಸುವ ವ್ಯಕ್ತಿ, ಮೊದಲು ಸ್ನಾನವನ್ನು ಮಾಡಿ ಶುದ್ಧವಾಗಬೇಕು ಮತ್ತು ಹಣ್ಣನ್ನು ಮುಟ್ಟುವಂತಿಲ್ಲ. ಹುದುಗು ಬರಿಸಲು, ನೆನೆಸಲು, ಬಟ್ಟಿ ಇಳಿಸಲು ನಿರ್ದಿಷ್ಟವಾದ ಬಿದಿರಿನ ಬುಟ್ಟಿ, ಮಣ್ಣಿನ ಗಡಿಗೆ, ಯುಕಾಕ್ ಮತ್ತು ಯುಮಾಯ್ ಎಂಬ ಲೋಹದ ಪಾತ್ರೆಗಳನ್ನೇ ಬಳಸುತ್ತಾರೆ. ಅನುಭವಿಗಳ ಪ್ರಕಾರ ಸೆಕ್‍ಮಾಯ್ ರುಚಿ ಮತ್ತು ಪರಿಶುದ್ಧ ಅಕ್ಕಿಯ ತಳಿ, ಹಮೈ, ಬಳಸುವ ಪಾತ್ರೆಗಳು ಮತ್ತು ಮಾಡುವ ವ್ಯಕ್ತಿ ಇವೆಲ್ಲದರ ಮೇಲೆ ನಿರ್ಣಯವಾಗುತ್ತದೆ. ಮದ್ಯದ ರುಚಿ ಹಾಳಾಗದಿರಲು ಈ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ! ಸೆಕ್‍ಮಾಯ್‍ನ ಬೆಲೆ ಲೀಟರ್‌ಗೆ ಅರವತ್ತರಿಂದ ಆರಂಭವಾಗಿ ಗುಣಮಟ್ಟದ ಮೇಲೆ ಹೆಚ್ಚುತ್ತಾ ಹೋಗುತ್ತದೆ.

ಆಶ್ಚರ್ಯವೆಂದರೆ ಈ ಕುಂಬಾರಿಕೆ ಮತ್ತು ಮದ್ಯ ತಯಾರಿಕೆಯಲ್ಲಿ ಹೆಚ್ಚಿನವರು ವಿವಾಹಿತ ಮಹಿಳೆಯರು. ಪುರುಷರು ಕೃಷಿಯಲ್ಲಿ ನಿರತರಾಗಿದ್ದರೆ ಮಣ್ಣಿನ ಪಾತ್ರೆ, ಕರಕುಶಲ ವಸ್ತುಗಳು ಮತ್ತು ಶರಾಬು ತಯಾರಿಕೆ ಮಹಿಳೆಯರ ಪ್ರಮುಖ ಉದ್ಯೋಗ. ಮಣಿಪುರದಲ್ಲಿ ಮಹಿಳೆಯರದ್ದೇ ಮೇಲುಗೈ ಎಂದು ಅಚ್ಚರಿಯಿಂದ ನುಡಿದಾಗ ಅಲ್ಲಿದ್ದ ಮಹಿಳೆ ಹೊಟ್ಟೆ ತೋರಿಸಿ ‘ಮೇಲುಗೈ ಅಂತಲ್ಲ; ಈ ಮಡಕೆ ತುಂಬಬೇಕಲ್ಲಾ’ ಎಂದಳು!

ಕುತೂಹಲಕ್ಕೆ ಮಹಿಳೆಯರೂ ಕುಡಿಯುತ್ತಾರೆಯೇ ಎಂದು ಪ್ರಶ್ನಿಸಿದ್ದಕ್ಕೆ ‘ಎಲ್ಲರ ಎದುರಿಗೆ ಅಲ್ಲ, ಮನೆಗಳಲ್ಲಿ ಮಾತ್ರ. ಅದೂ ಅಲ್ಲದೇ ಮುಟ್ಟಿನ ನೋವು, ಜ್ವರ, ಬಾಣಂತಿ ಜಡ್ಡು, ನೆಗಡಿ-ಕೆಮ್ಮು, ಮೈಕೈ ನೋವು, ಹಸಿವು ಇವುಗಳಿಗೆ ಸೆಕ್‍ಮಾಯ್ ಔಷಧಿ ಇದ್ದಂತೆ. ಹಾಗಾಗಿಕುಡಿಯುತ್ತೇವೆ’ ಎಂಬ ಉತ್ತರ ಸಿಕ್ಕಿತು. ತಮ್ಮದೇ ಆದ
ಔಷಧ ಪದ್ಧತಿಯನ್ನು ಹೊಂದಿರುವ ಲೋಯಿಸ್ ಪಂಗಡದವರಲ್ಲಿ ಸೆಕ್‍ಮಾಯ್ ಶಕ್ತಿಪೇಯವಾಗಿ ಬಳಕೆಯಾಗುತ್ತದೆ. ಆದರೆ ಪೌಷ್ಟಿಕ ಆಹಾರ -ಸರಿಯಾದ ಚಿಕಿತ್ಸೆ ಸಿಗದೇ ರಕ್ತ ಹೀನತೆಯಿಂದ ನರಳುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚು.

ಮದ್ಯದ ಅಮಲಿಗೆ ಸಿಕ್ಕ ಯುವಜನರೂ ಹೆಚ್ಚುತ್ತಿದ್ದಾರೆ. ಮದ್ಯ ಸೇವನೆಗೆ ಸಾಮಾಜಿಕವಾಗಿಯೇ ಸಿಕ್ಕ ಅನುಮತಿ, ಮನ್ನಣೆಯಿಂದಾಗಿ ಮದ್ಯ ಸೇವಿಸುವ ಯುವಕರು ಕ್ರಮೇಣ ನಿಯಂತ್ರಣ ಮೀರಿ ದಾಸಾನುದಾಸ
ರಾಗಿದ್ದಾರೆ. ತಮ್ಮ ಪರಂಪರೆ-ಪದ್ಧತಿ ಮುಂದುವರಿಯಬೇಕು ಎನ್ನುವ ಗ್ರಾಮದ ಹಿರಿಯರಿಗೆ ಇದು ಕಳವಳವನ್ನುಂಟು ಮಾಡುತ್ತಿದೆ. ಸೆಕ್‍ಮಾಯ್‍ಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಸಿಗಬೇಕು. ತಾವು ಆರ್ಥಿಕ-ಸಾಮಾಜಿಕ ಮನ್ನಣೆ ಪಡೆಯಬೇಕು. ಆದರೆ ಸೆಕ್‌ಮಾಯ್ ಬಳಕೆ ನಿಯಂತ್ರಣದಲ್ಲಿರಬೇಕು ಎಂಬುದು ಅವರ ಆಶಯ.

ಬೆಟ್ಟಗುಡ್ಡಗಳ ತಪ್ಪಲಲ್ಲಿ ಅಡಗಿರುವ ಈ ಹಳ್ಳಿಯಿಂದ ಮರಳಿ ಬರುವಾಗ ಮಣಿಪುರದ ಮೂಲನಿವಾಸಿಗಳಾಗಿ ತಮ್ಮ ಸ್ಥಾನಮಾನಕ್ಕಾಗಿ ಹೆಣಗಾಡುತ್ತಿರುವ ಇಲ್ಲಿಯ ಜನರಿಗೆ ಸೆಕ್‍ಮಾಯ್ ನಿಜಕ್ಕೂ ಶಕ್ತಿಪೇಯವಾದೀತೇ ಎಂಬ ಪ್ರಶ್ನೆ ಥಟ್ಟನೆ ಮೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT