ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಾರದ ವಯನಾಡು..

ಹೊಸವರ್ಷಕ್ಕೆ ಪ್ರವಾಸಿಗರನ್ನು ಕರೆಯುತ್ತಿರುವ ಹಸಿರ ಬೀಡು
Last Updated 1 ಜನವರಿ 2020, 19:30 IST
ಅಕ್ಷರ ಗಾತ್ರ

ವಯನಾಡ್‌, ದಕ್ಷಿಣ ಭಾರತದ ಹಸಿರು ಸ್ವರ್ಗ. ಪಶ್ಚಿಮಘಟ್ಟದ ಪರ್ವತಗಳ ನಡುವಿರುವ ತಾಣ. ಕೊಡಗು, ಮೈಸೂರಿನಿಂದ ಬಹಳ ಹತ್ತಿರವಿರುವ ಪ್ರದೇಶ. ಇಲ್ಲಿನ ಇತಿಹಾಸ, ಸಂಸ್ಕೃತಿ, ಕಾಡು, ಆಹಾರ ಪದ್ಧತಿ ಎಲ್ಲವೂ ವಿಭಿನ್ನ, ವಿಶಿಷ್ಟ. ಈ ನಗರದ ಸುತ್ತ ಹತ್ತಾರು ಪ್ರವಾಸಿ ತಾಣಗಳಿವೆ. ಅದರಲ್ಲಿ ಸರೋವರ, ಜಲಪಾತಗಳು, ಪಕ್ಷಿಧಾಮಗಳೂ ಸೇರಿವೆ.

ಚಳಿಗಾಲದಲ್ಲಿ ಇಲ್ಲಿ ಹಸಿರು ಉಕ್ಕೇರುತ್ತದೆ. ಇಡೀ ವಯನಾಡಿನ ಬೆಟ್ಟಗಳ ಸಾಲು ಹಸಿರು ಹೊದ್ದು ಮಲಗಿರುತ್ತದೆ. ಸರೋವರಗಳು ನೀಲಾಕಾಶದ ಸ್ವಚ್ಛ ಪ್ರತಿಬಿಂಬವನ್ನು ಪ್ರದರ್ಶಿಸುತ್ತಿರುತ್ತವೆ. ನಡುಗುವ ಚಳಿಯಲ್ಲೂ ಮೈಯೊಡ್ಡುವಂತೆ ಜಲಪಾತಗಳು ಆಹ್ವಾನಿಸುತ್ತವೆ. ಹೊಸ ವರ್ಷದ ಆರಂಭದಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ವಯನಾಡಿನ ಸುತ್ತ, ಭಾರತದ ನಕ್ಷೆ ತೋರಿಸುವ ಪೊಕೊಡೆ ಸರೋವರ, ಮೂರು ಹಂತಗಳಲ್ಲಿ ಧುಮ್ಮಿಕ್ಕುವ ಸೂಚಿಪರಾ, ಮೀನುಮಟ್ಟಿ ಜಲಪಾತದಂತಹ ತಾಣಗಳಿವೆ.

ಪೊಕೊಡೆ ಸರೋವರ

ಪೂಕೊಡೆ, ಕಲ್ಪೆಟ್ಟದಿಂದ ಹದಿನೈದು ಕಿ.ಮೀ ದೂರದಲ್ಲಿದೆ. ಪಶ್ಚಿಮಘಟ್ಟಗಳ ನಿತ್ಯಹರಿದ್ವರ್ಣ ಕಾನನಕ್ಕೆ ಹೊಂದಿಕೊಂಡಿರುವ ಈ ಸರೋವರದ ವಿಸ್ತೀರ್ಣ 13 ಎಕರೆ.

ಹಚ್ಚ ಹಸಿರು ಕಾನನದಿಂದ ಸುತ್ತುವರಿದಿರುವ ಪ್ರಶಾಂತ ವಾತಾವರಣದ ನಡುವಿರುವ ಸರೋವರ, ಛಾಯಾಗ್ರಾಹಕರಿಗೆ, ಪರಿಸರ ಪ್ರಿಯರಿಗೆ ಸ್ವರ್ಗಸದೃಶ ತಾಣ. ಕಬಿನಿ ಮತ್ತು ಪಣಮಾರಮ್ ನದಿಗಳ ನೀರು ಈ ಸರೋವರಕ್ಕೆ ಸೇರುತ್ತದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮಾರಿಕಣಿವೆ(ವಾಣಿವಿಲಾಸ ಸಾಗರ)ಜಲಾಶಯದಲ್ಲಿ ‘ಭಾರತದ ನಕ್ಷೆ’ ಕಾಣಿಸುತ್ತದೆ. ಅದೇ ರೀತಿಯಲ್ಲಿ ಈ ಪೊಕೊಡೆ ಸರೋವರದಲ್ಲಿ ಭಾರತದ ಭೂಪಟದ ಆಕಾರವನ್ನು ನೋಡಬಹುದು. ಸರೋವರದ ತುಂಬಾ ನೀಲಿ ತಾವರೆ ಹೂವುಗಳು. ರಾಶಿ ರಾಶಿ ಮೀನುಗಳಿವೆ. ಲಿಲ್ಲಿ ಹೂವುಗಳಂತೂ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವಂತೆ ಬೆಳೆದು ನಿಂತಿರುತ್ತವೆ. ‍ಸುತ್ತಲಿನ ಅರಣ್ಯದಲ್ಲಿ ವನ್ಯಜೀವಿಗಳಿವೆ. ವೈವಿಧ್ಯಮಯ ಹಕ್ಕಿಗಳಿವೆ.

ಸರೋವರದಲ್ಲಿ ತೇಲಾಡಲು ಬೋಟಿಂಗ್‌ ವ್ಯವಸ್ಥೆ ಇದೆ. ಪ್ರವಾಸಿಗರೇ ಚಾಲನೆ ಮಾಡಿಕೊಂಡು ಹೋಗಲು ಪೆಡಲ್‌ ಬೋಟ್‌ಗಳಿವೆ. ದೋಣಿಯಲ್ಲಿ ತೇಲುತ್ತಾ ಸರೋವರದ ನಡುವೆ ಹೋಗಿ ನಿಲ್ಲುವುದೇ ಒಂದು ದಿವ್ಯಾನುಭವ.

ಮಕ್ಕಳಿಗೆ ಆಟವಾಡಲು ಉದ್ಯಾನವಿದೆ. ವೈವಿಧ್ಯಮಯ ಮೀನುಗಳನ್ನು ಪ್ರದರ್ಶಿಸುವ ಮತ್ಸ್ಯಕೇಂದ್ರವಿದೆ. ಜತೆಗೆ, ಸಂಬಾರ ಪದಾರ್ಥಗಳು, ಬಿದಿರು ಮತ್ತು ತೆಂಗಿನನಾರಿನಿಂದ ಮಾಡಿದ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಕೇಂದ್ರಗಳಿವೆ. ಸರೋರವರದಲ್ಲಿ ಅಡ್ಡಾಡಿ ಬಂದವರು, ಇಲ್ಲಿ ಶಾಪಿಂಗ್‌ ಮಾಡಬಹುದು.

ಪೊಕೊಡೆ ಸರೋವರಕ್ಕೆ ಹೋಗವವರು, ಬೆಳಿಗ್ಗೆಯೇ ಆ ಸ್ಥಳವನ್ನು ತಲುಪಿ, ಸಂಜೆ ಹೊತ್ತಿಗೆ ವಾಪಸಾಗುವ ಹಾಗೆ ಟೂರ್ ಪ್ಲಾನ್ ಮಾಡಬೇಕು. ಈ ಕೇಂದ್ರ ಬೆಳಿಗ್ಗೆ 8 ರಿಂದ ಸಂಜೆ 5ರವರೆಗೆ ತೆರೆದಿರುತ್ತದೆ. ಈ ತಾಣಕ್ಕೆ ಭೇಟಿ ನೀಡಲು ಪ್ರವೇಶ ಶುಲ್ಕವಿದೆ. ದೊಡ್ಡವರಿಗೆ ₹10, ಮಕ್ಕಳಿಗೆ ₹5. ಪೆಡಲಿಂಗ್‌ ಬೋಟ್‌ ಸವಾರಿ ಮಾಡಲು (ಇಬ್ಬರು) ₹30, ಐವರಿಗೆ ₹50.

ಸೂಚಿಪರಾ ಜಲಪಾತ

ವಯನಾಡಿಗೆ ಹೋದಾಗ ನೋಡಲೇಬೇಕಾದ ಮತ್ತೊಂದು ತಾಣ ವೆಲ್ಲರಿಮಾಲಾ ಸಮೀಪದಲ್ಲಿರುವ ಸೂಚಿಪರಾ ಜಲಪಾತ. ದಟ್ಟ ಕಾಡಿನ ನಡುವೆ ಮೂರು ಹಂತಗಳಲ್ಲಿ ಧುಮ್ಮಿಕ್ಕುವ ಈ ಜಲಧಾರೆಯನ್ನು ‘ಸೆಂಟಿನೆಲ್ ರಾಕ್ ಜಲಪಾತ’ ಎಂದು ಕರೆಯುತ್ತಾರೆ. ವಯನಾಡಿನ ಮೆಪ್ಪಾಡಿಯಿಂದ 20 ನಿಮಿಷಗಳ ದಾರಿ. ಚಾರಣಕ್ಕೆ ಹಾಗೂ ಪರ್ವತಾರೋಹಣಕ್ಕೆ ಸೂಕ್ತ ತಾಣವಾಗಿದೆ.

ಮೀನುಮುಟ್ಟಿ ಜಲಪಾತ

ಇದು ಕಲ್ಪೆಟ್ಟಾದಿಂದ ಸುಮಾರು 29 ಕಿಲೋಮೀಟರ್ ದೂರದಲ್ಲಿದೆ.‌ ಕೇರಳದ ಪ್ರಸಿದ್ಧ ಜಲಪಾತ. ಮೂರು ಹಂತದ ಜಲಪಾತವು ಭೇಟಿ ನೀಡುವ ಆಶ್ಚರ್ಯಕರ ದೃಶ್ಯವಾಗಿದೆ. ಇಲ್ಲಿ ನೀರು 300 ಮೀಟರ್ ಎತ್ತರದಿಂದ ಕೆಳಗೆ ಧುಮ್ಮಿಕ್ಕುತ್ತದೆ. ವಯನಾಡ್ - ಊಟಿ ರಸ್ತೆಯಿಂದ ದಟ್ಟವಾದ ಕಾಡುಗಳ ಮೂಲಕ ಸುಮಾರು 2 ಕಿಲೋಮೀಟರ್ ಚಾರಣ ಮಾಡಿದರೆ, ಜಲಪಾತ ತಲುಪಬಹುದು.

ಇನ್ನಷ್ಟು ತಾಣಗಳು..

ಚೆಂಬರ ಶಿಖರ, ಬನಸುರ ಸಾಗ, ಕುರುವಾ ದ್ವೀಪ, ಎಡಕ್ಕಲ್ ಗುಹೆಗಳು, ತೋಲ್ಪೆಟ್ಟಿ ವನ್ಯಜೀವಿ ಅಭಯಾರಣ್ಯ, ಸುಲ್ತಾನ್ ಬತ್ತೇರಿಯಲ್ಲಿರುವ ಜೈನ ದೇವಾಲಯ, ಪಕ್ಷಿಪಥಲಂ ಪಕ್ಷಿಧಾಮ ನೋಡಬಹುದು.

ತಲುಪುವುದು ಹೇಗೆ?

ಕೋಯಿಕ್ಕೋಡ್‌ನಲ್ಲಿರುವ ಕರಿಪುರ ವಿಮಾನ ನಿಲ್ದಾಣ, ವಯನಾಡ್ ಸಮೀಪವಿರುವ ಏಕೈಕ ವಿಮಾನ ನಿಲ್ದಾಣ. ಇದು ನಗರದಿಂದ 100 ಕಿ.ಮೀ ದೂರದಲ್ಲಿದೆ. ಅಲ್ಲಿಂದ ನೀವು ಬಸ್ ಅಥವಾ ಟ್ಯಾಕ್ಸಿ ಮೂಲಕ ವಯನಾಡ್‌ ತಲುಪಬಹುದು. ಕೋಯಿಕ್ಕೋಡ್‌ ಸಮೀಪದ ರೈಲು ನಿಲ್ದಾಣ. ಇದು ನಗರದಿಂದ 110 ಕಿ.ಮೀ ದೂರವಿದೆ.

ಬೆಂಗಳೂರು, ಚೆನ್ನೈ, ತಿರುವನಂತಪುರ, ಕೊಚ್ಚಿ ಸೇರಿದಂತೆ ದೇಶ ವಿವಿಧ ಭಾಗಗಳಿಂದ ನೇರ ರೈಲು ಸಂಪರ್ಕ ವ್ಯವಸ್ಥೆ ಇದೆ. ವಯನಾಡ್‌ ಸುತ್ತ ಸುತ್ತಾಡಲು ಕೇರಳ ಸಾರಿಗೆ ಬಸ್‌ಗಳ ಉತ್ತಮ ನೆಟ್‌ವರ್ಕ್‌ ಇದೆ. ವಯನಾಡ್ ಮತ್ತು ಬೆಂಗಳೂರು, ತಿರುವನಂತಪುರ, ಮಂಗಳೂರು ಮತ್ತು ಕೊಚ್ಚಿ ನಡುವೆ ಸೂಪರ್‌ಫಾಸ್ಟ್ ಬಸ್ಸುಗಳಿವೆ.

ಊಟ – ವಸತಿ

ವಯನಾಡ್‌ನಲ್ಲಿ ಉತ್ತಮ ಹೋಟೆಲ್‌ ರೆಸಾರ್ಟ್‌ಗಳಿವೆ. ಕಿಲಿಕೂಡು, ಮಲಬಾರ್ ಬಿರಿಯಾನಿ, ಚೆಮ್ಮೀನ್ ಉಂಡಾ ಪುಟ್ಟು, ಪುಟ್ಟು ಮತ್ತು ಬೀಫ್ ಫ್ರೈ, ಸತ್ಯ, ಚಟ್ಟಿ ಪತಿರಿ, ಮುತ್ತ ಮಾಲಾ.. ಇವೆಲ್ಲ ಇಲ್ಲಿ ಸಿಗುವ ವಿಶೇಷ ಖಾದ್ಯ. ಪ್ರವಾಸಿ ತಾಣಗಳ ಸುತ್ತಾಟದ ಜತೆಗೆ, ಮಾರ್ಕೆಟ್ ರಸ್ತೆ, ಈಶ್ವರನ್ ನನ್‌ಬೂದಿರಿ, ಫೋಕಸ್‌ಮಾಲ್‌ಗಳಲ್ಲಿ ಶಾಪಿಂಗ್ ಮಾಡಬಹುದು. ಸಂಬಾರ ಪದಾರ್ಥಗಳು, ಕಾಫಿ, ಚಹಾ, ಬಿದಿರಿನ ಲೇಖನಿಗಳು, ಸ್ಥಳೀಯ ಕರಕುಶಲ ವಸ್ತುಗಳು, ಗಿಡಮೂಲಿಕೆ ಸಸ್ಯಗಳನ್ನು ಖರೀದಿಸಬಹದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT