ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕ ಪಯಣ...ಆತ್ಮಾನುಸಂಧಾನ

Last Updated 9 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ನಿಮ್ಮ ಕನಸು ಏನಿದೆಯೋ ಆ ದಿಕ್ಕಿನಲ್ಲಿ ಸಾಗಿ. ನನ್ನ ಕನಸು ಇದ್ದಿದ್ದು; ಸಮುದ್ರಮಟ್ಟದಿಂದ ಅತಿ ಎತ್ತರದ 5,359 ಮೀಟರ್‌ ಎತ್ತರವಿರುವ ಲಡಾಕ್‌ನ ‘ಖರ್ದುಂಗ್ಲಾ ಪಾಸ್‌‘ ನ ಬೈಕ್‌ನಲ್ಲಿ ತಲುಪುವುದು. ಅದನ್ನು ನಾನು ಈ ವರ್ಷ ಆಗಸ್ಟ್‌ನಲ್ಲಿ ಈಡೇರಿಸಿಕೊಂಡಿದ್ದೇನೆ.ಕಡಿದಾದ ಹಾದಿಯಲ್ಲಿ ಬೈಕ್‌ ಏರಿ ಹೋಗುವ ಸುಖವಿದೆಯೆಲ್ಲ ಅದು ಅನನ್ಯ.

ನಿಮಗೆ ಗೊತ್ತಿರಲಿ ನನ್ನ ವಯಸ್ಸು ಬರೀ 54 ! ನನಗೆ ತಿಳಿದಿರುವಂತೆ, ಈವರೆಗೆ ಖರ್ದುಂಗ್ಲಾವನ್ನು 51 ಮತ್ತು 53 ವರ್ಷದ ಮಹಿಳೆಯರು ಬೈಕ್‌ನಲ್ಲಿ ತಲುಪಿದ್ದಾರೆ. ಬಹುಶಃ ಈ ವಯೋಮಾನದ ಮೊದಲ ಮಹಿಳಾ ಬೈಕ್ ರೈಡರ್‌ ನಾನೇ. ನನಗೆ ಬೈಕ್‌ ಹಾಗೂ ಕಾರುಗಳ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಈ ಆಸಕ್ತಿಯನ್ನು ಪೋಷಿಸಿದ್ದು ನನ್ನಿಬ್ಬರು ಮಕ್ಕಳೇ.

ನನ್ನೂರು ಕುಂದಾಪುರ. ಎಳವೆಯಿಂದಲೂ ನನಗೆ ಕ್ರೀಡೆಯಲ್ಲಿ ಅಪಾರ ಆಸಕ್ತಿ. ಕಾಲೇಜು ದಿನಗಳಲ್ಲಿ ವಾಲಿಬಾಲ್ ಆಟಗಾರ್ತಿಯಾಗಿ ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದೆ. 25 ವರ್ಷಗಳಿಂದೀಚೆಗೆ ಬದುಕು ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ, ವೃತ್ತಿಯಲ್ಲಿ ‘ಕಾರ್ಪೊರೇಟ್‌ ಟ್ರೇನರ್’.

ಪಯಣ ಆರಂಭವಾಗಿದ್ದು..

ಬೆಂಗಳೂರಿನಿಂದ ಲಡಾಕ್‌ಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದೆ. ಲಡಾಕ್‌ನಿಂದ ಖರ್ದುಂಗ್ಲಾಗೆ ಸುಮಾರು 900 ಕಿ.ಮೀ ಅನ್ನು ಬೈಕ್‌ನಲ್ಲಿ ಏಳು ದಿನದಲ್ಲಿ ತಲುಪಿದ್ದೆ. ಬಾಲ್ಯದಿಂದಲೂ ಏಕಾಂಗಿಯಾಗಿ ಬೈಕ್‌ ಪಯಣ ಮಾಡಬೇಕು ಎನ್ನುವ ಆಸೆಯಿತ್ತು. ಅದು ಈಡೇರಿದ್ದು ಮಾತ್ರ 54ನೇ ವಯಸ್ಸಿನಲ್ಲಿ. ನನ್ನ ಕನಸನ್ನು ಮದುವೆ, ಮಕ್ಕಳು ಎನ್ನುವ ಜವಾಬ್ದಾರಿಗಳ ನಡುವೆ ಎಂದಿಗೂ ಬಿಟ್ಟುಕೊಟ್ಟುವಳಲ್ಲ. ಹಾಗಾಗಿ ಇದು ಸಾಧ್ಯ ಆಯಿತು. ಇದಕ್ಕೆಲ್ಲ ಕುಟುಂಬದ ಒತ್ತಾಸೆಯಿತ್ತು.

ಯುವಸಮೂಹ ಹೆಚ್ಚಾಗಿ ಬೆಂಗಳೂರಿಂದಲೇ ಲಡಾಕ್‌ಗೆ ಬೈಕ್‌ನಲ್ಲಿ ಹೋಗ್ತಾರೆ. ಆದರೆ, ನನನಗೆ ಅಷ್ಟು ಸಮಯವಿರಲಿಲ್ಲ. ಹಾಗೂ ವಯಸ್ಸಿನ ಮಿತಿ ಇತ್ತು. ಹಾಗಾಗಿ ಸವಾಲು ತೆಗೆದುಕೊಳ್ಳಲಿಲ್ಲ. ಸಾಮರ್ಥ್ಯ ಹಾಗೂ ಮಿತಿ ಅರಿತು, ಅದರ ಅನುಸಾರವೇ ಸವಾಲು ಎದುರಿಸಿದರೆ ದಾರಿ ಸುಗಮವಾಗುತ್ತದೆ.

ಇದೇ ಮೊದಲಲ್ಲ

ಖರ್ದುಂಗ್ಲಾ ಪಾಸ್‌ ಬಗ್ಗೆ ಸಂಪೂರ್ಣ ಅರಿವೂ ಇರಲಿಲ್ಲ. ಹಿಂದಿನ ವರ್ಷವೂ ಖರ್ದುಂಗ್ಲಾ ಪಾಸ್‌ಗೆ ತೆರಳುವ ಪ್ರಯತ್ನ ಮಾಡಿದ್ದೆ. ಅದಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದೆ. ಫಿಟ್‌ನೆಸ್‌, ಡಯಟ್‌ಗೆ ಆದ್ಯತೆ ನೀಡುವ ಜೊತೆಗೆ, ನಿತ್ಯ ಎರಡು–ಮೂರು ತಾಸು ಯೋಗಾಭ್ಯಾಸ ಮಾಡ್ತಿದ್ದೆ. ದುರ್ಗಮ ಹಾದಿ ಹಾಗೂ ಹೊಂದಿಕೆಯಾಗಲು ಕಷ್ಟವಾಗುವಂತಹ ವಾತಾವರಣದ ನಡುವೆಯೂ ಪ್ರಯಾಣ ಕೈಗೊಂಡೆ. ಆದರೆ ಖರ್ದುಂಗ್ಲಾ ಪಾಸ್‌ ರಸ್ತೆಯ ತುತ್ತ ತುದಿಗೆ ತಲುಪಲು ಹೊರಟಾಗ ಬೈಕ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಹಿಂದಿರುಗಬೇಕಾಯಿತು.

ಆದರೆ ಗುರಿ ಸ್ಪಷ್ಟವಾಗಿತ್ತು. ಪ್ರಯತ್ನ ಕೈಬಿಡಲಿಲ್ಲ. ಮಗಳೂ ರೈಡರ್‌ ಆಗಿರುವುದರಿಂದ ಹುರಿದುಂಬಿಸಿದಳು. ಛಲ ಕಳೆದುಕೊಳ್ಳದೇ ಈ ವರ್ಷದ ಮಾರ್ಚ್‌ನಲ್ಲಿ ಏಕಾಂಗಿಯಾಗಿ ಬೈಕ್‌ನಲ್ಲಿ ಪ್ರಯಾಣಿಸಲು ಪಣ ತೊಟ್ಟೆ. ಶೇಕಡ 40ರಷ್ಟು ಕಲ್ಲು, ಮಣ್ಣಿನ ಹಾದಿಯ ಪಯಣವದು. ಇಳಿಜಾರಿನ ಪ್ರದೇಶ, ಆಳವಾದ ಕಣಿವೆಗಳು, ಎತ್ತರಕ್ಕೆ ಹೋದಂತೆ ಆಮ್ಲಜನಕ ಕಡಿಮೆಯಾಗುತ್ತಿತ್ತು. ಇಂಥ ಸವಾಲುಗಳ ನಡುವೆಯೂ ಆಗಸ್ಟ್ 22ರಂದು ಖರ್ದುಂಗ್ಲಾದ ತುತ್ತತುದಿ ತಲುಪಿದೆ. ಆ ಖುಷಿಯನ್ನು ಬಣ್ಣಿಸಲು ಪದಗಳಿಲ್ಲ.

ಖರ್ದುಂಗ್ಲಾ ರಸ್ತೆಯಲ್ಲಿ ಹಿಮಕರಗಿ ಅಲ್ಲಲ್ಲಿ ನೀರು ನಿಂತಿರುತ್ತದೆ. ಆ ನೀರಿನ ಮೇಲೆ ಬೈಕ್‌ ಓಡಿಸುವ ಅನುಭವವೇ ಅದ್ಭುತ. ಕೆಲವೊಮ್ಮೆ ಆ ನೀರು ಮೊಳಕಾಲಿನ ಮಟ್ಟಕ್ಕೆ ಇದ್ದರೆ, ಇನ್ನು ಕೆಲವೊಮ್ಮೆ ಸೊಂಟದ ಮಟ್ಟಕ್ಕೆ ಬರುತ್ತದೆ. ಅಂಥ ಸಮಯದಲ್ಲಿ ಧೃತಿಗೆಡದೆ ಬ್ಯಾಲೆನ್ಸ್‌ ಮಾಡುತ್ತಾ ಬೈಕ್‌ ಓಡಿಸುವುದಿದೆಯಲ್ಲಾ, ಅದು ರೋಮಾಂಚನವೇ ಸರಿ. ನನ್ನೊಂದಿಗೆ ಬಂದಿದ್ದ ಬಹುತೇಕ ರೈಡರ್‌ಗಳು ನೀರಿನಲ್ಲಿ ಬಿದ್ದು ಬಿಟ್ಟರು. ಆದರೆ, ನಾನು ಬೀಳಲಿಲ್ಲ. ಅಲ್ಲಿದ್ದ ಉಳಿದ ರೈಡರ್‌ಗಳು ತೋರಿಸಿದ ಪ್ರೋತ್ಸಾಹದಾಯಕ ಚಪ್ಪಾಳೆ ಎಂದಿಗೂ ಮರೆಯಲಾಗದು.

55 ವರ್ಷ ಆಗುವ ಹೊತ್ತಿಗೆ ಜಗತ್ತಿನ ಅತಿ ಎತ್ತರ ಹಾಗೂ ಬೈಕಿನಲ್ಲಿ ಸಾಗಬಹುದಾದ ಕಡಿದಾದ ಪ್ರದೇಶ ಎನಿಸಿಕೊಂಡಿರುವ ಲಡಾಕ್‌ನ ಒಮ್ಲಿಂಗ್‌ ಲಾ ತಲುಪುವ ಇರಾದೆಯಿದೆ.

– ವಿಲ್ಮಾ ಕ್ರಾಸ್ಟೊ ಕರ್ವಾಲೊ

‘ವೆಸ್ಪಾ’ದಲ್ಲಿ ಘಟ್ಟ ಹತ್ತಿಳಿಯುವ ಸುಖವೇ ಬೇರೆ

ಮೈಸೂರು, ತುಮಕೂರಿನಿಂದ ಆರಂಭಿಸಿ, ಕರ್ನಾಟಕದ ಕರಾವಳಿಯಲ್ಲಿ ಮಂಗಳೂರಿಂದ ಶುರುವಾಗಿ, ಉಡುಪಿ, ಕುಂದಾಪುರ, ಬೈಂದೂರು, ಹೊನ್ನಾವರ, ಗೋಕರ್ಣ, ಶಿರಸಿ, ಯಲ್ಲಾಪುರ, ಮುಂಡಗೋಡು, ಬನವಾಸಿ, ಬೇಲೂರು, ಹಾವೇರಿ, ಶಿವಮೊಗ್ಗ, ಸಾಗರ, ಆನವಟ್ಟಿ ಕಾರವಾರದವರೆಗೆ ಹೋಗಿ ಬಂದಿದ್ದೇನೆ. ಶಿರಾಡಿ, ಆಗುಂಬೆ, ಚಾರ್ಮಾಡಿ, ಅರೆಬೈಲು, ಸೇರಿದಂತೆ ಬಹುತೇಕ ಎಲ್ಲಾ ಘಟ್ಟಗಳನ್ನೂ ಎರಡೆರಡು ಸಲ ಹತ್ತಿ ಇಳಿದಿದ್ದೇನೆ ಅದೂ ನನ್ನ ಪ್ರೀತಿಯ ಕಿತ್ತಳೆ ಬಣ್ಣದ ‘ವೆಸ್ಪಾ‘ ಗಾಡಿಯಲ್ಲಿ.

ಮರೆಯಲಾಗದ ಅನುಭವಗಳನ್ನು ಪಡೆಯಬೇಕು ಎನ್ನುವ ಕಾರಣಕ್ಕಾಗಿಯೇ ನಾನು ಏಕಾಂಗಿಯಾಗಿ ಹೊರಡುತ್ತೇನೆ. ಎದುರಾದ ಪ್ರತಿ ವ್ಯಕ್ತಿಯೂ ಒಂದು ಅನುಭವದ ಮೊತ್ತವೆ. ದಾರಿ ತೋರಿಸಿದವರು, ನೀರು ಕೊಟ್ಟವರು, ಊಟ ಹಾಕಿದವರು, ಮಳೆಯಲ್ಲಿ ನಿಂತಾಗ ‘ನಮ್ ಮನೆಯಲ್ಲಿ ಉಳಿಯಿರಿ’ ಎಂದು ಆತ್ಮೀಯವಾಗಿ ಕಂಡವರು ಹೀಗೆ ಎಲ್ಲರೂ ನನ್ನ ಪಾಲಿನ ನಿಜದ ಬಂಧುಗಳು.

ಒಮ್ಮೆ ಶಿರಸಿಯಿಂದ ಬೈಂದೂರು ಮಾರ್ಗವಾಗಿ ಹೊರಟಿದ್ದೆ. ಸಂಜೆಯಷ್ಟರಲ್ಲಿ ಮಂಗಳೂರು ತಲುಪಬೇಕಿತ್ತು. ಮಧ್ಯೆ ಹಿಂದಿನ ಚಕ್ರದಲ್ಲಿ ಒಂದ್ ರೀತಿಯ ಶಬ್ದ ಬರಲು ಶುರುವಾಯ್ತು, ಆದರೆ ಅಲ್ಲಂತೂ ನರಪಿಳ್ಳೆಯೂ ಸಿಗದಂಥ ನಿರ್ಜನ ಘಟ್ಟ ಪ್ರದೇಶ. ನನ್ ಅದೃಷ್ಟಕ್ಕೆ ಸಿಕ್ಕಿದ್ರು ಒಬ್ಬರು ಮೆಕಾನಿಕ್. ಆದ್ರೆ ಅವರು ಈ ಗಾಡಿಯನ್ನು ನೋಡಿದ್ದೇ ಮೊದಲ ಬಾರಿಯಂತೆ. ಕಡೆಗೆ ಬೆಂಗಳೂರಿನಲ್ಲಿ ಪರಿಚಯ ಇರುವ ಗ್ಯಾರೇಜ್‌ನವರಿಗೆ ನವರಿಗೆ ವೀಡಿಯೊ ಕಾಲ್ ಮಾಡಿ ಸರಿಪಡಿಸಿಕೊಂಡು ಹೊರಟೆ. ಅವರು ಬೆಂಗಳೂರು ತಲುಪುವವರೆಗೂ ನನ್ನ ಸಂಪರ್ಕಿಸಿ, ಯೋಗಕ್ಷೇಮ ವಿಚಾರಿಸಿದ್ದರು. ಆಗೆಲ್ಲ ಈ ಜನ ತೋರಿಸುವ ಕಾಳಜಿಗೆ ಕಣ್ಣ ಹನಿಗಳೇ ಕಾಣಿಕೆ.

ಈವರೆಗೆ ದೊಡ್ಡ ಸವಾಲುಗಳಂತೇನೂ ಎದುರಾಗಿಲ್ಲ. ಆದರೆ, ಹೆಣ್ಣು ಎನ್ನುವುದೇ ದೊಡ್ಡ ಸವಾಲು. ಅದರಲ್ಲಿಯೂ ಸೀರೆ ಉಟ್ಟು, ಸ್ಕೂಟರ್‌ನಲ್ಲಿ ಹೊರಡುವುದು ಸವಾಲೇ. ನನ್ನದು ನಿಯೋಜಿತವಲ್ಲದ ಪ್ರಯಾಣ. ಹಾಗಾಗಿ ಅಲ್ಲಲ್ಲಿ ಉಳಿದುಕೊಳ್ಳುವ ಸವಾಲು ಎದುರಾಗುತ್ತದೆ. ಕಾಡಿನ ದಾರಿಯಲ್ಲಿ, ಪ್ರಾಣಿಗಳು ಎದುರಾಗುವ ಸಂಭವ ಇರುತ್ತದೆ. ಆದರೆ, ಈ ಎಲ್ಲ ಸವಾಲುಗಳನ್ನು ಇಷ್ಟಪಟ್ಟು ಎದುರು ಹಾಕಿಕೊಂಡಿರುವುದರಿಂದ ತನ್ನಿಂತಾನೇ ಪರಿಹಾರವೂ ಸಿಕ್ಕಿಬಿಡುತ್ತದೆ !

ಸರಳವಾದ ಹುಡುಗಿ ನಾನು. ಓದುವ ಹವ್ಯಾಸ ಕೂಡ ನನಗೆ ದೇಶ ಸುತ್ತುವಂತೆ ಪ್ರೇರೇಪಣೆ ನೀಡಿದೆ. ಲೇಹ್, ಲಡಾಕ್‌ಗೆ ಸೀರೆಯುಟ್ಟು ಏಕಾಂಗಿಯಾಗಿ ಬೈಕ್‌ನಲ್ಲಿಯೇ ಹೋಗುವ ಆಸೆಯಿದೆ.

– ಅರ್ಚನಾ ಆರ್ಯ

‘ಸಪ್ತ ಸಹೋದರಿಯರ’ ರಾಜ್ಯಕ್ಕೆ ಪಯಣಿಸುವ ಕನಸು

ಬಾಲ್ಯದಿಂದಲೂ ನನಗೆ ಏಕಾಂಗಿಯಾಗಿ ಪ್ರವಾಸ ಮಾಡಬೇಕೆಂಬ ಆಸೆಯಿತ್ತು. ಚಿಕ್ಕವಳಿದ್ದಾಗ ಹಳ್ಳಿಯಲ್ಲಿ ಸ್ನೇಹಿತರ ಜತೆ ಕಾಡು, ಗುಡ್ಡ ಅಂತ ಸುತ್ತುತ್ತಿದ್ದೆ. ಊರ ನಡುವೆ ಮಾವಿನ ತೋಪು ಅಚ್ಚುಮೆಚ್ಚಿನ ತಾಣವಾಗಿತ್ತು. ಆದರೆ, ಏಕಾಂಗಿ ಪಯಣದ ಆಸಕ್ತಿ ಬಲಿತದ್ದು ಮಾತ್ರ ‘ನೆನಪಿರಲಿ‘ ಸಿನಿಮಾದ ‘ಇಂದು ಬಾನಿಗೆಲ್ಲ ಹಬ್ಬ‘ ಹಾಡು ನೋಡಿದ ಮೇಲೆ. ಆ ಹಾಡಲ್ಲಿ ನಾಯಕಿ ತನ್ನ ಕಾರಿನ ಜತೆ, ಸಮುದ್ರ, ಹಸಿರು ಅಂತ ಹೊರಟು ಬಿಡುತ್ತಾಳೆ. ಅದನ್ನು ನೋಡಿದ ಮೇಲೆ ಏಕಾಂಗಿಯಾಗಿ ಪ್ರಯಾಣ ಮಾಡಿದರೆ ಮಜಾ ಸಿಗುತ್ತೆ ಅಂತ ಅನಿಸಿದ್ದು ಸುಳ್ಳಲ್ಲ. ಆಗಿನಿಂದಲೂ ಒಂಟಿ ಪಯಣದ ಬಗ್ಗೆ ಒಂದು ಸಣ್ಣ ಸೆಳೆತ ಇತ್ತು. ವಿದ್ಯಾಭ್ಯಾಸಕ್ಕಾಗಿ ಊರಿಂದ ಬೆಂಗಳೂರಿಗೆ ಒಬ್ಬಳೇ ಓಡಾಡುತ್ತಿದ್ದಾಗ ಆದ ಅನುಭವವೂ ಏಕಾಂಗಿ ಪ್ರಯಾಣಕ್ಕೆ ಇಂಬು ನೀಡಿತು.

ಓದು ಮುಗಿದ ಮೇಲೆ ಉದ್ಯೋಗಕ್ಕೆ ಸೇರಿದೆ. ಒಂದು ವಾರಾಂತ್ಯ ಇದ್ದಕ್ಕಿದ್ದ ಹಾಗೇ ಎಂದೂ ನೋಡಿರದ ಕೇರಳದ ಕಾಡು, ಬೆಟ್ಟ, ಜಲಪಾತ ನೋಡಬೇಕೆನಿಸಿತು. ಮನೆಯಲ್ಲಿಯೂ ಹೇಳಿರಲಿಲ್ಲ. ಸರಿಯಾದ ಸಮಯಕ್ಕೆ ರೈಲು ಟಿಕೆಟ್‌ ಕೂಡ ಮಾಡಿರಲಿಲ್ಲ. ಯಾವುದೇ ತಯಾರಿ ಇಲ್ಲದೇ ಹೊರಟು ಬಿಟ್ಟೆ. ವಾಸ್ತವ ಬೇರೆ ಇತ್ತು. ಇಡೀ ದಿನ ರೈಲಿನಲ್ಲಿ ಪ್ರಯಾಣ ಮಾಡಿ, ರಾತ್ರಿ 9.30ರ ಸುಮಾರಿಗೆ ಕೇರಳದ ಪಾಲಕ್ಕಾಡ್‌ ತಲುಪಿದೆ. ಅಲ್ಲಿಂದ ಎಲ್ಲಿಗೆ ಹೋಗಬೇಕು ಗೊತ್ತಿಲ್ಲ. ಎಲ್ಲಿ ಉಳಿದುಕೊಳ್ಳಬೇಕು ಗೊತ್ತಿಲ್ಲ. ಹಸಿವು ಒಂದು ಕಡೆ, ಸುಸ್ತಾಗಿ ಮಲಗುವುದಕ್ಕೆ ಜಾಗ ಬೇಕು. ಇನ್ನೊಂದು ಕಡೆ ಒಂಟಿ ಮಹಿಳೆ ಅಂತ ಉಳಿಯುವುದಕ್ಕೆ ರೂಮೂ ಕೊಡಲಿಲ್ಲ. ‘ಒಬ್ಳೇ ಏನ್‌ ಮಾಡ್ತಿದ್ದಿಯಾ?‘ ‘ಸೂಸೈಡ್‌ ಕೇಸಾ’ – ಹೀಗೆ ಏನೇನೋ ಪ್ರಶ್ನೆಗಳು ಎದುರಾದವು. ಕಾಡಿಬೇಡಿ ರೂಮ್‌ ಗಿಟ್ಟಿಸಿಕೊಂಡೆ. ಈ ಅನುಭವ ಮರುದಿನ ನನ್ನನ್ನು ಪಾಲಕ್ಕಾಡ್‌ನಿಂದ ವಾಪಸ್‌ ಬೆಂಗಳೂರು ರೈಲು ಹತ್ತುವಂತೆ ಮಾಡಿತು.

ಇದಾದ ನಂತರ ನಾನು ತಿರುಗಿ ನೋಡಿದ್ದೇ ಇಲ್ಲ. ಎಲ್ಲೇ ಹೋಗುವುದಿದ್ದರೂ ಆಯಾ ಊರಿನ, ಸ್ಥಳದ, ಸ್ಥಳೀಕರ ಬಗ್ಗೆ ಒಂದಷ್ಟು ಮಾಹಿತಿ ಕಲೆ ಹಾಕಿ ಪೂರ್ಣ ಸಿದ್ಧತೆಯೊಂದಿಗೆ ಪ್ರಯಾಣ ಆರಂಭಿಸ್ತೀನಿ. ಕೆಲವು ಕಡೆ ‘ಒಂಟಿ ಹುಡುಗಿ’ಯರ ಪಯಣದಲ್ಲಿ ಎದುರಾಗುವ ಸಂಕಷ್ಟಗಳು, ಪುಟ್ಟ ಹಳ್ಳಿಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯದಂತಹ ಕೊರತೆ.. ಇಂಥವನ್ನೆಲ್ಲ ಎದುರಿಸೋದು ಕಷ್ಟ. ಆದರೆ ನನ್ನಲ್ಲಿದ್ದ ಭಂಡ ಧೈರ್ಯ, ಜಂಗ್ಲಿತನ, ಅಂದುಕೊಂಡಿದ್ದನ್ನು ಸಾಧಿಸಬೇಕು ಎನ್ನುವ ಛಲ ಮಾತ್ರ ಸೋಲೊ ಟ್ರಾವೆಲರ್‌ ಆಗಿ ರೂಪಿಸಿದೆ.

ಸದ್ಯಕ್ಕೆ ಮಗಳಿನ್ನು ಚಿಕ್ಕವಳು. ಅವಳ ಜವಾಬ್ದಾರಿ ಇದೆ. ತುಂಬಾ ದಿನದಿಂದಲೂ ಈಶಾನ್ಯ ಭಾರತದ ‘ಸಪ್ತ ಸಹೋದರಿಯರ’ ರಾಜ್ಯಗಳಿಗೆ ಏಕಾಂಗಿ ಪ್ರವಾಸ ಹೋಗುವ ಯೋಚನೆ ಇದೆ. ಇದರ ಜತೆಗೆ ನೆದರ್ಲೆಂಡ್ಸ್‌, ನಾರ್ವೆ, ಚೀನಾ, ರಷ್ಯಾ, ಜಪಾನ್‌ ನೋಡಬೇಕಿದೆ. ಜತೆಗೆ ಮಗಳನ್ನು ಕರೆದುಕೊಂಡು ಹೋಗುವ ಆಸೆನೂ ಇದೆ.

– ಚಂದನಾ ರಾವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT