ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಚಾರ ಕೆಟ್ಟರೂ ಆಕಾರ ಕೆಡಬಾರದು!

Last Updated 23 ಏಪ್ರಿಲ್ 2018, 19:35 IST
ಅಕ್ಷರ ಗಾತ್ರ

ಚುನಾವಣೆಯ ‘ರಣಘೋಷ’ ಆದಂದಿನಿಂದ ಸ್ಪರ್ಧಿಸಬೇಕೆಂದಿರುವ ರಣವೀರರು, ಅವರ ಸಮರ್ಥಕರು, ಪಕ್ಷಗಳ ಮುಖಂಡರು ವಾಗಸ್ತ್ರಗಳನ್ನು ಭಯಂಕರವಾಗಿ ಝಳಪಿಸುತ್ತಿದ್ದಾರೆ. ಚುನಾವಣೆಗಳು ಅದುವರೆಗೆ ಆಳ್ವಿಕೆ ನಡೆಸಿದವರ ಸಾಧನೆಯನ್ನು ತೂಗಿ ನೋಡಿ, ಅದು ತಮ್ಮ ನಿರೀಕ್ಷಿತ ಮಟ್ಟಕ್ಕಿಲ್ಲವೆಂದಾದರೆ ಅವರ ಅಧಿಕಾರವನ್ನು ಕೊನೆಗೊಳಿಸಿ ಹೊಸ ಪಕ್ಷವನ್ನು, ಹೊಸ ಶಾಸಕರನ್ನು ಆಯ್ಕೆ ಮಾಡಿಕೊಳ್ಳಲು ಜನರಿಗೆ ಇರುವ ಒಂದು ಅವಕಾಶವೆಂಬುದು ಒಂದು ಸಾಮಾನ್ಯ ನಂಬಿಕೆ. ಈ ನಂಬಿಕೆಯ ಆಧಾರ, ತಾವು ಆರಿಸಬೇಕೆಂದಿರುವ ಪಕ್ಷದ ಸಿದ್ಧಾಂತಗಳು, ನೀತಿ ಮತ್ತು ಕಾರ್ಯಕ್ರಮಗಳು ಆಗಿರುತ್ತವೆ; ‘ಆಗಿರಬೇಕು’ ಎಂಬುದು ನಿರೀಕ್ಷೆ. ಇದರ ಜೊತೆಗೆ ಸ್ಪರ್ಧಿಸಲಿರುವ ವ್ಯಕ್ತಿಯ ವೈಯಕ್ತಿಕ ನಡವಳಿಕೆ, ವಿಶ್ವಾಸಾರ್ಹತೆ, ನಿಷ್ಠೆ, ಪ್ರಾಮಾಣಿಕತೆ, ವರ್ಚಸ್ಸು ಇವುಗಳು ಕೂಡ ಗಣನೆಗೆ ಬರುವಂಥವು.

ವ್ಯಕ್ತಿಗಳ ನಿಷ್ಠೆ, ಪ್ರಾಮಾಣಿಕತೆ, ಕಾರ್ಯದಕ್ಷತೆ, ಸಜ್ಜನಿಕೆಗಳೆಂಬುವೆಲ್ಲಾ ಬಹುಮಟ್ಟಿಗೆ ನಿಘಂಟಿನಲ್ಲಿ ಮಾತ್ರ ಕಾಣಸಿಗುವ ಶಬ್ದಗಳಾಗಿರುವ ದುರಂತ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ. ರಾಜಕೀಯವೆಂಬುದು ಹಣ ಹೂಡಿ, ಹಣ ಗಳಿಸುವ ದಂಧೆಯಾಗಿಬಿಟ್ಟಿರುವುದು ನಮ್ಮ ಕಾಲದ ನಗ್ನಸತ್ಯ. ಇಂಥ ಪರಿಸ್ಥಿತಿಯಲ್ಲೂ ಪಕ್ಷದ ನೀತಿ, ಸಿದ್ಧಾಂತಗಳ ಬಗ್ಗೆ ಭಾರಿ ಭಾರಿ ಮಾತುಗಳನ್ನು ಮುಖಂಡರು, ಸ್ಪರ್ಧಾಳುಗಳು ಉರುಳಿಸಿದಾಗ ‘ನಗೆಯು ಬರುತಿದೆ...’ ಎಂಬ ದಾಸರ ಪದ ನೆನಪಾಗುತ್ತದೆ.

ಪ್ರಸ್ತುತ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್, ಜಾತ್ಯತೀತತೆಯ ಮಾತುಗಳನ್ನಾಡುತ್ತಲೇ ಜಾತಿಗಳನ್ನು ಒಡೆಯುವ ಹಾಗೂ ಕೆಲ ಜಾತಿಗಳನ್ನು ಮತ್ತು ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾತಾಡುತ್ತಿದೆ ಎಂದು ವಿರೋಧ ಪಕ್ಷ ಬಿಜೆಪಿ ಆಪಾದಿಸುತ್ತಿದೆ. ಕಾಂಗ್ರೆಸ್ ಪಕ್ಷವು, ಬಿಜೆಪಿ ಕೋಮುವಾದಿ ಪಕ್ಷವೆಂದೂ ಹಿಂದುತ್ವದ ಅಜೆಂಡಾ ಬಿಟ್ಟರೆ ಬೇರೆ ಕಾರ್ಯಕ್ರಮವೇ ಇಲ್ಲವೆಂದೂ ಹೇಳುತ್ತಿದೆ. ಇನ್ನು ಜೆಡಿಎಸ್, ಎರಡನ್ನೂ ಸಮಾನ ಅಂತರದಲ್ಲಿಟ್ಟಿದ್ದೇನೆಂದು ಹೇಳಿಕೊಳ್ಳುತ್ತ ಎರಡನ್ನೂ ವಿರೋಧಿಸುವ ಮಾತುಗಳನ್ನಾಡುತ್ತಿದೆ.

ತಮ್ಮ ತಮ್ಮ ಜಾತಿ ಜನ ಬೆಂಬಲ ಪ್ರದರ್ಶಿಸಿಯೂ ಟಿಕೆಟ್‌ ಪಡೆಯಲು ವಿಫಲರಾದ ಕೆಲವು ಕಾಂಗ್ರೆಸ್‌ ನಾಯಕರು ಈಗ ರಾಗ ಬದಲಿಸಿದ್ದಾರೆ. ‘ಕೋಮುವಾದಿ, ದೇಶ ಒಡೆಯಲು ಹೊರಟ ವಂಚಕರು’ ಎಂದೆಲ್ಲ ಹಿಂದಿನ ದಿನದ ತನಕವೂ ಎದುರು ಪಕ್ಷವನ್ನು ಹೀನಾಮಾನ ಹೀಯಾಳಿಸಿದವರು ಏಕಾಏಕಿ ಆ ಪಕ್ಷವನ್ನೇ ಸೇರಿಕೊಂಡು ‘ನಮ್ಮದು ಸಂವಿಧಾನವನ್ನು ಎತ್ತಿ ಹಿಡಿಯುವ, ದೇಶದ ಏಕತೆಗಾಗಿ ಇರುವ ಏಕೈಕ ಪಕ್ಷ’ ಎಂಬ ಹೊಸ ರಾಗ ಹಾಡುವುದು ತಮಾಷೆಯಾಗಿ ಕಾಣುತ್ತಿದೆ.

ಬಿಜೆಪಿ ಟಿಕೆಟ್‌ನಿಂದ ವಂಚಿತರಾದವರು ಅದರ ಪ್ರತಿಪಕ್ಷವನ್ನು ಸೇರಿಕೊಂಡು, ‘ಬಿಜೆಪಿ ಡೋಂಗಿ ಪಕ್ಷ, ಅವರ ರಾಷ್ಟ್ರಪ್ರೇಮವೆಲ್ಲ ಪೊಳ್ಳು, ಅದು ಭ್ರಷ್ಟರ ಪಕ್ಷ’ ಎಂದು ತಮಗೆ ತೋಚಿದ ಶಬ್ದ ಬಾಣಗಳನ್ನು ಬತ್ತಳಿಕೆಯ ತುಂಬ ತುಂಬಿಕೊಂಡು ಪ್ರಯೋಗಿಸುವುದು ನಡೆದಿದೆ.

ಯಾರೋ ಒಬ್ಬ ಶಾಸಕರ, ಇಲ್ಲವೇ ಟಿಕೆಟ್‌ವಂಚಿತ ಕಾರ್ಯಕರ್ತರ ಮಟ್ಟದಲ್ಲಷ್ಟೇ ಹೀಗಾಗಿದ್ದರೆ ಅದನ್ನು ಗಂಭಿರವಾಗಿ ಪರಿಗಣಿಸಬೇಕಿರಲಿಲ್ಲ. ಆದರೆ ಜೀವಮಾನವನ್ನೆಲ್ಲಾ ಒಂದು ಪಕ್ಷದಲ್ಲಿ ಕಳೆದು, ಮಂತ್ರಿ, ಮುಖ್ಯಮಂತ್ರಿ, ರಾಜ್ಯಪಾಲ, ಕೇಂದ್ರ ಸಚಿವ ಮುಂತಾಗಿ ಎಲ್ಲ ಅಧಿಕಾರ ಅನುಭವಿಸಿ, ತಮಗೆ ಈಗ ಅದು ಸರಿಯಾಗಿ ಗೌರವ ಕೊಡುತ್ತಿಲ್ಲವೆಂಬ ಕಾರಣಕ್ಕೋ, ಇಲ್ಲವೇ ತಮ್ಮ ಮಕ್ಕಳಿಗೆ ಟಿಕೆಟ್ ನೀಡಲಿಲ್ಲವೆಂಬ ಕಾರಣಕ್ಕೋ ಆ ಪಕ್ಷವನ್ನು ಮತ್ತು ಅಷ್ಟೂ ವರ್ಷ ಮೆಚ್ಚಿಕೊಂಡು ಬಂದಿದ್ದ ಸಿದ್ಧಾಂತ, ಧೋರಣೆಗಳನ್ನು ಬದಿಗಿಟ್ಟು, ಜೀವನಪೂರ್ತಿ ತೀವ್ರವಾಗಿ ವಿರೋಧಿಸಿಕೊಂಡು ಬಂದಿದ್ದ ಎದುರು ಪಕ್ಷವನ್ನು ಯಾವ ಸಂಕೋಚವೂ ಇಲ್ಲದೆ ಸೇರಿಕೊಂಡು ಬಿಡುತ್ತಾರೆಂದರೆ ಏನು ಅರ್ಥ?

ಪಕ್ಷವೊಂದಕ್ಕೆ ನಿರ್ದಿಷ್ಟ ಆಕಾರವಿರುವುದಿಲ್ಲ. ಅದಕ್ಕಿರುವ ಘನತೆ, ಗೌರವ, ಜನಪ್ರೀತಿ ಎಲ್ಲವೂ ಅದರ ಧೋರಣೆಗಳಲ್ಲಿ ನಂಬಿಕೆಯಿಟ್ಟು ಅದರ ಪ್ರತಿನಿಧಿಗಳಾಗಿ ಆ ಪಕ್ಷದ ಸಿದ್ಧಾಂತಗಳನ್ನು ಮುನ್ನೆಲೆಯಲ್ಲಿಟ್ಟುಕೊಂಡು ರಾಜ್ಯವನ್ನು, ದೇಶವನ್ನು ಮುನ್ನಡೆಸುತ್ತಾರೆಂಬ ಕಾರಣಕ್ಕೆ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತ ಬಂದ ವ್ಯಕ್ತಿಗಳಿಂದ ಬಂದಿರುತ್ತದೆ. ಆದರೆ ಈಗ, ಟಿಕೆಟ್‌ ಸಿಗಲಿಲ್ಲವೆಂಬ ಕಾರಣಕ್ಕೆ ತಾವು ಪ್ರತಿಪಾದಿಸುತ್ತ ಬಂದಿದ್ದ ತತ್ತ್ವ, ಸಿದ್ಧಾಂತಗಳನ್ನು ಗಾಳಿಗೆ ತೂರಿ, ತದ್ವಿರುದ್ದ ಸಿದ್ಧಾಂತ ಹೊಂದಿರುವ ಎದುರು ಪಕ್ಷವನ್ನು ಸೇರಲು ಹಿಂದುಮುಂದು ನೋಡದ ನಾಯಕಮಣಿಗಳನ್ನು ನೋಡುತ್ತಿದ್ದೇವೆ.

ಇಂಥ ವಿಕಟ ಸಂದರ್ಭದಲ್ಲಿ ಪಕ್ಷದ ಸಿದ್ಧಾಂತ, ನೀತಿ ಎಂಬ ಮಾತುಗಳಿಗೆ ಅರ್ಥವೇ ಇಲ್ಲ. ಅವೆಲ್ಲ ಅಪಹಾಸ್ಯಕ್ಕೆ ಈಡಾದ ಕ್ಲೀಷೆಯ ಶಬ್ದಗಳಾಗಿಬಿಟ್ಟಿರುವುದು ಜನತಂತ್ರದ ಅಣಕವಲ್ಲದೆ ಮತ್ತಿನ್ನೇನು? ಇದೆಲ್ಲ ಸಾಹಿತಿ ಗೊರೂರರು ಒಂದು ನಗೆ ಬರಹದಲ್ಲಿ ವಿನೋದವಾಗಿ ವಿಡಂಬಿಸಿದಂತೆ, ‘ಆಚಾರ ಕೆಟ್ಟರೂ ಆಕಾರ ಕೆಡಬಾರದು’ ಎಂಬ ರೀತಿ ಇದೆ.

ತನ್ನ ಪಕ್ಷದಲ್ಲಿರುವವರ ನಡವಳಿಕೆಗೂ ಪಕ್ಷದ ಸಿದ್ಧಾಂತ, ನೀತಿಗಳಿಗೂ ಇರುವ ಸಂಬಂಧ ಅಥವಾ ಅವರು ಸಿದ್ಧಾಂತ, ನೀತಿಗಳಿಗೆ ಕೊಡುವ ಬೆಲೆ ಅಷ್ಟಕ್ಕಷ್ಟೇ ಆದರೂ ಪಕ್ಷದ ಪಾಡಿಗೆ ಪಕ್ಷ; ಸಿದ್ಧಾಂತ, ನೀತಿಗಳ ಪಾಡಿಗೆ ಸಿದ್ಧಾಂತ, ನೀತಿಗಳು ಎಂಬಂತಾದರೂ ಪಕ್ಷ, ತನ್ನ ಸಿದ್ಧಾಂತ ನೀತಿಗಳನ್ನು ಬಹಿರಂಗವಾಗಿ ಘೋಷಿಸಿಕೊಳ್ಳುವುದನ್ನು ಮಾತ್ರ ಬಿಡಬಾರದು ಎಂಬ ಸ್ಥಿತಿ ಇಂದಿನದ್ದು. ಅದರಲ್ಲೂ ತಾನು ವಿರೋಧಿಸುವ ಪಕ್ಷವು ಟಿಕೆಟ್ ನೀಡದೆ ಕೈ ಬಿಟ್ಟವರನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸಿ ಟಿಕೆಟ್‌ ನೀಡಲು ಎಲ್ಲ ಪಕ್ಷಗಳೂ ಪೈಪೋಟಿ ತೋರುತ್ತಿರುವುದು ಮತ್ತೊಂದು ಚೋದ್ಯ! ಜನ ವಿನೋದಕ್ಕೆ ಹೇಳುವಂತೆ ‘ಹೇಗೋ ಏನೋ ಒಟ್ಟಿನಲ್ಲಿ ಸೊಸೆಗೆ ಗಂಡು ಮಗುವಾದರೆ ಸಾಕು!’ ಎಂದು ಎಲ್ಲರಿಗೂ ಚುನಾವಣೆಯಲ್ಲಿ ಗೆಲ್ಲುವುದೊಂದೇ ಮಾನದಂಡ. ತತ್ತ್ವ, ಸಿದ್ಧಾಂತ ಎಲ್ಲ ಲೊಳಲೊಟ್ಟೆ. ನಮ್ಮ ದೇಶದಲ್ಲಿ ಇನ್ನೂ ತತ್ತ್ವ, ಸಿದ್ಧಾಂತಗಳ ಹೆಸರಿನಲ್ಲಿ ಚುನಾವಣೆಗೆ ಸೆಣಸುವ ಪಕ್ಷಗಳೆಂದರೆ ಎಡಪಕ್ಷಗಳು ಮಾತ್ರ ಎನ್ನುವಂತಾಗಿದೆ.

ಸ್ವಾತಂತ್ರ್ಯ ಬಂದ ಹೊಸದರಲ್ಲಿ ನಿಜಕ್ಕೂ ನೀತಿ, ಸಿದ್ಧಾಂತಗಳಿಗಾಗಿ ಬದುಕುತ್ತಿದ್ದ ವ್ಯಕ್ತಿಗಳು, ಪಕ್ಷಗಳು ಬರುಬರುತ್ತಾ, ಅದೂ ದೇಶ ಜನತಂತ್ರವನ್ನು ಒಪ್ಪಿಕೊಂಡು ಮುಕ್ಕಾಲು ಶತಮಾನವಾಗುತ್ತಿರುವ ಹೊತ್ತಿನಲ್ಲಿ ಪ್ರೌಢತೆಯತ್ತ ಸಾಗುವ ಬದಲಿಗೆ ವಿರುದ್ಧ ದಿಕ್ಕಿನೆಡೆಗೆ ಧಾವಿಸುತ್ತಿದ್ದೇವೆಯೇ ಎಂದು ಆತಂಕಪಡುವುದಷ್ಟೇ ಜನರ ಪಾಡಾಗಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT