ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ನೀಲಿ ಕಡಲಿಗೆ ‘ನೀಲಧ್ವಜ’ವೇ ಸೂಜಿಗಲ್ಲು!

ಹೊನ್ನಾವರದ ಕಾಸರಕೋಡು ಕಡಲತೀರವೀಗ ಪ್ರವಾಸಿಗರ ಸ್ವರ್ಗ: ನಿತ್ಯವೂ ಸಾವಿರಾರು ಜನರ ಭೇಟಿ
Last Updated 18 ನವೆಂಬರ್ 2020, 8:01 IST
ಅಕ್ಷರ ಗಾತ್ರ
ADVERTISEMENT
""
""
""

ಕಾರವಾರ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಹೊಸ ಆಕರ್ಷಕ ‘ಕೂಸು’ ಹೊನ್ನಾವರದ ಕಾಸರಕೋಡು ಕಡಲತೀರ. ಪ್ರತಿಷ್ಠಿತ ‘ಬ್ಲೂ ಫ್ಲ್ಯಾಗ್’ ಪ್ರಮಾಣಪತ್ರ ಘೋಷಣೆಯಾದ ದೇಶದ ಎಂಟು ಬೀಚ್‌ಗಳ ಪೈಕಿ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿರುವ ತಾಣ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

ಈ ಕಡಲತೀರಕ್ಕೆ ಪ್ರಮಾಣಪತ್ರದ ಮನ್ನಣೆ ಸಿಕ್ಕಿದ್ದನ್ನು ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ ಜಾವಡೇಕರ್ ‌ಅಕ್ಟೋಬರ್ 11ರಂದು ಘೋಷಿಸಿದ್ದರು. ಈ ಸುದ್ದಿಯು ರಾಜ್ಯದಾದ್ಯಂತ ಪ್ರವಾಸಿಗರ ಗಮನ ಸೆಳೆದಿತ್ತು. ಕಡಲತೀರವನ್ನೊಮ್ಮೆ ನೋಡಿ ಬರಬೇಕು ಎಂಬ ಹಂಬಲ ಹೆಚ್ಚಾಗಿ ದೂರದ ಊರುಗಳಿಂದ ಪ್ರವಾಸಿಗರು ಭೇಟಿ ನೀಡಲು ಆರಂಭಿಸಿದರು.

ಕಾಸರಕೋಡಿನ 750 ಮೀಟರ್ ಕಡಲತೀರವನ್ನು ‘ಬ್ಲೂ ಫ್ಲ್ಯಾಗ್‌’ ಸಲುವಾಗಿ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರವು ₹ 8 ಕೋಟಿ ಅನುದಾನ ಒದಗಿಸಿತ್ತು. ಪರಿಸರ ಸ್ನೇಹಿಯಾದ ವಿವಿಧ ಕಾಮಗಾರಿಗಳನ್ನು 2018ರಲ್ಲಿ ಹಮ್ಮಿಕೊಳ್ಳುವ ಮೊದಲು ಇಲ್ಲಿಗೆ ಸ್ಥಳೀಯರೇ ಹೆಚ್ಚಾಗಿ ವಾಯುವಿಹಾರಕ್ಕೆ ಬರುತ್ತಿದ್ದರು. ವಾರಾಂತ್ಯದಲ್ಲಿ ಅಬ್ಬಬ್ಬ ಅಂದರೆ 50 ಜನರು ಇರುತ್ತಿದ್ದರು. ಕಾಲೇಜು ಹುಡುಗರು, ಯುವ ಜೋಡಿಗಳು ಬಂದು ಫೋಟೊ ಕ್ಲಿಕ್ಕಿಸಿಕೊಂಡು ಹೋಗಲು ಮಾತ್ರ ಈ ತಾಣ ಸೀಮಿತವಾಗಿತ್ತು.

ಕಾಸರಕೋಡು ಕಡಲತೀರದಲ್ಲಿ ಪ್ರವಾಸಿಗರ ಗುಂಪು

‘ಬ್ಲೂ ಫ್ಲ್ಯಾಗ್’ ಘೋಷಣೆಯಾದ ಬಳಿಕ ಪ್ರವಾಸಿಗರ ಸಂಖ್ಯೆ ದಿನವೊಂದಕ್ಕೆ ಐದು ಸಾವಿರದವರೆಗೂ ತಲುಪುತ್ತಿದೆ. ವಾರಾಂತ್ಯದಲ್ಲಿ, ವಿಶೇಷ ರಜಾದಿನಗಳಲ್ಲಿ ಕಡಲತೀರವು ಜನರಿಂದ ತುಂಬಿರುತ್ತದೆ. ನುಣ್ಣನೆಯ ಮರಳಿನ ಮೇಲೆ ಹೆಜ್ಜೆ ಹಾಕುತ್ತ, ಸೂರ್ಯಾಸ್ತದ ಸೊಬಗನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಕಾದಿರುತ್ತಾರೆ. ವಾಹನ ನಿಲುಗಡೆಯ ಸ್ಥಳದಲ್ಲಿ ಜಾಗ ಸಾಕಾಗದೇ ಒಂದೆರಡು ಕಿಲೋಮೀಟರ್ ದೂರದಿಂದಲೇ ನಡೆದುಕೊಂಡು ಬರುವವರೂ ಇದ್ದಾರೆ.

‘ಕಡಲತೀರದ ಗುಣಮಟ್ಟವನ್ನು ಕಾಯ್ದುಕೊಳ್ಳಲು ನೇಮಿಸಿರುವ ತಂಡವು ಉತ್ತಮವಾಗಿ ಕೆಲಸ ಮಾಡುತ್ತಿದೆ. ಪರಿಸರ ಹಾಗೂ ಸಮುದ್ರದ ನೀರು ಸ್ವಚ್ಛವಾಗಿ, ಸುತ್ತಮುತ್ತಲಿನ ಪ್ರದೇಶ ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳಲಾಗಿದೆ. ಮಕ್ಕಳಿಂದ ಮೊದಲಾಗಿ ಹಿರಿಯರವರೆಗೂ ಎಲ್ಲರೂ ನೀರಿನಲ್ಲಿ ಒಂದಷ್ಟು ಹೊತ್ತು ಆಟವಾಡಿ ಸಂತಸ ಪಡುತ್ತಿದ್ದಾರೆ’ ಎನ್ನುತ್ತಾರೆ ‘ಬ್ಲೂ ಫ್ಲ್ಯಾಗ್’ನ ನೋಡಲ್ ಅಧಿಕಾರಿ ಪುರುಷೋತ್ತಮ.

‘ಇಲ್ಲಿರುವ ವ್ಯವಸ್ಥೆಗಳು ಜನರ ಮೆಚ್ಚುಗೆ ಗಳಿಸಿವೆ. ಸಮುದ್ರದಲ್ಲಿ ಆಟವಾಡಿ ಬಂದವರಿಗೆ ಸ್ನಾನ ಮಾಡಲು, ಬಟ್ಟೆ ಬದಲಿಸಲು ಸುರಕ್ಷಿತವಾದ ಕೊಠಡಿಗಳನ್ನು ನಿರ್ಮಿಸಲಾಗಿದೆ. ಶೌಚಾಲಯದ ವ್ಯವಸ್ಥೆಯಿದೆ. ಮಕ್ಕಳಿಗೆ ಆಟವಾಡಲು ಆಟಿಕೆಗಳಿವೆ. ವಾಯುವಿಹಾರಕ್ಕೆ ಸುಸಜ್ಜಿತ ಕಾಲುದಾರಿಯಿದೆ. ಇವೆಲ್ಲವೂ ಪರಿಸರ ಸ್ನೇಹಿಯಾಗಿರುವುದು ಗಮನಾರ್ಹ’ ಎಂದು ಅವರು ಹೇಳುತ್ತಾರೆ.

‘ಈ ಹಿಂದೆ ಇಲ್ಲಿ ಕಾಮಗಾರಿ ಆರಂಭಿಸುವಾಗ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದರು. ಇಲ್ಲಿಗೆ ಯಾರು ಬರುತ್ತಾರೆ, ಕೇವಲ ಸಮುದ್ರದ ನೋಡಲು ಬರುತ್ತಾರಾ ಎಂದೆಲ್ಲ ಅನುಮಾನಪಟ್ಟಿದ್ದರು. ಆದರೆ, ಅವುಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಕಡಲತೀರವನ್ನು ಅಭಿವೃದ್ಧಿ ಪಡಿಸಿಲು ಜಿಲ್ಲಾಡಳಿತ ಮುಂದಾಯಿತು. ಅದರ ಫಲಿತಾಂಶವು ಬ್ಲೂ ಫ್ಲ್ಯಾಗ್ ಘೋಷಣೆಯಾದ ಬಳಿಕ ಗೋಚರಿಸುತ್ತಿದೆ. ಇಲ್ಲಿಗೆ ಅತಿ ಹೆಚ್ಚು ಪ್ರವಾಸಿಗರು ಬರುತ್ತಿರುವುದು ಸಾರ್ಥಕತೆಯ ಭಾವ ಮೂಡಿಸಿದೆ’ ಎಂದು ಅವರು ಹೆಮ್ಮೆ ಪಡುತ್ತಾರೆ.

‘ಸುಂದರ, ಸ್ವಚ್ಛವಾಗಿದೆ’

ಕಾಸರಕೋಡು ಕಡಲತೀರದಲ್ಲಿರುವ ಆಟಿಕೆಗಳಲ್ಲಿ ಮಕ್ಕಳು ಸಂಭ್ರಮಿಸುತ್ತಿರುವುದು

‘ನಾನು ಹಲವಾರು ಕಡಲತೀರಗಳಿಗೆ ಭೇಟಿ ನೀಡಿದ್ದೇನೆ. ಕಾಸರಕೋಡಿಗೂ ಐದು ವರ್ಷಗಳ ಹಿಂದೆ ಬಂದಿದ್ದೆ. ಆದರೆ, ಆಗಿನ ವ್ಯವಸ್ಥೆಗಳಿಗೂ ಈಗ ಆಗಿರುವ ಅಭಿವೃದ್ಧಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ಕಡಲತೀರವು ಸುಂದರ, ಸ್ವಚ್ಛ ಹಾಗೂ ಮತ್ತೆ ಮತ್ತೆ ಬರಬೇಕು ಎನ್ನುವ ರೀತಿಯಲ್ಲಿ ಬದಲಾಗಿದೆ. ಒಂದು ಬ್ಲೂಫ್ಲ್ಯಾಗ್ ಪ್ರಮಾಣಪತ್ರ ಎಷ್ಟೆಲ್ಲ ಬದಲಾವಣೆಗಳನ್ನು ಮಾಡಬಲ್ಲದು ಎನಿಸುತ್ತಿದೆ’ ಎಂದು ಅಚ್ಚರಿಪಟ್ಟವರು ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಬಂದಿದ್ದ ಪೂರ್ಣಿಮಾ ರಂಗರಾವ್.

ಕಾಸರಕೋಡು ಕಡಲತೀರದ ಸಮೀಪದಲ್ಲೇ ಅರಣ್ಯ ಇಲಾಖೆಯು ಕೆಲವು ವರ್ಷಗಳ ಹಿಂದೆ ನೆಡುತೋಪನ್ನು ಅಭಿವೃದ್ಧಿ ಪಡಿಸಿದೆ. ಗಾಳಿಮರಗಳನ್ನು (ಕ್ಯಾಸುರೈನಾ) ಬೆಳೆಸಿದ್ದು, ತಂಪಾದ ವಾತಾವರಣ ಮೂಡಿಸಿದೆ. ಅದರಲ್ಲಿ ಪರಿಸರಕ್ಕೆ ಸಂಬಂಧಿಸಿದ ಕೆಲವು ಕಲಾಕೃತಿಗಳನ್ನೂ ಸ್ಥಾಪಿಸಲಾಗಿದ್ದು, ಮಕ್ಕಳನ್ನು ಆಕರ್ಷಿಸುತ್ತವೆ.

ಮೊದಲ ಪ್ರಯತ್ನದಲ್ಲಿ ಸಿಕ್ಕಿರುವ ಯಶಸ್ಸಿನಿಂದ ಪ್ರೇರಣೆ ಪಡೆದ ಜಿಲ್ಲಾಡಳಿತವು ಮತ್ತಷ್ಟು ಕಡಲತೀರಗಳನ್ನೂ ಇದೇ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಚಿಂತಿಸುತ್ತಿದೆ. ‘ಬ್ಲೂ ಫ್ಲ್ಯಾಗ್‌’ ಪ್ರಮಾಣಪತ್ರಕ್ಕಾಗಿ ಮುಂದಿನ ಹಂತದಲ್ಲಿ ಕಡಲತೀರಗಳನ್ನು ‌ನಾಮನಿರ್ದೇಶನ ಮಾಡುವಾಗ ಇದರಿಂದ ಅನುಕೂಲವಾಗಲಿದೆ ಎನ್ನುವುದು ಉನ್ನತ ಅಧಿಕಾರಿಗಳ ಆಶಯವಾಗಿದೆ.

ಕಾಸರಕೋಡಿನ ಕಡಲತೀರದಲ್ಲಿ ‘ಬ್ಲೂ ಫ್ಲ್ಯಾಗ್’ (ನೀಲ ಬಣ್ಣದ ಧ್ವಜ) ಆರೋಹಣಕ್ಕೆ ದಿನಾಂಕ ನಿಗದಿಯಾಗಬೇಕಿದೆ. ದೇಶದ ಎಂಟು ಕಡಲತೀರಗಳಾದ ಉಡುಪಿಯ ಪಡುಬಿದ್ರಿ, ಗುಜರಾತ್‌ನ ಶಿವರಾಜಪುರ, ಡಿಯುನ ಘೋಗ್ಲಾ, ಕೇರಳದ ಕಪ್ಪಾಡ್, ಆಂಧ್ರಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್ ಮತ್ತು ಅಂಡಮಾನ್‌ ದ್ವೀಪದ ರಾಧಾನಗರ ಕಡಲತೀರಗಳಲ್ಲಿ ಏಕಕಾಲಕ್ಕೆ ಧ್ವಜಾರೋಹಣ ಆಗಲಿದೆ.

ಕಡಲತೀರದ ಸ್ವಚ್ಛತೆ, ನೀರಿನ ಗುಣಮಟ್ಟ, ಪರಿಸರಸ್ನೇಹಿ ವಾತಾವರಣ, ಸುರಕ್ಷತೆ ಮುಂತಾದ ಅಂಶಗಳನ್ನು ಪರಿಗಣಿಸಿ ಡೆನ್ಮಾರ್ಕ್‌ನ ಕೋಪನ್‌ ಹೆಗನ್‌ನಲ್ಲಿರುವ ‘ಪರಿಸರ ಶಿಕ್ಷಣಕ್ಕಾಗಿ ವೇದಿಕೆ’ಯು (ಎಫ್.ಇ.ಇ) ಪ್ರಮಾಣಪತ್ರ ನೀಡುತ್ತದೆ. 30ಕ್ಕೂ ಹೆಚ್ಚು ಮಾನದಂಡಗಳನ್ನು ಚಾಚೂ ತಪ್ಪದೇ ಪಾಲಿಸಿದ ಕಡಲತೀರಗಳಲ್ಲಿ ನೀಲಿಬಣ್ಣದ ಧ್ವಜವನ್ನು ಆರೋಹಣ ಮಾಡಲಾಗುತ್ತದೆ. ಇದು ವಿದೇಶಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ನೆರವಾಗುತ್ತದೆ.

ಕಾಸರಕೋಡಿಗೆ ಹೋಗುವುದು ಹೇಗೆ?

ಕಾಸರಕೋಡು ಕಡಲತೀರಕ್ಕೆ ವಾರಾಂತ್ಯದಲ್ಲಿ ಭೇಟಿ ನೀಡುವ ಪ್ರವಾಸಿಗರ ಸಾಲು

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಿಂದ ಮೂರು ಕಿಲೋಮೀಟರ್ ದೂರದಲ್ಲಿದೆ. ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದಿಂದ 25 ಕಿ.ಮೀ, ಕುಮಟಾ ತಾಲ್ಲೂಕಿನ ಗೋಕರ್ಣದಿಂದ 55 ಕಿಲೋಮೀಟರ್ ದೂರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT