ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ: ಚಿನಾರ್ ಮರದ ಕಥಾಸಾರ– ಅಶೋಕ ಹಾಸ್ಯಗಾರ ಲೇಖನ

Published 14 ಮೇ 2023, 0:09 IST
Last Updated 14 ಮೇ 2023, 0:09 IST
ಅಕ್ಷರ ಗಾತ್ರ

ಲೇಖನ– ಅಶೋಕ ಹಾಸ್ಯಗಾರ

ಕಾಶ್ಮೀರದಲ್ಲಿನ ಚಿನಾರ್ ಮರಗಳು ಅಲ್ಲಿನ ಹಿರಿಮೆ. ಶರತ್ಕಾಲದಲ್ಲಿ ಅವು ತುಸು ಹಳದಿ ಬಣ್ಣಕ್ಕೆ ತಿರುಗಿದಾಗ ಶಾಲಿಮಾರ್ ಉದ್ಯಾನ ಕಳೆಗಟ್ಟುವುದನ್ನು ನೋಡಲೆಂದೇ ಪ್ರವಾಸಿಗರು ಭೇಟಿ ನೀಡುವುದು ಸಹಜ. ಆ ಮರಗಳ ಕಥಾಸಾರ ಇದೋ...

‘ನಾನು ಚಿನಾರ್, ಪ್ಲಾಟಿನಸ್ ಓರಿಯೆಂಟಲ್ಸ್ ಎಂದೂ ವೈಜ್ಞಾನಿಕ ಸಮುದಾಯದವರು ನನ್ನನ್ನು ಗುರುತಿಸುತ್ತಾರೆ. ನಾನು ಕಳೆದ ಸುಮಾರು ಮುನ್ನೂರ ಎಂಬತ್ತು ವರ್ಷಗಳಿಂದ ಈ ಮುಘಲ್ ಗಾರ್ಡನ್‌ನ ಶಾಲಿಮಾರ್ ಉದ್ಯಾನವನದಲ್ಲಿದ್ದೇನೆ. ನಾನು ಕಿರೀಟಪ್ರಾಯವಾಗಿ ಬಹು ವಿಸ್ತರಿತ ಅಪರೂಪದ ಟೊಂಗೆಗಳಿಂದ ಕಂಗೊಳಿಸುತ್ತಿದ್ದೇನೆ. ನಾನೊಬ್ಬ ಅನನ್ಯವಾದ ಸುಂದರ ವಾಸ್ತು ವಿನ್ಯಾಸದಲ್ಲಿ ಮತ್ತು ಪ್ರೀತಿ ಪ್ರೇಮದ ಸಂಕೇತವಾಗಿ ನೈಸರ್ಗಿಕ ಸಾಕ್ಷಿಯೆನಿಸಿದ್ದೇನೆ. ಜನರು ನನ್ನ ಮಡಿಲಲ್ಲಿ ಕುಳಿತುಕೊಂಡು ತಮ್ಮ ಅನುಭವ ಹಂಚಿಕೊಂಡು ನೆಮ್ಮದಿಯನ್ನು ಪಡೆಯುತ್ತಾರೆ. ನಾನು ಅವರ ಧೋರಣೆ, ಸದ್ಗುಣಗಳನ್ನು ನನ್ನೊಳಗೆ ಹೀರಿಕೊಂಡು ಸುಂದರ ಎಲೆಗಳಾಗಿ ಅರಳಿಕೊಳ್ಳುತ್ತೇನೆ. ನನ್ನ ಜೊತೆಯಲ್ಲಿಯೇ ಇನ್ನೂ ಅನೇಕ ಚಿನಾರ್ ಮರಗಳು ಕಾಶ್ಮೀರ ಕಣಿವೆಯ ಉದ್ದಗಲಕ್ಕೂ ನೆಲೆಯೂರಿ ಸೌಂದರ್ಯದ ಕಣಿಯೆನ್ನಿಸಿಕೊಂಡಿವೆ. ನನ್ನ ಇನ್ನಷ್ಟು ಬಂಧು-ಬಾಂಧವರನ್ನು ನೋಡಿ ಕಣ್ತುಂಬಿಕೊಳ್ಳಬೇಕೆಂದರೆ ಕಾಶ್ಮೀರದ ವಿವಿಧ ಕಡೆಗಳಲ್ಲಿರುವ ಮುಘಲ್ ಗಾರ್ಡನ್‌ಗಳಿಗೂ ಭೇಟಿ ನೀಡಬಹುದು.’

ಈ ಅರ್ಥ ಕೊಡುವ ಒಕ್ಕಣಿಕೆಯು ಕಾಶ್ಮೀರದ ಮುಘಲ್ ಗಾರ್ಡನ್‌ನ ಶಾಲಿಮಾರ್ ಉದ್ಯಾನದಲ್ಲಿ ಕೆಲವು ಬೃಹತ್ ಗಾತ್ರದ ಮರಗಳ ಕೆಳಗಡೆ ನಿಲ್ಲಿಸಿಟ್ಟ ಹಸಿರು ಬಣ್ಣದ ಫಲಕಗಳಲ್ಲಿದೆ. ಮರಗಳ ವರ್ಷದ ಸಂಖ್ಯೆ ಬೇರೆ ಬೇರೆಯಾಗಿದೆ ಎನ್ನುವುದನ್ನು ಬಿಟ್ಟರೆ ಉಳಿದ ವರ್ಣನೆಗಳು ಹೀಗೇ ಇವೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಪುಷ್ಪಕೃಷಿ ಇಲಾಖೆಯ ನಿರ್ವಹಣೆಯಲ್ಲಿರುವ ಈ ಉದ್ಯಾನವು ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ದಾಖಲಾಗಿದೆ. ಕಾಶ್ಮೀರ ಕಣಿವೆಯಲ್ಲಿ ವಿವಿಧ ಮಾದರಿಯ ಹಲವು ಉದ್ಯಾನಗಳಿದ್ದು, ಅವುಗಳಲ್ಲಿ ಈ ಚಿನಾರ್ ವೃಕ್ಷಗಳೇ ಆಕರ್ಷಣೆ. ಇವುಗಳಲ್ಲಿ ಅತ್ಯಂತ ಹೆಸರು ಮಾಡಿದ ಚಿನಾರ್ ವೃಕ್ಷಗಳೆಂದರೆ ದಾಲ್ ಸರೋವರದ ಮಧ್ಯೆ ಇರುವ ಚಾರ್ ಚಿನಾರ್ ನಡುಗಡ್ಡೆಯಲ್ಲಿರುವಂಥವು.

ಚಿನಾರ್ ವೃಕ್ಷಗಳ ಮೂಲ


ಚಿನಾರ್ ವೃಕ್ಷಗಳು ಕಾಶ್ಮೀರ ಕಣಿವೆಯ ಮೂಲ ವನಸ್ಪತಿಯಲ್ಲ. ಕಾಶ್ಮೀರಿ ಮುಸ್ಲಿಮರ ಪ್ರಕಾರ 14ನೇ ಶತಮಾನದಲ್ಲಿ ಇಸ್ಲಾಮಿ ಧಾರ್ಮಿಕ ಪ್ರವಚನಕಾರರು ಇರಾನ್‌ನಿಂದ ತಮ್ಮೊಡನೆ ಇದರ ಸಸ್ಯವನ್ನೋ, ಬೀಜವನ್ನೋ ತಂದಿದ್ದರು. ಕಾಶ್ಮೀರಿ ಹಿಂದೂಗಳ ನಂಬುಗೆಯ ಪ್ರಕಾರ, ಕಾಶ್ಮೀರದ ಹಿಂದೂ ಪವಿತ್ರ ಸ್ಥಳಗಳಲ್ಲಿ ಸಾಂಪ್ರದಾಯಿಕ ರೀತಿ ರಿವಾಜಿನಂತೆ ನೆಟ್ಟು ಬೆಳೆಸುತ್ತಿದ್ದರು. ಈ ಚಿನಾರ್ ವೃಕ್ಷಗಳು ಭವಾನಿದೇವಿಗೆ ಸಂಬಂಧಿಸಿದ್ದೆಂದು ಭಾವಿಸಲಾಗಿದೆ. ಛತ್ತರ್‌ಗಾಂವ್‌ನಲ್ಲಿರುವ ಒಂದು ಚಿನಾರ್ ವೃಕ್ಷವು ಅತ್ಯಂತ ಪ್ರಾಚೀನವಾದದ್ದೆಂದೂ, ಕ್ರಿ.ಶ. 1374ರಲ್ಲಿ ಇಸ್ಲಾಮಿ ಅನುಭಾವಿ ಸಯ್ಯದ್ ಅಬ್ದುಲ್ ಕೈಮ್ ಹಮದಾನಿ ಹಾಗೂ ಜೊತೆಗಾರ ಮೀರ್ ಸಯಿದ್ ಅಲಿ ಹಮದಾನಿ ಇರಾನಿನಿಂದ ತಂದು ನೆಟ್ಟಿದ್ದಾರೆಂದು ಹಲವು ಕಾಶ್ಮೀರಿಗಳು ಹೇಳುತ್ತಾರೆ.

ಮುಂದೆ ಮುಘಲರು ಚಿನಾರ್ ವೃಕ್ಷಗಳನ್ನು ಕಾಶ್ಮೀರದ ಭೌಗೋಳಿಕ ಸೌಂದರ್ಯೀಕರಣಕ್ಕೆ ಬಳಸತೊಡಗಿದರಲ್ಲದೇ ಅದನ್ನು ತಮ್ಮ ಗೃಹವೈಭವಕ್ಕೆ, ಕಟ್ಟಿಗೆಯ ಕಲಾತ್ಮಕ ರಚನೆಗಳಿಗೆ ಉಪಯೋಗಿಸಲಾರಂಭಿಸಿದರು. ಅವರ ನಂತರ ಡೊಗ್ರಾ ರಾಜರೂ ಚಿನಾರ್ ವೃಕ್ಷಗಳ ಸಂರಕ್ಷಣೆಗೆ ಮುಂದಾದರು.

ಈ ವೃಕ್ಷಗಳ ಬಳಕೆಯು ವ್ಯಾಪಕವಾಗಿ ಆಗುತ್ತಿದ್ದಂತೆ ಅಕ್ರಮವಾಗಿ ಕಡಿಯತೊಡಗಿದ್ದರಿಂದ ಚಿನಾರ್ ವೃಕ್ಷಗಳ ಬೆಳವಣಿಗೆಗೆ ಧಕ್ಕೆಯುಂಟಾಗತೊಡಗಿತು. ಇದನ್ನರಿತ ಸ್ವತಂತ್ರ ಭಾರತದ ಜಮ್ಮು ಮತ್ತು ಕಾಶ್ಮೀರ ಸರ್ಕಾರವು 2009ರ ಮಾರ್ಚ್ 5 ರಂದು ಕಾಶ್ಮೀರದಲ್ಲಿ ಚಿನಾರ್ ವೃಕ್ಷಗಳನ್ನು ಕಡಿಯುವುದರ ಮೇಲೆ ನಿರ್ಬಂಧ ಹೇರಿತಲ್ಲದೆ, ಚಿನಾರ್ ವೃಕ್ಷವು ರಾಜ್ಯ ಸರ್ಕಾರದ ಸೊತ್ತೆಂದು ಘೋಷಿಸಿತು. ಯಾರೇ ಬೆಳೆಸಲಿ, ಎಲ್ಲೇ ಇರಲಿ ಅದನ್ನು ನೋಂದಾಯಿಸಿಕೊಳ್ಳಬೇಕು, ಬುಡದಲ್ಲಿ ಬಿಳಿ ಬಣ್ಣ ಬಳಿಯಬೇಕು ಎಂದು ಸರ್ಕಾರ ಆದೇಶಿಸಿತು. ಶ್ರೀನಗರ ಸಮೀಪವಿರುವ ನಸೀಮಾಬಾಗ ಎಂಬ ಮುಘಲ್ ಗಾರ್ಡನ್‌ನಲ್ಲಿ ಕಾಶ್ಮೀರ ಯುನಿರ್ವಸಿಟಿಯು ಸುಮಾರು 700 ಚಿನಾರ್ ವೃಕ್ಷಗಳನ್ನು ನೆಟ್ಟು ಹೆರಿಟೇಜ್ ಪಾರ್ಕನ್ನಾಗಿ ಅಭಿವೃದ್ಧಿಪಡಿಸುತ್ತಿದೆ.

ಮುಘಲ್ ಗಾರ್ಡನ್ ಶಾಲಿಮಾರ್:

ಕ್ರಿ.ಶ 1619ರಲ್ಲಿ ಮುಘಲ್ ದೊರೆ ಜಹಾಂಗೀರನು ಈ ಉದ್ಯಾನವನ್ನು ರೂಪಿಸಲು ಕಾರಣನಾದ. ಇದು ಮುಘಲ್ ದೊರೆಗಳಿಗೆ ತೋಟಗಾರಿಕೆಯಲ್ಲಿರುವ ಸೌಂದರ್ಯಪ್ರಜ್ಞೆಯ ದ್ಯೋತಕವಾಗಿದೆ ಎನ್ನುವುದನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆ ಮಾಡುವಾಗ ಪ್ರಸ್ತಾವನೆಯಲ್ಲಿ ಹೇಳಲಾಗಿದೆ. ಇದನ್ನು ಶ್ರೀನಗರದ ಕಿರೀಟ ಎಂದೂ ಬಣ್ಣಿಸಲಾಗುತ್ತದೆ. ಮುಘಲರ ಕಾಲದಲ್ಲಿ ಈ ಶಾಲಿಮಾರ್ ಉದ್ಯಾನವು ‘ರಾಯಲ್ ಗಾರ್ಡನ್’ ಆಗಿತ್ತು. ಜಹಾಂಗೀರನು ರ‍್ಹಾಬಕ್ಷ್ (ಆನಂದಾತಿರೇಕ) ಎಂದು ಉದ್ಗರಿಸಿದ್ದರೆ, ಕ್ರಿ.ಶ. 1630 ರಲ್ಲಿ ಅಧಿಕಾರಕ್ಕೆ ಬಂದಿದ್ದ ಶಾಹ್‌ಜಾನನು ಕಾಶ್ಮೀರದಲ್ಲಿರುವ ತನ್ನ ಗವರ್ನರ್ ಝಫರ್‌ಖಾನ್‌ನಿಗೆ ಆದೇಶ ಮಾಡಿ, ಇನ್ನಷ್ಟು ಸೌಂದರ್ಯದಿಂದ ಕಂಗೊಳಿಸುವಂತೆ ಮಾಡಲು ಸೂಚಿಸಿದ್ದ. ನಂತರ ಅದನ್ನು ಫೈಝ್ ಬಕ್ಷ್ (ಸಮೃದ್ಧಿ) ಎಂದು ಕರೆದ.

ಆನಂತರ ಮಹಾರಾಜಾ ರಣಜಿತ್ ಸಿಂಗ್‌ನ ಅವಧಿಯಲ್ಲಿ ಶಾಲಿಮಾರ್ ಬಾಗ್‌ನಲ್ಲಿ ಯುರೋಪಿಯನ್‌ರಿಗೆ ಮತ್ತು ವಿಶೇಷ ಅತಿಥಿಗಳಿಗೆಂದು ನಿರ್ಮಿಸಿದ್ದ ಪೆವಿಲಿಯನ್‌ಗೆ ಮಾರ್ಬಲ್ ಅಳವಡಿಸಿದ್ದರೆ, ಮಹಾರಾಜಾ ಹರಿಸಿಂಗ್‌ನ ಅವಧಿಯಲ್ಲಿ ಇಡೀ ಉದ್ಯಾನವನ್ನು ವಿದ್ಯುದೀಕರಣದಿಂದ ಅಲಂಕಾರ ಮಾಡಲಾಗಿದೆ. ಹೀಗೆ ಬೇರೆ ಬೇರೆ ರಾಜರುಗಳ ಆಡಳಿತಾವಧಿಯಲ್ಲಿ ಶಾಲಿಮಾರ್ ಉದ್ಯಾನ ಅಭಿವೃದ್ಧಿಗೊಂಡು ಬೇರೆ ಬೇರೆ ಹೆಸರುಗಳನ್ನು ‍ಪಡೆದುಕೊಂಡಿದೆಯಾದರೂ, ‘ಶಾಲಿಮಾರ್ ಬಾಗ್’ ಹೆಸರು ಮಾತ್ರವೇ ಜನಪ್ರಿಯವಾಗಿ ಉಳಿದಿದೆ.

ಶಾಲಿಮಾರ್ ಉದ್ಯಾನದಲ್ಲಿ ನಿರ್ಮಿಸಲಾದ ಕಪ್ಪು ಪೆವಿಲಿಯನ್‌ನ ಚಾವಣಿಯ ಮೇಲೆ ಪರ್ಶಿಯನ್ ಭಾಷೆಯಲ್ಲಿ ಬರೆದ ದ್ವಿಪದಿ ಶಾಸನವಿದೆ. ಪರ್ಶಿಯನ್ ಕವಿ ಅಮೀರ್ ಖುಸ್ರೋ ಬೇರೆ ಸಂದರ್ಭದಲ್ಲಿ ಬರೆದ ಈ ದ್ವಿಪದಿಯನ್ನು ಇನ್ನೋರ್ವ ಪರ್ಶಿಯನ್ ಕವಿ ಓರ್ಫಿ ಶಿರಾಜಿಯು ಕಾಶ್ಮೀರಕ್ಕೆ ಭೇಟಿಯಿತ್ತ ಸಂದರ್ಭದಲ್ಲಿ ಪುನರುಚ್ಚರಿಸಿದ್ದ. ಅದರ ಅನುವಾದ ಹೀಗಿದೆ: ‘ಭೂಮಿಯ ಮೇಲೆ ಸ್ವರ್ಗವೊಂದಿದ್ದರೆ, ಅದು ಇಲ್ಲಿಯೇ, ಅದು ಇಲ್ಲಿಯೇ, ಅದು ಇಲ್ಲಿಯೇ.’

ಚಿನಾರ್ ವೃಕ್ಷಗಳ ಅನನ್ಯತೆ:

ಕಾಶ್ಮೀರ ರಾಜ್ಯದ ಅಸ್ಮಿತೆಯಾಗಿರುವ ಈ ವೃಕ್ಷಗಳ ಎಲೆಗಳು ಮನುಷ್ಯನ ಅಂಗೈಯನ್ನು ಬಿಡಿಸಿದಂತೆ ಇರುತ್ತವೆ. ಹಿಮಾಲಯದ ತಪ್ಪಲಿನ ಹವಾಗುಣ ಮತ್ತು ಭೂಗುಣಕ್ಕೆ ಪಕ್ಕಾ ಹೊಂದಿಕೊಂಡು ಬೆಳೆಯುತ್ತವೆ. ಶರತ್ಕಾಲದಲ್ಲಿ ಚಿನಾರ್ ವೃಕ್ಷದ ಎಲೆಯು ಸಾವಕಾಶವಾಗಿ ಹಳದಿ ಮಿಶ್ರಿತ ಕೆಂಪು ಬಣ್ಣಕ್ಕೆ ತಿರುಗಿ, ಇಡೀ ಶಾಲಿಮಾರ್ ಉದ್ಯಾನವು ನಂದನವನವಾಗಿ ಪರಿವರ್ತನೆಯಾಗುತ್ತದೆ. ಆಗ ಪ್ರವಾಸಿಗಳ ದಂಡು ನೆರೆಯುತ್ತದೆ. ದಾಲ್ ಸರೋವರದ ಮಧ್ಯೆ ಔರಂಗಜೇಬನ ಸಹೋದರ ಮುರಾದ್ ಬಕ್ಷನು ಚಿಕ್ಕ ನಡುಗಡ್ಡೆ (ರೂಪ್ ಲಂಕ್) ನಿರ್ಮಿಸಿ, ಅದರಲ್ಲಿ ನಾಲ್ಕು ಚಿನಾರ್ ಗಿಡಗಳನ್ನು ನೆಟ್ಟಿದ್ದನೆಂಬುದು ಚರಿತ್ರೆ. ಈಗ ಇದು ದಾಲ್ ಸರೋವರದ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದೆ.

ಫಲಕಗಳಿರುವ ಚಿನಾರ್ ವೃಕ್ಷಗಳು
ಫಲಕಗಳಿರುವ ಚಿನಾರ್ ವೃಕ್ಷಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT