ಹಸಿರು ಸಿರಿಯಲಿ.. ಮನಸು ಮೆರೆಯಲಿ...

7

ಹಸಿರು ಸಿರಿಯಲಿ.. ಮನಸು ಮೆರೆಯಲಿ...

Published:
Updated:

ಬೆಳಿಗ್ಗೆ ಸಣ್ಣಗೆ ಹನಿಯುತ್ತಿದ್ದ ಮಳೆ ದೇವರಾಯನದುರ್ಗಕ್ಕೆ ಹೋಗುವ ಆಸೆಗೆ ಭಂಗ ತರುವ ಲಕ್ಷಣ ಕಾಣುತ್ತಿತ್ತು. ಹೋಗುವುದೋ ಬಿಡುವುದೋ ಎಂಬ ಗೊಂದಲದಲ್ಲಿಯೇ ಕ್ಯಾಮೆರಾ ಹೆಗಲೇರಿ ಕುಳಿತಿತು. ಬೈಕ್‌ ಚಾಲು ಮಾಡಿ ಇಕ್ಕೆಲಕ್ಕೆ ಹಬ್ಬಿದ ಗಿಡಮರ, ಬಳ್ಳಿಗಳ ನಡುವಿನ ರಸ್ತೆಯಲ್ಲಿ ಹಾದು ಹೋಗುವಾಗ ಯಾವ ಮಳೆಯೂ ಗಮನಕ್ಕೆ ಬರಲಿಲ್ಲ. ಸುಯ್‌ ಗುಡುತ್ತಿದ್ದ ತಂಪು ಗಾಳಿ, ಮಳೆಯಿಂದ ಹಚ್ಚ ಹಸಿರಾದ ಬೆಟ್ಟ ಒಂಥರಾ ವಿಭಿನ್ನ ಅನುಭವ ನೀಡುತ್ತಿತ್ತು.

ನಗರದ ವಾಸ, ನಿತ್ಯವೂ ಕೆಲಸ ಒತ್ತಡಗಳ ನಡುವೆ ಮನಸ್ಸಿಗೆ ಮುದ ನೀಡುವ ವಾತಾವರಣ ಇದು. ಸೋತೆನೆಂದು ಬಿದ್ದವನಿಗೆ ಚಿಗುರುವ ಆಸೆಯ ಪ್ರೇರಣೆ ನೀಡಿ ಬೆನ್ನು ತಟ್ಟುವುದೂ ಇದೇ ಪ್ರಕೃತಿ. ಫೋಟೊ ತೆಗೆಯಲು ಹೊರಟವರಿಗೆ ಸಿಕ್ಕಿದ್ದು ನೂರೆಂಟು ದೃಶ್ಯಗಳು. ಇದರ ಸೌಂದರ್ಯ ಪದಗಳನ್ನು ಮೀರಿದ ಅನುಭವ.

ಒಂದೆಡೆ ಮೋಡಗಳ ಚಿತ್ತಾರ, ವೈವಿಧ್ಯಮಯ ಹೂವುಗಳ ಸ್ವಾಗತ, ತಂಗಾಳಿಯ ಸೆಳೆತಗಳ ನಡುವೆ ಫೋಟೋ ತೆಗೆಯಲು, ತೆಗೆಸಿಕೊಳ್ಳಲು ದಾರಿಯುದ್ದಕ್ಕೂ ನಿಂತ ಪ್ರವಾಸಿಗಳು, ಪ್ರೇಮಿಗಳು,.. ಎಲ್ಲರದೂ ಒಂದೊಂದು ಅನುಭವ. ಆಶಯ. ಎಲ್ಲರ ಬಯಕೆಯನ್ನೂ ಈಡೇರಿಸುವ ಕಾಮಧೇನುವಾಗಿ ದೇವರಾಯನದುರ್ಗ ಕಂಡಿತು.

ಮಳೆಯಿಂದ ಆರ್ದ್ರವಾದ ವಾತಾವರಣದಲ್ಲಿ, ಆಗಾಗ ಚುರುಗುಟ್ಟಿಸುವ ಎಳೆ ಬಿಸಿಲು, ಪಾಚಿಗಟ್ಟಿದ ಇಳಿಜಾರು, ಮೆಟ್ಟಿಲು, ಬಿಸಿಲಿಗೆ ಮಿನುಗುವ ಬಂಡೆಗಳನ್ನು ನೋಡುತ್ತ ನಿಂತಾಗ ಮಂಜಿನಂತೆ ಬೀಸಿದ ಗಾಳಿಯ ಒಂಥರಾ ಚಳಿ, ಮೈ ನಡುಗಿಸಿದರೂ ಸಿಗುವ ಖುಷಿಗೆ ಬೆಲೆ ಕಟ್ಟಲಾಗದು.

ಎದುರಿನ ಬೆಟ್ಟಗಳ ಸಾಲಿನಲ್ಲಿ ಚದುರಿದ ಮೋಡಗಳ ಚಲನೆ ಕ್ಷಣ ಕ್ಷಣಕ್ಕೂ ಕೌತುಕ ಮೂಡಿಸುತ್ತಿದ್ದವು. ಕ್ಯಾಮೆರಾ ಕ್ಲಿಕ್ಕಿಸಿದಾಗೆಲ್ಲ ಒಂದೊಂದು ಚಿತ್ತಾರ ಮೂಡುತ್ತಿದ್ದುದು ವಿಶೇಷ. ಬೆಟ್ಟಗಳ ನಡುವೆ ಹಾದು ಹೋಗುವ ಮೋಡಗಳು, ಕಲ್ಲು ಬೆಟ್ಟದ ಮೇಲೆ ಮಂಜಿನ ಮೋಡಗಳ ಉಂಗುರ ನೋಡುಗರನ್ನು ಸೆಳೆಯುತ್ತಿದ್ದವು.

ಅರಳಿ ನಿಂತ ಕಾಡಿನ ಹೂವುಗಳು ಮುಂಗಾರು ಸ್ವಾಗತಿಸುತ್ತಿದ್ದರೆ, ಅವುಗಳ ನಡುವೆ ಸೆಲ್ಫೀ ತೆಗೆದುಕೊಳ್ಳುತ್ತಿದ್ದ ಪ್ರೇಮಿಗಳಿಗೆ ಪ್ರೀತಿಗೆ ಸಾಕ್ಷಿಯಂತಿತ್ತು.ಇದನ್ನು ಕುತೂಹಲದಿಂದ ನೋಡುತ್ತ ಸಾಗುತ್ತಿದ್ದ ಸೈಕ್ಲಿಸ್ಟ್‌ಗಳು, ಬೆಳಗಿನ ವಿಹಾರಕ್ಕೆ ಬಂದ ಜನರು, ಕಾಲೇಜು ಹುಡುಗ ಹುಡುಗಿಯರ ಸಂಭ್ರಮಕ್ಕೂ ದೇವರಾಯನದುರ್ಗದ ಪರಿಸರ ಪ್ರೇರಣೆಯಾಗಿತ್ತು. ಹೊತ್ತು ಹೋಗಿದ್ದೇ ಗೊತ್ತಾಗಲಿಲ್ಲ. ಹಸಿದ ಹೊಟ್ಟೆ ಚುರುಗುಟ್ಟಿದಾಗಲೇ ಮನೆಯ ನೆನಪಾಗಿದ್ದು... ಆದರೆ ಒಲ್ಲದ ಮನಸ್ಸಿನಿಂದ ಕಾಡಿನ ಹಾದಿ ಬಿಟ್ಟು ಊರ ಹಾದಿ ಹಿಡಿಯುವಂತಾಯಿತು...

ವಾಪಸ್‌ ಬರುವಾಗ ಸೂರ್ಯ ನೆತ್ತಿಯ ಮೇಲೆ ಬರುತ್ತಿದ್ದ. ಮೋಡಗಳ ರಾಶಿ ಬೆಟ್ಟಗಳ ತುದಿಯಿಂದ ನಿಧಾನವಾಗಿ ಮರೆಯಾಗುತ್ತಿದ್ದವು. ಹಸಿರ ಸಿರಿಯಲ್ಲಿ ಶ್ಯಾಮಲೆಯ ಸದೃಶ ಕಣ್ಣ ಮುಂದೆ ನಿಂತಿತ್ತು. ಮೂರ್ತರೂಪಿಣಿ ಹೇಳಿದ್ದು, ಬೇಸತ್ತಾಗ ಮತ್ತೆ ಬಾ.. ಎಂದು.

ದೇವರಾಯನದುರ್ಗಕ್ಕೆ ಹೀಗೆ ಬನ್ನಿ

ತುಮಕೂರು ಜಿಲ್ಲೆಯ ದೇವರಾಯನದುರ್ಗಬೆಟ್ಟವು ಎಲೆ ಉದುರುವ ಕಾಡುಗಳಿಂದ ಆವೃತ್ತವಾಗಿದೆ. ಕೀಟಹಾರಿ ಸಸ್ಯ ಸೇರಿದಂತೆ ಹಲವು ಅಪರೂಪದ ಸಸ್ಯ ಮತ್ತು ಪ್ರಾಣಿಸಂಕುಲ ಇಲ್ಲಿದೆ. ಬೆಂಗಳೂರಿನಿಂದ ಸುಮಾರು 70 ಕಿ.ಮೀ. ದೂರದಲ್ಲಿದೆ. ದೇವರಾಯನದುರ್ಗದ ಭೋಗಾನಂದೀಶ್ವರ ಮತ್ತು ಯೋಗಾನಂದೀಶ್ವರ ದೇಗುಲಗಳಿಗೆ ಪ್ರತಿದಿನವೂ ನೂರಾರು ಭಕ್ತರು ಭೇಟಿ ನೀಡಿ ಹರಕೆ ಸಲ್ಲಿಸುತ್ತಾರೆ. ಸಮೀಪದಲ್ಲಿರುವ ನಾಮದಚಿಲುಮೆಯ ಜಿಂಕೆವನ, ಕಹಳೆಯವರಬಂಡೆ, ದುರ್ಗದಹಳ್ಳಿಯ ವಿದ್ಯಾಶಂಕರ ದೇಗುಲ, ಗೊರವನಹಳ್ಳಿ ಲಕ್ಷ್ಮಿ ದೇಗುಲಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ. ಇದೇ ಮಾರ್ಗದಲ್ಲಿರುವ ಚಿನಗ ಬೆಟ್ಟ ಚಾರಣಿಗರ ಆಕರ್ಷಣೆಯ ಕೇಂದ್ರ ಎನಿಸಿದೆ.

 

⇒ಚಿತ್ರಗಳು: ಲೇಖಕರವು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !