ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರ್‌ನ ಕಣ್ಣು

Last Updated 1 ಆಗಸ್ಟ್ 2019, 5:36 IST
ಅಕ್ಷರ ಗಾತ್ರ

ಸಿಂಗಪುರ ಹಲವಾರು ಕಾರಣಗಳಿಂದ ಇಷ್ಟವಾಗುವಂತಹ ದೇಶ. ಒಮ್ಮೆ ಭೇಟಿ ಕೊಟ್ಟರೆ ಅಲ್ಲಿನ ನೆನಪುಗಳು ಅಷ್ಟು ಸುಲಭವಾಗಿ ಮಾಸುವುದಿಲ್ಲ. ಇಲ್ಲಿನ ಜನರ ಸಮಯ ಪ್ರಜ್ಞೆ, ಸ್ವಚ್ಛತೆ, ಪರಿಶ್ರಮಗಳು ಒಂದು ಕಡೆಯಾದರೆ, ಇನ್ನೊಂದೆಡೆ ಇಲ್ಲಿನ ಪರಿಸರ, ಕಣ್ಣಿಗೆ ತಂಪನ್ನೀಯುವ ಹಸಿರು, ಗಗನ ಚುಂಬಿ ಕಟ್ಟಡಗಳ ವಾಸ್ತುಶಿಲ್ಪ, ಕಿರಿ ಕಿರಿ ಇಲ್ಲದ ವಾಹನ ಸಂಚಾರ, ಜನದಟ್ಟಣೆ ಇಲ್ಲದ ರಸ್ತೆಗಳು, ಮನಸ್ಸನ್ನು ಮುದಗೊಳಿಸುವ ಪ್ರವಾಸಿ ತಾಣಗಳು.

ಇತ್ತೀಚೆಗೆ ಸಿಂಗಪುರ ಪ್ರವಾಸಕ್ಕೆ ಹೋಗಿದ್ದಾಗ, ಅಲ್ಲಿನ ಅಪರೂಪದ ಉದ್ಯಾನಗಳು, ಪ್ರಾಣಿ-ಪಕ್ಷಿ ಸಂಗ್ರಹಾಲಯಗಳು, ಯುನಿವರ್ಸಲ್ ಸ್ಟುಡಿಯೊ.. ಹೀಗೆ ಒಂದೊಂದು ತಾಣವು ಒಂದೊಂದು ರೀತಿಯಲ್ಲಿ ಇಷ್ಟವಾದವು. ಆದರೆ, ಇಡೀ ಪ್ರವಾಸದಲ್ಲಿ ನನ್ನನ್ನು ಸೆಳೆದಿದ್ದು ‘ಸಿಂಗಪುರ್ ಫ್ಲೈಯರ್’. ಆ ಫ್ಲೈಯರ್ ನಿರ್ಮಾಣ, ಈ ದೇಶದವರ ಜಾಣ್ಮೆಗೆ ಒಂದು ನಿದರ್ಶನ. ಈ ನಗರದ ಯಾವುದೇ ಮೂಲೆಗೆ ಹೋದರೂ ಸಿಂಗಪುರ ಫ್ಲೈಯರ್ ತನ್ನ ಇರುವಿಕೆಯನ್ನು ತೋರುತ್ತದೆ.

ಇದನ್ನು ‘ಸಿಂಗಪುರ ಫ್ಲೈಯರ್-360+’ ಎಂದು ಗುರುತಿಸಲಾಗುತ್ತದೆ. ಇದೊಂದು ಬೃಹತ್ ನಿರೀಕ್ಷಣಾ ಚಕ್ರ (ವಾಚಿಂಗ್ ವೀಲ್). ಏಷ್ಯಾದಲ್ಲಿಯೇ ಅತ್ಯಂತ ದೊಡ್ಡದಾದ ಚಕ್ರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಸಮುದ್ರ ಮಟ್ಟದಿಂದ 165 ಮೀಟರ್ ಎತ್ತರದಲ್ಲಿ ಈ ಚಕ್ರ ಸುತ್ತುತ್ತದೆ. ನಮ್ಮ ಸುತ್ತಮುತ್ತಲಿನ ದೂರದ ಪ್ರದೇಶವನ್ನು ವೀಕ್ಷಿಸಲು ನಿರೀಕ್ಷಣಾ ಗೋಪುರಗಳು ಹೇಗೆ ಇರುತ್ತವೆಯೋ ಅದೇ ರೀತಿಯಲ್ಲಿ ಈ ನಿರೀಕ್ಷಣಾ ಚಕ್ರ ಕೆಲಸ ಮಾಡುತ್ತದೆ. ಈ ಬೃಹತ್ ಚಕ್ರದ ಸುತ್ತಲೂ ಕ್ಯಾಪ್ಸೂಲ್ ಆಕಾರದ ಒಟ್ಟು 28 ಗಾಜಿನ ಕೋಣೆಗಳಿವೆ. ಒಂದು ಕೋಣೆಯ ಅಳತೆ ಒಂದು ಮಿನಿ ಬಸ್‍ನ ಗಾತ್ರದ್ದಾಗಿದೆ. ಈ ಚಕ್ರ ನಿಧಾನಗತಿಯಲ್ಲಿ 360 ಡಿಗ್ರಿ ವ್ಯಾಸದಲ್ಲಿ ಸುತ್ತುತ್ತದೆ. ಈ ಗಾಜಿನ ಕ್ಯಾಪ್ಸೂಲ್ ಹವಾ ನಿಯಂತ್ರಿತ ಕೊಠಡಿಗಳಾಗಿವೆ. ನಮ್ಮ ಅನುಭವಕ್ಕೆ ಬರದೇ ಇರುವಷ್ಟು ನಿಧಾನಗತಿಯಲ್ಲಿ ಸುತ್ತುತ್ತಿರುತ್ತದೆ. ಇದು ಒಂದು ಸುತ್ತನ್ನು ಪೂರೈಸಲು ಸುಮಾರು ಅರ್ಧ ಗಂಟೆ ತೆಗೆದುಕೊಳ್ಳುತ್ತದೆ.

ಈ ಚಕ್ರದ ಗಾಜಿನ ಕೋಣೆಯಲ್ಲಿ ಕುಳಿತು ಅಥವಾ ನಿಂತು ಸಿಂಗಪೂರ ನಗರದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು. ಚಕ್ರದ ತುತ್ತ ತುದಿಯಲ್ಲಿ ನಾವಿದ್ದಾಗ 541 ಅಡಿ ಎತ್ತರದಲ್ಲಿರುತ್ತೇವೆ. ಈ ಪುಟ್ಟ ಕೊಠಡಿಯಲ್ಲಿರುವ ಸ್ಕ್ರೀನ್ ಮೇಲೆ ಸಿಂಗಪುರ್‌ನ ವಿವರಣೆ ಕೇಳಿ ಬರುತ್ತದೆ.

2008ರಲ್ಲಿ ಲೋಕಾರ್ಪಣೆಗೊಂಡ ಈ ಫ್ಲೈಯರ್‌ ನಿರ್ಮಾಣಕ್ಕೆ ತಗುಲಿದ ವೆಚ್ಚ 240 ದಶಲಕ್ಷ ಡಾಲರ್‌ಗಳು. ಇದನ್ನು ‘ಸಿಂಗಪುರ್‌ನ ಕಣ್ಣು’ ಎಂದು ಕರೆಯುತ್ತಾರೆ. ‌

ಒಂದು ಗಾಜಿನ ಕೋಣೆಯಲ್ಲಿ ಹತ್ತರಿಂದ ಹದಿನೈದು ಜನರು ನಿಂತುಕೊಳ್ಳಬಹುದು. ಇಲ್ಲಿಂದ ಸಿಂಗಪುರ್‌ನ ದೃಶ್ಯ ಕಾವ್ಯಗಳನ್ನು ನಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯಬಹುದು. ಈ ಫ್ಲೈಯರ್‌ ಗಾತ್ರ, ಭಾರವನ್ನು ತಡೆದುಕೊಳ್ಳುವ ಶಕ್ತಿ, ಇದರ ನಿರ್ಮಾಣದ ಹಿಂದಿರುವ ಪರಿಕಲ್ಪನೆ ಅದ್ಭುತ ಎನಿಸುತ್ತದೆ.

ನಿತ್ಯವೂ ತೆರೆದಿರುತ್ತದೆ

‘ಸಿಂಗಪುರ್ ಕಣ್ಣು ಫ್ಲೈಯರ್ 360 +’ ಪ್ರವಾಸಿಗರಿಗೆ ಪ್ರತಿ ನಿತ್ಯ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪ್ರವೇಶಾವಕಾಶವಿರುತ್ತದೆ. ಪ್ರವೇಶ ದರ ಪ್ರತಿ ವ್ಯಕ್ತಿಗೆ 33 ಡಾಲರ್‍.

ಚಿತ್ರಗಳು: ಸಾಧ್ವಿ ಚಂದ್ರಕೇಸರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT