ಟ್ರಾಫಿಕ್ನಲ್ಲಿ ಸಿಲುಕಿದ್ದೀರಿ. ಹಾರ್ನ್ಗಳ ಗದ್ದಲ, ಹೊಗೆ, ದೂಳಿನಿಂದ ತುಂಬಿದ ಗಾಳಿ. ಆ ಕ್ಷಣದಲ್ಲಿ ಮನಸ್ಸು ಎಲ್ಲೋ ಓಡುತ್ತದೆ–ಈ ಕಾಂಕ್ರೀಟ್ ಕಾಡಿನಿಂದ ದೂರ… ಅಲೆಗಳ ಶಬ್ದ ಕೇಳಿಸುವ ಕಡಲತೀರದತ್ತ, ಅಥವಾ ಮೌನದ ಕಾಡಿನತ್ತ, ಕೆಲವೊಮ್ಮೆ ದೇವಾಲಯದ ಗಂಟೆ ಶಬ್ದದತ್ತ.

ಆ ಮೂರೂ ಜಗತ್ತುಗಳು ಒಂದೇ ಕಡೆ ಸಿಗುತ್ತವೆಯೇ ಎಂದರೆ? ಉತ್ತರ–ಗೋಕರ್ಣ.

ಗೋಕರ್ಣಕ್ಕೆ ಕಾಲಿಟ್ಟ ಕ್ಷಣದಿಂದಲೇ ಒಂದು ವಿಚಿತ್ರ ಬದಲಾವಣೆ ಶುರುವಾಗುತ್ತದೆ. ಬಸ್ನಿಂದ ಇಳಿದಾಗಲೇ ಗಾಳಿಯಲ್ಲೊಂದು ತಾಜಾತನ. ಉಪ್ಪಿನ ವಾಸನೆಯ ಜೊತೆ ಮಿಶ್ರಣವಾದ ಗಾಳಿ ಮುಖಕ್ಕೆ ತಾಕಿದರೆ ನೀವು ಸಮುದ್ರದ ಹತ್ತಿರ ಬಂದಿದ್ದೀರಿ ಎಂದರ್ಥ. ಬೀದಿಯಲ್ಲಿ ಸಾಗಿದರೆ ಒಂದು ಕಡೆ ಸಾಂಪ್ರದಾಯಿಕ ಉಡುಗೆಯಲ್ಲಿ ದೇವಸ್ಥಾನಕ್ಕೆ ಹೋಗುವ ಭಕ್ತರು… ಮತ್ತೊಂದು ಕಡೆ ಸೂರ್ಯನ ಕೆನ್ನಾಲಿಗೆಗೆ ತಲೆಕೊಟ್ಟು, ನಿರಾಳವಾಗಿ ನಡೆಯುವ ವಿದೇಶಿ ಪ್ರವಾಸಿಗರು. ಇಲ್ಲಿ ಯಾರಿಗೂ ಆತುರ ಇಲ್ಲ; ಯಾರೂ ಸಮಯದ ಜೊತೆ ಓಡುತ್ತಿಲ್ಲ. ಕಾಲವೇ ಸ್ವಲ್ಪ ನಿಧಾನವಾಗಿ ಸಾಗುವಂತೆ ಅನ್ನಿಸುತ್ತದೆ–ನೀವು ಕೂಡ ಆ ಲಯಕ್ಕೆ ಜಾರಿಬಿಡುತ್ತೀರಿ.

ಬೆಳಿಗ್ಗೆ ಮಹಾಬಲೇಶ್ವರ ದೇವಸ್ಥಾನದ ಕಡೆ ಹೆಜ್ಜೆ ಹಾಕಿದರೆ ಭಕ್ತಿ ಮನಸ್ಸನ್ನು ಆವರಿಸುತ್ತದೆ. ದೇವಾಲಯದ ಗಂಟೆಗಳ ನಾದ, ಮಂತ್ರಗಳ ಪ್ರತಿಧ್ವನಿ, ದೀಪದ ಸುಗಂಧ ಇವುಗಳು ಮನಸ್ಸಿಗೆ ಶಾಂತಿ ನೀಡುತ್ತವೆ. ಕೋಟಿತೀರ್ಥದ ಕಟ್ಟೆಯ ಬಳಿ ಕುಳಿತುಕೊಂಡರೆ ಬದುಕಿನ ಗಡಿಬಿಡಿ ಕ್ಷಣಕಾಲ ನಿಂತಂತೆ ಅನುಭವ. ನೀರಿನ ಮೇಲಿನ ಅಲೆಗಳ ಸಣ್ಣ ಚಲನೆಗಳನ್ನು ನೋಡುತ್ತಾ ಕುಳಿತರೆ, ಒಳಗಿನ ಗದ್ದಲ ನಿಧಾನವಾಗಿ ಶಮನವಾಗುತ್ತದೆ. ಕೆಲವರು ಅಲ್ಲೇ ಮೌನವಾಗಿ ಕುಳಿತು ಧ್ಯಾನಿಸುವುದೂ ಕಾಣಿಸುತ್ತದೆ.

ಆದರೆ ಅದೇ ದಿನ ಮಧ್ಯಾಹ್ನ ಕುಡ್ಲೆ ಅಥವಾ ಓಂ ಬೀಚ್ಗೆ ಹೋದರೆ ಪೂರ್ಣವಾಗಿ ಬೇರೆಯದೇ ಲೋಕ!

ಅಲ್ಲಿ ಅಲೆಗಳ ಜೊತೆ ಓಡಾಡುವವರು, ಮರಳಿನ ಮೇಲೆ ಮಲಗಿ ಸೂರ್ಯನನ್ನು ನೋಡುವವರು, ಕೆಫೆಗಳಲ್ಲಿ ಕುಳಿತು ಜೂಸ್ ಹೀರುತ್ತ ದೂರದ ಸಮುದ್ರವನ್ನು ಕಣ್ತುಂಬಿಕೊಳ್ಳುವವರು… ಪಕ್ಕದಲ್ಲೇ ಸಂಗೀತಕ್ಕೆ ಹೆಜ್ಜೆ ಹಾಕುವ ಯುವಕರ ಗುಂಪು. ಬಣ್ಣ ಬಣ್ಣದ ಛತ್ರಿಗಳ ಕೆಳಗೆ ಪುಸ್ತಕ ಓದುತ್ತಿರುವವರು, ಕ್ಯಾಮೆರಾ ಹಿಡಿದು ಸೂರ್ಯಾಸ್ತ ಹಿಡಿಯಲು ಕಾಯುತ್ತಿರುವವರು–ಪ್ರತಿ ಮುಖದಲ್ಲೂ ನಿರಾಳತೆಯ ಗುರುತು. ಯಾರೋ ಯೋಗಾಭ್ಯಾಸ ಮಾಡುತ್ತಿರುತ್ತಾರೆ, ಇನ್ನೊಬ್ಬರು ಸರ್ಫಿಂಗ್ ಕಲಿಯಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಆಶ್ಚರ್ಯವೇನೆಂದರೆ–ಈ ಎಲ್ಲಾ ಗದ್ದಲದ ಮಧ್ಯೆಯೂ ಸಮುದ್ರ ಮಾತ್ರ ಮೌನವಾಗಿಯೇ ತನ್ನ ಕಥೆಯನ್ನು ಹೇಳುತ್ತಿರುತ್ತದೆ.

‘ಗೋವಾ ಮೋಜಿನ ಜಾಗ. ಆದರೆ ಮೋಜಿನಾಚೆಗೂ ಏನೋ ಇದೆ ಅನ್ನಿಸುವವರಿಗೆ ಗೋಕರ್ಣವೇ ಬೇಕು’ ಎಂದು ಹೇಳುತ್ತಾರೆ ಮೈಸೂರಿನ ಆರ್. ನಟರಾಜ್. ಅವರ ಮಾತು ಕೇಳಿದರೆ ಗೋಕರ್ಣದ ಅರ್ಥ ಸ್ಪಷ್ಟವಾಗುತ್ತದೆ. ಇದು ಕೇವಲ ಪ್ರವಾಸಿ ತಾಣವಲ್ಲ, ಒಂದು ಅನುಭವ. ಇಲ್ಲಿ ಮೋಜು ಇದೆ, ಆದರೆ ಅದಕ್ಕಿಂತ ಹಿರಿದು ಇಲ್ಲಿ ಮನಸ್ಸಿಗೆ ಸಿಗುವ ವಿಶ್ರಾಂತಿ ಮತ್ತು ಒಳಗಿನ ನೆಮ್ಮದಿ.

ಹಿಂದೆ ಗೋಕರ್ಣ ಎಂದರೆ ದೇವಸ್ಥಾನ ಮತ್ತು ಪಿತೃಕಾರ್ಯಗಳ ತಾಣವಷ್ಟೇ ಎನ್ನುವ ಮಾತಿತ್ತು. ಈಗ ಚಿತ್ರಣ ಸಂಪೂರ್ಣ ಬದಲಾಗಿದೆ. ಇಲ್ಲಿ ಶಿವಭಕ್ತನೂ ಇದ್ದಾನೆ, ಬ್ಯಾಕ್ಪ್ಯಾಕರ್ ವಿದೇಶಿಗನೂ ಇದ್ದಾನೆ; ಯೋಗ ಕಲಿಯುವ ಯುವತಿಯೂ ಇದ್ದಾಳೆ, ಟ್ರೆಕ್ಕಿಂಗ್ಗಾಗಿ ಬಂದ ತಂಡವೂ ಇದೆ. ಕೆಲವರು ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿ ಸಂಜೆ ಬೀಚ್ನಲ್ಲಿ ಸಂಗೀತ ಕೇಳುತ್ತಾರೆ. ಇದು ಇಲ್ಲಿ ಸಾಮಾನ್ಯ. ಎಲ್ಲರಿಗೂ ತಮ್ಮದೇ ಗೋಕರ್ಣ ಇದೆ; ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಈ ಊರನ್ನು ಅನುಭವಿಸುತ್ತಾರೆ.

ಯೂರೋಪ್ನ ಅನೇಕ ದೇಶಗಳಿಂದ ಬರುವ ಪ್ರವಾಸಿಗರು ಇಲ್ಲಿಗೆ ಬಂದು ತಿಂಗಳಗಟ್ಟಲೆ ತಂಗುತ್ತಾರೆ. ಬೆಳಿಗ್ಗೆ ಯೋಗ, ಮಧ್ಯಾಹ್ನ ಕಡಲತೀರ, ಸಂಜೆ ಸಂಗೀತ. ಇದು ಅವರ ದಿನಚರಿ. ಕೆಲವರು ಇಲ್ಲಿ ಇಷ್ಟಪಟ್ಟು ಕಾಟೇಜ್ಗಳನ್ನು ಬಾಡಿಗೆಗೆ ಪಡೆದು ಬದುಕನ್ನೇ ಇಲ್ಲಿ ಕಟ್ಟಿಕೊಳ್ಳುತ್ತಾರೆ. ತಮ್ಮ ದೇಶದಿಂದ ತಂದ ಸಣ್ಣ ಸಣ್ಣ ವಸ್ತುಗಳನ್ನು ಮಾರಾಟ ಮಾಡಿ, ಇಲ್ಲಿನ ಬದುಕಿನ ಭಾಗವಾಗಿಬಿಡುತ್ತಾರೆ. ಸ್ಥಳೀಯರೊಂದಿಗೆ ಬೆರೆತು, ಅವರ ಸಂಸ್ಕೃತಿಯನ್ನೂ ಅಳವಡಿಸಿಕೊಳ್ಳುತ್ತಾರೆ. ಗೋಕರ್ಣ ಅವರಿಗೆ ಪ್ರವಾಸಿ ತಾಣವಲ್ಲ; ತಾತ್ಕಾಲಿಕ ಮನೆ, ಕೆಲವೊಮ್ಮೆ ಶಾಶ್ವತ ನೆನಪು.

‘ಕುಡ್ಲೆ, ಓಂ ಬೀಚ್ಗಳಲ್ಲಿ ಜನರೇ ಕಾಣಸಿಗುತ್ತಿರಲಿಲ್ಲ. ತೆಂಗಿನಗರಿಯ ಶೆಡ್ಗಳಲ್ಲಿ ತಂಗಬೇಕಾಗುತ್ತಿತ್ತು. ಈಗ ನೋಡಿದರೆ ಹೊಸ ಜಗತ್ತೇ ಸೃಷ್ಟಿಯಾಗಿದೆ’ ಎನ್ನುತ್ತಾರೆ ಐವತ್ತು ವರ್ಷಗಳಿಂದ ಗೋಕರ್ಣಕ್ಕೆ ಬರುತ್ತಿರುವ ಇಂಗ್ಲೆಂಡ್ನ ಅಂತೋನಿಯಾ ಚೆಟ್ವಿಂಡ್. ಅವರ ಕಣ್ಣುಗಳಲ್ಲಿ ಹಳೆಯ ನೆನಪುಗಳ ಹೊಳಪು ಇನ್ನೂ ಕಾಣುತ್ತದೆ. ಆದರೆ ಇಂದಿನ ಗೋಕರ್ಣದ ಮೇಲೆ ಆಶ್ಚರ್ಯವೂ ತೋರುತ್ತದೆ.

ಟ್ರೆಕ್ಕಿಂಗ್ ಪ್ರಿಯರಿಗೆ ಗೋಕರ್ಣ ಇನ್ನೊಂದು ಸ್ವರ್ಗ. ಪ್ಯಾರಡೈಸ್ ಬೀಚ್ನಿಂದ ಹಾಫ್ ಮೂನ್, ಅಲ್ಲಿಂದ ಓಂ ಬೀಚ್ವರೆಗೆ ಕಾಡಿನ ನಡುವೆ ನಡೆಯುವ ದಾರಿ–ಪ್ರತಿ ಹೆಜ್ಜೆಯಲ್ಲೂ ಹೊಸ ದೃಶ್ಯ. ಕೆಲವೆಡೆ ಕಲ್ಲುಬಂಡೆಗಳ ನಡುವೆ ಸಣ್ಣ ದಾರಿಗಳು, ಕೆಲವೆಡೆ ಮರಗಳ ನೆರಳು, ಇನ್ನೂ ಕೆಲವೆಡೆ ಅಚಾನಕ್ ತೆರೆದುಕೊಳ್ಳುವ ಸಮುದ್ರದ ದೃಶ್ಯ. ಅಲೆಗಳ ಶಬ್ದ ದೂರದಿಂದ ಕೇಳಿಸುತ್ತಾ, ಹಕ್ಕಿಗಳ ಕೂಗು ಜೊತೆಗಿದ್ದು, ಈ ಪಯಣ ಮನಸ್ಸನ್ನು ಸಂಪೂರ್ಣವಾಗಿ ಪ್ರಕೃತಿಯೊಳಗೆ ಕರಗಿಸುತ್ತದೆ. ಮಧ್ಯೆ ಮಧ್ಯೆ ನಿಂತು ಆ ದೃಶ್ಯವನ್ನು ಕಣ್ತುಂಬಿಕೊಳ್ಳಲೇಬೇಕೆನಿಸುತ್ತದೆ.

ಸಂಜೆ ಸೂರ್ಯಾಸ್ತ ನೋಡಲು ಕುಳಿತಾಗ ಗೋಕರ್ಣ ತನ್ನ ನಿಜವಾದ ರೂಪ ತೋರಿಸುತ್ತದೆ. ಆಕಾಶ ನಿಧಾನವಾಗಿ ಕಿತ್ತಳೆ ಬಣ್ಣ ತಾಳುತ್ತದೆ, ನಂತರ ಕೆಂಪಾಗುತ್ತದೆ. ಸಮುದ್ರದ ಮೇಲ್ಮೈ ಆ ಬಣ್ಣವನ್ನು ಪ್ರತಿಬಿಂಬಿಸುತ್ತದೆ. ಜನರು ಮೌನವಾಗುತ್ತಾರೆ. ಯಾರಿಗೂ ಮಾತಾಡಬೇಕೆನಿಸುವುದಿಲ್ಲ. ಕೆಲವರು ಕೈಯಲ್ಲಿ ಕ್ಯಾಮೆರಾ ಹಿಡಿದು ಆ ಕ್ಷಣವನ್ನು ಹಿಡಿಯಲು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ಕೇವಲ ಕಣ್ಣುಗಳಿಂದಲೇ ಆ ಸೌಂದರ್ಯವನ್ನು ಹೀರುತ್ತಾರೆ. ಆ ಕ್ಷಣದಲ್ಲಿ ನೀವು ಅರಿಯುತ್ತೀರಿ–ಇಲ್ಲಿ ನೀವು ಪ್ರವಾಸಿಗನಲ್ಲ, ಈ ಪ್ರಕೃತಿಯ ಒಂದು ಭಾಗ.

ರಾತ್ರಿಯಲ್ಲಿ ಮತ್ತೊಂದು ಗೋಕರ್ಣ ಎಚ್ಚರಗೊಳ್ಳುತ್ತದೆ. ಬೀಚ್ ಸುತ್ತಲಿನ ಕೆಫೆಗಳಲ್ಲಿ ಮೃದುವಾದ ಸಂಗೀತ, ಮಿಂಚುವ ದೀಪಗಳು, ಸ್ನೇಹಿತರೊಂದಿಗೆ ಕುಳಿತು ಮಾತುಕತೆ… ಕೆಲವರು ಗಿಟಾರ್ ಬಾರಿಸುತ್ತಾ ಹಾಡುತ್ತಾರೆ. ಕೆಲವರು ಮೌನವಾಗಿ ಸಮುದ್ರವನ್ನು ನೋಡುತ್ತ ಕುಳಿತುಕೊಳ್ಳುತ್ತಾರೆ. ಅಲೆಗಳ ಶಬ್ದ ರಾತ್ರಿ ಇನ್ನಷ್ಟು ಸ್ಪಷ್ಟವಾಗಿ ಕೇಳುತ್ತದೆ. ದಿನದ ಗದ್ದಲದ ನಂತರ ರಾತ್ರಿ ಗೋಕರ್ಣ ಮತ್ತೆ ಮೃದುವಾದ ಮೌನವನ್ನು ಹೊದಿಕೊಳ್ಳುತ್ತದೆ. ಆ ಮೌನವೇ ಇಲ್ಲಿ ಉಳಿಯುವ ನೆನಪು.

ಗೋಕರ್ಣದಲ್ಲಿ ಭಕ್ತಿ ಇದೆ. ಮೋಜು ಇದೆ. ಮೌನ ಇದೆ– ಈ ಮೂರೂ ಒಂದೇ ಜಾಗದಲ್ಲಿ ಸೇರುವ ಅಪರೂಪದ ಸ್ಥಳ ಇದು. ಇಲ್ಲಿ ಬಂದವರು ಕೇವಲ ನೆನಪುಗಳನ್ನು ಮಾತ್ರ ತೆಗೆದುಕೊಂಡು ಹೋಗುವುದಿಲ್ಲ; ತಮ್ಮೊಳಗೆ ಸ್ವಲ್ಪ ಬದಲಾವಣೆಯನ್ನೂ, ಒಂದು ಹೊಸ ಚೈತನ್ಯವನ್ನು ಹೊಂದುತ್ತಾರೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-51-1146350687

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.