ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲ ಮೈದಳೆಯುವ ‘ಗೋಲಾರಿ’

ಕಾರವಾರ ತಾಲ್ಲೂಕಿನ ತೋಡೂರು ಗ್ರಾಮದಲ್ಲಿ ಕಾಡಿನಲ್ಲಿರುವ ಜಲಪಾತ
Last Updated 9 ಜುಲೈ 2022, 19:30 IST
ಅಕ್ಷರ ಗಾತ್ರ

ಕಾರವಾರ: ‘ಜಲಪಾತಗಳ ಜಿಲ್ಲೆ’ ಎಂದೂ ಪ್ರಸಿದ್ಧವಾಗಿರುವ ಉತ್ತರ ಕನ್ನಡದಲ್ಲಿ ಕಾಡಿನ ನಡುವೆ ಆಕರ್ಷಿಸುವ ತೊರೆಗಳು ಹತ್ತಾರು ಇವೆ. ತಾಲ್ಲೂಕಿನ ತೋಡೂರಿನ ಗೋಲಾರಿ ಜಲಪಾತ ಅವುಗಳಲ್ಲಿ ಒಂದು.

ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು ಎರಡು ಕಿಲೋಮೀಟರ್ ದೂರ ಸಾಗಿ, ದಟ್ಟವಾದ ಕಾಡಿನ ನಡುವೆ ಏರು ದಾರಿಯಲ್ಲಿ ಹೆಜ್ಜೆ ಹಾಕಬೇಕು. ಕಾಲುದಾರಿಯಲ್ಲಿ ಉದ್ದಕ್ಕೂ ಹಳ್ಳದ ನೀರು ಜುಳು ಜುಳು ಎಂದು ಹರಿಯುತ್ತದೆ. ದಾರಿ ಕ್ರಮಿಸುವಾಗ ಬೆವರಿದರೂ ಪ್ರಕೃತಿಯ ನಡುವೆ ಸಾಗುವಾಗ ಸಿಗುವ ಅನುಭೂತಿಯು ಸುಸ್ತನ್ನು ಮರೆಸುತ್ತದೆ.

ಶುದ್ಧ ವಾತಾವರಣ, ಜೀಜಿಂಬೆಗಳ ಆಲಾಪನೆ, ಮರಗಳಿಂದ ತೊಟ್ಟಿಕ್ಕುವ ಮಳೆ ನೀರನ್ನು ಅನುಭವಿಸುತ್ತ ಸಾಗಿದಾಗ ದೂರದಲ್ಲಿ ಭೋರ್ಗರೆಯುವ ನೀರಿನ ಶಬ್ದ ಕೇಳಿಸುತ್ತದೆ. ಬೆಟ್ಟದ ಅರ್ಧಾಂಶ ಮೇಲೆ ತಲುಪಿದಾಗ ಸುಮಾರು 65 ಅಡಿಗಳ ಎತ್ತರದಿಂದ ಹಾಲ್ನೊರೆಯಂತೆ ಧುಮ್ಮಿಕ್ಕುವ ನೀರು ಸ್ವಾಗತಿಸುತ್ತದೆ.

ಮಳೆಗಾಲದಲ್ಲಿ ಅದ್ಧೂರಿಯಾಗಿ ಮೈದಳೆಯುವ ಈ ಜಲಧಾರೆಯು, ಬೇಸಿಗೆಯಲ್ಲಿ ಸೊರಗುತ್ತದೆ. ಕಾಡಿನಲ್ಲಿ, ಬೆಟ್ಟದ ಮೇಲೆ ಸುರಿಯುವ ಮಳೆ ನೀರೇ ಇದಕ್ಕೆ ಆಧಾರ. ಹಾಗಾಗಿ ಮಳೆಗಾಲ ಮುಗಿಯುತ್ತಿದ್ದಂತೆ ನೀರಿನ ಪ್ರಮಾಣ ಕಡಿಮೆಯಾಗಿ ಮತ್ತೆ ಮುಂದಿನ ಮುಂಗಾರಿಗೆ ಕಾಯುತ್ತದೆ.

ಕಾರವಾರ, ಅಂಕೋಲಾ ತಾಲ್ಲೂಕುಗಳ ಸಾರ್ವಜನಿಕರಿಗೆ ಇದು ಪಿಕ್‌ನಿಕ್ ಜಾಗವಾಗಿದೆ. ಮನೆಯಿಂದಲೇ ಸಿದ್ಧಪಡಿಸಿದ ಆಹಾರವನ್ನು ತೆಗೆದುಕೊಂಡು ಬಂದು, ಒಂದಷ್ಟು ಹೊತ್ತು ಇಲ್ಲಿ ಕಾಲ ಕಳೆಯುತ್ತಾರೆ. ಜಲಧಾರೆಯ ಬುಡದಲ್ಲಿ ಬಹಳ ಆಳವಿಲ್ಲ. ನೀರು ಹರಿದು ಹೋಗುವ ಜಾಗವೂ ಬಹಳ ಇಳಿಜಾರಾಗಿಲ್ಲ. ಹಾಗಾಗಿ ನೀರಿಗೆ ಮೈಯೊಡ್ಡಿ ನಿಲ್ಲಲೂ ಸಾಧ್ಯವಿದೆ.

ಜಲಪಾತದ ಬುಡದಲ್ಲಿ ದೊಡ್ಡ ಬಂಡೆಗಲ್ಲುಗಳಿವೆ. ಅವುಗಳಲ್ಲಿ ಪಾಚಿ ಕಟ್ಟಿದ್ದರೆ, ನಿರಂತರವಾಗಿ ನೀರಿನ ಹೊಡೆತಕ್ಕೆ ಸಿಕ್ಕಿದ್ದರೆ ಬಹಳ ನುಣುಪಾಗಿರುತ್ತವೆ. ಹಾಗಾಗಿ, ನೀರು ಕಂಡ ಹುಮ್ಮಸ್ಸಿನಲ್ಲಿ ಮೈಮರೆತು ಕಾಲಿಟ್ಟರೆ ಜಾರಿ ಬಿದ್ದ ಏಟು ಮಾಡಿಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಪ್ರವಾಸಿಗರು ಎಚ್ಚರಿಕೆ ವಹಿಸುವುದು ಸೂಕ್ತ.

ಒಂದಷ್ಟು ಅಭಿವೃದ್ಧಿ: ಗೋಲಾರಿ ಜಲಪಾತದ ಪ್ರದೇಶವನ್ನು ಜಿಲ್ಲಾ ಪಂಚಾಯಿತಿಯಿಂದ ಈಚೆಗೆ ಒಂದಷ್ಟು ಅಭಿವೃದ್ಧಿ ಪಡಿಸಲಾಗಿದೆ. ವಿಶ್ರಾಂತಿ ಪಡೆಯಲು, ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ಸುತ್ತಮುತ್ತ ಕೆಲವು ಆಸನ ವ್ಯವಸ್ಥೆ ಮಾಡಲಾಗಿದೆ. ಜಲಪಾತದ ದಾರಿಗೆ ಸ್ವಾಗತ ಕಮಾನು ಅಳವಡಿಸಲಾಗಿದೆ.

‘ಜೂನ್‌, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಜಲಪಾತವು ಮೈತುಂಬಿ ಹರಿಯುತ್ತದೆ. ಇಲ್ಲಿಗೆ ಬರುವ ಕೆಲವು ಪ್ರವಾಸಿಗರು ಪಾರ್ಟಿ, ಮೋಜು– ಮಸ್ತಿ ಮಾಡಿ ನೀರಿನ ಪ್ಲಾಸ್ಟಿಕ್ ಬಾಟಲಿಗಳು, ಮದ್ಯದ ಗಾಜಿನ ಸೀಸೆಗಳನ್ನು, ಆಹಾರ ಪೊಟ್ಟಣಗಳನ್ನು ಎಸೆಯುತ್ತಾರೆ. ಇದು ಸರಿಯಲ್ಲ. ಪ್ರಕೃತಿ ನಮಗೆ ಕೊಟ್ಟಿರುವ ಉಡುಗೊರೆಯನ್ನು ಜತನದಿಂದ ಕಾಯ್ದುಕೊಳ್ಳಬೇಕು’ ಎನ್ನುತ್ತಾರೆ ಪ್ರವಾಸಿ ದರ್ಶನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT