7

ಹಂಗರಿಯ ಹೆಮ್ಮೆ ಬುಡಾಪೆಸ್ಟ್

Published:
Updated:
ನಗರ ಮಧ್ಯದ ಶಾಪಿಂಗ್ ಕಾಂಪ್ಲೆಕ್ಸ್

ಸಾಮಾನ್ಯವಾಗಿ ಯುರೋಪ್ ಪ್ರವಾಸ ಎಂದಾಕ್ಷಣ ಕಣ್ಣೆದುರು ಬರೋದು ಜರ್ಮನಿ, ಫ್ರಾನ್ಸ್, ಸ್ವಿಟ್ಜರ್ಲೆಂಡ್, ಇಟಲಿ ಇತ್ಯಾದಿ. ಕಾರಣ, ಈ ದೇಶಗಳೆಲ್ಲ ಆರ್ಥಿಕವಾಗಿ ಬಲಾಢ್ಯ ರಾಷ್ಟ್ರಗಳು, ಮುಂಚೂಣಿಯಲ್ಲಿ ಕೇಳಿಬರುವ ಹೆಸರುಗಳು. ಹಂಗೇರಿ ಎಂದಾಗ ನಾನೂ ಹೀಗೆ ಯೋಚಿಸಿದವಳೇ... ಎಷ್ಟೆಲ್ಲಾ ದೇಶ ಕಂಡಮೇಲೆ ಇಲ್ಲೇನಿದೆ ಎನ್ನುವ ಒಂದು ರೀತಿಯ ಉದಾಸೀನತೆ.

ಆದರೆ, ಹಂಗೇರಿ ದೇಶದ ರಾಜಧಾನಿ ಬುಡಾಪೆಸ್ಟ್ ನೋಡಿದ ಮೇಲೆ, ಉದಾಸೀನತೆ ಸಂಭ್ರಮವಾಗಿ ಮಾರ್ಪಟ್ಟಿದ್ದು ಸುಳ್ಳಲ್ಲ. ಹಂಗೇರಿ ಆರ್ಥಿಕವಾಗಿ ಯೂರೋಪಿನ ಬೇರೆ ದೇಶಗಳಷ್ಟು ಪ್ರಬಲವಾಗಿಲ್ಲ; ಬಡತನ ಮತ್ತು ನಿರುದ್ಯೋಗವಿದೆ; ಜೀವನಮಟ್ಟ ಕೆಳಗಿದೆ; ಅನೇಕ ಅವ್ಯವಸ್ಥೆಗಳಿವೆ. ಆದರೆ, ಈ ಎಲ್ಲ ‘ಇಲ್ಲ’ಗಳು ತೀರಾ ಬಲಾಢ್ಯರಾಷ್ಟ್ರಗಳ ಜತೆಗೆ ಇದರ ಹೋಲಿಕೆಗೆ ತೊಡಗಿದಾಗ. ಅದರ ಹೊರತಾಗಿ ನೋಡಿದರೆ ಹಂಗೇರಿ ನಿಜಕ್ಕೂ ಬಹಳ ಸುಂದರ ದೇಶ. ಚರಿತ್ರೆ ಇದೆ, ಸಾಂಸ್ಕೃತಿಕ ಪರಂಪರೆ ಇದೆ, ಮೇಲೇಳುವ ಛಲವಿದೆ, ಇದ್ದದ್ದನ್ನು ಉಳಿಸುವ, ಬೆಳೆಸುವ ಮನಃಸ್ಥಿತಿಯಿದೆ. ಹಂಗೇರಿಯ ರಾಜಧಾನಿ ‘ಬುಡಾಪೆಸ್ಟ್’ ಮಹಾನಗರವನ್ನು ನೋಡಿಬಂದ ಮೇಲೆ ಇಂದೂ ಅದರ ಅಂದಚಂದ ಕಾಡುತ್ತಿರುವುದು ನಿಜದ ಮಾತು..!

(ಡ್ಯಾನ್ಯೂಬ್ ನದಿಯ ದಂಡೆಯ ಮೇಲಿನ ಬುಡಾಕ್ಯಾಸಲ್‌ನ ಒಂದು ನೋಟ)

ಬುಡಾಪೆಸ್ಟ್ ಹಿನ್ನೆಲೆ

ಎರಡು ಊರುಗಳು ಒಂದಾಗಿ ಹುಟ್ಟಿಕೊಂಡ ಹೊಸನಗರಿ ‘ಬುಡಾಪೆಸ್ಟ್’. ಎತ್ತರದ ಬೆಟ್ಟದ ಮೇಲಿನ ‘ಬುಡಾ’ ಎನ್ನುವ ನಗರಿಯನ್ನು ಇತ್ತಕಡೆಯ ಸಮತಟ್ಟಾದ ಪ್ರದೇಶದಲ್ಲಿದ್ದ ‘ಪೆಸ್ಟ್’ನಿಂದ ಬೇರ್ಪಡಿಸಿಟ್ಟಿದ್ದು ಮಧ್ಯೆ ಮೈತುಂಬಿ ಹರಿಯುವ ‘ಡಾನ್ಯೂಬ್’ ನದಿ. ಇವೆರಡನ್ನೂ ಒಗ್ಗೂಡಿಸಿ ‘ಬುಡಾಪೆಸ್ಟ್’ ಎಂಬ ಮಹಾನಗರಿಯಾಗಿಸಿದ್ದು 19ನೇ ಶತಮಾನದ ಮೊದಲಲ್ಲಿ ನಿರ್ಮಿಸಲಾದ ಅತಿಸುಂದರ ‘ಚೈನ್‌ಬ್ರಿಡ್ಜ್‌ನಿಂದಾಗಿ. ಚಾರಿತ್ರಿಕವಾದ ಹಳೆಯ ‘ಬುಡಾ’ನಗರ- ಹೊಸ ಆವಿಷ್ಕಾರಗಳ ಆಧುನಿಕ ‘ಪೆಸ್ಟ್’ ಈಗ, ಚರಿತ್ರೆ- ವಾಸ್ತವಗಳ ಸಂಗಮವಾಗಿ ಹಂಗೇರಿಯ ಹೆಮ್ಮೆಯ ರಾಜಧಾನಿಯಾಗಿದೆ. ಬುಡಾಪೆಸ್ಟ್ ಕಾಸ್ಮೋಪಾಲಿಟನ್ ನಗರ. ಹಂಗೇರಿ ಯುರೋಪಿನಲ್ಲಿದ್ದರೂ, ಏಷ್ಯಾಖಂಡಕ್ಕೂ ಹತ್ತಿರವಿರುವುದರಿಂದ ಏಷ್ಯಾದ ಬಹುಭಾಗಗಳಿಂದ ಇಲ್ಲಿಗೆ ವಸಾಹತುನೆಲೆಗಳು ಬಂದು ತಳವೂರಿ, ಎಲ್ಲದರ ಸಮ್ಮಿಶ್ರವೇ ‘ಹಂಗೇರಿ’ಯಾಗಿದೆ.

ಇಷ್ಟಿದ್ದರೂ, ನಮ್ಮ ಚರಿತ್ರೆಯಲ್ಲಿ ಕಾಣಿಸಿಕೊಂಡ ಮಧ್ಯ ಏಷ್ಯಾದ ಹೂಣರೇ ಇಲ್ಲಿಯ ಮೂಲನಿವಾಸಿಗಳು ಎನ್ನುತ್ತದೆ ಇತಿಹಾಸ. ಇವರ ಮುಂದಿನ ಉತ್ತರದಾಯಿತ್ವದ ಮೆಗ್ಯಾರ್ ಡೈನಾಸ್ಟಿಯ ದೊರೆ ‘ಆರ್ಪದ್’ ಈ ದೇಶದಲ್ಲಿ ಹೂಣರ ಪ್ರಾಮುಖ್ಯತೆಯನ್ನು ಕಂಡುಕೊಂಡು, ಕ್ರಿ.ಶ 896ರಲ್ಲಿ ಹೂಣರ ಹೆಸರಿಂದಲೇ ‘ಹಂಗೇರಿ’ ಎಂದು ದೇಶವನ್ನೇ ಹೆಸರಿಸಿದನಂತೆ. ತಮ್ಮ ಭಾಷೆ, ಸಂಸ್ಕೃತಿ ಹೆಚ್ಚಾಗಿ ಹೂಣರ ಭಾಷೆ- ಸಂಸ್ಕೃತಿಗೆ ಹತ್ತಿರವೆಂದೇ ಇವರು ಹೇಳುತ್ತಾರೆ. ಹೀಗಿದ್ದೂ, ಜರ್ಮನ್ ಜ್ಯೂ, ಟರ್ಕೀಸ್, ಜಿಪ್ಸೀಸ್ ಈ ಎಲ್ಲ ವಸಾಹತು ನೆಲೆಗಳ ತಾಣವಾಗಿ, ಇಂದು ಇದು ಅಪ್ಪಟ ಯುರೋಪಿಯನ್ ಸಂಸ್ಕೃತಿಯನ್ನು ಹೊಂದಿದೆ. ಬುಡಾಪೆಸ್ಟಿನಲ್ಲಿ ಈ ಎಲ್ಲ ಚಾರಿತ್ರಿಕ ಅಂಶಗಳನ್ನೂ ನಾವು ನೋಡಬಹುದು.

(ಮಥಾಯಿಸ್ ಚರ್ಚ್)

ನಗರದ ಅಂದಚೆಂದ

ನಾವು ಜರ್ಮನಿಯ ಮ್ಯೂನಿಕ್‌ನಿಂದ ಬೆಳಿಗ್ಗೆ 12 ಗಂಟೆಗೆ ಹೊರಟು, ಮಧ್ಯೆ ಊಟ, ಕಾಫಿಗೆ ಒಂದು ಗಂಟೆ ನಿಲ್ಲಿಸಿ ಬುಡಾಪೆಸ್ಟ್ ತಲುಪಿದಾಗ ರಾತ್ರಿ ಒಂಬತ್ತು ಗಂಟೆ. ಅಂದರೆ, ಏಳೆಂಟು ಗಂಟೆ ಪ್ರಯಾಣ. ನೇರವಾದ ಚಂದದ ರಸ್ತೆ. ಪ್ರಯಾಣ ಕಷ್ಟಕರವಲ್ಲ, ಹಾಗೆಂದು ಡ್ರೈವಿಂಗ್‌ನಲ್ಲಿ ಕೂತವರು ಎಲ್ಲ ಕಡೆಯಂತೆ ಮೈಯೆಲ್ಲಾ ಕಣ್ಣಾಗಿರಬೇಕು. ಬುಡಾಪೆಸ್ಟ್ ಪ್ರವೇಶದಲ್ಲೇ ‘ಆಹಾ...’ ಎನ್ನುವಂಥ ಅಚ್ಚರಿಯ ಉದ್ಗಾರವೊಂದು ನಮ್ಮಿಂದ ಹೊರಡುವಂತಾಗಿಬಿಡುತ್ತದೆ. ನಾವು ಹಾದುಬಂದಿದ್ದು ನಗರದ ಹೃದಯಭಾಗ ‘ಚೈನ್‌ಬ್ರಿಡ್ಜ್’ ಅನ್ನೇ. ಸೇತುವೆ ಪೂರ್ತಿ ಬಣ್ಣ ಬಣ್ಣದ ದೀಪಾಲಂಕಾರದಲ್ಲಿ, ಅದ್ಭುತ ವಾಸ್ತುವಿನ್ಯಾಸದಲ್ಲಿ, ಕಿಕ್ಕಿರಿದ ಪ್ರವಾಸಿಗರ ಕೇಕೆ ಉತ್ಸಾಹಗಳಲ್ಲಿ, ಕತ್ತಲಲ್ಲೂ ವೈಯಾರವಾಗಿ ಹರಿಯುತ್ತಿದ್ದ ‘ಡ್ಯಾನ್ಯೂಬ್’ ನದಿಯ ಸಡಗರದಲ್ಲಿ ಜೀವಕಳೆಯಿಂದ ಬೀಗುತ್ತಿತ್ತು. ಹಾದಿಯ ತುಂಬ ಭವ್ಯವಾದ ಯುರೋಪಿಯನ್ ವಿನ್ಯಾಸದ ಬೃಹತ್ ಕಟ್ಟಡಗಳು ನಗರ ಮಹಾನಗರಿಯೇ ಹೌದೆನ್ನುವುದನ್ನು ಸಾಬೀತು ಮಾಡಿದ್ದವು.

ನಾವು ಉಳಿದುಕೊಂಡಿದ್ದು ಅಪಾರ್ಟ್‌ಮೆಂಟಿನಲ್ಲಿ. ಇಲ್ಲೆಲ್ಲಾ ಕುಟುಂಬಸಹಿತ ಪ್ರವಾಸ ಹೋದರೆ ಉಳಿದುಕೊಳ್ಳಲು ಅಪಾರ್ಟ್‌ಮೆಂಟ್‌ಗಳೇ ಸೂಕ್ತ. ಬಾಡಿಗೆ ಹೆಚ್ಚು ಭಾರವಾಗುವುದಿಲ್ಲ. ಮನೆಯಾದ್ದರಿಂದ ಅಡುಗೆ, ತಿಂಡಿ– ಕಾಫಿ ಕೂಡ ಮಾಡಿಕೊಳ್ಳುವ ವ್ಯವಸ್ಥೆ ಇರುತ್ತದೆ. ಇಲ್ಲವೆಂದರೆ ಹೋಟೆಲ್ ಬಾಡಿಗೆ, ಆಹಾರ ದುಬಾರಿಯೇ.

(ಸ್ಟೀಫನ್‌ ಬೆಸಿಲಿಕಾ)

ಬುಡಾಪೆಸ್ಟ್‌ನ ವೈಶಿಷ್ಟ್ಯ

ಕ್ರಿ.ಶ.1ನೇ ಶತಮಾನದಿಂದ ಹಂಗೇರಿಗೆ ವಲಸೆಬಂದ ಎಲ್ಲ ವಸಾಹತುಕಾಲದ ಪಲ್ಲವ- ಪಲ್ಲಟಗಳಿಗೂ ಇಲ್ಲಿ ಸಾಕ್ಷಿಗಳಿವೆ. ಅಂದರೆ ಈ ದೇಶಕ್ಕೆ 2000 ವರ್ಷಗಳ ಇತಿಹಾಸವಿದೆ ಎಂದಾಯ್ತು.

ಇಲ್ಲಿಯ ಆಧುನೀಕರಣ ಪ್ರಕ್ರಿಯೆ 19ನೇ ಶತಮಾನದಲ್ಲೇ ಆರಂಭವಾಗಿದೆ. ಆರ್ಪದ್ ದೊರೆಯಾಗಿ ಬಂದು ಹಂಗೇರಿ ಎಂದು ನಾಮಕರಣ ಮಾಡಿದ ಸಹಸ್ರಮಾನೋತ್ಸವದ ಅಂಗವಾಗಿ ಇಲ್ಲಿ 1896ರಲ್ಲಿ ಮೊದಲ ಮೆಟ್ರೋಲೈನ್ ಆರಂಭವಾಯ್ತು. ಈ ಸಮಯದಲ್ಲೇ ಇಲ್ಲಿನ ಅತ್ಯುತ್ತಮ ವಿನ್ಯಾಸದ ಪಾರ್ಲಿಮೆಂಟ್ ಭವನ ನಿರ್ಮಾಣಕ್ಕೆ ನಾಂದಿ ಹಾಡಲಾಯ್ತು. ಈ ಸಮಯದಲ್ಲೇ ಕೊನೆಯ ತೊಂಬತ್ತಾರು ಸಂಖ್ಯೆ ಬಹಳ ಮಹತ್ವ ಪಡೆಯಿತು. ಪಾರ್ಲಿಮೆಂಟ್, ಚರ್ಚ್‌ಗಳು 96ಮೀ. ಎತ್ತರ ಪಡೆದವು. ಇದಕ್ಕಿಂತ ಯಾವ ಕಟ್ಟಡವೂ ಎತ್ತರವಿರಬಾರದೆನ್ನುವ ಕಾನೂನು ಹುಟ್ಟಿತು.

ಹೀಗೆ ರೂಪುಗೊಂಡ ಬುಡಾಪೆಸ್ಟ್ ಮೆಗಾಸಿಟಿಯಲ್ಲಿ ನೋಡಲು ಬಹಳ ತಾಣಗಳಿವೆ. ಸಾಮಾನ್ಯವಾಗಿ ಪ್ರಾಚೀನ ಇತಿಹಾಸ ಹೇರಳವಾಗಿರುವ ಯೂರೋಪಿನ ಬಹಳಷ್ಟು ನಗರಗಳಲ್ಲಿ ‘ವಾಕಿಂಗ್ ಟೂರ್’ ಜನಪ್ರಿಯ. ಕಾರಣ, ನಗರ ಹುಟ್ಟಿಕೊಳ್ಳುವುದೇ ನೀರಿರುವ ತಾಣದ ದಡದಲ್ಲಿ. ಎಲ್ಲವನ್ನೂ ನಡೆದಾಡುತ್ತ ನೋಡುವ ಮೋಜೇ ಬೇರೆ. ಜೊತೆಗೆ ಹತ್ತಿರ ಹತ್ತಿರದಲ್ಲೇ ಇರುವಾಗ ಇಲ್ಲಿ ವಾಹನ ಅನಗತ್ಯ. ಬುಡಾಪೆಸ್ಟ್ ಕೂಡ ಇದಕ್ಕೆ ಹೊರತಲ್ಲ. ಇಲ್ಲಿ ಇದು ಫ್ರೀ ಟೂರ್. ಬಹಳಷ್ಟು ನಿರುದ್ಯೋಗಿಗಳು ಈ ಕೆಲಸವನ್ನೇ ನೆಚ್ಚಿಕೊಂಡಿರುವುದು ನಾನು ಕಂಡ ದೃಶ್ಯ. ಆದರೆ, ಕೊನೆಯಲ್ಲಿ ಪ್ರವಾಸಿಗರು ಟಿಪ್ಸ್ ಕೊಟ್ಟೇ ಕೊಡುತ್ತಾರೆ. ಇದು ಅವರ ಆದಾಯ. ಅರ್ಧ ದಿನದ ಈ ವಾಕಿಂಗ್‌ಟೂರಿನಲ್ಲಿ ಸಿಟಿಯ ಒಂದು ಪಕ್ಷಿನೋಟ ದಕ್ಕಿಸಿಕೊಳ್ಳಲು ಸಾಧ್ಯ. ವಿಸ್ತೃತವಾಗಿ ನೋಡಲು ಪ್ರತಿಯೊಂದಕ್ಕೂ ಟಿಕೆಟ್ ಖರೀದಿಸಿ ಹೋಗಬೇಕು. ಎಷ್ಟೆಂದರೂ ಇದೊಂದು ಝಲಕ್ ಅಷ್ಟೇ.

(ಹೋಲಿ ಹಾರ್ಸ್)

ಚೈನ್‌ಬ್ರಿಡ್ಜ್

ಇಲ್ಲಿ ಮನೋಹರವಾದ ಸೇತುವೆಗಳು ಅನೇಕ ಇದ್ದರೂ ತುಂಬಾ ಮುಖ್ಯವಾದುದು, ಭವ್ಯವಾದದ್ದು, ಚಾರಿತ್ರಿಕ ಹಿನ್ನೆಲೆಯುಳ್ಳದ್ದು ‘ಚೈನ್‌ಬ್ರಿಡ್ಜ್’. ಹೆಸರೇ ಹೇಳುತ್ತೆ ಇದರ ಮಹತ್ವವನ್ನು. 1849ರಲ್ಲಿ ನಿರ್ಮಾಣವಾದ ಈ ಸೇತುವೆ, 1873ರ ಬುಡಾ, ಒಬುಡಾ ಮತ್ತು ಪೆಸ್ಟ್‌ಗಳ ಏಕೀಕರಣಕ್ಕೆ ಸಹಕಾರಿಯಾಗಿ ‘ಬುಡಾಪೆಸ್ಟ್’ ಎಂಬ ಮಹಾನಗರಿಯಾಗಿ ಬೆಳೆಯಲು ಕಾರಣವಾಯ್ತು. ವಿಶಿಷ್ಟ ವಿನ್ಯಾಸ, ದೈತ್ಯ ಗಾತ್ರ, ಸಿಂಹ ವಿಗ್ರಹಗಳ ಭವ್ಯತೆಯ ಜೊತೆಗೆ ಸುಂದರ ಉದ್ಯಾನ, ಕೆಳಗೆ ತುಂಬಿ ಹರಿಯುವ ಡಾನ್ಯೂಬ್‌ ನದಿ, ಎದುರಿನ ಬೆಟ್ಟದ ಮೇಲಣ ಬುಡಾ ಕ್ಯಾಸೆಲ್ ಸಿಟಿಯ ವಿಹಂಗಮ ನೋಟ, ಇತ್ತ ಕಡೆಯ ಆಧುನಿಕ ಪೆಸ್ಟ್ ನಗರದ ಮಾಂತ್ರಿಕ ಕಟ್ಟಡಗಳು ನಿಜಕ್ಕೂ ಅದ್ಭುತ. ಈ ಸೇತುವೆಯ ಮೈತುಂಬಾ ವಿಶ್ವದಾದ್ಯಂತದ ಪ್ರವಾಸಿಗರು ಕಿಕ್ಕಿರಿದು ಜೀವಕಳೆಯಿಂದ ಮಿಂಚುವುದನ್ನು ನೋಡುವುದು ಒಂಥರಾ ಹಬ್ಬವೇ ಸರಿ.

(ಹಂಗರಿಯ ಪಾರ್ಲಿಮೆಂಟ್‌ ಭವನ)

ಬುಡಾಕ್ಯಾಸೆಲ್ ಲೋಕದಲ್ಲಿ

ಸೇತುವೆ ದಾಟಿ ಇಲ್ಲಿರುವ ಫ್ಯೂನಿಕ್ಯೂಲಾರ್ ರೈಲಿನಲ್ಲಿ ಅಥವಾ ಪಕ್ಕದಲ್ಲಿರುವ ಬೆಟ್ಟದ ಏರುರಸ್ತೆಯಲ್ಲಿ ಕಾರಲ್ಲೋ, ನಡೆದೋ ಬುಡಾ ಕ್ಯಾಸೆಲ್ ಸಿಟಿಗೆ ಹೋದರೆ ಇದು ಕೋಟೆಯೊಳಗಣ ಊರು. ಎತ್ತರವಾದ ಬೆಟ್ಟದ ಕೋಟೆಯೊಳಗೆ ಎಲ್ಲವೂ ಬಲು ಸುಂದರವಾದ ಚಾರಿತ್ರಿಕ ಕಟ್ಟಡಗಳೇ, ಮನೆಗಳೇ. ಟೈಲ್ಸ್‌ಗಳಿಂದ ಮಾಡಿರುವ ಇಕ್ಕಟ್ಟಾದ ಯುರೋಪಿನ ಹಾದಿಗಳದೇ ಒಂದು ಸೊಬಗು. ಇಲ್ಲಿ, ಒಂದೊಂದು ಹೆಜ್ಜೆಗೂ ನಿಂತು ನಿಂತು ಸುತ್ತ ಕಣ್ಣು ಹಾಯಿಸುತ್ತ ನಡೆವಾಗ, ಎದುರಿಗೇ ಭವ್ಯವಾಗಿ ತೆರೆದುಕೊಳ್ಳುತ್ತವೆ ‘ಮಥಾಯಿಸ್ ಚರ್ಚ್’, ವಿಶಾಲವೃತ್ತ ಮತ್ತು ಕ್ಯಾಸೆಲ್‌ನ ಪ್ರಾಕಾರಗಳು.

ಇಡೀ ಪ್ರದೇಶದ ಕಟ್ಟಡಗಳು ಬಿಳುಪು ಬಣ್ಣದಲ್ಲಿದ್ದು, ನಿಯೋಗೋಥಿಕ್‌ ಶೈಲಿಯ ವಿನ್ಯಾಸದಲ್ಲಿ ಕಿನ್ನರಲೋಕದ ಭ್ರಮೆಯಲ್ಲಿ ಮುಳುಗಿಸಿ ಬಿಡುತ್ತವೆ. ಇದು ಬುಡಾನಗರಿ. ಇಲ್ಲಿ ಚರಿತ್ರೆ ಹೇರಳವಾಗಿದೆ. 11ನೇ ಶತಮಾನದ ‘ಮಥಾಯಿಸ್‌ ಚರ್ಚ್’ ಅದ್ಭುತವಾದ ಗೋಥಿಕ್ ಶೈಲಿಯಲ್ಲಿ ಮನಸೂರೆಗೊಳ್ಳುವಾಗ, ಸುತ್ತಲ ಸುಂದರ ವೃತ್ತಾಕಾರದ ಚೌಕ, ಕಟ್ಟಡಗಳ ವಿನ್ಯಾಸ ಕಾಣುತ್ತ ಮುಂದಡಿ ಇಡಲು ಕಾಲು ಮುಷ್ಕರ ಹೂಡಿಬಿಡುತ್ತೆ. ಈ ಚರ್ಚ್ 2ನೇ ಮಹಾಯುದ್ಧದಲ್ಲಿ ಜರ್ಮನ್, ಸೋವಿಯೆಟ್ ಕ್ಯಾಂಪ್‌ಗಳಾಗಿದ್ದು ಸಾಕಷ್ಟು ಹಾನಿ ಹೊಂದಿ, ಪುನಃ 19ನೇ ಶತಮಾನದ ಮಥಾಯಿಸ್ ದೊರೆಯಿಂದ ಪುನರುಜ್ಜೀವನ ಕಂಡು ‘ಮಥಾಯಿಸ್‌ ಚರ್ಚ್’ ಎಂದೇ ಹೆಸರಾಗಿದೆ.

ಇಲ್ಲಿ ವಾಕಿಂಗ್‌ ಟೂರ್ ಮಾತ್ರ ಸಾಧ್ಯ. ಈ ಕೋಟೆ ಊರಿನ ಚಾರಿತ್ರಿಕ, ಸಾಂಸ್ಕೃತಿಕ, ಮಧ್ಯಕಾಲೀನ ಯುಗದ ದುರಂತ ಚಿತ್ರಣಗಳನ್ನು ಬಿಡಿಸಿ ಹೇಳುತ್ತಾ ಹೋಗುವಾಗ, ನಾವೂ ಆ ಕಾಲದಲ್ಲೇ ಇದ್ದಂಥ ಅನುಭವವಾಗುತ್ತೆ. ಮ್ಯೂಸಿಯಂಗಳು, ಗ್ಯಾಲರಿಗಳು, ಸುತ್ತದ ಸುಣ್ಣಕಲ್ಲಿನ ಬಿಳುಪುಗೋಡೆಯ ಅಂದ, ಅಲ್ಲಿಂದ ಕೆಳಗೆ ಕಾಣುವ ನದಿ ನೋಡುತ್ತ ರಾಯಲ್‌ಪ್ಯಾಲೇಸಿಗೆ ಬಂದರೆ ಇದರ ವೈಭವ, ಗಾತ್ರ, ವಿನ್ಯಾಸಕ್ಕೆ ಮಾತೇ ಹೊರಡುವುದಿಲ್ಲ. ಇದು 1942ರಲ್ಲೇ ಬರೂಕ್ ಶೈಲಿಯಲ್ಲಿ ನಿರ್ಮಾಣವಾದ ಅರಮನೆಯಾದರೂ ಮಥಾಯಿಸ್‌ ದೊರೆ ಕಾಲಕ್ಕೆ ಮತ್ತಷ್ಟು ನವೀಕರಣಗೊಂಡಿದೆ. ಇಲ್ಲಿಯ ಪ್ರಸಿದ್ಧ ಫೌಂಟನ್ ರೋಮಿನ ಟ್ರಿವಿ ಫೌಂಟನ್ ಅನುಕರಿಸಿದ್ದಾಗಿದೆ. ಬೆಟ್ಟದ ತುದಿಯ ವಿಶಾಲ ಉದ್ಯಾನ, ಅಲ್ಲಿಂದ ಕಾಣುವ ಕೆಳಗಣ ನಗರ, ನದಿ, ಸೇತುವೆ, ದಟ್ಟಮರಗಳ ಸಮೂಹ ನಯನ ಮನೋಹರವಾಗುದೆ. ನಿರಾಳವಾಗಿ ವಿಶ್ರಾಂತಿ ಪಡೆಯಲು ಹೇಳಿ ಮಾಡಿಸಿದ ತಾಣವಿದು.

(ಪಾರ್ಲಿಮೆಂಟ್ ಹಾಲ್)

ಪಾರ್ಲಿಮೆಂಟ್

ಥೇಮ್ಸ್‌ ನದಿ ದಡದಲ್ಲಿನ ಇಂಗ್ಲೆಂಡಿನ ಪಾರ್ಲಿಮೆಂಟ್ ಮಾದರಿಯಲ್ಲಿ ಹಂಗೇರಿಯ ಪಾರ್ಲಿಮೆಂಟ್‌ ಭವನ ಡಾನ್ಯೂಬ್ ನದಿ ದಡದಲ್ಲಿ ತಲೆಯೆತ್ತಿದೆ. ಇದು ಯುರೋಪಿನಲ್ಲೇ ಅತಿ ದೊಡ್ಡ ಪಾರ್ಲಿಮೆಂಟ್‌ ಭವನ. ಪುಟ್ಟ ಮೋಟ್ ಒಂದಕ್ಕೆ ಎದುರಾಗಿದ್ದು, ಇನ್ನೊಂದು ಬದಿ ಡಾನ್ಯೂಬ್‌ನ ವಿಹಂಗಮ ದೃಶ್ಯಕ್ಕೆ ತೆರೆದುಕೊಂಡು, ನೀಲಾಗಸದ ಹಿನ್ನೆಲೆಯಲ್ಲಿ ಗೋಥಿಕ್‌ ಶೈಲಿಯಲ್ಲಿ ಭವ್ಯವಾಗಿ ತಲೆಯೆತ್ತಿರುವ ಈ ಭವನ 1896ರಲ್ಲಿ ಆರಂಭವಾಗಿ 1902ರಲ್ಲಿ ಪೂರ್ಣಗೊಂಡಿತು. 691 ಕೋಣೆಗಳ ಹೊಂದಿದೆ. ಇದರ ವೀಕ್ಷಣೆಗೆ ಕೂಡ ಟಿಕೆಟ್ ಇದೆ. ಪೂರ್ತಿ ಭದ್ರತಾ ತಪಾಸಣೆಯೊಂದಿಗೆ ಒಳಹೊಕ್ಕರೆ ಆಡಳಿತ ಭವನ ಎನ್ನಿಸದೆ ಯಾವುದೋ ಅರಮನೆ ಹೊಕ್ಕಂತಾಗುತ್ತೆ. ರೆಡ್‌ ಕಾರ್ಪೆಟ್ ಮೆಟ್ಟಿಲುಗಳನ್ನೇರುತ್ತ, ಪಾರ್ಲಿಮೆಂಟ್ ಹಾಲ್ ಹೊಕ್ಕರೆ ದಂಗುಬಡಿದು ನಿಲ್ಲುತ್ತೇವೆ! ಇದರ ತದ್ರೂಪಿ ಹಾಲ್ ಇನ್ನೊಂದಿದ್ದು, ಒಂದು ಆಡಳಿತ ಕಾರ‍್ಯ ಚಟುವಟಿಕೆಗೆ, ಇನ್ನೊಂದು ಕೇವಲ ಪ್ರವಾಸಿಗರ ವೀಕ್ಷಣೆಗಾಗಿ. ಒಳಾಲಂಕಾರಕ್ಕೆ ಅಮೂಲ್ಯ ಹರಳುಗಳು, 40 ಕೆ.ಜಿ.ಚಿನ್ನ ಬಳಸಿದ್ದಾರೆ. ಎರಡನೇ ಜಾಗತಿಕ ಯುದ್ಧಾನಂತರ ಅಮೆರಿಕ ಕೈಸೇರಿದ್ದ ಇವರ ಕೊನೆಯ ರಾಜಕಿರೀಟ ಮತ್ತೆ ಹಂಗೇರಿಯ ಕೈಸೇರಿ, ಅದೀಗ ಇಲ್ಲಿಯ ನಡುಹಾಲಿನಲ್ಲಿ ವಿರಾಜಮಾನವಾಗಿದೆ.

ಹಿಂದೆ ಹೇಳಿದಂತೆ ಪಾರ್ಲಿಮೆಂಟ್ ಮತ್ತು ಸೈಂಟ್‌ ಸ್ಟೀಫನ್ ಬೆಸಿಲಿಕಾ ಎರಡೂ ಕಟ್ಟಡಗಳು 96 ಮೀ. ಎತ್ತರ ಇವೆ. ಚಾರಿತ್ರಿಕ ಘಟನೆಯ ಸಹಸ್ರಮಾನೋತ್ಸವ 1896ರಲ್ಲಿ ನೆರವೇರಿದಾಗ ಈ ಪಾರ್ಲಿಮೆಂಟ್ ಶಂಕುಸ್ಥಾಪನೆಯಾಗಿದ್ದು.

‘ಸ್ಟೀಫನ್‌ ಬೆಸಿಲಿಕಾ’ ಭವನವೂ ನಿಯೋಕ್ಲಾಸಿಕಲ್ ಶೈಲಿಯಲ್ಲಿ 1905ರಲ್ಲಿ ನಿರ್ಮಾಣವಾಗಿ ಗಗನದೆತ್ತರ ಭವ್ಯವಾಗಿ ನಿಂತಿದೆ. ಇಲ್ಲಿನ ಸಂಗೀತ ವೈವಿಧ್ಯ, ಸಂಗೀತಗಾರರು ಬಹಳ ಪ್ರಸಿದ್ಧರು. ಬೇರೆ ದೇಶಗಳ ಸಂಗೀತಗಾರರನ್ನೂ ಪ್ರೋತ್ಸಾಹಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ ಈ ಚರ್ಚ್. ಇಲ್ಲಿಯ ಸ್ಯಾಂಕ್ಚುಯರಿ ಹಾಲಿನ ವಿಶಿಷ್ಟ ವಿನ್ಯಾಸ ಪ್ರವಾಸಿಗರ ಸೆರೆಹಿಡಿಯುತ್ತಿದೆ.

ಹಂಗೇರಿ ‘ಥರ್ಮಲ್‌ ಸ್ಪಾ’ಗೆ ಖ್ಯಾತಿಯಾದ ದೇಶ. ಭೂಮಿಯೊಳಗಣ ನೀರು ಅಲ್ಲಿಯ ಒತ್ತಡಕ್ಕೆ ಬಿಸಿಯಾಗಿ ಕುದಿದು ಭೂ ಮೇಲ್ಪದರದಲ್ಲಿ ಉಕ್ಕಿ, ಚಿಮ್ಮಿ ಬಿಸಿನೀರ ಬುಗ್ಗೆಗಳನ್ನು ಸೃಷ್ಟಿಸುತ್ತದೆ. ಇವುಗಳು ಎರಡು ವಿಧ. ಒಂದು ವಿಧ ಕುದ್ದು ಉಕ್ಕುವ ನೀರು ಮಣ್ಣಿನೊಂದಿಗೆ ಸೇರಿ ಅಗ್ನಿಪರ್ವತಗಳ ಲಾವಾ ಟೆಂಪರೇಚರ್‌ನಲ್ಲಿದ್ದು ಹತ್ತಿರ ಹೋಗಲೂ ಅಸಾಧ್ಯ. ನ್ಯೂಜಿಲೆಂಡ್, ಜಪಾನ್, ಅಮೆರಿಕ ಇಲ್ಲೆಲ್ಲ ಈ ವಿಧವನ್ನು ಕಾಣಬಹುದು.

ಎರಡನೆಯದು ಸುಖೋಷ್ಣ ಸ್ಥಿತಿಯಲ್ಲಿದ್ದು ಅಥವಾ ಈ ಸ್ಥಿತಿಸ್ಥಾಪಕತ್ವ ಹೊಂದಿಕೆಗೆ ಅನುವಾಗಿದ್ದು ಮನುಷ್ಯ ಬಳಕೆಗೆ ಹಿತಕಾರಿಯಾಗಿವೆ. ಈ ಬಿಸಿನೀರಿನಲ್ಲಿರುವ ಅನಿಲಗಳು, ಖನಿಜಾಂಶಗಳು ದೇಹದ ಚರ್ಮರೋಗಗಳಿಗೆ ಔಷಧಿಯಾಗಿ ಉಪಕಾರಿ. ಗಂಧಕ ನೀರು (ಸಲ್ಫರ್‌ ಗೀಸರ್ಸ್‌) ಎಂದು ಕರೆಸಿಕೊಳ್ಳುವ ಇಂಥ ಗೀಸರ್ ತಾಣಗಳು ಹಂಗೇರಿಯಲ್ಲಿ ಹೇರಳವಾಗಿವೆ. ಬುಡಾಪೆಸ್ಟಿನಲ್ಲಿ ಇದು ಅತಿದೊಡ್ಡ ಪ್ರವಾಸೋದ್ಯಮ. ವಿಶ್ವದ ನಾನಾ ಭಾಗಗಳಿಂದ ಕೇವಲ ಈ ಥರ್ಮಲ್ ಸ್ಪಾ ಟ್ರೀಟ್‌ಮೆಂಟ್‌ಗಾಗಿಯೇ ಬರುವ ಹೇರಳ ಪ್ರವಾಸಿಗರಿದ್ದಾರೆ. ಬುಡಾಪೆಸ್ಟಿನ ಸುತ್ತಮುತ್ತ ಕೂಡ ಇಂತಹ ತಾಣಗಳು ಸಾಕಷ್ಟಿವೆ. ಇವುಗಳ ಸೌಂದರ್ಯ, ಅಚ್ಚುಕಟ್ಟುತನ, ವೈಭವ, ಚಿಕಿತ್ಸಾ ವೈವಿಧ್ಯಗಳನ್ನು ಅಲ್ಲಿ ಹೋಗಿಯೇ ನೋಡಬೇಕು.

ಇಲ್ಲಿಯ ಜಾನಪದ ನೃತ್ಯ ಬಹಳ ಪ್ರಸಿದ್ಧ. ಪರಂಪರೆಯ ಈ ಪದ್ಧತಿಗಳನ್ನೂ ಉಳಿಸಿಕೊಂಡು ಆಧುನಿಕ ಮಜಲುಗಳನ್ನೂ ಅನುಭವಿಸುವ ಹಂಗೇರಿಯನ್ನರು ವಿಶಿಷ್ಟರೇ ಸರಿ. ಇಲ್ಲಿ ಚೆಸ್ ಜನಪ್ರಿಯ. ಸ್ಪಾಲೇಕಿನಲ್ಲಿ ಈಜುತ್ತಲೇ ಚೆಸ್ ಆಡುತ್ತಾರೆ. ಮೋಜು ಪಡೆಯುತ್ತಾರೆ. ಇಲ್ಲಿಯ ಸ್ಥಳೀಯ ಆಹಾರಗಳೂ ವಿಶಿಷ್ಟ. ‘ರುಚಿ ನೋಡದಿರಬೇಡಿ’ ಎಂದ ನಮ್ಮ ಗೈಡ್ ಹೊಗಳಿಕೆಗೆ ನಾವು ತಿಂದು ಹೌದೆನ್ನಬೇಕಾಯ್ತು.

‘ಯುರಾಲಿಕ್’ ಎನ್ನುವ ಹಂಗೇರಿಯನ್ ಭಾಷೆ ಮಾತನಾಡುತ್ತಾರೆ. ಇಂಗ್ಲಿಷ್ ಭಾಷೆ ಬಳಕೆಯೂ ಇದೆ. ಇಲ್ಲಿಯ ಕರೆನ್ಸಿ ‘ಹಂಗೇರಿಯನ್ ಫೊರಿಂಟ್’. ಈ ಸೂಪರ್‌ಸಿಟಿಯ ಖರ್ಚು ವೆಚ್ಚ ಬೇರೆ ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ ಅಗ್ಗವೇ ಹೌದು. ಕಾರಣ, ಬೇರೆ ಯುರೋಪಿಯನ್ ದೇಶಗಳಷ್ಟು ಆರ್ಥಿಕವಾಗಿ ಬಲಾಢ್ಯವಲ್ಲ. ಈ ನಗರಕ್ಕೆ ಯುರೋಪಿನ ಬಹುತೇಕ ಎಲ್ಲ ನಗರಗಳಿಂದ ಬಸ್ಸು, ರೈಲು, ವಿಮಾನ ವ್ಯವಸ್ಥೆಯಿದೆ. ಕಾರಿನಲ್ಲಿ ಬರಬಹುದು. ಸಿಟಿಯಲ್ಲಿ ಬಸ್ಸು, ಮೆಟ್ರೋ, ಟ್ರಾಮ್, ಸೈಕಲ್ ಎಲ್ಲ ವ್ಯವಸ್ಥೆಗಳೂ ಲಭ್ಯ.

ಬುಡಾಪೆಸ್ಟ್ ಬಿಡುವಾಗ ಕಣ್ಣ ತುಂಬ ತುಂಬಿದ ಮನೋಹರ ಚಿತ್ರಣಗಳು ನೂರಾರು, ಮರೆಯಲಾಗದವು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !