16 ಕಿ.ಮೀ.ವರೆಗೆ ವೀಸಾ, ಪಾಸ್‌ಪೋರ್ಟ್ ಇಲ್ಲದೆ ಓಡಾಟ
ಲಾಂಗ್ವಾ ನಿವಾಸಿಗಳು ಗಡಿ ರೇಖೆಯ 16 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ವೀಸಾ ಅಥವಾ ಪಾಸ್‌ಪೋರ್ಟ್ ಇಲ್ಲದೆಯೇ ಓಡಾಡಲು ಫ್ರೀ ಮೂವ್‌ಮೆಂಟ್ ರೆಜಿಮ್ (ಎಫ್‌ಎಂಆರ್) ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಒಪ್ಪಂದವು, ಆಧುನಿಕ ಭಾರತ ಹಾಗೂ ಮ್ಯಾನ್ಮಾರ್ ರಚನೆಯಾಗುವ ಮೊದಲಿಂದಲೂ ಅಲ್ಲಿ ನೆಲೆಸಿರುವ ಬುಡಕಟ್ಟು ಜನರ ಸಾಂಪ್ರದಾಯಿಕ ಒಡನಾಟ ಮತ್ತು ಚಲನವಲನವನ್ನು ಗೌರವಿಸುತ್ತದೆ. ಗ್ರಾಮಸ್ಥರು, ಗಡಿಯ ಎರಡೂ ಕಡೆ ನಡೆಯುವ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಆ ಜನರ ಕುಟುಂಬಿಕ ಸಂಬಂಧಗಳು, ವ್ಯಾಪಾರ - ವಹಿವಾಟು ಗಡಿಯಾಚೆಗೂ ವಿಸ್ತರಿಸಿಕೊಂಡಿದೆ. ಹಾಗಾಗಿ, ಗಡಿ ರೇಖೆಯ ಕಟ್ಟಲೆಗಳು ಅವರ ಬದುಕನ್ನು ಅಷ್ಟೇನೂ ನಿರ್ಬಂಧಿಸಿಲ್ಲ.