ದೂರದ ಜರ್ಮನಿಯ ನಗರವೊಂದು ಅತ್ಯಾಕರ್ಷಕ ಶೈಲಿಯ ಕಟ್ಟಡಗಳಿಂದಾಗಿ ‘ಯುರೋಪಿನ ಜುವೆಲ್ ಬಾಕ್ಸ್’ ಎಂಬ ಹೆಗ್ಗಳಿಕೆ ಪಡೆದಿದೆ. ವಿಶೇಷವೇನೆಂದರೆ ಈ ನಗರವು ಕರ್ನಾಟಕದೊಂದಿಗೆ ಅಚ್ಚರಿಯ ನಂಟೊಂದನ್ನು ಹೊಂದಿದೆ...

ಸಂಜೆ ಹೊತ್ತಿನಲ್ಲಿ ನಮ್ಮ ಕೃಷ್ಣರಾಜ ಸಾಗರದ(ಕೆಆರ್ಎಸ್) ಬೃಂದಾವನ ಉದ್ಯಾನದಲ್ಲಿ ನಿಂತು ನೋಡಿದರೆ, ನೀರಿನ ಕಾರಂಜಿಗಳು ಬೆಳಕಿನ ಜೊತೆಯಲ್ಲಿ ನೃತ್ಯ ಮಾಡುತ್ತಾ ಸೆಳೆಯುತ್ತವೆ. ಸುತ್ತಮುತ್ತ ಹಸಿರು ತೋಟಗಳು, ಸಮತಟ್ಟಾಗಿ ಹರಡಿಕೊಂಡಿರುವ ದಾರಿಗಳು, ಅಚ್ಚುಕಟ್ಟಾದ ವಿನ್ಯಾಸ–ಈ ಎಲ್ಲವನ್ನು ನೋಡಿದಾಗ ಈ ಉದ್ಯಾನದ ಹಿಂದಿರುವ ಮಹಾನ್ ತೋಟವಿನ್ಯಾಸ ತಜ್ಞನನ್ನು ನೆನಪಿಸಿಕೊಳ್ಳದೇ ಇರಲು ಸಾಧ್ಯವಿಲ್ಲ.

ಅವರು ಗುಸ್ಟಾವ್ ಹರ್ಮನ್ ಕೃಂಬಿಗಲ್. ಜರ್ಮನಿಯ ಡ್ರೆಸ್ಡೆನ್ ಬಳಿ ಜನಿಸಿ, ಮೈಸೂರು ಸಂಸ್ಥಾನದ ತೋಟಗಾರಿಕೆಗೆ ಹೊಸ ರೂಪ ನೀಡಿದ ಮಹಾನ್ ತೋಟಗಾರಿಕ ತಜ್ಞ.

ಈ ನೆನಪೇ ನನ್ನನ್ನು ದೂರದ ಯೂರೋಪಿನ ಒಂದು ನಗರಕ್ಕೆ ಕರೆದೊಯ್ಯುತ್ತದೆ. ಎಲ್ಬ್ ನದಿಯ ತಟದಲ್ಲಿ ಅರಳಿರುವ ಜರ್ಮನಿಯ ಸ್ಯಾಕ್ಸನಿ ರಾಜ್ಯದ ರಾಜಧಾನಿ ಡ್ರೆಸ್ಡೆನ್. ಇತಿಹಾಸ, ಕಲೆ ಮತ್ತು ವಾಸ್ತುಶಿಲ್ಪದ ವೈಭವದಿಂದ ‘ಯುರೋಪಿನ ಜುವೆಲ್ ಬಾಕ್ಸ್’ ಎಂದು ಹೆಸರಾಗಿರುವ ಈ ನಗರ, ಕರ್ನಾಟಕದ ಜೊತೆಗೂ ಒಂದು ಅಚ್ಚರಿಯ ನಂಟನ್ನು ಹೊಂದಿದೆ.

ತೋಟಗಳಿಗೆ ಜೀವ ತುಂಬಿದ ಕೃಂಬಿಗಲ್

ಗುಸ್ಟಾವ್ ಹರ್ಮನ್ ಕೃಂಬಿಗಲ್ ತೋಟಗಾರಿಕಾ ನಿರ್ದೇಶಕ, ಸಸ್ಯಶಾಸ್ತ್ರಜ್ಞ, ನಗರ ವಿನ್ಯಾಸಕಾರ, ವಾಸ್ತುಶಿಲ್ಪಿ–ಹೀಗೆ ಅನೇಕ ಕ್ಷೇತ್ರಗಳಲ್ಲಿ ಪರಿಣತಿ ಪಡೆದ ಬಹುಮುಖ ಪ್ರತಿಭೆ.

ಬರೋಡ ಸಂಸ್ಥಾನದಲ್ಲಿ ತೋಟಗಳನ್ನು ಸುಂದರವಾಗಿ ಅಭಿವೃದ್ಧಿಪಡಿಸಿದ್ದ ಅವರ ಕೆಲಸವನ್ನು ಮೆಚ್ಚಿದ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ಅವರನ್ನು ಮೈಸೂರು ಸಂಸ್ಥಾನಕ್ಕೆ ಆಹ್ವಾನಿಸಿದರು. 1908ರಲ್ಲಿ ಕೃಂಬಿಗಲ್ ಲಾಲ್ಬಾಗ್ ಮತ್ತು ಸರ್ಕಾರಿ ತೋಟಗಳ ಅಧೀಕ್ಷಕರಾಗಿ ಕಾರ್ಯಾರಂಭಿಸಿದರು.

ಅವರಿಂದಾಗಿ ಮೈಸೂರು ಮತ್ತು ಬೆಂಗಳೂರು ನಗರಗಳ ತೋಟಗಳು ಹೊಸರೂಪ ಪಡೆದವು. ಕನ್ನಂಬಾಡಿ ಕಟ್ಟೆಯ ಕೆಳಭಾಗದಲ್ಲಿ ನಿರ್ಮಿತವಾದ ಪ್ರಸಿದ್ಧ ಬೃಂದಾವನ ಉದ್ಯಾನ ಕೂಡ ಅವರ ವಿನ್ಯಾಸದ ಅದ್ಭುತ ಉದಾಹರಣೆ.

ಕೃಂಬಿಗಲ್ ಅವರು ಮೈಸೂರು ಸಂಸ್ಥಾನದ ಮುಖ್ಯ ವಾಸ್ತುಶಿಲ್ಪಿಯಾಗಿಯೂ ಕಾರ್ಯನಿರ್ವಹಿಸಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದ ಬೆಳ್ಳಿ ಮಹೋತ್ಸವದ ಸಂದರ್ಭದಲ್ಲಿ ಆಯ್ದ ಹಳ್ಳಿಗಳಲ್ಲಿ ನಿರ್ಮಿಸಿದ ವೃತ್ತಾಕಾರದ ಭಜನೆಮನೆಗಳ ವಿನ್ಯಾಸವೂ ಅವರದ್ದೇ.

ಕರ್ನಾಟಕದಲ್ಲಿ ಜೀವನದ ಬಹುತೇಕ ಸಮಯವನ್ನು ಕಳೆದ ಕೃಂಬಿಗಲ್ 1956ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು. ಬೆಂಗಳೂರಿನ ‘ಕೃಂಬಿಗಲ್ ರಸ್ತೆ’ ಅವರ ಸೇವೆಯನ್ನು ನೆನಪಿಸುತ್ತದೆ.

ಶಾಸನಗಳ ಲೋಕ ಬೆಳಗಿಸಿದ ಹುಲ್ಷ್

ಡ್ರೆಸ್ಡೆನ್ನೊಂದಿಗೆ ಕರ್ನಾಟಕವನ್ನು ಜೋಡಿಸುವ ಮತ್ತೊಬ್ಬ ಮಹತ್ವದ ವ್ಯಕ್ತಿ ಜೂಲಿಯಸ್ ಥಿಯೊಡರ್ ಹುಲ್ಷ್.

ಅವರು ಪ್ರಸಿದ್ಧ ಶಾಸನತಜ್ಞರು ಹಾಗೂ ಭಾಷಾ ಪಂಡಿತರಾಗಿದ್ದರು. 1886ರಲ್ಲಿ ದಕ್ಷಿಣ ಭಾರತದ ಪುರಾತತ್ವ ಇಲಾಖೆಯಲ್ಲಿ ಪ್ರಥಮ ಶಾಸನತಜ್ಞರಾಗಿ ನೇಮಕಗೊಂಡರು. ಮದರಾಸು ಪ್ರಾಂತ್ಯದ ವಿವಿಧ ಭಾಗಗಳಲ್ಲಿ ಸಂಚರಿಸಿ ಅನೇಕ ಶಾಸನಗಳನ್ನು ಅವರು ಪತ್ತೆ ಹಚ್ಚಿದರು. ರಾಷ್ಟ್ರಕೂಟ, ಚಾಲುಕ್ಯ, ಚೋಳ, ಪಾಂಡ್ಯ, ಚೇರ ಮೊದಲಾದ ರಾಜವಂಶಗಳಿಗೆ ಸಂಬಂಧಿಸಿದ ಶಾಸನಗಳನ್ನು ಅಧ್ಯಯನ ಮಾಡಿ ಬೆಳಕಿಗೆ ತಂದರು.

ಕನ್ನಡ ವಿದ್ವಾಂಸರಾದ ಟಿ.ಎಸ್. ವೆಂಕಣ್ಣಯ್ಯ ಮತ್ತು ಎ.ಆರ್. ಕೃಷ್ಣಶಾಸ್ತ್ರಿ ಅವರ ಸಹಾಯಕರಾಗಿದ್ದರು.

ಹುಲ್ಷ್ ಸಂಪಾದಿಸಿ ಪ್ರಕಟಿಸಿದ ‘ಕಾರ್ಪಸ್ ಇನ್ಸ್ಕ್ರಿಪ್ಷನಮ್ ಇಂಡಿಕಾರಮ್’ ಸಂಪುಟವು ಮೌರ್ಯ ಸಾಮ್ರಾಟ ಅಶೋಕನ ಶಾಸನಗಳ ಅಧ್ಯಯನಕ್ಕೆ ಅಮೂಲ್ಯವಾಗಿದೆ. ಸಂಸ್ಕೃತ, ಪ್ರಾಕೃತ ಮತ್ತು ದ್ರಾವಿಡ ಭಾಷೆಗಳ ಮೇಲೆ ಅವರಿಗೆ ಅದ್ಭುತ ಪಾಂಡಿತ್ಯವಿತ್ತು.

1927 ಜನವರಿ 16ರಂದು ಜರ್ಮನಿಯ ಹಲ್ಲೆ ನಗರದಲ್ಲಿ ಅವರು ನಿಧನರಾದರು.

ಎಲ್ಬ್ ನದಿಯ ತಟದ ನಗರ

ಎಲ್ಬ್ ನದಿಯ ತಟದಲ್ಲಿರುವ ಡ್ರೆಸ್ಡೆನ್ ನಗರವು ಇತಿಹಾಸ, ಸಂಸ್ಕೃತಿ ಮತ್ತು ಕಲೆಗಳ ಅಪಾರ ಸಂಪತ್ತಿನಿಂದ ಪ್ರಸಿದ್ಧವಾಗಿದೆ.

ಒಂದು ಕಾಲದಲ್ಲಿ ಸ್ಯಾಕ್ಸನ್ ರಾಜವಂಶದ ರಾಜಧಾನಿಯಾಗಿದ್ದ ಈ ನಗರದಲ್ಲಿ ಬರೋಕ್ ಮತ್ತು ರೊಕೊಕೋ ಶೈಲಿಯ ಅದ್ಭುತ ಕಟ್ಟಡಗಳು ನಿರ್ಮಾಣವಾಗಿದ್ದವು. ಅವುಗಳ ಸೌಂದರ್ಯದಿಂದಲೇ ಇದನ್ನು ‘ಯುರೋಪಿನ ಜುವೆಲ್ ಬಾಕ್ಸ್’ ಎಂದು ಕರೆಯಲಾಯಿತು.

ಇಟಲಿಯ ಫ್ಲೋರೆನ್ಸ್ ನಗರಕ್ಕೆ ಹೋಲಿಕೆಯಾಗಿರುವುದರಿಂದ ‘ಫ್ಲೋರೆನ್ಸ್ ಆನ್ ದಿ ಎಲ್ಬ್’ ಎಂಬ ಹೆಸರನ್ನೂ ಈ ನಗರ ಪಡೆದಿದೆ.

ಯುದ್ಧದ ಬಳಿಕ ಪುನರ್ಜನ್ಮ

ಎರಡನೇ ಮಹಾಯುದ್ಧದ ವೇಳೆ ಡ್ರೆಸ್ಡೆನ್ ಭಾರಿ ಬಾಂಬ್ ದಾಳಿಗೆ ಗುರಿಯಾಯಿತು. ನಗರ ಬಹುತೇಕ ನಾಶವಾಯಿತು. ಅನೇಕ ಐತಿಹಾಸಿಕ ಕಟ್ಟಡಗಳು ಅವಶೇಷಗಳಾಗಿ ಬಿದ್ದವು. ಆದರೆ ಯುದ್ಧದ ನಂತರ ಜರ್ಮನಿ ಈ ನಗರವನ್ನು ಮತ್ತೆ ಅದೇ ವೈಭವದಲ್ಲಿ ಪುನರ್ ನಿರ್ಮಿಸಿತು. ಹಳೆಯ ಕಟ್ಟಡಗಳನ್ನು ಮೂಲ ವಿನ್ಯಾಸದಂತೆ ಮರುನಿರ್ಮಿಸಲು ಅಪಾರ ಶ್ರಮವಹಿಸಲಾಯಿತು.

ಇಂದು ಡ್ರೆಸ್ಡೆನ್ ಜರ್ಮನಿಯ ಪ್ರಮುಖ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿದೆ. ಇಲ್ಲಿ ಇರುವ ಟೆಕ್ನಿಕಲ್ ಯೂನಿವರ್ಸಿಟಿ ಡ್ರೆಸ್ಡೆನ್ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಐಟಿ, ಅರೆವಾಹಕ ಮತ್ತು ವಿದ್ಯುನ್ಮಾನ ಉದ್ಯಮಗಳ ಬೆಳವಣಿಗೆಯಿಂದಾಗಿ ಈ ನಗರ ‘ಯೂರೋಪಿಯನ್ ಸಿಲಿಕಾನ್ ವ್ಯಾಲಿ’ ಎಂದೂ ಹೆಸರಾಗಿದೆ.

ಡ್ರೆಸ್ಡೆನ್ನ ಅತ್ಯಂತ ಪ್ರಸಿದ್ಧ ಕಟ್ಟಡಗಳಲ್ಲಿ ಜ್ವಿಂಗರ್ ಪ್ಯಾಲೆಸ್ ಪ್ರಮುಖವಾದದು. 1709ರಲ್ಲಿ ಬರೋಕ್ ಶೈಲಿಯಲ್ಲಿ ನಿರ್ಮಿಸಲಾದ ಈ ಅರಮನೆ, ಅದ್ಭುತ ಕಲಾ ಸಂಗ್ರಹಾಲಯಗಳು ಮತ್ತು ಸುಂದರ ಉದ್ಯಾನಗಳಿಂದ ಪ್ರಸಿದ್ಧವಾಗಿದೆ.

ಇಲ್ಲಿ ನಡೆಯುವ ಸಂಗೀತ ಹಾಗೂ ನಾಟಕ ಕಾರ್ಯಕ್ರಮಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಡ್ರೆಸ್ಡೆನ್ನ ಪ್ರಮುಖ ಚರ್ಚ್ ಆಗಿರುವ ಫ್ರೌನ್ ಕಿರ್ಖೆ ತನ್ನ ಭವ್ಯ ಗುಮ್ಮಟದಿಂದ ಪ್ರಸಿದ್ಧವಾಗಿದೆ. 18ನೇ ಶತಮಾನದಲ್ಲಿ ನಿರ್ಮಿಸಲಾದ ಈ ಚರ್ಚ್ ಯುದ್ಧದ ವೇಳೆ ಸಂಪೂರ್ಣ ನಾಶವಾಯಿತು. ಆದರೆ ನಂತರ ಅದರ ಮೂಲ ಕಲ್ಲುಗಳನ್ನೇ ಬಳಸಿಕೊಂಡು ಅದನ್ನು ಮತ್ತೆ ನಿರ್ಮಿಸಲಾಯಿತು. ಈ ಪುನರ್ ನಿರ್ಮಾಣವೇ ಡ್ರೆಸ್ಡೆನ್ ನಗರದ ಪುನರ್ಜನ್ಮದ ಸಂಕೇತವಾಗಿದೆ.

ಸೆಂಪರ್ ಓಪೆರಾ ಹೌಸ್

ಡ್ರೆಸ್ಡೆನ್ನ ಸಾಂಸ್ಕೃತಿಕ ಹೃದಯವೆಂದೇ ಹೇಳಬಹುದಾದ ಸೆಂಪರ್ ಓಪೆರಾ ಹೌಸ್ 1841ರಲ್ಲಿ ನಿರ್ಮಿಸಲಾಯಿತು. ಬೆಂಕಿ ಅವಘಡ ಮತ್ತು ಯುದ್ಧದ ದಾಳಿಯಿಂದ ಎರಡು ಬಾರಿ ನಾಶವಾದರೂ ಅದನ್ನು ಮತ್ತೆ ಮೂಲ ರೂಪದಲ್ಲೇ ನಿರ್ಮಿಸಲಾಗಿದೆ. ಇಂದು ಇಲ್ಲಿ ಸಂಗೀತ, ನೃತ್ಯ ಮತ್ತು ಓಪೆರಾ ಕಾರ್ಯಕ್ರಮಗಳು ನಡೆಯುತ್ತವೆ.

ಡ್ರೆಸ್ಡೆನ್ನ ಮತ್ತೊಂದು ವಿಶೇಷತೆ 101 ಮೀಟರ್ ಉದ್ದದ ಪರಸಿಲೇನ್ ಭಿತ್ತಿಚಿತ್ರ. ‘ಪೆರೇಡ್ ಆಫ್ ಪ್ರಿನ್ಸೆಸ್’ ಎಂದು ಕರೆಯಲಾಗುವ ಈ ಚಿತ್ರದಲ್ಲಿ ವೆಟ್ಟಿನ್ ರಾಜವಂಶದ ಸ್ಯಾಕ್ಸನ್ ರಾಜರ ಮೆರವಣಿಗೆಯನ್ನು ಚಿತ್ರಿಸಲಾಗಿದೆ.

ಪಿಂಗಾಣಿ ಚೂರುಗಳಿಂದ ನಿರ್ಮಿಸಲಾದ ಈ ಭಿತ್ತಿಚಿತ್ರವು ವಿಶ್ವದಲ್ಲೇ ಅತ್ಯಂತ ಉದ್ದದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆ ಊರು ದೂರವಾಗಿದ್ದರೂ, ಅದರ ನೆನಪು ಮನಸ್ಸಿಗೆ ಇನ್ನೂ ಹತ್ತಿರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.