ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒನ್ ಡೇ ಹಂಪಿ ಟ್ರಿಪ್‌..

ಹಂಪಿ ನೋಡಲು ಮಳೆಗಾಲವೇ ಬೆಸ್ಟ್‌ ..
Last Updated 31 ಜುಲೈ 2019, 19:30 IST
ಅಕ್ಷರ ಗಾತ್ರ

‘ಹಂಪಿ ನೋಡೋದಾದ್ರೆ ಕನಿಷ್ಠ ಮೂರು ದಿನಗಳಾದರೂ ಬೇಕು’ – ಈ ಸಲಹೆ ಯಾವತ್ತೂ ನನಗೆ ದುಬಾರಿ. ಏಕೆಂದರೆ ಮೂರು ದಿನಗಳ ರಜೆ ಹೊಂದಿಸೋದು ಕಷ್ಟ. ಆದರೆ ಮಗನದ್ದು ಒಂದೇ ಹಠ, ‘ಹಂಪಿ ನೋಡೋಕೆ ಹೋಗೋಣ ಮಮ್ಮೀ.....’.

ಒಮ್ಮೆ ಪ್ಲಾನ್ ಮಾಡಿದೆ. ಒಂದು ದಿನದಲ್ಲಿ ಹಂಪಿ ನೋಡಿ ಬಂದುಬಿಡೋಣ, ಎಂದು. ಅವತ್ತು ಬೆಳಿಗ್ಗೆ 6ಕ್ಕೆ ಹುಬ್ಬಳ್ಳಿಯಿಂದ ತಿರುಪತಿ ಪ್ಯಾಸೆಂಜರ್‌ ರೈಲು ಹತ್ತಿದೆವು. 9.40ಕ್ಕೆ ಹೊಸಪೇಟೆ ಜಂಕ್ಷನ್‌ನಲ್ಲಿ ರೈಲು ನಿಂತಿತು. ಬರೇ ₹35ಕ್ಕೆ ಹುಬ್ಬಳ್ಳಿಯಿಂದ ಹೊಸಪೇಟೆ ತಲುಪಿದ ಖುಷಿ ಬೇರೆ.

ಒನ್ ಡೇ ಹಂಪಿ ಟ್ರಿಪ್‌ಗಾಗಿ ನೋಡುವ ಸ್ಥಳಗಳ ಪಟ್ಟಿ ಸಿದ್ಧವಾಗಿತ್ತು. ಸಹೋದ್ಯೋಗಿ ಶಶಿ, ಓಡಾಡೋಕೆ ಕ್ಯಾಬ್‌ ಮಾಡಿಕೊಳ್ಳಲು ನೆರವಾದರು. ಆ ಕ್ಯಾಬ್‌ ಡ್ರೈವರ್ ರವಿ, ಗೈಡ್‌ ಕೂಡ ಆಗಿದ್ದರು. ರೈಲು ಇಳಿಯುತ್ತಿದ್ದಂತೆ ಕ್ಯಾಬ್‌ ಬಂತು. ಬೆಳಗಿನ ಉಪಹಾರ ರೈಲಿನಲ್ಲಿ ಮುಗಿದಿದ್ದರಿಂದ, ನೇರವಾಗಿ ಟ್ರಿಪ್ ಆರಂಭವಾಯಿತು.

‘ಮೊದಲು ನಿಮ್ಮನ್ನ ಮ್ಯೂಸಿಯಂಗೆ ಬಿಡ್ತಿನಿ. ಅಲ್ಲಿ ಒಬ್ಬರಿಗೆ ₹40 ಕೊಟ್ಟು ಟಿಕೆಟ್‌ (ವಿದೇಶಿಗರಿಗಾದರೆ ₹600) ತಗೊಳ್ಳಿ. ಎಲ್ಲ ಕಡೆ ಅದನ್ನೇ ತೋರಿಸಿದರೆ ಸಾಕು’ ಎಂದು ರವಿ ಹೇಳಿದರು. ಅವರು ಹಾಗೆ ಹೇಳದಿದ್ದರೆ, ಹೋದಲ್ಲೆಲ್ಲ ಟಿಕೆಟ್‌ ಕೌಂಟರ್‌ ಮುಂದೆ ನಿಲ್ಲುತ್ತಿದ್ದೆವೆನೋ? ಪರ್ವಾಗಿಲ್ಲ, ₹40 ರಲ್ಲಿ ಇಡೀ ಹಂಪಿ ದರ್ಶನ ಸಿಗಲಿದೆ ಎಂದು ಖುಷಿಯಾಯಿತು. ನನ್ನ ಮಗನಿಗೋ ಫ್ರೀ!

ಪ್ರವಾಸ ಶುರುವಾಯಿತು. ಕಾರಿನ ಚಕ್ರ ಉರುಳುತ್ತಿದ್ದಾಗ, ಹೊರಗಿನ ತಂಪನೆಯ ವಾತಾವರಣ ಮುದ ನೀಡಿತು. ‘ಬೇಸಿಗೆಯಲ್ಲಿ ಹಂಪಿ ಪ್ರವಾಸ ಪ್ರಯಾಸವೇ. ಆದರೆ, ಮಳೆಗಾಲವೇ ಬೆಸ್ಟ್‌’ ಎನ್ನಿಸಿತು. ‘ಮಳೆ ಸುರಿದ ಮಾರನೆಯ ದಿನ ಹಂಪಿ ನೋಡುವುದೇ ಒಂದು ಸೊಬಗು’ ಎನ್ನುತ್ತಿದ್ದ ಗೆಳೆಯರ ಮಾತು ಅಕ್ಷರಶಃ ನಿಜ ಎನ್ನಿಸಿತ್ತು. ಹಸಿರ ನಡುವೆ, ಬಿಳಿ, ದಟ್ಟವಾದ ನೀಕಾಶದ ಹಿನ್ನೆಲೆ ಬಂಡೆಗಳ ಸೌಂದರ್ಯಕ್ಕೆ ಕಳಸವಿಟ್ಟಂತೆ ಗೋಚರಿಸಿತು. ಎಲ್ಲವೂ ಒಂಥರಾ ಜಲವರ್ಣದಲ್ಲಿ ಲ್ಯಾಂಡ್‌ಸ್ಕೇಪ್‌ ಪೇಂಟಿಂಗ್‌ಗಳನ್ನು ನೆನಪಿಸಿದವು.

ಫಟಾ ಫಟ್ ವೀಕ್ಷಣೆ

ಬೆಳಿಗ್ಗೆ 10.10ಕ್ಕೆ ಮ್ಯೂಸಿಯಂ ನೋಡಿಕೊಂಡು 10.30ರಿಂದ 11.50ರವರೆಗೆ ವಿಜಯವಿಠಲ ದೇಗುಲ ಪ್ರಾಂಗಣದಲ್ಲಿ ಅಡ್ಡಾಡಿದೆವು. ಅಲ್ಲಿ ಅಡಿಯಿಡುತ್ತಲೇ ಗೈಡ್‌ಗಳು ಸುತ್ತುವರಿದರು. ಹಂಪಿ ನೋಡಲು ಗೈಡ್‌ ಬೇಕು, ನಿಜ. ಆದರೆ, ಒನ್ ಡೇ ಟ್ರಿಪ್‌ಗೆ ಅದು ಹೊಂದುವುದಿಲ್ಲ. ಹಾಗಾಗಿ ನಮ್ಮ ಪಾಡಿಗೆ ನಾವು ಸುತ್ತಾಟ ಮಾಡುತ್ತಿದ್ದೆವು.

12.15ಕ್ಕೆ ರಾಣಿ ಸ್ನಾನಗೃಹ, 12.30ಕ್ಕೆ ಮಹಾನವಮಿ ದಿಬ್ಬ, ಪುಷ್ಕರಣಿ, 12.50ಕ್ಕೆ ಹೇಮಕೂಟ ದೇಗುಲ, 1ಗಂಟೆಗೆ ಕಮಲ್‌ ಮಹಲ್, 1.10ಕ್ಕೆ ರಾಣಿ ಆವಾಸ ಅಧಿಷ್ಠಾನ ನೋಡುವವರೆಗೆ ಹೊಟ್ಟೆ ತಾಳ ಹಾಕಲು ಶುರುವಿಟ್ಟಿತು. 2 ಗಂಟೆಗೆ ಊಟಕ್ಕೆ ಹೊರಟು ಅಲ್ಲಿ ಒಂದು ತಾಸಾಯಿತು. ಅಲ್ಲಿನ ರುಚಿಶುಚಿ ಊಟವೂ ಮನಸ್ಸಿಗೆ ಖುಷಿ ಕೊಟ್ಟಿತು. ಊಟದ ನಂತರ 3ಕ್ಕೆ ಕಡಲೆಕಾಳು ಗಣೇಶ, ಉಗ್ರನರಸಿಂಹ, 3.15ಕ್ಕೆ ವಿರೂಪಾಕ್ಷ ದೇವಾಲಯ ನೋಡಿದ್ದಾಯಿತು. ಹಂಪಿಯಲ್ಲಿ ಒಂದಕ್ಕಿಂತ ಒಂದು ತಾಣ ಆಕರ್ಷಿಸಿದರೂ, ಕೆಲವು ಪಳೆಯುಳಿಕೆಗಳಾಗಿ ಕಾಡುತ್ತವೆ. ವಿಜಯನಗರದ ವೈಭವವನ್ನು ಸಾರಿ ಹೇಳುವಂತಿವೆ. ಆದರೆ ಪ್ರವಾಸ ಮುಗಿಸಿ ಬರುವಾಗ ಮಾತ್ರ ಹಾಳು ಹಂಪಿ ಎಂಬ ಮಾತು ಮನದಲ್ಲಿ ನೆಲೆಯೂರುವುದು ಸುಳ್ಳಲ್ಲ.

ಇಷ್ಟೆಲ್ಲ ನೋಡಿದ ಮೇಲೆ ಆಗಿದ್ದು ಮಧ್ಯಾಹ್ನ 4.15. ಅಲ್ಲಿಂದ ಹೊಸಪೇಟೆಗೆ ಹೊರಟು ತುಂಗಭದ್ರಾ ಡ್ಯಾಂ ತಲುಪಿದಾಗ 4.30. ನೀರಿನ ಒಳಹರಿವು, ಸುತ್ತಲ ಹಸಿರು ಪರಿಸರ, ಬೀಸುವ ಗಾಳಿ ಮನಕ್ಕೆ ಇನ್ನಷ್ಟು ಮುದನೀಡಿತು. 6 ಗಂಟೆಗೆ ರೈಲು ಸ್ಟೇಷನ್‌ನಲ್ಲಿ ಇರಬೇಕಿದ್ದರಿಂದ ಸ್ವಲ್ಪ ಬೇಗನೇ ಹೊರಟು, 5.30ಕ್ಕೆ ರೈಲ್ವೆ ಸ್ಟೇಷನ್ನಿಗೆ ಬಂದಾಯ್ತು. ಆದರೆ ಅಂದೇ ರೈಲು ತಡ ಎಂದಿದ್ದಕ್ಕೆ ಬಸ್‌ನಿಲ್ದಾಣಕ್ಕೆ ಬಂದು ಅಲ್ಲಿ 6ಗಂಟೆಗೆ ಹುಬ್ಬಳ್ಳಿ ಕಡೆ ಹೊರಡುವ ಬಸ್‌ ಹತ್ತಿದೆವು. ಹಂಪಿಯಲ್ಲಿ ಎಲ್ಲವನ್ನೂ ನೋಡಲಾಗಲಿಲ್ಲ ಎಂಬ ಕೊರಗುಳಿಯಿತು. ಅದಕ್ಕೆ ನೋಡಲಾಗದೇ ಬಿಟ್ಟ ಸ್ಥಳಗಳಿಗಾಗಿ ಇನ್ನೊಮ್ಮೆ ಸಮಯ ಸಿಕ್ಕಾಗ ಹುಬ್ಬಳ್ಳಿ ಟೂ ಹಂಪಿ ಟ್ರಿಪ್‌ !

ಹಂಪಿಗೆ ಹೀಗೆಲ್ಲ ಹೋಗಬಹುದು..

ಹುಬ್ಬಳ್ಳಿಯಿಂದ ಬೆಳಿಗ್ಗೆ 6ಕ್ಕೆ ಹುಬ್ಬಳ್ಳಿ–ತಿರುಪತಿ ಪ್ಯಾಸೆಂಜರ್‌ ರೈಲಿನಲ್ಲಿ ಹೊರಟರೆ 9.45ಕ್ಕೆ ಹೊಸಪೇಟೆ ತಲುಪಲಿದೆ. ಅಲ್ಲಿಂದ ಕ್ಯಾಬ್‌ ಮಾಡಿಕೊಂಡರೆ ಬಹುತೇಕ ಸ್ಥಳಗಳನ್ನು ನೋಡಿ, ಸಂಜೆ 6ಕ್ಕೆ ವಾಪಸ್ ಹೊಸಪೇಟೆ ರೈಲು ನಿಲ್ದಾಣಕ್ಕೆ ಬರಬಹುದು. ಅಲ್ಲಿ ತಿರುಪತಿ–ಹುಬ್ಬಳ್ಳಿ ರೈಲು ಸಿಗುತ್ತದೆ. ಆದರೆ ಈ ವೇಳೆ ರೈಲು ತಡವಾದರೂ ತೊಂದರೆಯಿಲ್ಲ. ಹುಬ್ಬಳ್ಳಿಗೆ ಬಸ್‌ ಮೂಲಕ (165 ಕಿ.ಮೀ.) ತಲುಪಬಹುದು. 6 ಗಂಟೆಗೆ ಹೊರಡುವ ಬಸ್‌ ಹುಬ್ಬಳ್ಳಿಗೆ 10–15ಕ್ಕೆ ತಲುಪಲಿದೆ.

ಬೆಂಗಳೂರಿನಿಂದ ಹಂಪಿ ಎಕ್ಸ್‌ಪ್ರೆಸ್‌ (ಗುಂತಕಲ್‌ ಮಾರ್ಗ)ಗೆ ಹೊರಟರೆ, ಬೆಳಿಗ್ಗೆ 7.15ಕ್ಕೆ ಹೊಸಪೇಟೆ ತಲುಪಬಹುದು. ಅಲ್ಲಿ ಉತ್ತಮ ವಸತಿ ಸೌಲಭ್ಯಗಳಿದ್ದು, ಬೆಳಿಗ್ಗೆ ಫ್ರೆಶ್‌ ಆಗಿ, ಕಾರಿನಲ್ಲಿ ಹಂಪಿ ನೋಡಿ, ರಾತ್ರಿ ಅದೇ ಹಂಪಿ ಎಕ್ಸ್‌ಪ್ರೆಸ್‌ ಟ್ರೈನ್‌ಲ್ಲಿ ಹೊರಟು ಮಾರನೆಯ ದಿನ ತಲುಪಬಹುದು.

ಚಿತ್ರಗಳು: ಯಶಸ್ವಿ ದೇವಾಡಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT