ಸ್ಪೇನಿನ ಸೊಬಗು ಸೆವಿಲ್‌

7

ಸ್ಪೇನಿನ ಸೊಬಗು ಸೆವಿಲ್‌

Published:
Updated:

ನಮ್ಮಲ್ಲಿ ‘ಓಲಾ’ ಎನ್ನುವ ಪದ ಈಗೀಗ ಚಲಾವಣೆಯಲ್ಲಿದೆ. ಇದರರ್ಥ ‘ಹಲೋ’ ಎಂದು. ಜನ ಎಲ್ಲೆಲ್ಲೂ  ಮುಗುಳ್ನಗುತ್ತಾ ‘ಓಲಾ’ ಎನ್ನುವುದನ್ನು ಸ್ಪೇನ್‌ ದೇಶದಲ್ಲೇ ಕೇಳಿ ಆನಂದಿಸಬೇಕು. ಹೌದು, ಓಲಾದ ತವರು ಸ್ಪೇನ್‌. 

ಸ್ಪೇನಿನ ದಕ್ಷಿಣ ಭಾಗ ‘ಅಂದಲೂಸಿಯಾ’ದ ಸೆವಿಲ್‌ ಪ್ರಾಂತ್ಯದ ರಾಜಧಾನಿ ಈ ‘ಸೆವಿಲ್’ ನಗರ. ‘ಗ್ವಾದಲ್‌ಕಿವಿಯರ್’ ನದಿ ದಡದಲ್ಲಿ ಅರಳಿರುವ ಈ ಸುಂದರ ನಗರ ಸ್ಪೈನಿನ ಅತ್ಯಂತ ಪ್ರಮುಖ ಮತ್ತು ನಾಲ್ಕನೇ ಅತಿದೊಡ್ಡ ನಗರ. ‘ಲೋನ್‌ಲಿ ಪ್ಲಾನೆಟ್’ ಸಂಸ್ಥೆ ತನ್ನ, ವಿಶ್ವದ ಹತ್ತು ‘ಟಾಪ್ ಟೆನ್ ಸಿಟಿ’ ಸರ್ವೇಯಲ್ಲಿ ಸೆವಿಲ್‌ ಅನ್ನು ಆಯ್ಕೆ ಮಾಡಿದ್ದೇ ಇದರ ಹೆಗ್ಗಳಿಕೆಗೊಂದು ಸಾಕ್ಷಿ. ಇಲ್ಲಿಯ ಹಳೆಯ ಭಾಗವೊಂದರಲ್ಲೇ ‘ಯುನೆಸ್ಕೊ ಹೆರಿಟೇಜ್ ಸೈಟ್’ಗೆ ಸೇರಿದ ಮೂರು ಪ್ರಮುಖ ನಿರ್ಮಾಣಗಳಿವೆ. ರೋಮನ್ ಸಿಟಿಯಾಗಿ ಅಸ್ತಿತ್ವಕ್ಕೆ ಬಂದರೂ, 8ನೇ ಶತಮಾನದಲ್ಲಿ ಮುಸ್ಲಿಮರ ವಶವಾಗಿ, ಎಂಟು ನೂರು ವರ್ಷಗಳ ನಂತರ ಮತ್ತೆ  ಕ್ರಿಶ್ಚಿಯನ್ನರ ವಶವಾದ ಈ ನಗರದ ತುಂಬ ಈ ಎರಡೂ ಧರ್ಮಗಳ ಕಲೆ, ಕಟ್ಟಡ ವಿನ್ಯಾಸ, ಸಂಸ್ಕೃತಿ, ಪರಂಪರಾಗತ ರೂಢಿ, ಕೌಶಲ್ಯಗಳು ಢಾಳಾಗಿ ಎದ್ದು ಕಾಣುತ್ತವೆ. ಕೊಲಂಬಸ್ ಅಮೆರಿಕಾ ಕಂಡುಹಿಡಿದ ಮೇಲೆ, ಸ್ಪೇನ್ ಮತ್ತು ಅಮೆರಿಕಾಗಳ ನಡುವೆ ವಾಣಿಜ್ಯ ವ್ಯಾಪಾರ ಕುದುರಿಸಲು ‘ಸೆವಿಲ್ಲ’ ವನ್ನೇ ಆಯ್ಕೆ ಮಾಡಿಕೊಂಡ. ಕಾರಣ, ಇದು ನದಿ ಬಂದರು ಕೂಡ ಆಗಿ ಪ್ರಮುಖ ನಗರವಾಗಿದೆ. 

ಪೋರ್ಚುಗಲ್‌ನ ಲಿಸ್ಬನ್ ಸಿಟಿಯಿಂದ ಬೆಳಿಗ್ಗೆ ಹೊರಟ ನಾವು ಮಾರ್ಗ ಮಧ್ಯೆ ಸಿಗುವ ‘ಫಾತಿಮಾ’ ಎನ್ನುವ ಕ್ರೈಸ್ತರ ಮುಖ್ಯ ಯಾತ್ರಾ ಸ್ಥಳದ ಭೇಟಿಯ ನಂತರ, ಸ್ಪೈನಿನ ‘ಸೆವಿಲ್’ ನಗರ ತಲುಪಿದ್ದು ಸಂಜೆ 5ಗಂಟೆಗೆ. ಹಾದಿಯುದ್ದದ ರಣರಣ ಬಿಸಿಲು, ಕೆಲವೆಡೆಯ ಬಂಜರುಭೂಮಿ ಬಳಲಿಸಿಬಿಟ್ಟರೂ, ಅಲ್ಲಲ್ಲಿ ಧಾರಾಳವಾಗಿ ಬೆಟ್ಟಗುಡ್ಡ ಪ್ರದೇಶ, ಆಲಿವ್‌ಮರ, ತರಹೇವಾರಿ ಬೆಳೆಗಳ ಹೊಲ ಕಣ್ಣು ತಂಪಾಗಿಸಿತ್ತು. ಇಡೀ ದಿನದ ಪ್ರಯಾಣದ ನಂತರ ಸ್ವಲ್ಪ ಹೊತ್ತು ನಮ್ಮ ಕೋಣೆಗಳಲ್ಲಿ ವಿಶ್ರಾಂತಿ. ಸಂಜೆಗೆ ಹೋಗಿದ್ದೇ ಸೆವಿಲ್‌ನ ಅತ್ಯದ್ಭುತ ‘ಫ್ಲೆಮೆಂಕೊ ಡಾನ್ಸ್ ಶೋ’ಗೆ. 

ಫ್ಲೆಮೆಂಕೋ ನೃತ್ಯ: ಈ ನೃತ್ಯಪ್ರಾಕಾರದ ತವರೇ ಸೆವಿಲ್. ಇಲ್ಲಿಯ ಜಿಪ್ಸಿ ಎನ್ನುವ ಜನಾಂಗದವರೇ ಇದರಲ್ಲಿ ಪರಿಣಿತರು. ಈ ನೃತ್ಯ ಇಲ್ಲಿಯ ಮೂಲಜನಾಂಗ ‘ಅಂದಲೂಸಿಯನ್ನರ’ ಪುರಾತನ ಸಾಂಸ್ಕೃತಿಕ ಆಚರಣೆಯಾಗಿದ್ದು, ಇಂದು ಸ್ಪೈನಿನ ರಾಷ್ಟ್ರೀಯ ಸಾಂಸ್ಕೃತಿಕ ಹೆಮ್ಮೆಯ ಚಿಹ್ನೆಯಾಗಿದೆ. ಸೆವಿಲ್‌ನಲ್ಲಿ ಈ ನೃತ್ಯ ಬಹಳ ಮುಂಚೂಣಿಯಲ್ಲಿದ್ದು, ವಿಶ್ವದ ಪ್ರವಾಸಿಗರು ಮುಗಿಬಿದ್ದು ನೋಡುವುದರಿಂದ, ಇದು ಇಲ್ಲಿಯ ಆದಾಯದ ಬಹುಮುಖ್ಯ ಮೂಲವಾಗಿದೆ. 

ಇಲ್ಲಿ ನಾವು ಟಿಕೆಟ್ ಕೊಂಡದ್ದು ಒಂದು ಗಂಟೆಯ ಕಾಲದ ಪ್ರದರ್ಶನಕ್ಕೆ. ಕರಾರುವಾಕ್ಕಾಗಿ ಅಷ್ಟೇ ಕೊಡೋದು ಎಲ್ಲ ಬಿಜಿನೆಸ್ ಲೆಕ್ಕಾಚಾರ. ಆದ್ರೆ, ನಮಗೆ ಮಾತ್ರ ಸಿಕ್ಕಾಪಟ್ಟೆ ಬೋನಸ್ ಸಿಕ್ಕಿತು. ಕಾರಣ, ನಮ್ಮ ಪ್ರವಾಸೀ ತಂಡದಲ್ಲಿ ಬಾಲಿವುಡ್ ಡೈರೆಕ್ಟರ್, ‘ಪುನೀತ್ ಇಸ್ಸಾರ್’ ಇದ್ದಿದ್ದರಿಂದ. ಬಹಳ ಹಿಂದೆ ಮಹಾಭಾರತ ಸೀರಿಯಲ್‌ನಲ್ಲಿ ದುರ್ಯೋಧನನ ಪಾತ್ರ ಮಾಡಿ ಜನಮನ ಗೆದ್ದ ಈ ನಟ ನೆನಪಿರಬಹುದು. ಈಗೆಲ್ಲ ಹೊರದೇಶದಿಂದ ಇಂಥ ಕಲಾವಿದರನ್ನು ಹಿಂದಿ ಸಿನಿಮಾಗೆ ಕರೆತರುತ್ತಿರುವ ಪದ್ಧತಿ ಶುರುವಾಗಿದೆಯಷ್ಟೆ. ಹಾಗಾಗಿ ಡೈರೆಕ್ಟರ್ ಇದ್ದಾರೆನ್ನುವ ಸುದ್ದಿಯಲ್ಲಿ ತಂಡದ ನಿರ್ವಾಹಕರು ಏನು ಸೂಚನೆ ಕೊಟ್ಟರೋ, ಕಲಾವಿದರ ಉತ್ಸಾಹ ಹೆಚ್ಚುತ್ತಲೇ ಹೋಯ್ತು. ಮರದ ವೇದಿಕೆಯಲ್ಲಿ ಮರದ ಬೂಡ್ಸುಗಳ ಧರಿಸಿ ಹೆಜ್ಜೆಯ ಗತಿಯನ್ನು ಮಂದ್ರದಿಂದ ತಾರಕಕ್ಕೇರಿಸುತ್ತ, ವೇಗವನ್ನು ಹೆಚ್ಚಿಸಿಕೊಂಡೂ, ಲಯಲಾಸ್ಯವನ್ನು ಚೂರೂ ಕಳೆದುಕೊಳ್ಳದಂತೆ ಮಾಡಿದ ಈ ಅದ್ಭುತ ಡಾನ್ಸ್ ನಮ್ಮೆಲ್ಲರನ್ನೂ ಸೆರೆ ಹಿಡಿಯಿತು. ನಿರಿಗೆ ನಿರಿಗೆಯ, ಉದ್ದುದ್ದದ ಸುಂದರ ಲಂಗಗಳ ತೊಟ್ಟ ಸುಂದರಿಯರು, ಲಂಗಗಳನ್ನು ತಿರುಗಿಸುತ್ತಿದ್ದ ರೀತಿಯೇ ದಂಗುಬಡಿಸುತ್ತಿತ್ತು. ನಾವಂತೂ ವಿಗ್ರಹಗಳಂತೆ ಕೂತಿದ್ದರೆ, ಕಲಾವಿದರ ಗಮನವೆಲ್ಲ ಡೈರೆಕ್ಟರ್ ಮೇಲೆ. ನೃತ್ಯ ಮುಗಿಯಿತು ಎನ್ನುವಾಗಲೇ, ಅದೆಲ್ಲಿಂದಲೋ ಮತ್ತೆ ಆರಂಭವಾಗುತ್ತಿತ್ತು. ಅಬ್ಬಾ, ಅವರ ಮೈಯ್ಯಲ್ಲಿನ ಕಸುವು ಅದೆಷ್ಟಿತ್ತೊ, ಎರಡು ಗಂಟೆ ಸತತವಾಗಿ ನಡೆದ ಆ ನೃತ್ಯ ನಾವು ಹಿಂದೆ ಕಾಣದ್ದು, ಮುಂದೆ ಕಾಣಲಾಗದ್ದು....! 

ಅಲ್ಕಜಾರ್: ಸ್ಪೇನಿನ ಗ್ರೆನೆಡಾದಲ್ಲಿರುವ ಕೋಟೆಯೊಳಗಣ ಅರಮನೆ ಸಂಕೀರ್ಣ ‘ಲಾ-ಅಲ್-ಹಂಬ್ರಾ’ ನೋಡದವರು ಈ ಅಲ್ಕಜಾರ್ ನೋಡಿ ಎನ್ನುವ ಮಾತೊಂದಿದೆ. ಸ್ಪೇನಿನಲ್ಲಿ ಮುಸಲ್ಮಾನರ ಆಳ್ವಿಕೆಯ ಸುವರ್ಣಯುಗದ ಕುರುಹಾಗಿರುವ ಈ ಎರಡೂ ಅರಮನೆ ಸಂಕೀರ್ಣಗಳು ಇಂದೂ, ಇಸ್ಲಾಮಿಕ್‌ ಕಲೆಯ ಸುಂದರ ಸಾಕ್ಷಿಗಳಾಗಿ, ಸುಸ್ಥಿತಿಯಲ್ಲಿವೆ. 12ನೇ ಶತಮಾನದಲ್ಲಿ ರಚನೆ ಆರಂಭವಾದ ಈ ‘ಅಲ್ಕಜಾರ್ ಅರಮನೆ’  ಕ್ರಿಶ್ಚಿಯನ್ನರ ಸುಪರ್ದಿಯಲ್ಲಿ ದೊರೆಗಳ ಖಾಯಂ ನಿವಾಸವಾಯಿತು. ದೊರೆ ಪೆಡ್ರೋ ಈ ಅರಮನೆ ಕಟ್ಟುವಾಗ ಮುಸಲ್ಮಾನ ದೊರೆಗಳೊಂದಿಗೆ ಒಳ್ಳೆಯ ಸಖ್ಯವಿದ್ದುದರಿಂದ, ಲಾ-ಅಲ್-ಹಂಬ್ರಾದ ದೊರೆ ತನ್ನ ಕುಶಲಕರ್ಮಿಗಳನ್ನೇ ಈ ಅರಮನೆ ನಿರ್ಮಾಣಕ್ಕೆ ಕಳಿಸಿಕೊಟ್ಟನಂತೆ. ಹಾಗಾಗೇ ಇಲ್ಲಿಯ ವಿಶ್ರಾಂತಿವನ, ನೀರಿನ ಚಿಲುಮೆಗಳು, ಪ್ರತಿಮೆಗಳು, ಅರಮನೆ ವಿನ್ಯಾಸ ಎಲ್ಲವೂ ‘ಅಲ್ ಹಂಬ್ರಾ’ದಂತೆ ವಿನ್ಯಾಸ, ಇಸ್ಲಾಮಿಕ್‌ ಕಲೆಯನ್ನೇ ಕಡ ಪಡೆದಿದ್ದು ಅದ್ಭುತವಾಗಿದೆ. ಇದು ದೊರೆ ವಂಶದವರ ವಾಸಸ್ಥಾನವಾಗಿದ್ದೂ, ಕೆಲವು ಭಾಗಗಳಿಗೆ ಸಾರ್ವಜನಿಕರಿಗೆ ಪ್ರವೇಶವಿದ್ದು, ಸ್ಮಾರಕವೆಂದೂ ಕರೆಸಿಕೊಳ್ಳುತ್ತ ಯುನೆಸ್ಕೊ ಪಟ್ಟಿಯಲ್ಲಿ ಸೇರಿದೆ. 

ಸೈಂಟ್ ಮೇರಿ ಕೆಥಡ್ರಲ್: ವಿಶಾಲವಾದ ಅಂಗಣದಲ್ಲಿ ಈ ಕೆಥಡ್ರಲ್ ಎದುರು ನಿಂತಾಗ ಮೊದಲು ಅದರ ಗಾತ್ರಕ್ಕೆ ಅಬ್ಬಾ! ಎನ್ನುವಂತಾಗುತ್ತದೆ. ಯೂರೋಪಿನ ಮಧ್ಯಯುಗೀನ ಕೆಥಡ್ರಲ್‌ಗಳಲ್ಲಿ ಇದೇ ಅತಿ ದೊಡ್ಡದೆಂಬ ಹೆಗ್ಗಳಿಕೆಗೆ, ವಿಶ್ವದಲ್ಲೆ ಗೊಥಿಕ್‌ ಶೈಲಿಯ ಅತಿದೊಡ್ಡದಾದ, ಎತ್ತರದ ಕೆಥಡ್ರೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಯುನೆಸ್ಕೋ ವಿಶ್ವಪಾರಂಪರಿಕ ತಾಣಗಳ ಸೈಟ್‌ನಲ್ಲಿ ಸೇರ್ಪಡೆಯಾಗಿದೆ. ಇಲ್ಲಿ ಮೊದಲು ಭವ್ಯವಾದ ಮಸೀದಿ ಇತ್ತು. ೧೨ನೇ ಶತಮಾನದ ಭೂಕಂಪದಲ್ಲಿ ಈ ಮಸೀದಿಯ ಬಹುಭಾಗ ನಾಶವಾಗಿದ್ದರಿಂದ ಮುಂದೆ ಕ್ರಿಶ್ಚಿಯನ್ನರು ಸ್ಪೈನನ್ನು ವಶಪಡಿಸಿಕೊಂಡು ಈ ಜಾಗದಲ್ಲಿ ಭವ್ಯವಾದ ಕೆಥಡ್ರೆಲ್ ನಿರ್ಮಿಸಿದರು. ಅತಿ ಎತ್ತರದಲ್ಲಿನ ಮೀನಾರ್‌ಅನ್ನು ಬೆಲ್ ಗೋಪುರವಾಗಿಸಿಕೊಂಡಿರುವ ತಾಣ ನೋಡಬೇಕಾದರೆ ಚರ್ಚಿನ ಒಳಭಾಗದಲ್ಲಿರುವ ಕಿರಿದಾದ, ಮೆಟ್ಟಿಲುಗಳ ಬದಲಾಗಿ ಇರುವ ೩೬ ‘ರ್‍ಯಾಂಪ್’(ಏರುಹಾದಿ)ನಲ್ಲಿ 250 ಅಡಿ ಮೇಲೇರಬೇಕು.

 ಭವ್ಯವಾದ ಬೆಲ್‌ಟವರ್ ಜೊತೆಗೆ, ಇಲ್ಲಿಂದ ಹೊರಭಾಗದ ಟೆರೇಸ್‌ಲ್ಲಿ ನಿಂತರೆ, ಈ ಚರ್ಚಿನ ಭಾಗವಾಗಿ, ನಾಶವಾಗದೆ ಉಳಿಸಿಕೊಂಡ ಮೀನಾರ್‌ ಗೋಪುರಗಳು, ಕೆಥಡ್ರೆಲ್‌ನ ಗೋಥಿಕ್ ಶೈಲಿಯ ಗೋಪುರಗಳು, ಅಲಂಕರಣ ವಿನ್ಯಾಸಗಳು, ಅಲ್ಕಜಾರ್ ದರ್ಶನ, ನಗರದ ಮನೋಹರ ದೃಶ್ಯಗಳ ಕಿರುನೋಟ ಸಾಧ್ಯವಿದ್ದು, ಮೈನವಿರೇಳಿಸುವಂತಿದೆ. ಒಳಗೆ ಪವಿತ್ರ ಏಸು, ಮೇರಿಯರ ಪ್ರಾರ್ಥನಾ ಮಂದಿರ, ಪೇಂಟಿಂಗ್‌ಗಳು, ಬ್ರಾಂಜ್‌ ಶಿಲ್ಪಗಳು, ಛಾವಣಿಯ ಕೆತ್ತನೆಗಳು, ಮರದ ಕೆತ್ತನೆಯ ಕಲಾಕೃತಿಗಳು, ಆಲ್ಟರ್‌ಗಳು ಬಹಳ ಸುಂದರವಿವೆ. 

ಕೊಲಂಬಸ್‌ನ ಕಾಫಿನ್ ಹೊತ್ತ ಸಮಾಧಿಯೂ ಇದೆ. ಕೊಲಂಬಸ್ ಸಾಂಬಾರ ಪದಾರ್ಥಗಳಿಗಾಗಿ ಭಾರತ ಕಂಡುಹಿಡಿಯಬೇಕೆಂದು ಹೊರಟಾಗ ಸ್ಪೈನ್ ರಾಣಿಯೇ ಸಹಾಯ ಮಾಡಿದ್ದಂತೆ. ಆದರೆ ಹೊರಟವನು ಹಾದಿ ತಪ್ಪಿ  ಕಂಡುಹಿಡಿದಿದ್ದು ಅಮೆರಿಕ. ಇದರಿಂದಲೇ ಸ್ಪೇನಿಗೆ ಅಮೇರಿಕಾದೊಂದಿಗೆ ಉತ್ತಮ ವಾಣಿಜ್ಯ ಸಂಬಂಧ ಹೊಂದಲು ಸಾಧ್ಯವಾಗಿ, ಕೊಲಂಬಸ್‌ಗೆ ಇಲ್ಲಿ ವಿಶೇಷ ಸ್ಥಾನಮಾನವಿದೆ.  

ಪ್ಲಾಜಾ ಡಿ ಎಸ್ಪಾನಾ: ಕೆಥಡ್ರೆಲ್‌ನಿಂದ ಮುಂದಿನ ಈ ತಾಣ ಗಾತ್ರ, ವಿನ್ಯಾಸ, ವೈವಿಧ್ಯದ ಕ್ರಿಯಾತ್ಮಕತೆಯಲ್ಲಿ ಅದ್ಭುತ ಕಟ್ಟಡ ಸಂಕೀರ್ಣ. ‘ಪ್ಲಾಜ಼ಾ ಡಿ ಎಸ್ಪಾನಾ’ಎಂದು ಸ್ಪೇನ್‌ ಭಾಷೆಯಲ್ಲಿ ಕರೆಯುವ ಈ ಸಂಕೀರ್ಣ ನಿರ್ಮಾಣವಾಗಿದ್ದು 1929ರಲ್ಲಿ. ಸ್ಪೇನ್ ಅತಿಥೇಯ ದೇಶವಾಗಿ ಕೈಗೊಂಡ, ‘ಇಬೆರೊ-ಅಮೇರಿಕನ್ ಎಕ್ಸ್ಪೋ’ ಪ್ರದರ್ಶನಕ್ಕೆಂದು ನಿರ್ಮಿಸಿದ ಕಟ್ಟಡ ಸಂಕೀರ್ಣವಿದು.

ಇಟ್ಟಿಗೆ -ಟೈಲ್ಸ್‌ಗಳಿಂದ ವೆನಿಸ್ಸಿನಂಥ ಕಾಲುವೆಗಳ, ಪುಟ್ಟಸೇತುವೆಗಳ, ಫೌಂಟನ್‌ಗಳ, ಸ್ಪೇನಿನ 15ಪ್ರಾಂತಗಳಲ್ಲಿ ಅತಿಥೇಯರಾದ ತಮ್ಮನ್ನು ಬಿಟ್ಟು ಉಳಿದ ೧೪ ಪ್ರಾಂತಗಳ ಪರಿಚಯಾತ್ಮಕ ಚೌಕಗಳ, ಸೆರಾಮಿಕ್‌ ಕಲಾಕೃತಿಗಳ, ಸುಂದರ ವಿನ್ಯಾಸದ ಅರ್ಧಚಂದ್ರಾಕೃತಿಯ ರಚನೆಗಳ, ಗೋಥಿಕ್‌ ಶೈಲಿಯ ಅರಮನೆಯಂಥ ಕಟ್ಟಡಗಳ ನಿರ್ಮಾಣವಾಗಿ, ಅದರ ಅಂದ ಚಂದಕ್ಕೆ ಪ್ರವಾಸಿಗರು ಮಾತು ಹೊರಡದೆ ನಿಲ್ಲುತ್ತಾರೆ. ಇಲ್ಲಿಯ ಚಂದದ ಕಾಲುವೆಯಲ್ಲಿ ಬೋಟಿಂಗ್ ವಿಹಾರವಿದೆ.

ನಗರದಲ್ಲಿ ಎಲ್ಲಿ ನೋಡಿದರೂ ಕಿತ್ತಳೆ ಮರಗಳು ಹೇರಳವಾಗಿವೆ. ಕೆಂಪನೆಯ ಹಣ್ಣುಗಳು. ಇದರ ರುಚಿ  ಕಹಿ. ಮೊದಲೆಲ್ಲ ‘ಮರ್ಮಲೈಡ್’ ಎನ್ನುವ ಜ್ಯಾಮ್ ತಯಾರಿಕೆಗೆ ಬ್ರಿಟನ್ನಿಗೆ ಕಳಿಸುತ್ತಿದ್ದರು, ಈಗ ಉತ್ತಮ ಗೊಬ್ಬರ ತಯಾರಿಕೆಗೆ ಉಪಯೋಗಿಸುತ್ತಾರೆ. ಹೂಗಳಿಂದ ಚರ್ಮ ಮಸಾಜಿನ ಸುಗಂಧತೈಲ ಉತ್ಪಾದಿಸುತ್ತಾರೆ; ಸುಡುವ ಬಿಸಿಲಲ್ಲಿನ ನೆರಳಿಗಾಗಿ, ಸುತ್ತ ಹರಡುವ ನವಿರು ಸುಗಂಧಕ್ಕಾಗಿ ಮರಗಳನ್ನು ಹೇರಳ ನೆಟ್ಟಿದ್ದಾರೆ.       

ಸೆವಿಲ್‌ನಲ್ಲಿ ಹಲವಾರು ಮ್ಯೂಸಿಯಂಗಳಿವೆ. ಸ್ಪೇನಿನ ಮುಖ್ಯ ಮನರಂಜನೆಯಾದ ‘ಬುಲ್‌ಫೈಟಿಂಗ್’ ನಡೆವ ಕ್ರೀಡಾಂಗಣ, ‘ಪ್ಲಾಜಾ ಡಿ ಟೋರಾಸ್’ ಕೂಡ ಇದೆ. ಸ್ಪೇನಿನ ಪ್ರಸಿದ್ಧ ಚಿತ್ರಕಾರ-ಶಿಲ್ಪಿ ಪಿಕಾಸೋನ ಮ್ಯೂಸಿಯಂ ಇಲ್ಲಿ ಪ್ರಸಿದ್ಧ. ಈ ಮ್ಯೂಸಿಯಂಗೆ ಒಂದು ರೆಸ್ಟೊರೆಂಟ್‌ ಮೂಲಕವೇ ಹಾದು ಹೋಗಬೇಕಿದ್ದು, ಈ ರೆಸ್ಟೊರೆಂಟ್‌ ಕೂಡ ಒಂದು ಮ್ಯೂಸಿಯಂನಂತಿದೆ. ಇನ್ನು ನಗರದ ರಸ್ತೆಗಳು, ಚೌಕಗಳು, ಹಸಿರು ಎಲ್ಲ ಮನಸೆಳೆವ ರೀತಿಯಲ್ಲಿವೆ. ನಗರ ಸುತ್ತಲು ಸಾರೋಟು, ಸೆಗ್‌ವೇ (ಎರಡು ಚಕ್ರದ ಸ್ಕೇಟಿಂಗ್‌ನಂಥ ಸಾಧನ)ಗಳಿವೆ. ಬಸ್ಸು, ಟ್ರಾಮ್, ಮೆಟ್ರೊ ವ್ಯವಸ್ಥೆಯಿದೆ. 

ಕೈಗಾರಿಕೆಯಿದ್ದರೂ ವ್ಯವಸಾಯ ಹೆಚ್ಚಿದೆ. ಡ್ರಿಂಕ್ಸ್ ಜೊತೆ ಕೊಡುವ ‘ಟೇಪಸ್’ಎನ್ನುವ ಸ್ನ್ಯಾಕ್ ಇಲ್ಲಿ ಜನಪ್ರಿಯ. ಕರಿದ, ಗ್ರಿಲ್ ಮಾಡಿದ ಸೀಫುಡ್, ಮೀಟ್, ಸ್ಪಿನಾಚ್, ಕಡಲೆ, ತರಹೇವಾರಿ ಸಾಸ್-ಡೆಸ್ಸೆರ್ಟ್‌ಗಳ ಬಳಕೆ ಹೆಚ್ಚು. ಇಲ್ಲಿನ ಕರೆನ್ಸಿ ಯೂರೊ. 

ಸುಧಾ: 19 ಜುಲೈ, 2018

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !