ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ಪ್ರವಾಸಿ ಮಂದಿರ; ಇಂದು ಕೊಟ್ಟಿಗೆ!

ಸಂಪೂರ್ಣ ಪಾಳುಬಿದ್ದ 4 ಎಕರೆ ಜಾಗ; ವಾಹನ ನಿಲುಗಡೆಗೆ ಬಳಕೆ
Last Updated 30 ಮೇ 2018, 8:19 IST
ಅಕ್ಷರ ಗಾತ್ರ

ಗೋಕಾಕ: ತಾಲ್ಲೂಕಿನ ಸಂಗನಕೇರಿ ಗ್ರಾಮದಲ್ಲಿರುವ ಪ್ರವಾಸಿ ಮಂದಿರವು ಒಂದು ಕಾಲದಲ್ಲಿ ಅತ್ಯುತ್ತಮ ಪ್ರವಾಸಿ ಮಂದಿರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ, ಇಂದು ಅದು ದನದ ಕೊಟ್ಟಿಗೆಯಾಗಿ ಮಾರ್ಪಟ್ಟಿದೆ. ಅಕ್ಕಪಕ್ಕದ ಗ್ರಾಮಸ್ಥರು ಜಾನುವಾರುಗಳನ್ನು ಕಟ್ಟುವ ದೊಡ್ಡಿಯಾಗಿ ಇದನ್ನು ಉಪಯೋಗಿಸುವಂತಾಗಿದೆ.

ಪ್ರವಾಸಿ ಮಂದಿರದ ವ್ಯಾಪ್ತಿಯಲ್ಲಿ 4 ಎಕರೆ ಜಾಗವಿದೆ. ಮಧ್ಯದಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ ಎಂದು ಹೇಳಲಾಗುವ ಕಟ್ಟಡವಿದೆ. ಅದು ಈಗ ಸಂಪೂರ್ಣ ಪಾಳು ಬಿದ್ದಿದೆ. ಇದರ ಮುಂದೆ ವಿಶಾಲವಾದ ಪ್ರಾಂಗಣವಿದೆ. ಈಗ ಇದೇ ಪ್ರಾಂಗಣವನ್ನು ಜನರು ವಾಹನಗಳ ನಿಲುಗಡೆಗೆ ಬಳಸುತ್ತಿದ್ದಾರೆ. ಕಟ್ಟಡದ ಜಾಗದಲ್ಲಿ ಜಾನುವಾರುಗಳನ್ನು ಕಟ್ಟುತ್ತಿದ್ದಾರೆ. ಆವರಣದಲ್ಲಿರುವ ಖುಲ್ಲಾ ಜಾಗದಲ್ಲಿ ಕೆಲವರು ಸಿಮೆಂಟ್‌ ಬ್ರಿಕ್ಸ್‌ಗಳನ್ನು ತಯಾರಿಸುತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ:

ಮೊದ–ಮೊದಲು ಪ್ರವಾಸಿ ಮಂದಿರದ ಬಹುತೇಕ ಭಾಗ ನಿರ್ಲಕ್ಷಕ್ಕೆ ಒಳಗಾದಾಗ ಸ್ಥಳೀಯರು ಅಲ್ಲಿ ತಮ್ಮ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿ ಇಡಲು ಆರಂಭಿಸಿದರು. ನಂತರ ದವಸ ಧಾನ್ಯಗಳ ರಾಶಿ ಮಾಡಲು ಮತ್ತು ಶೇಖರಿಸಿ ಇಟ್ಟುಕೊಂಡರು. ಈ ಜಾಗೆಯ ಆವರಣ ಗೋಡೆಯಾಚೆ ಕೊಳಚೆ ನೀರು ಹರಿಯುತ್ತದೆ. ಇದು ಸೊಳ್ಳೆಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ವಿವಿಧ ರೀತಿಯ ಸಾಂಕ್ರಾಮಿಕ ರೋಗಗಳನ್ನು ಹರಡುವ ಸ್ಥಳವಾಗಿ ರೂಪುಗೊಂಡಿದೆ ಎಂದು ಬದ್ರುದ್ದೀನ ಖಾಸೀಮಸಾಬ ನೇರ್ಲಿ ಹೇಳಿದರು.

ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಕಟ್ಟಡದ ರಕ್ಷಣೆಯಾಗುತ್ತಿಲ್ಲ. ಇದನ್ನೇ ಉಪಯೋಗಿಸಿಕೊಂಡ ಸ್ಥಳೀಯರು ಸ್ವಂತಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಸಂಜೆ ವೇಳೆ ಕೆಲವರು ಮದ್ಯ ಸೇವಿಸಲು ಬಳಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಖುದಾಭಕ್ಷ ಅಲ್ಲಾಭಕ್ಷ ಕಿಲ್ಲೇದಾರ.

ಉಸ್ತುವಾರಿ ಯಾರದ್ದು?:

ಕಟ್ಟಡದ ಉಸ್ತುವಾರಿಯು ಯಾರಿಗೆ ಸೇರಿದ್ದು ಎನ್ನುವುದರ ಬಗ್ಗೆಯೇ ಗೊಂದಲವಿದೆ. ಈ ಮೊದಲು ಲೋಕೋಪಯೋಗಿ ಇಲಾಖೆಗೆ ಸೇರಿದ್ದು ಎಂದು ಹೇಳಲಾಗುತ್ತಿತ್ತು. ಅದು ಈಗ ಕರ್ನಾಟಕ ನೀರಾವರಿ ನಿಗಮದ ಉಪವಿಭಾಗೀಯ ಕಚೇರಿಗೆ ವರ್ಗಾವಣೆಯಾಗಿದೆ.

ಕರ್ನಾಟಕ ನೀರಾವರಿ ನಿಗಮದ ಉಪ–ವಿಭಾಗೀಯ ಕಚೇರಿಯ ಸಹಾಯಕ ಎಂಜಿನಿಯರ್ ಕೆ.ವೈ.ಖನ್ನೂಕರ ಅವರನ್ನು ಸಂಪರ್ಕಿಸಿದಾಗ ‘ಸಂಗನಕೇರಿ ಪ್ರವಾಸಿ ಮಂದಿರ ಕಟ್ಟಡವು ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿದ್ದು ಎಂದು ದೃಢಪಡಿಸುವ ದಾಖಲೆಗಳ ಹುಡುಕಾಟದಲ್ಲಿ ತೊಡಗಿದ್ದೇವೆ. ನಾನು ಇಲ್ಲಿಗೆ ಬಂದು ಸುಮಾರು ನಾಲ್ಕು ವರ್ಷಗಳಾಗಿವೆ. ಆದರೆ, ಇದುವರೆಗೆ ಕಟ್ಟಡ ಮಾಲೀಕತ್ವದ ದಾಖಲೆಗಳು ಸಿಗುತ್ತಿಲ್ಲ’ ಎಂದರು.

‘ಕಟ್ಟಡವು ನಿಜವಾಗಿಯೂ ಯಾರ ಮಾಲೀಕತ್ವದಲ್ಲಿ ಇದೆ ಎನ್ನುವುದು ದೃಢಪಡದ ಕಾರಣ, ಅತಿಕ್ರಮಣದಾರರ ಮೇಲೆ ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

ರಾಮೇಶ್ವರ ಕಲ್ಯಾಣಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT