ಸಾಗರದೊಳಗೆ ಸದಾಶಿವ!

7

ಸಾಗರದೊಳಗೆ ಸದಾಶಿವ!

Published:
Updated:

ಶೀರ್ಷಿಕೆ ನೋಡಿ ಆಶ್ಚರ್ಯವಾಗುತ್ತಿದೆ ಅಲ್ಲವೇ? ಹೌದು. ಈ ರೀತಿಯ ಅಚ್ಚರಿಯ ಸ್ಥಳವೊಂದು ಗುಜರಾತ್ ರಾಜ್ಯದಲ್ಲಿದೆ. ನಿಷ್ಕಲಂಕ ಮಹಾದೇವ್ ಎಂದು ಕರೆಯಲ್ಪಡುವ ಈ ಕ್ಷೇತ್ರ ಭಾವ್‌ನಗರ್ ಸಮೀಪ ಕೋಲಿಯಾಕ್ ಎಂಬಲ್ಲಿ ಅರಬ್ಬಿ ಸಮುದ್ರದ ನೀರಿನೊಳಗೆ ಕಂಡುಬರುತ್ತದೆ. ಮಹಾದೇವನ ದರ್ಶನ ಪಡೆಯಲು ಸುಮಾರು ಒಂದು ಕಿಲೋಮೀಟರಿನಷ್ಟು ಸಮುದ್ರದೊಳಗೆ ಸಾಗಬೇಕು, ಅದೂ ಕಾಲ್ನಡಿಗೆಯಲ್ಲಿ. ಇನ್ನೂ ವಿಶೇಷ ಎಂದರೆ ದಿನದ ಕೆಲವು ಗಂಟೆಗಳ ಕಾಲ ಮಾತ್ರ ಅಲ್ಲಿಗೆ ಹೋಗುವುದು ಸಾಧ್ಯ. ಉಳಿದಂತೆ ಈ ಕ್ಷೇತ್ರ ನೀರಿನಿಂದ ಆವೃತವಾಗಿರುತ್ತದೆ.

 ಕುಟುಂಬದ ಹಿರಿಯರ ಅಸ್ಥಿಗಳನ್ನು ಇಲ್ಲಿ ವಿಸರ್ಜಿಸಿದರೆ ಅವರಿಗೆ ಶಾಶ್ವತ ಮೋಕ್ಷ ದೊರೆಯುವುದೆಂಬ ನಂಬಿಕೆಯು ಇರುವುದರಿಂದ ಆ ಸಲುವಾಗಿಯೂ ಹೆಚ್ಚಿನ ಜನರು ಬರುವುದುಂಟು. ಸಾಧಾರಣ ಮಧ್ಯಾಹ್ನ ಒಂದು ಗಂಟೆಯ ನಂತರ ಮತ್ತು ಸಂಜೆ ಏಳರೊಳಗೆ ಸಮುದ್ರದ ಅಲೆಗಳು ಹಿಂದೆ ಸರಿದು ದರ್ಶನಕ್ಕೆ ಅವಕಾಶ ಮಾಡಿಕೊಡುತ್ತವೆ. ಆಗ ಮಾತ್ರ ಈ ಬಂಡೆ ನೀರಿನ ಹೊರಗಿದ್ದು ಉಳಿದಂತೆ ನೀರಿನಲ್ಲಿ ಮುಳುಗಿರುತ್ತದೆ. ಹುಣ್ಣಿಮೆ ಅಮಾವಾಸ್ಯೆಯಂದು ಅಲೆಗಳ ಅಬ್ಬರ ಹೆಚ್ಚಿರುವುದರಿಂದ ದರ್ಶನ ಕಷ್ಟ. ಆದರೂ ಆ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಸಹನೆಯಿಂದ ಕಾದು ನೀರು ಕಡಿಮೆಯಾದಾಗ ದರ್ಶನ ಪಡೆಯುತ್ತಾರೆ.

ವಾರ್ಷಿಕ ಭಾದ್ರವಿ ಉತ್ಸವ
ಶ್ರಾವಣ ಮಾಸದ ಅಮಾವಾಸ್ಯೆಯ ದಿನ ಭಾದ್ರವಿ ಎಂಬ ಜಾತ್ರೆಯನ್ನುಆಚರಿಸಲಾಗುತ್ತದೆ. ಇಲ್ಲಿನ ಧ್ವಜಸ್ತಂಭದಲ್ಲಿ ಭಾವ್‌ನಗರದ ರಾಜಮನೆತನದವರು ಬಾವುಟ ಸ್ಥಾಪಿಸುವುದರ ಮೂಲಕ ವಾರ್ಷಿಕ ಉತ್ಸವ ಆರಂಭವಾಗುತ್ತದೆ. ಎಷ್ಟೆಲ್ಲಾ ಅಲೆಗಳ ಹೊಡೆತವಿದ್ದರೂ, ಸೌರಾಷ್ಟ್ರ ಭಾಗದಲ್ಲಿ ಭಯಂಕರ ಭೂಕಂಪವಾದಾಗಲೂ ಈ ಧ್ವಜಸ್ತಂಭಕ್ಕೆ ಯಾವುದೇ ಹಾನಿಯಾಗಲಿಲ್ಲವೆಂದು ಹೇಳಲಾಗುತ್ತದೆ. ಎಷ್ಟೇ ಗಾಳಿ ಬೀಸಿದರೂ ಬಾವುಟ ಹರಿಯುವುದಿಲ್ಲ ಎನ್ನುತ್ತಾರೆ. ಮಹಾಶಿವರಾತ್ರಿಯಂದು ಇಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ.

ಕೋಲಿಯಾಕ್ ಸಮುದ್ರ ತೀರಕ್ಕೆ ಬಂದು, ದಂಡೆಯಲ್ಲಿರುವ ಅಂಗಡಿಗಳ ಬಳಿ ನಮ್ಮ ಚಪ್ಪಲಿಗಳನ್ನು ಬಿಟ್ಟು, ನಾವು ಮುಂದೆ ಸಾಗಬೇಕು. ಯಾವುದೇ ಸಮುದ್ರ ದಂಡೆಯಲ್ಲಿ ನಾವು ಸಾಧಾರಣವಾಗಿ ಮರಳನ್ನು ಕಾಣುತ್ತೇವೆ. ಆದರೆ ಇಲ್ಲಿ ಜೇಡಿ ಮಣ್ಣಿನ ವಿಶಾಲ ನೆಲವನ್ನು ಕಾಣಬಹುದು. ನೀರು ಹಿಂದೆ ಸರಿದಿದ್ದರೂ ದಡದ ಮಣ್ಣು ಒದ್ದೆಯಾಗಿರುವುದರಿಂದ ಜಾರಿಕೆ ಹೆಚ್ಚು. ಹಾಗಾಗಿ ಒಂದು ಸಣ್ಣ ಕಾಲುವೆಯ ರೀತಿಯ ಕಾಲುದಾರಿಯನ್ನು ಮಾಡಿದ್ದಾರೆ. ಅಲ್ಲಿಗೆ ತಲುಪಲು ಅರ್ಧ ಗಂಟೆಯಿಂದ ಮುಕ್ಕಾಲು ಗಂಟೆ ಬೇಕಾಗುತ್ತದೆ.


ಒಮ್ಮೆಗೇ ಐದೂ ಲಿಂಗಗಳ ದರ್ಶನ

ಪಾಂಡವರ ಐದು ಶಿವಲಿಂಗಗಳು
ಬಂಡೆಯ ಸಮೀಪ ಬಂದೊಡನೆ ಸುಮಾರು ಮುವ್ವತ್ತು ಅಡಿ ಎತ್ತರದ ಧ್ವಜಸ್ತಂಭವನ್ನು ನಾವು ಕಾಣುತ್ತೇವೆ. ಹಾಗೆಯೇ ವಿವಿಧ ಆಕಾರದ ಐದು ಶಿವಲಿಂಗಗಳು, ಅವುಗಳ ಎದುರಿಗೆ ಬಸವನ ಮೂರ್ತಿಗಳನ್ನೂ ನೋಡಬಹುದು. ಸದ್ಯ ಮೂರು ಬಸವನ ಮೂರ್ತಿಗಳಿವೆ. ಬಹುಶಃ ನೀರಿನ ಹಿಂಸರಿತದ ಸಮಯ ತಿಳಿದ ಅರ್ಚಕರು ನಮಗಿಂತ ಮೊದಲೇ ಅಲ್ಲಿ ಹೋಗಿ ಕುಳಿತಿರುತ್ತಾರೆ. ಬಂಡೆಯೊಳಗಿನ ಕುಳಿಯಲ್ಲಿನ ನೀರನ್ನು ತುಂಬಿಕೊಟ್ಟು ಅಭಿಷೇಕ ಮಾಡಲು ಅನುವು ಮಾಡಿಕೊಡುತ್ತಾರೆ.

ಈ ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯ ಕಡಲಹಕ್ಕಿಗಳು ಕಂಡುಬರುತ್ತವೆ. ನೀರಿನ ಹಿಂಸರಿತದಿಂದ ದಡದಲ್ಲಿ ಮೀನುಗಳು ಇವುಗಳಿಗೆ ಸುಲಭವಾಗಿ ಸಿಕ್ಕಿಬೀಳುತ್ತವೆ. ಹಾಗೆಯೇ ಭಕ್ತರು ತಂದು ಹಾಕುವ ಮಂಡಕ್ಕಿ, ಕಾರಸೇವ್ ಇತ್ಯಾದಿ ಕೂಡ ದೊರಕುತ್ತದೆ. 

ನಿಷ್ಕಲಂಕ ಮಹಾದೇವ್ ಕ್ಷೇತ್ರದ ಭೇಟಿ ಹಲವು ರೀತಿಯಾಗಿ ನಮ್ಮ ನೆನಪಿನಲ್ಲಿ ಉಳಿಯುತ್ತದೆ. ಆಸ್ತಿಕರಿಗೆ ಧಾರ್ಮಿಕವಾಗಿ, ಚಾರಣಪ್ರಿಯರಿಗೆ ಆಸಕ್ತಿದಾಯಕವಾಗಿ, ಪರಿಸರ ಪ್ರಿಯರಿಗೆ ರೋಚಕವಾಗಿ ಈ ಕ್ಷೇತ್ರ ಖುಷಿಕೊಡುತ್ತದೆ. 


ಧ್ವಜ ಗೋಪುರದ ನೋಟ

ಹಿನ್ನೆಲೆ ಹೀಗಿದೆ
ಮಹಾಭಾರತ ಯುದ್ಧದ ನಂತರ ಪಾಂಡವರಿಗೆ ‘ತಮ್ಮ ಸಂಬಂಧಿಗಳನ್ನೇ ಕೊಂದುಬಿಟ್ಟೆವಲ್ಲಾ’ ಎನ್ನುವ ಪಾಪಪ್ರಜ್ಞೆ ಕಾಡಲು ಶುರುವಾಗುತ್ತದೆ. ಅವರೆಲ್ಲ ಹೋಗಿ ಶ್ರೀಕೃಷ್ಣನನ್ನು ಭೇಟಿ ಮಾಡಿ ತಮ್ಮ ಮನದಳಲನ್ನು ತೋಡಿಕೊಂಡಾಗ ಶ್ರೀಕೃಷ್ಣ ಅವರಿಗೆ ಒಂದು ಕಪ್ಪು ಬಾವುಟ ಮತ್ತು ಕಪ್ಪು ಹಸುವನ್ನು ಕೊಟ್ಟು ‘ಇವೆರಡೂ ಯಾವಾಗ ಬಿಳಿಯ ಬಣ್ಣಕ್ಕೆ ತಿರುಗುತ್ತವೋ ಆಗ ನಿಮ್ಮ ಪಾಪಗಳೆಲ್ಲಾ ತೀರಿದವು ಎಂದು ತಿಳಿದುಕೊಳ್ಳಿ. ಆ ಸ್ಥಳದಲ್ಲಿ ಶಿವನನ್ನು ಪ್ರತಿಷ್ಠಾಪಿಸಿ ಪಾಪ ನಿವೇದನೆ ಮಾಡಿಕೊಳ್ಳಿ’ ಎನ್ನುತ್ತಾನೆ. ಅದರಂತೆ ಆ ಹಸು ಹೋದಲ್ಲೆಲ್ಲಾ ಪಾಂಡವರು ಹಿಂಬಾಲಿಸುತ್ತಾರೆ. ಬಹಳ ದಿನಗಳ ನಂತರ ಭಾದ್ರಪದ ಮಾಸದ ಅಮಾವಾಸ್ಯೆಯಂದು ಆ ಹಸು ಕೋಲಿಯಾಕ್ ಎಂಬ ಸ್ಥಳದ ಅರಬ್ಬಿಸಮುದ್ರ ತೀರಕ್ಕೆ ಬಂದಾಗ ಬಿಳಿ ಬಣ್ಣವನ್ನು ಪಡೆಯುತ್ತದೆ. ಆ ಕ್ಷಣದಲ್ಲೇ ಆ ಬಾವುಟವೂ ಬಿಳಿಯಾಗುತ್ತದೆ. ಸಮುದ್ರದ ದಂಡೆಯ ದೊಡ್ಡ ಬಂಡೆಯೊಂದರ ಮೇಲೆ ಕುಳಿತ ಅವರೆಲ್ಲಾ ಶಿವನನ್ನು ಪ್ರಾರ್ಥನೆ ಮಾಡುತ್ತಾರೆ. ಆಗ ಶಿವನು ಪಾಂಡವರೆಲ್ಲರಿಗೆ ಪ್ರತ್ಯೇಕವಾಗಿ ಲಿಂಗಸ್ವರೂಪಿಯಾಗಿ ದರ್ಶನ ಕೊಡುತ್ತಾನೆ. ಹಾಗಾಗಿ ಅಲ್ಲಿ ಐದು ಸ್ವಯಂಭೂ ಲಿಂಗಗಳಿವೆ ಎಂದು ಹೇಳಲಾಗುತ್ತದೆ. ಪಾಂಡವರು ತಮ್ಮ ಪಾಪಪ್ರಜ್ಞೆಯಿಂದ ಹೊರಬಂದ ಕಾರಣ ಆ ಲಿಂಗಗಳಿಗೆ ನಿಷ್ಕಳಂಕ ಮಹಾದೇವ್ ಎಂದು ಕರೆಯಲಾಗುತ್ತದೆ. ಬಂಡೆಯಲ್ಲಿರುವ ಪಾಂಡವ ಕುಂಡ್‍ನಲ್ಲಿ ಭಕ್ತರು ಕೈ ಕಾಲು ತೊಳೆದುಕೊಂಡು ಮಹಾದೇವನ ದರ್ಶನ ಮಾಡುತ್ತಾರೆ.

ಭೇಟಿಗೆ ಸೂಕ್ತ ಕಾಲ
ಮಾರ್ಚ್‌ನಿಂದ ಜುಲೈ ತನಕ ಇಲ್ಲಿನ ಭೇಟಿಗೆ ಸೂಕ್ತ ಕಾಲ. ಅಹಮದಾಬಾದ್‌ನಿಂದ 180 ಕಿ.ಮೀ. ಇರುವ ಭಾವ್‍ನಗರದಿಂದ ಸುಮಾರು 22 ಕಿಲೋಮೀಟರ್ ದೂರವಿರುವ ಕೋಲಿಯಾಕ್ ಗ್ರಾಮದ ಬಳಿ ನಿಷ್ಕಲಂಕ ಮಹಾದೇವ್ ಕ್ಷೇತ್ರವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !