ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರದ ‘ಸತ್ತವರ ಬೀದಿ’ಯಲ್ಲಿ

Last Updated 28 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಸ್ವಚ್ಛತೆ, ಶಿಸ್ತು, ಸೌಲಭ್ಯ ಸೌಕರ್ಯಗಳ ಜತೆ ಅತ್ಯುತ್ತಮ ತಂತ್ರಜ್ಞಾನ ಮತ್ತು ಮನರಂಜನೆ ಹೀಗೆ ಎಲ್ಲವೂ ಇರುವ ಪುಟ್ಟ ದೇಶ ಸಿಂಗಪುರ. ಚೀನೀಯರು, ಭಾರತೀಯರು ಮತ್ತು ಮಲೈಗಳು ಹೀಗೆ ಬಹುಜನಾಂಗೀಯ ಸಂಸ್ಕೃತಿ ಇಲ್ಲಿಯದು. ಇಲ್ಲಿನ ಅಧಿಕೃತ ಭಾಷೆಗಳಲ್ಲಿ ತಮಿಳೂ ಒಂದಾಗಿದೆ. ಸಿಂಗಪುರವು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ; ಶಾಪಿಂಗ್ ಮಾಡುವವರ ಸ್ವರ್ಗ. ಇಲ್ಲಿರುವ ಚೈನಾಟೌನ್ ಬಡಾವಣೆಯಲ್ಲಿ ಹೆಸರೇ ಸೂಚಿಸುವಂತೆ ಚೀನಿಯರ ಸಂಖ್ಯೆ ಹೆಚ್ಚು. ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಬಂದ ಚೀನಿ ವಲಸಿಗರು ಇಲ್ಲಿ ನೆಲೆಸಿದ್ದ ಕಾರಣ ಈ ಹೆಸರು! ಬಹುಮಹಡಿ ಕಟ್ಟಡಗಳು, ಅಗಲ ರಸ್ತೆಗಳು, ಐಷಾರಾಮಿ ಕಾರು ಓಡಾಡುವ ಸಿಂಗಪುರಕ್ಕಿಂತ ಭಿನ್ನ ಚಿತ್ರಣ ಇಲ್ಲಿಯದು. ಕಿರಿದಾದ ಬೀದಿಗಳ ಇದು, ಬುದ್ಧನ ದೇಗುಲ, ಶ್ರೀ ಮಾರಿಯಮ್ಮನ್ ದೇವಸ್ಥಾನ, ಮ್ಯೂಸಿಯಮ್ ಇವೆಲ್ಲವನ್ನೂ ಒಳಗೊಂಡಿರುವ ಮುಖ್ಯ ಸ್ಥಳ. ಇದೆಲ್ಲದರ ಜತೆ ಅಗ್ಗವಾದ ಮೇಡ್ ಇನ್ ಚೈನಾ ವಸ್ತುಗಳು, ದಾರಿಬದಿಯ ತಿಂಡಿ- ಖಾದ್ಯಗಳು ಸಿಗುವುದರಿಂದ ಜನದಟ್ಟಣೆಯ ಪ್ರದೇಶವಾಗಿದೆ. ಕರಿದ ಖಾದ್ಯಗಳ ಪರಿಮಳ ಹೀರುತ್ತಾ, ಒತ್ತೊತ್ತಾದ ಪುಟ್ಟ ಅಂಗಡಿ ನೋಡುತ್ತಾ, ಚೌಕಾಶಿ ಮಾಡುವ ಗ್ರಾಹಕರು-ವರ್ತಕರ ಗಲಾಟೆ ಕೇಳುತ್ತಾ ಥೇಟ್ ನಮ್ಮಲ್ಲಿಯ ಹಳ್ಳಿ ಸಂತೆಯ ಅನುಭವ. ಮಿನುಗುವ ವಿದ್ಯುತ್ ದೀಪಗಳ ಬೆಳಕಿನಲ್ಲಿ, ನಿಶ್ಶಬ್ದವಾದ ಸಿಂಗಪುರದ ಗಗನಚುಂಬಿ ಕಟ್ಟಡ, ಪಾರ್ಕ್ ನೋಡುವುದು ಚೆಂದ; ಆದರೆ ಮುಸ್ಸಂಜೆಯ ವೇಳೆ ಚೈನಾಟೌನ್‌ನಲ್ಲಿ ಜನಪ್ರವಾಹದ ಮೇಲೆ ಬೆಳಗುವ ದೊಡ್ಡ ಕಂದೀಲುಗಳನ್ನು, ಅದು ಸೃಷ್ಟಿಸುವ ಮಾಯಾಲೋಕವನ್ನು ನೋಡುವುದು ನಿಜಕ್ಕೂ ಅವಿಸ್ಮರಣೀಯ. ಈ ಬೆಳಕಿನ ಹಿಂದೆ ಸಾಗೋ ಲೇನ್ ಎಂಬ ಬೀದಿಯಲ್ಲಿ ಬಡವರ, ರೋಗಿಗಳ ನೋವಿನ ದನಿಯೂ ಪಿಸುಗುಡುತ್ತದೆ; ಕೆಲವು ದಶಕಗಳ ಹಿಂದೆ ಇದು ‘ಸತ್ತವರ ಬೀದಿ’ ಎಂದೇ ಖ್ಯಾತವಾಗಿತ್ತು. ಇಲ್ಲಿದ್ದವು ಸಾವಿನ ಮನೆಗಳು!

ಸಾಗೋ ಲೇನ್

ಸಾಗೋ ಎಂದರೆ ಸಾಬೂದಾನಾ. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಇಲ್ಲಿ ಸಾಬೂದಾನಾ ಹಿಟ್ಟು ಮಾಡುವ ಅನೇಕ ಕಾರ್ಖಾನೆಗಳಿದ್ದವು. ವರ್ಷಕ್ಕೆ ಒಟ್ಟು ಸುಮಾರು ಎಂಟುಸಾವಿರ ಟನ್‌ಗಳಷ್ಟು ಹಿಟ್ಟನ್ನು ಉತ್ಪಾದಿಸಲಾಗುತ್ತಿತ್ತು. ಮರದ ತಿರುಳಿನಿಂದ ಮಾಡಲಾದ ಈ ಸಾಬೂದಾನಾದ ಹಿಟ್ಟು ಸಿಹಿತಿಂಡಿ, ರೋಗಿಗಳ ಆಹಾರಕ್ಕಾಗಿ ಬಳಸಲಾಗುತ್ತಿತ್ತು. ಇವುಗಳನ್ನು ಯುರೋಪ್ ಮತ್ತು ಭಾರತಕ್ಕೆ ರಫ್ತು ಮಾಡಲಾಗುತ್ತಿತ್ತು. ಈ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಹೆಚ್ಚಿನವರು ಇದೇ ಪ್ರದೇಶದ ಸುತ್ತಮುತ್ತ ವಾಸಿಸುತ್ತಿದ್ದರು. ಕಾಲಕ್ರಮೇಣ ಈ ಕಾರ್ಖಾನೆಗಳು ಮರೆಯಾದಂತೆ ಈ ಬೀದಿಯಲ್ಲಿ ಇನ್ನಿತರ ವಾಣಿಜ್ಯ ಚಟುವಟಿಕೆ ಆರಂಭವಾಯಿತು. ಆದರೆ ಹಿಂದಿನ ಸಾಗೋ ಲೇನ್ ಹೆಸರು ಮಾತ್ರ ಹಾಗೆಯೇ ಮುಂದುವರಿಯಿತು.

ಸಾವಿನ ಮನೆಗಳ ಸ್ಥಾಪನೆ

ಇದೇ ಬೀದಿಯ ಎರಡೂ ಬದಿಗಳಲ್ಲಿ ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ ಸಾವಿನ ಮನೆಗಳು ಆರಂಭವಾದವು. ಇದಕ್ಕೆ ಕಾರಣ ಬಡ ವಲಸಿಗರಲ್ಲಿ ಆಳವಾಗಿ ಬೇರೂರಿದ್ದ ಧಾರ್ಮಿಕ ನಂಬಿಕೆಗಳು. ಸಿಂಗಪುರಕ್ಕೆ ಉತ್ತಮ ಭವಿಷ್ಯವನ್ನರಸಿ ಹೆಚ್ಚಿನ ಸಂಖ್ಯೆಯಲ್ಲಿ ಚೀನಾದಿಂದ ವಲಸಿಗರು ಬರುತ್ತಿದ್ದರು. ಅನೇಕರು ತಮ್ಮೊಂದಿಗೆ ಕುಟುಂಬವನ್ನೂ ಕರೆತರುತ್ತಿದ್ದು ಅವರಲ್ಲಿ ತಂದೆ-ತಾಯಿಯರೂ ಇರುತ್ತಿದ್ದರು. ಆರ್ಥಿಕ ಮುಗ್ಗಟ್ಟಿನ ಸಲುವಾಗಿ ಪುಟ್ಟ ಮನೆಗಳಲ್ಲಿ ಕಿಕ್ಕಿರಿದು ನೆಲೆಸುತ್ತಿದ್ದರು. ಅನಾರೋಗ್ಯ, ಮುಪ್ಪು ಹೀಗೆ ಯಾವುದೇ ಕಾರಣದಿಂದ ಸಾವು ಸನ್ನಿಹಿತವಾದಾಗ ಅವರ ಲಾಲನೆ-ಪಾಲನೆ ಮಾಡುವುದು ಕಷ್ಟಸಾಧ್ಯವಾಗಿತ್ತು. ಇದಲ್ಲದೇ ನಡುವಯಸ್ಸಿನಲ್ಲಿ ಸ್ವದೇಶ ಬಿಟ್ಟು ಬಂದವರಿಗೆ ಇಲ್ಲಿ ಬಂಧು ಬಳಗ ಯಾವುದೂ ಇರಲಿಲ್ಲ. ಹೀಗಾಗಿ ರೋಗ/ ಮುಪ್ಪು ಬಂದು ಅಂತಿಮ ದಿನ ಎಣಿಸುವಾಗ ಆರೈಕೆ ಹೇಗೆ? ಚೀನೀಯರಲ್ಲಿ ಮನೆಯಲ್ಲಿ ಸಾವು ಸಂಭವಿಸಿದರೆ ಅಶುಭ; ಅಂತಹ ಮನೆಯಲ್ಲಿ ದುಷ್ಟಶಕ್ತಿಗಳು ನೆಲೆಸುತ್ತವೆ ಎಂಬ ನಂಬಿಕೆಯಿದೆ. ಹೀಗಾಗಿ ಸಾವು ಸಂಭವಿಸಿದರೆ ಮಾಂತ್ರಿಕನನ್ನು ಕರೆಸಿ ಅನೇಕ ವಿಧಿ ವಿಧಾನಗಳನ್ನು ಮಾಡಿಸುವುದು ರೂಢಿ. ಇದಕ್ಕೆ ತಗಲುವ ಖರ್ಚು ಬಡ ವಲಸಿಗರಿಗೆ ದೊಡ್ಡ ಹೊರೆಯಾಗಿತ್ತು. ಈ ಖರ್ಚು ತಪ್ಪಿಸಿ, ಅಪಶಕುನ ದೂರಮಾಡಿ ಸಾಯಲೊಂದು ನೆಲೆ ಕಲ್ಪಿಸುವ ಸಲುವಾಗಿ ಹುಟ್ಟಿಕೊಂಡಿದ್ದು ಈ ಸಾವಿನ ಮನೆಗಳು.

ಮನೆಯೊಳಗೆ

ಒತ್ತೊತ್ತಾಗಿ ಕಟ್ಟಿದ ಎರಡಂತಸ್ತಿನ ಈ ಮನೆಗಳಲ್ಲಿ ಮೇಲಿನ ಅಂತಸ್ತಿನಲ್ಲಿ ಮರಣ ಸನ್ನಿಹಿತರಾದವರು ಉಳಿಯುವ ಕೋಣೆಗಳಿದ್ದವು. ಕೆಳಗಿನದು ಅಂತ್ಯಕ್ರಿಯೆಗೆ ಬೇಕಾಗುವ ಸೇವೆ ಒದಗಿಸುವ ಕೋಣೆಯಾಗಿತ್ತು. ಚೀನಾದಿಂದ ವಲಸಿಗರಾಗಿ ಬಂದು ದೈಹಿಕ ಶ್ರಮದ ನಿರ್ಮಾಣ ಮತ್ತು ಜವಳಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಸಾಮ್‌ಸೂಯ್ ಮಹಿಳೆಯರಿಗೆ ಹೆಚ್ಚಿನ ವೇತನ ದೊರೆಯುತ್ತಿರಲಿಲ್ಲ. ವೃದ್ಧರ ಆರೈಕೆಗೆ ಸಮಯವೂ ಇರಲಿಲ್ಲ. ಅಂತಹ ಮಹಿಳೆಯರು ಈ ಮನೆಗಳ ಪೋಷಕರಾಗಿದ್ದರು. ರೋಗಿಗಳನ್ನು ಸ್ವೀಕರಿಸುವ ಮನೆ ಎಂಬ ಹೆಸರಿನಲ್ಲಿ ಇವುಗಳಲ್ಲಿ ಕೆಲವು ಸರ್ಕಾರದಿಂದ ಲೈಸೆನ್ಸ್ ಕೂಡಾ ಪಡೆದಿದ್ದವು! ಅಲ್ಪ ಪ್ರಮಾಣದ ಶುಲ್ಕ ವಿಧಿಸುತ್ತಿದ್ದ ಇವು ಜನಪ್ರಿಯವಾದರೂ ಸೌಲಭ್ಯ ಏನೂ ಇರಲಿಲ್ಲ. ಪುರುಷರಿಗೆ –ಮಹಿಳೆಯರಿಗೆ ಪ್ರತ್ಯೇಕ ಕೋಣೆ ಇದ್ದರೂ ಛತ್ರದ ಬಗೆಯಲ್ಲಿ ಉಳಿಯುವ ವ್ಯವಸ್ಥೆ. ಗಾಳಿ ಬೆಳಕು ಆಡದ ಕತ್ತಲ ಕೋಣೆಗಳು, ಮುಗ್ಗಲು ವಾಸನೆ, ಕೊಳಕಾದ ಗೋಡೆ-ನೆಲ, ಮಲಗಲು ಗಟ್ಟಿಯಾದ ಮರದ ಮಂಚ, ತಿನ್ನಲು ಸಪ್ಪೆ ಊಟ ಇವುಗಳಿಂದ ಬದುಕುವುದಕ್ಕಿಂತ ಸಾಯುವುದೇ ಮೇಲು ಎನ್ನಿಸುವ ಭಾವನೆ ಸಹಜವಾಗಿತ್ತು. ದಿನಕ್ಕೊಮ್ಮೆ ವೈದ್ಯರು ಬರುತ್ತಿದ್ದರೂ ಅದು ಮರಣದ ಪ್ರಮಾಣಪತ್ರ ನೀಡಲೇ ಹೊರತು ಆರೈಕೆಗಲ್ಲ. ಹಾಗಿದ್ದೂ ಅಂದಾಜಿನ ಪ್ರಕಾರ ತಿಂಗಳಿಗೆ ಎಪ್ಪತ್ತು ಜನ ಇಲ್ಲಿ ಅತಿಥಿಗಳಾಗಿ ಬರುತ್ತಿದ್ದರು ಮತ್ತು ಬಾರದ ಲೋಕಕ್ಕೆ ಪಯಣಿಸುತ್ತಿದ್ದರು. ಸಾವಿನ ಮನೆಗಳ ಕಾರಣದಿಂದ ಸಾಗೋ ಲೇನ್‌ ‘ಸತ್ತವರ ಬೀದಿ’ (ಸ್ಟ್ರೀಟ್ ಆಫ್ ದಿ ಡೆಡ್) ಎಂದು ಗುರುತಿಸಲ್ಪಟ್ಟಿತು!

ಸತ್ತವರ ಬೀದಿಯಲ್ಲಿ ಸದ್ದು!

ಸಿಂಗಪುರದಲ್ಲಿ ಹೆಚ್ಚಿದ ಚೀನೀಯರಿಂದ ಈ ಸಾವಿನ ಮನೆಗಳು ಇಪ್ಪತ್ತನೆಯ ಶತಮಾನದ ಮಧ್ಯಭಾಗದಲ್ಲಿ ಬಿಡುವಿಲ್ಲದೇ ಕೆಲಸ ನಿರ್ವಹಿಸಿ ಹೆಚ್ಚಿನ ಲಾಭ ಗಳಿಸಿದವು. ಮಾತ್ರವಲ್ಲ ಸಾವು ವ್ಯಾಪಾರದ ದೃಷ್ಟಿಯಿಂದ ಲಾಭದಾಯಕವಾಯಿತು. ಸಾವಿನ ನಂತರದ ಬದುಕಿನಲ್ಲಿ ನಂಬಿಕೆ ಇರುವ ಚೀನೀಯರಲ್ಲಿ ಮರಣದ ನಂತರ ಮುಂದಿನ ಬದುಕಿಗೆ ಅಗತ್ಯವಿರುವ ವಸ್ತುಗಳನ್ನು ಅಂತ್ಯಸಂಸ್ಕಾರದ ಸಮಯದಲ್ಲಿ ಸುಟ್ಟು ಮೇಲೆ ಕಳಿಸಲಾಗುತ್ತದೆ. ಅಂದರೆ ಕಾಗದದಿಂದ ತಯಾರಿಸಲಾದ ಮನೆ, ಪೀಠೋಪಕರಣ, ವಾಹನ ಇತ್ಯಾದಿ. ಮೃತ ಶರೀರವನ್ನು ಶವಪೆಟ್ಟಿಗೆಯಲ್ಲಿಟ್ಟು ಹೂಗಳಿಂದ ಅಲಂಕರಿಸಲಾಗುತ್ತದೆ. ಇದಲ್ಲದೇ ಮೃತರ ಮರಣಕ್ಕಾಗಿ ಶೋಕಿಸಲು ‘ಅಳುವವರನ್ನು’ ದುಡ್ಡು ಕೊಟ್ಟು ನೇಮಿಸಲಾಗುತ್ತದೆ. ಹಾಗೆಯೇ ಬೌದ್ಧ ಸನ್ಯಾಸಿಗಳಿಂದ ಮಂತ್ರ ಪಠಣವೂ ಸಾಮಾನ್ಯ. ಹಾಗಾಗಿ ಸಾವಿನ ಬೀದಿಯಲ್ಲಿ ಶೋಕದ ಜತೆ ಸದ್ದು ಹೆಚ್ಚಾಯಿತು. ಸಾಲವನ್ನಾದರೂ ಮಾಡಿ ಮೃತರನ್ನು ಸಂತೋಷಪಡಿಸುವ, ಅವರ ಮುಂದಿನ ಜೀವನಕ್ಕೆ ಅನುಕೂಲ ಮಾಡಿಕೊಡುವ ಚೀನೀಯರ ನಂಬಿಕೆಯಿಂದ ಈ ಸಾವಿನ ಮನೆಗಳ ಸುತ್ತ ಮರದ ಪೆಟ್ಟಿಗೆಗಳ, ಹೂವು, ಕಾಗದದ ಆಲಂಕಾರಿಕ ವಸ್ತು ಮಾರುವ ಸಣ್ಣ ಪುಟ್ಟ ಅಂಗಡಿಗಳು ಭರ್ಜರಿ ವ್ಯಾಪಾರ ನಡೆಸಿದವು. ಮೃತರ ಗೌರವಾರ್ಥ ಏರ್ಪಡಿಸುವ ಔತಣಕ್ಕೆ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸುವ ಗಾಡಿಗಳು ಅಲ್ಲೇ ಬೀದಿಯ ಬದಿಯಲ್ಲಿ ಸಾಲುಗಟ್ಟಿ ನಿಂತವು. ಒಟ್ಟಿನಲ್ಲಿ ಸಾವಿನ ಮನೆಯ ಎದುರು ಬದುಕು ಕಟ್ಟುವ ಪ್ರಯತ್ನ!

ಆದರೆ 1961ರಲ್ಲಿ ಈ ಸಾವಿನ ಮನೆಗಳನ್ನು ಸರ್ಕಾರ ನಿಷೇಧಿಸಿತು. ಹಳೆಯ ಕಾಲದ ಆದರೆ ಇಂದಿಗೂ ಇಲ್ಲಿ ಅಂತ್ಯಕ್ರಿಯೆಗೆ ಸಂಬಂಧಿಸಿದ ವಸ್ತುಗಳನ್ನು ಮಾರುವ ಅನೇಕ ಅಂಗಡಿಗಳಿವೆ. ಕಿಕ್ಕಿರಿದ ಸಾಗೋಲೇನ್‌ನಲ್ಲಿ ಸಾಗುವಾಗ ಎಲ್ಲಿಂದಲೋ ಬಂದು, ಇಲ್ಲಿ ನೆಲೆಸಿ ಯಶಸ್ವಿಯಾಗಿರುವ ಯುವಜನರ ಆತ್ಮವಿಶ್ವಾಸ ಹೊತ್ತ ಮುಖಗಳ ಹಿಂದೆ, ಅಸಹಾಯಕರಾಗಿ ಸಾವಿನ ಮನೆಗಳಲ್ಲಿ ಬಿಡುಗಡೆಗಾಗಿ ಕಾಯುತ್ತಿದ್ದ ವೃದ್ಧರ ನೆರಳುಗಳೂ ಸುಳಿಯುತ್ತವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT