ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ: ಮಳೆಗಾಲದ ಶಿಮ್ಲಾ

ಸೌಂದರ್ಯದ ಇನ್ನೊಂದು ಆಯಾಮದ ಅನಾವರಣ
Last Updated 10 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಪ್ರವಾಸ ಎಲ್ಲರಿಗೂ ಪ್ರಿಯ. ಆಯಾ ಋತುವಿನಲ್ಲಿ ಅದಕ್ಕೆ ಹೊಂದುವ ಸ್ಥಳಗಳಿಗೆ ಪ್ರವಾಸ ಹೋಗುವ ಜನರು ಅಲ್ಲಿನ ಪ್ರಕೃತಿ, ಐತಿಹಾಸಿಕ ಮೆರುಗುಗಳ ಅನಾವರಣಕ್ಕೆ ಬೆರಗಾಗುತ್ತಾರೆ. ಆದರೆ, ಈ ಪ್ರವಾಸದಲ್ಲಿ ಇನ್ನೊಂದು ಬಗೆಯಿದೆ. ಅದೇ ಆಫ್‌-ಬೀಟ್‌ ಪ್ರವಾಸ. ಇದು ಬಿರುಸಾದ ಮಳೆಗಾಲದಲ್ಲಿ ಮಲೆನಾಡಿಗೆ ಟ್ರಿಪ್ ಹೋದಂತೆ. ಪ್ರಯಾಣ ಕಷ್ಟಕರ. ಆದರೆ, ಕಣ್ಣಿಗೆ ಮಾತ್ರ ಸಮೃದ್ಧ ಹಬ್ಬ.

ಮಳೆಗಾಲದ ಪ್ರವಾಸಗಳಿಗೆ ಸೂಕ್ತ ಸ್ಥಳವೆಂದರೆ ಹಿಮಾಚಲ ಪ್ರದೇಶದ ಶಿಮ್ಲಾ. ಹಿಮಾಚಲ ಪ್ರದೇಶದಾದ್ಯಂತ ಅತಿ ಹೆಚ್ಚು ಮಳೆ ಬೀಳುವ ತಿಂಗಳು ಆಗಸ್ಟ್. ಈ ಮಾಸದಲ್ಲಿ ತಾಪಮಾನ 14 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುತ್ತದೆ. ಈ ತಿಂಗಳಲ್ಲಿ ಒಟ್ಟು 300 ಮಿಲಿಮೀಟರ್‌ ಮಳೆಯಾಗುತ್ತದೆ ಎಂದು ಅಂದಾಜಿಸಲಾಗುತ್ತದೆ. ಅಂದರೆ, ತಿಂಗಳಲ್ಲಿ ಸರಾಸರಿ 16 ದಿನ ಮಳೆಯನ್ನು ನಿರೀಕ್ಷಿಸಬಹುದು. ದಿನದಲ್ಲಿ ತಣ್ಣಗಿನ ವಾತಾವರಣ ಇಲ್ಲಿರುತ್ತದೆ.

ಶಿಮ್ಲಾ ತನ್ನ ಒಡಲಲ್ಲಿನ ಹಸಿರುಹೊದ್ದ ಬೆಟ್ಟ ಗುಡ್ಡಗಳು, ಅದರಲ್ಲಿ ಅಂಟಿಸಿದಂತೆ ಕಾಣುವ ಬಣ್ಣ ಬಣ್ಣದ ಮನೆಗಳ ಸಾಲು, ಮುದ ನೀಡುವ ತಣ್ಣಗಿನ ವಾತಾವರಣ ಹಾಗೂ ಮಂಜಿನಿಂದ ಆವೃತ್ತವಾಗಿರುವ ಪೈನ್‌ ಮರಗಳಿಗೆ ಹೆಸರುವಾಸಿ. ಬೇಸಿಗೆಯ ಬೇಗೆಯಿಂದ ದೂರಾಗಲು ಹಾಗೂ ಕೊರೆಯುವ ಚಳಿಯಲ್ಲಿ ಬೀಳುವ ಮಂಜಿನ ಮಜಾ ಪಡೆಯಲು ಪ್ರವಾಸಿಗರು ಶಿಮ್ಲಾದೆಡೆಗೆ ಪಯಣಿಸುತ್ತಾರೆ. ಆದರೆ, ಮಳೆಗಾಲವನ್ನು ಇಲ್ಲಿ ಆಫ್‌-ಸೀಸನ್‌ ಎಂದು ಪರಿಗಣಿಸಲಾಗುತ್ತದೆ.

ಮಂಜು ಮುಸುಕಿದ ವಾತಾವರಣದಲ್ಲಿ ಸುರಿಯುವ ವರ್ಷಧಾರೆಯಲ್ಲಿ ಹೀಗೊಂದು ಪಯಣ...
ಮಂಜು ಮುಸುಕಿದ ವಾತಾವರಣದಲ್ಲಿ ಸುರಿಯುವ ವರ್ಷಧಾರೆಯಲ್ಲಿ ಹೀಗೊಂದು ಪಯಣ...

ಈ ಅವಧಿಯಲ್ಲಿ ಧಾರಾಕಾರ ಮಳೆ ಬಿಟ್ಟೂಬಿಡದೆ ಸುರಿಯುತ್ತದೆ. ದೀರ್ಘಾವಧಿಯ ಮಳೆಯ ಕಾರಣದಿಂದ ನಗರದಲ್ಲಿ ಓಡಾಟ ಕಷ್ಟವಾಗುವ ಸಾಧ್ಯತೆಗಳಿರುತ್ತವೆ. ಜೊತೆಗೆ, ಕಡಿದಾದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಭೂಕುಸಿತ, ರಸ್ತೆ ತಡೆಯ ಅಪಾಯವಿರುತ್ತದೆ. ಈ ಹಿನ್ನೆಲೆಯಲ್ಲಿ ಜನರು ಮಳೆಗಾಲದಲ್ಲಿ ಈ ಬೆಟ್ಟಗಳ ನಾಡಿನ ಪಯಣದತ್ತ ಆಸಕ್ತಿ ತೋರುವುದಿಲ್ಲ. ಆದರೆ, ವಾಸ್ತವದಲ್ಲಿ ಏಳು ಬೆಟ್ಟಗಳ ನಾಡು- ಬೆಟ್ಟಗಳ ರಾಣಿ (ಕ್ವೀನ್‌ ಆಫ್‌ ಹಿಲ್ಸ್‌) ಎಂದೇ ಕರೆಸಿಕೊಳ್ಳುವ ಶಿಮ್ಲಾ ಎಂದಿಗೂ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುವುದಿಲ್ಲ. ಮಳೆಯಲ್ಲಿ ನೆಂದ ಈ ರಾಣಿ, ತನ್ನ ಹಸಿರನ್ನು ಇನ್ನಷ್ಟು ಹೊಳಪಾಗಿಸಿ ಇಡೀ ನಗರಕ್ಕೆ ಹೊಸ ಅನುಭವ ನೀಡುತ್ತಾಳೆ. ಕೈಯಲ್ಲಿ ಒಂದು ಕೊಡೆ ಹಿಡಿದು, ಕಾಲಿಗೊಂದು ಶೂ ಧರಿಸಿ ಹೊರಟಲ್ಲಿ ಈ ಮಳೆಯಲ್ಲೂ, ನಿಸರ್ಗದ ನಡುವಿನ ಈ ಅದ್ಭುತ ನಗರದ ಸೌಂದರ್ಯವನ್ನು ಸಂಪೂರ್ಣವಾಗಿ ಸವಿಯಬಹುದು. ಅಲ್ಲದೆ, ಈ ಆಫ್‌-ಸೀಸನ್‌ಗಳಲ್ಲಿ ಕಡಿಮೆ ಬೆಲೆಯ ಪ್ಯಾಕೇಜ್‌ಗಳ ಲಾಭವನ್ನು ಕೂಡ ಪ್ರವಾಸಿಗರು ಪಡೆಯಬಹುದು.

ಶಿಮ್ಲಾದ ಏಳು ಬೆಟ್ಟಗಳ ಪೈಕಿ ಅತಿ ಎತ್ತರದ ಬೆಟ್ಟದ ಮೇಲಿದೆ ಈ ಹನುಮನ ದೇವಾಲಯ
ಶಿಮ್ಲಾದ ಏಳು ಬೆಟ್ಟಗಳ ಪೈಕಿ ಅತಿ ಎತ್ತರದ ಬೆಟ್ಟದ ಮೇಲಿದೆ ಈ ಹನುಮನ ದೇವಾಲಯ

ಏನೇನು ಆಕರ್ಷಣೆ?
ಶಿಮ್ಲಾದ ಪ್ರಮುಖ ಆಕರ್ಷಣೆಗಳೆಂದರೆ, ಬೆಟ್ಟದ ತುದಿಯಲ್ಲಿನ ಜಾಕು ಟೆಂಪಲ್‌, ಚರ್ಚ್‌ ಹಾಗೂ ಮಾಲ್‌ ರಸ್ತೆ. ಜಾಕು ದೇಗುಲ (ಹನುಮನ ದೇಗುಲ) ಶಿಮ್ಲಾದ ಏಳು ಬೆಟ್ಟಗಳ ಪೈಕಿ ಅತಿ ಎತ್ತರದ ಬೆಟ್ಟದ ಮೇಲಿದೆ. ಸಮುದ್ರ ಮಟ್ಟದಿಂದ 2,455 ಮೀಟರ್‌ ಎತ್ತರದಲ್ಲಿರುವ ಇದನ್ನು ತಲುಪಲು ನೀವು ಸುಮಾರು ಒಂದು ಕಿ.ಮೀ.ಯಷ್ಟು ನಡೆದುಕೊಂಡು ಹೋಗಬೇಕಾಗುತ್ತದೆ. ಅಲ್ಲಿಂದ ಸ್ವಲ್ಪ ದೂರ ಮೆಟ್ಟಿಲುಗಳನ್ನು ಹತ್ತಿ ದೇಗುಲ ತಲುಪಬೇಕು. ಮಳೆಗಾಲದಲ್ಲಿ ಈ ಮಾರ್ಗ ಬಹಳ ಕಠಿಣವಾಗಿರುತ್ತದೆ. ದೂರದೂರದವರೆಗೂ ಮಂಜು ಕವಿದ ಮೆಟ್ಟಿಲುಗಳ ನಡುವೆ ಹುಷಾರಾಗಿ ಹತ್ತಿ ಹೋಗಬೇಕಾಗುತ್ತದೆ. ನಿಮ್ಮೊಂದಿಗೆ ವಯಸ್ಸಾದವರಿದ್ದರೆ ಬಹಳ ಎಚ್ಚರಿಕೆಯಿಂದಿರಬೇಕು. ಇಲ್ಲಿ ಪ್ರತಿ ವರ್ಷ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ 108 ಅಡಿ ಎತ್ತರದ ಬೃಹತ್‌ ಹನುಮಾನ್‌ ಪ್ರತಿಮೆ. ಇದು 2010ರಲ್ಲಿ ಉದ್ಘಾಟನೆಗೊಂಡಿದ್ದು, ನಗರದ ಹಲವು ಭಾಗಗಳಿಂದ ಗೋಚರವಾಗುತ್ತದೆ.

ಈ ದೇಗುಲದಿಂದ ಮಾಲ್‌ ರಸ್ತೆಗೆ ಝಿಪ್‌ಟ್ರಾಲಿಯ ವ್ಯವಸ್ಥೆಯಿದೆ. ಅದು ಕೇವಲ 6 ನಿಮಿಷದಲ್ಲಿ ನಿಮ್ಮನ್ನು ಮಾಲ್‌ರೋಡ್‌ಗೆ ತಲುಪಿಸಿಬಿಡುತ್ತದೆ. ಸುತ್ತಲಿನ ನೈಸರ್ಗಿಕ ಸೌಂದರ್ಯ ಸವಿಯುತ್ತಾ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಟ್ರಾಲಿಯ ಅನುಭವ ಆನಂದಿಸಬಹುದು. ಆದರೆ, ಮಳೆಗಾಲದಲ್ಲಿ ಇದು ಇನ್ನೂ ಅದ್ಭುತವಾಗಿ ಕಾಣುತ್ತದೆ. ಮರಗಿಡಗಳನ್ನು ಸಂಪೂರ್ಣವಾಗಿ ಆವರಿಸಿರುವ ಮಂಜು ಕವಿದ ವಾತಾವರಣದಲ್ಲಿ ದೂರದಲ್ಲಿ ಕಾಣುವ ಒಂದು ಹಗ್ಗವನ್ನಷ್ಟೇ ಭರವಸೆಯನ್ನಾಗಿಸಿಕೊಂಡು ಸಾಗುವ ಒಂದು ವಿಶೇಷ ಅನುಭವ ಪಡೆಯಬಹುದು.

ಇಲ್ಲಿಂದ ಮಾಲ್‌ ರಸ್ತೆ ತಲುಪುತ್ತಿದ್ದಂತೆ, ಉತ್ತರ ಭಾರತದ ಎರಡನೇ ಅತಿ ಪುರಾತನ ಚರ್ಚ್‌ ಆದ ಕ್ರೈಸ್ಟ್‌ ಚರ್ಚ್‌ ಎದುರಾಗುತ್ತದೆ. ಅದನ್ನು ವೀಕ್ಷಿಸಿದ ನಂತರ ನಿಮ್ಮ ಶಾಪಿಂಗ್‌ ಸಮಯ ಶುರು. ಇಲ್ಲಿನ ಮಾಲ್‌ ರಸ್ತೆಯಲ್ಲಿ ಹಿಮಾಚಲಿ ಶಾಲ್‌ಗಳು, ಟೋಪಿ, ಸ್ವೆಟರ್‌ಗಳು ಸೇರಿ ಹಲವು ಉಣ್ಣೆಯ ಬಟ್ಟೆಗಳು ವಿಶೇಷವಾಗಿ ಲಭ್ಯವಿರುತ್ತವೆ. ನಿಮ್ಮ ಅಗತ್ಯಕ್ಕೆ ಹಾಗೂ ಬಜೆಟ್‌ಗೆ ತಕ್ಕಂತೆ ಇಲ್ಲಿ ಶಾಪಿಂಗ್‌ ಮಾಡಬಹುದು.

ಹಿಮಾಚಲ ಪ್ರದೇಶದ ಬೆಟ್ಟದ ರಸ್ತೆಗಳಲ್ಲಿ ಸಾಗುತ್ತಿದ್ದಂತೆಯೇ, ಬೆಟ್ಟದ ಅಂಚಿಗೆ ಹೊಂದಿಕೊಂಡಂತಿರುವ ಮನೆಗಳ ಸಾಲು ಗಮನ ಸೆಳೆಯುತ್ತವೆ. ಅಪಾಯಕಾರಿ ಎನ್ನಿಸುವಷ್ಟು ತುದಿಯಲ್ಲಿ ಮನೆಗಳನ್ನು ನಿರ್ಮಿಸಿರುವುದು ಹಾಗೂ ಅದನ್ನು ವರ್ಣಮಯವಾಗಿಸಿ ಕಣ್ಣಿಗೆ ಹಬ್ಬವನ್ನುಂಟು ಮಾಡುವುದು ಇವುಗಳ ವಿಶೇಷ. ದೂರದಿಂದ ಬಣ್ಣದ ಬೆಂಕಿಪೊಟ್ಟಣಗಳಂತೆ ಕಾಣುವ ಈ ಮನೆಗಳು ಬೆಟ್ಟದ ಮೇಲಿನ ಜೀವನದ ತುಣುಕನ್ನು ಸಾರುತ್ತವೆ. ಈಗ ಈ ಮನೆಗಳ ತಾರಸಿಗಳನ್ನು ಏಕಬಣ್ಣವಾಗಿ ಪರಿವರ್ತಿಸಲು ಸರ್ಕಾರ ಮುಂದಾಗಿದೆ.

ಸೇಬು ಹಣ್ಣಿನ ತೋಟದಲ್ಲೀಗ ಕಟಾವಿನ ಸಮಯ
ಸೇಬು ಹಣ್ಣಿನ ತೋಟದಲ್ಲೀಗ ಕಟಾವಿನ ಸಮಯ

ಇರಲಿ ಎಚ್ಚರ...

* ದೀರ್ಘ ಅವಧಿಯ ಮಳೆಯಿಂದ ಪ್ರಯಾಣದ ಯೋಜನೆಗಳನ್ನು ರದ್ದುಗೊಳಿಸಬೇಕಾಗಬಹುದು.

* ಮಾರ್ಗ ಮಧ್ಯದಲ್ಲಿ ಭೂಕುಸಿತದಿಂದ ತಲುಪಬೇಕಾದ ಸ್ಥಳ ತಲುಪದೇ ಮರಳಬೇಕಾಗಬಹುದು.

* ಇಲ್ಲಿ ಮನಸೆಳೆಯುವ ಹೊರಾಂಗಣ ರೆಸ್ಟೋರೆಂಟ್‌ಗಳಿವೆಯಾದರೂ, ಮಳೆಯ ಕಾರಣದಿಂದ ಉಪಯೋಗಕ್ಕೆ ಬರದಿರಬಹುದು.

* ತೀವ್ರ ಮಳೆ ಅಥವಾ ಮೋಡ ಕವಿದ ವಾತಾವರಣದಿಂದ ಬಯಸಿದಷ್ಟು ಪ್ರಕೃತಿ ಸೌಂದರ್ಯ ಸವಿಯಲು ಸಾಧ್ಯವಾಗದೆ ಇರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT