ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರದಾರಿಯಲ್ಲಿ ಗೊಂಡೋಲಾ ವಿಹಾರ

Last Updated 12 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ದ್ವೀಪ ನಗರ, ಕಾಲುವೆಗಳ ನಗರ, ತೇಲುವ ನಗರ ಎಂದೆಲ್ಲಾ ಕರೆಸಿಕೊಳ್ಳುವ, ಇಟಲಿ ದೇಶದ ವೆನಿಸ್ ನಗರ ಪ್ರವಾಸಿಗರ ನೆಚ್ಚಿನ, ಬಹು ರಮಣೀಯ ಸ್ಥಳಗಳಲ್ಲೊಂದು.

ಪೂರ್ವೋತ್ತರ ಇಟಲಿಯಲ್ಲಿರುವ ವೆನೆಝಿಯಾ ಮತ್ತು ವೆನೆಟೋ ಪ್ರಾಂತ್ಯಗಳ ರಾಜಧಾನಿಯಾದ ವೆನಿಸ್ ಒಂದು ಮುಖ್ಯ ಬಂದರು ನಗರಿ. ಇದು, ಒಂದು ಕಾಲದಲ್ಲಿ ಯೂರೋಪಿನ ಬಹು ಮುಖ್ಯ ಬಂದರು ಮತ್ತು ಏಷ್ಯಾ ಖಂಡದ ವಾಣಿಜ್ಯ ಮತ್ತು ಸಾಂಸ್ಕೃತಿಕ ಕೊಂಡಿಯಾಗಿತ್ತು. ಪ್ರಾಕೃತಿಕವಾಗಿ, ಚಾರಿತ್ರಿಕವಾಗಿ ಮತ್ತು ವಾಸ್ತುಶಿಲ್ಪದ ದೃಷ್ಟಿಯಿಂದಲೂ ಅನನ್ಯವಾದ ದ್ವೀಪ ನಗರವಾದ ವೆನಿಸ್, ಉತ್ತರ ಅಡ್ರಿಯಾಟಿಕ್ ಸಮುದ್ರದ ದಂಡೆಯಲ್ಲಿರುವ ಪ್ರಾಚೀನ ಪ್ರವಾಸಿ ತಾಣ. ವಿಶ್ವದ ಪಾರಂಪರಿಕ ತಾಣವಾಗಿಯೂ ವೆನಿಸ್ ಗುರುತಿಸಲ್ಪಟ್ಟಿದೆ.

ಈ ನಗರದ ವಿಶೇಷವೆಂದರೆ ಇಲ್ಲಿ ಎಲ್ಲಾ ಸಾರಿಗೆಯೂ ನೀರ ಮೇಲೆಯೇ. ರಸ್ತೆ, ಇಲ್ಲವೇ ಇಲ್ಲ ಎನ್ನುವಷ್ಟು ವಿರಳ. ವೆನಿಸ್‌ನಲ್ಲಿರುವ ರೋಮ್ ಚೌಕದ ಪಾರ್ಕಿಂಗ್ ಸ್ಥಳವನ್ನು ಬಿಟ್ಟರೆ ನಗರದ ಉಳಿದ ಪ್ರದೇಶಗಳಲ್ಲಿ ವಾಹನಗಳಿಗೆ ಪ್ರವೇಶ ನಿಷಿದ್ಧ. ಇಡೀ ವೆನಿಸ್ ನಗರವನ್ನು ಪಾದಚಾರಿ ಮಾರ್ಗದ ಮೂಲಕ ನಡೆಯುತ್ತಾ ಸುತ್ತಿ ಬರಬಹುದು. ಅಲ್ಲಲ್ಲಿ ಸಿಗುವ ಕಿರು ಸೇತುವೆಗಳ ಮೂಲಕ 200ಕ್ಕೂ ಹೆಚ್ಚು ಕಾಲುವೆಗಳ ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟಬಹುದು. ಈ ಎಲ್ಲಾ ನೀರಗಾಲುವೆಗಳನ್ನು ಇಂಗ್ಲಿಷಿನ ಎಸ್ ಅಕ್ಷರದ ಆಕಾರದಲ್ಲಿರುವ, 100–200 ಅಡಿ ಅಗಲವಿರುವ ಗ್ರ್ಯಾಂಡ್‌ ಕಾಲುವೆಯೊಡನೆ ಜೋಡಿಸಿ ನಗರದ ನಡುವೆ ಸಂಪರ್ಕ ಕಲ್ಪಿಸಲಾಗಿದೆ. ಈ ಗ್ರ್ಯಾಂಡ್‌ ಕಾಲುವೆ ಸುಮಾರು 3 ಕಿಲೋ ಮೀಟರ್ ಉದ್ದವಿದ್ದು ರೈಲು ನಿಲ್ದಾಣದಿಂದ ಡೋಗ್ಸ್ ಅರಮನೆಯವರೆಗೆ ಸಾಗುತ್ತದೆ.

ಹಳೆಯ ಕಾಲದ ಅಮೃತಶಿಲೆಯ ಕೆಲವು ಸೇತುವೆಗಳನ್ನು ಮಾತ್ರ ಉಳಿಸಿಕೊಂಡು ಹೆಚ್ಚಿನ ಸೇತುವೆಗಳನ್ನು 19ನೇ ಶತಮಾನದಲ್ಲಿ ಮರು ನಿರ್ಮಿಸಲಾಗಿದೆ. ಮುಖ್ಯವಾದ ಸೇತುವೆಗಳಲ್ಲಿ ಅತಿ ಪುರಾತನವಾದದ್ದು ಆಂಟೋನಿಯೊ ಡ ಪಾಂಟ್ ಎಂಬಾತ 1590ರಲ್ಲಿ ವಿನ್ಯಾಸಗೊಳಿಸಿದ ರಿಯಾಲ್ಟೊ ಸೇತುವೆ. ಇದರ ನಂತರದ ಆಕರ್ಷಣೆ 1930ರ ಸುಮಾರಿಗೆ ನಿರ್ಮಿತವಾದ ಅಕಾಡೆಮಿಯಾ ಸೇತುವೆ ಮತ್ತು ರೈಲು ನಿಲ್ದಾಣದ ಬಳಿಯಿರುವ ಸ್ಕಾಲ್ಜಿ ಸೇತುವೆ. 2008ರಲ್ಲಿ ನಿರ್ಮಾಣವಾದ ಕಾಂಸ್ಟಿಟ್ಯೂಷನ್ ಸೇತುವೆ ಇತ್ತೀಚಿನದು.

ನಿಟ್ಟುಸಿರ ಸೇತುವೆ ಎಂಬ ವಿಶೇಷ ಸೇತುವೆಯೊಂದು ಕೂಡಾ ಇಲ್ಲಿದೆ. 1600ರಲ್ಲಿ ಸುಣ್ಣದ ಕಲ್ಲಿನಲ್ಲಿ ನಿರ್ಮಿಸಲಾದ ಈ ಸೇತುವೆ ಡೊಗ್ಸ್ ಅರಮನೆಯ ವಿಚಾರಣಾ ಕೊಠಡಿಯನ್ನು ಸೆರೆಮನೆಗೆ ಸಂಪರ್ಕಿಸುತ್ತದೆ. ಕೈದಿಗಳು ಈ ಸೇತುವೆಯ ಕಿಂಡಿಗಳ ಮೂಲಕ ಕೊನೆಯದಾಗಿ ವೆನಿಸ್ ನಗರದ ನೋಟವನ್ನು ಕಣ್ತುಂಬಿಕೊಳ್ಳುತ್ತಾ ನಿಟ್ಟುಸಿರು ಬಿಡುತ್ತಿದ್ದರೆಂಬ ಕಾರಣಕ್ಕೆ ಈ ಸೇತುವೆಗೆ ‘ದಿ ಬ್ರಿಡ್ಜ್ ಆಫ್ ಸೈಸ್’ ಎಂಬ ಹೆಸರು ಬಂದಿದೆ.

ಊರ ತುಂಬಾ ಹರಡಿರುವ ಕಾಲುವೆಗಳಲ್ಲಿ ಬಗೆ ಬಗೆಯ ಮೋಟಾರ್ ಚಾಲಿತ ದೋಣಿಗಳನ್ನು ಕಾಣಬಹುದು. ಮುನಿಸಿಪಾಲಿಟಿ ನಿರ್ವಹಿಸುವ ಸಾರ್ವಜನಿಕ ಸಾರಿಗೆ, ಆಂಬುಲೆನ್ಸ್, ಪೊಲೀಸ್, ಕಸ ವಿಲೇವಾರಿ ಮುಂತಾದ ವಿಶೇಷ ರೀತಿಯ ಸೇವೆಗಳಿಗಾಗಿ ಇರುವ ದೋಣಿಗಳಲ್ಲದೆ, ಪ್ರವಾಸಿಗರ ನಗರ ದರ್ಶನಕ್ಕಾಗಿ ಇರುವ ಖಾಸಗಿ ಬೋಟ್ ಟ್ಯಾಕ್ಸಿಗಳು, ಹಣ್ಣು, ತರಕಾರಿ ಮತ್ತಿತರೆ ಸರಕುಗಳ ಸಾಗಾಣಿಕೆಯ ದೋಣಿಗಳೂ ಈ ನೀರ ಕಾಲುವೆಗಳಲ್ಲಿಯೇ ಸಾಗಬೇಕು.

ವೆನಿಸ್ ನಗರದಲ್ಲಿ ಪ್ರವಾಸಿಗರಿಗಾಗಿ ಇರುವ ಜನಪ್ರಿಯ ಜಲ ಸಾರಿಗೆ ಎಂದರೆ ಅದು ‘ಗೊಂಡೋಲಾ’. ಮೋಟಾರ್ ಬೋಟ್‌ಗಳ ಕಾಲದಲ್ಲೂ ಗೊಂಡೋಲಾಗಳ ಜನಪ್ರಿಯತೆ ಕುಗ್ಗಿಲ್ಲ. ಇಂದಿಗೂ ಸುಮಾರು 350 ಗೊಂಡೋಲಾಗಳು ವೆನಿಸ್‌ನ ಜಲಮಾರ್ಗಗಳಲ್ಲಿ ಪ್ರವಾಸಿಗರ ವಿಹಾರಕ್ಕಾಗಿ ಸಂಚರಿಸುತ್ತಿವೆ. 600 ಕಿಲೊ ತೂಗುವ ಇವುಗಳ 11ಮೀಟರಿನಷ್ಟು ಉದ್ದದ ನೀಳ ಆಕಾರ, ಕಪ್ಪು ಬಣ್ಣ ಬಳಿದ ಹೊರಮೈ, ಮುಂಬದಿ ಮತ್ತು ಹಿಂಬದಿಯ ವಿಶಿಷ್ಟ ಆಲಂಕಾರಿಕ ರಚನೆ, ಆ ದೋಣಿಗಳನ್ನು ನಡೆಸುವವರ ಹಾವಭಾವ ಇವೆಲ್ಲಾ ಪ್ರವಾಸಿಗರನ್ನು ಸೆಳೆಯುವಲ್ಲಿ ಸಫಲವಾಗಿವೆ. ಒಂದೇ ಹುಟ್ಟು, ಅಂದರೆ ಉದ್ದನೆಯ ಗಳುವಿನ ಸಹಾಯದಿಂದ ಗೊಂಡೋಲಾ ನಡೆಸುವುದನ್ನು ನೋಡುವುದೇ ಒಂದು ಸೊಗಸು. ಗೊಂಡೋಲಾ ನಡೆಸುವ 400ಕ್ಕೂ ಹೆಚ್ಚು ಮಂದಿ ಜನರು ಜೀವನೋಪಾಯಕ್ಕಾಗಿ ಇದನ್ನೇ ಅವಲಂಬಿಸಿದ್ದಾರೆ. ಗೊಂಡೋಲಾ ನಡೆಸುವ ತರಬೇತಿ ನೀಡುವುದಕ್ಕಾಗಿಯೇ ಸಂಸ್ಥೆಯೊಂದಿದೆ. ಇಲ್ಲಿ ವರ್ಷಕ್ಕೆ ನಲವತ್ತು ಜನರಿಗೆ ಮಾತ್ರ ಗೊಂಡೋಲಾ ನಡೆಸುವ ತರಬೇತಿ ನೀಡಲಾಗುತ್ತದೆ. ಪುರುಷರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಗೊಂಡೋಲಾ ನಡೆಸುವ ಏಕೈಕ ಹೆಣ್ಣುಮಗಳೆಂದರೆ ‘ಬೋಸ್ಕೋಲೊ’ ಎಂಬಾಕೆ ಮಾತ್ರ.

ವೆನಿಸ್ ನಗರದ ಒಂದು ದಿನದ ಪ್ರವಾಸದಲ್ಲಿ ಸೇಂಟ್‌ ಮಾರ್ಕ್ಸ್ ಚರ್ಚ್‌, ಡೊಗ್ಸ್ ಅರಮನೆ ಮತ್ತು ಕಿರುದೋಣಿಯ ಸವಾರಿ ಇವೆಲ್ಲವನ್ನೂ ಆನಂದಿಸಬಹುದಾಗಿದೆ. ಅಮೃತಶಿಲೆಯಿಂದ ನಿರ್ಮಿಸಲಾದ ಗೋಥಿಕ್ ಶೈಲಿಯ ಪುರಾತನ ಅರಮನೆ ಮತ್ತು ಚರ್ಚುಗಳ ಗೋಡೆಗಳನ್ನು ಬೃಹತ್ ವರ್ಣಚಿತ್ರಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ.

ಪಾರ್ಕಿಂಗ್ ಪ್ರದೇಶದಲ್ಲಿ ನಮ್ಮ ವಾಹನವನ್ನು ನಿಲ್ಲಿಸಿ ಬಂದರಿನ ಸಮುದ್ರ ದಂಡೆಗೆ ಬಂದರೆ ಅಲ್ಲಿ ನಾನಾ ರೀತಿಯ ದೋಣಿಗಳು, ಹಡಗುಗಳು, ಐಷಾರಾಮಿ ಕ್ರೂಸ್‌ಗಳು ನಿಂತಿರುವುದನ್ನು ಕಾಣಬಹುದು. ಇಲ್ಲಿಂದ ಮೋಟಾರ್ ಬೋಟಿನಲ್ಲಿ ಕುಳಿತು ಗೊಂಡೋಲಾ ವಿಹಾರದ ಕಟ್ಟೆಯ ಬಳಿಗೆ ಸಾಗಬೇಕು. ಗೊಂಡೋಲಾದ ಅರ್ಧ/ ಮುಕ್ಕಾಲು ಘಂಟೆಗಳ ಸವಾರಿಯಲ್ಲಿ ಗ್ರ್ಯಾಂಡ್‌ ಕಾಲುವೆ ಮತ್ತು ಕಿರಿದಾದ ಕೆಲವು ಕಾಲುವೆಗಳ ಮೂಲಕ ಸಾಗುತ್ತಾ ಅಕ್ಕಪಕ್ಕದ ನೋಟವನ್ನು ಸವಿಯಬಹುದಾಗಿದೆ.

ಗೊಂಡೋಲಾ ಸವಾರಿಯ ನಂತರ ಕಾಲುವೆಯ ಬದಿಯಲ್ಲಿ ಸಾಗುವ ಓಣಿಗಳಲ್ಲಿ ನಡೆಯುತ್ತಾ ಶಾಪಿಂಗ್ ಮಾಡಲೂ ಅವಕಾಶವಿದೆ. ವೆನಿಸ್ಸಿನ ಪಾರಂಪರಿಕ ಕೈಗಾರಿಕೆ- ಗಾಜಿನ ಕಲಾಕೃತಿಗಳ ತಯಾರಿಕೆ. ಆದರೆ ಇತ್ತೀಚೆಗೆ ಪ್ರವಾಸಿಗರು ಸ್ಮರಣಿಕೆಯಾಗಿ ಕೊಂಡೊಯ್ಯಬಲ್ಲ ಸಣ್ಣ ಸಣ್ಣ ವಸ್ತುಗಳಿಗಷ್ಟೇ ಸೀಮಿತವಾಗಿದೆಯೆಂದು ಹೇಳಲಾಗುತ್ತದೆ. ವಾಯು ಮಾಲಿನ್ಯದ ದೆಸೆಯಿಂದಾಗಿ ಅಮೂಲ್ಯ ವಾಸ್ತುವುಳ್ಳ ಕಟ್ಟಡಗಳು ಹಾಳಾಗುವುದನ್ನು ಗಮನಿಸಿ ಗಾಜಿನ ಕೈಗಾರಿಕೆಗಳನ್ನು ಸನಿಹದ ಮುರಾನೋ ದ್ವೀಪಕ್ಕೆ ಸ್ಥಳಾಂತರಿಸಲಾಯಿತು. ಇದಲ್ಲದೆ ಲೇಸುಗಳ ತಯಾರಿಕೆ, ಬಟ್ಟೆಗಳು ಮತ್ತು ಪೀಠೋಪಕರಣಗಳ ತಯಾರಿಕೆಯ ಕಾರ್ಖಾನೆಗಳು ವೆನಿಸ್‌ನಲ್ಲಿವೆ. ಮೂರು ಶತಮಾನಗಳಿಂದೀಚೆಗೆ ಪ್ರವಾಸೋದ್ಯಮವೇ ವೆನಿಸ್‌ನ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇಲ್ಲಿನ ಹೆಚ್ಚಿನ ಜನರು ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟ ಉದ್ಯೋಗಗಳಲ್ಲಿಯೇ ತೊಡಗಿಸಿಕೊಳ್ಳುವುದು ಸಾಮಾನ್ಯ. 1980ರಿಂದೀಚೆಗೆ ನಾಡಹಬ್ಬದ ರೀತಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕಲೆ, ಸಿನಿಮಾ, ನೃತ್ಯ ಮತ್ತು ರಂಗ ಚಟುವಟಿಕೆಗಳು ಪ್ರಪಂಚದಾದ್ಯಂತ ಇರುವ ಕಲಾರಸಿಕರನ್ನು ವೆನಿಸ್‍ಗೆ ಸೆಳೆದು ತರುತ್ತವೆ. ಪ್ರತಿವರ್ಷ ಇಲ್ಲಿ ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ವಿಶೇಷವಾಗಿ ಉಲ್ಲೇಖನೀಯ.

ಕಾಲುವೆ ನೀರಿನಲ್ಲಿ ಪ್ರತಿಬಿಂಬಿತವಾಗಿರುವ ಅರಮನೆಗಳು, ಗಂಟೆಗೋಪುರಗಳು, ಬೃಹತ್ ಗೋಳಾಕಾರದ ಚಾವಣಿಗಳು ಇವೆಲ್ಲವನ್ನು ನೋಡುತ್ತಿದ್ದರೆ ಹೊಸ ಲೋಕವೊಂದಕ್ಕೆ ಹೋದ ಅನುಭವವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT