ಮಂಗಳವಾರ, ಮೇ 26, 2020
27 °C

ಮೂರು ಸುತ್ತಿನ ಕೋಟೆ ಏರುತ್ತಾ...

ರಾಖಿಗೌಡ Updated:

ಅಕ್ಷರ ಗಾತ್ರ : | |

Deccan Herald

ಅಲ್ಲೊಂದು ದೊಡ್ಡ ಬೆಟ್ಟ. ಬೆಟ್ಟದ ಬುಡದಲ್ಲೊಂದು ಪುಟ್ಟ ಕೆರೆ. ಬೆಟ್ಟವೇರಲು ಕಡಿದಾದ ದಾರಿ. ಏರಿದ ನಂತರ ಮೋಡ ಕೈಗೆ ಸಿಕ್ಕಷ್ಟು ಖುಷಿ. ಈ ಬೆಟ್ಟಗಳ ಮೇಲೆ ಕೂತು ಫೋಟೊ ತೆಗೆಯುವಾಗ ಸಿಗುವ ಖುಷಿ ವರ್ಣಿಸಲ ಸದಳ.

ಚನ್ನರಾಯನದುರ್ಗದ ವಿಶೇಷತೆಯೇ ಹಾಗೆ. ಆ ದುರ್ಗದ ತುದಿಯಲ್ಲಿರುವ ಕಟ್ಟೆಯ ಮೇಲೆ ಕುಳಿತರೆ ನಾವು ಎಷ್ಟು ಸಣ್ಣವರು ಎನ್ನಿಸಿಬಿಡುತ್ತದೆ. ಇದೇ ಭೂಮಿಯ ಕೊನೆ ಏನೋ ಎಂಬಂತೆ ಭಾಸವಾಗುತ್ತದೆ. ಇಂಥ ಬೆಟ್ಟವನ್ನು ಹತ್ತಬೇಕೆಂದು ನಾವು ತೀರ್ಮಾನಿಸಿದೆವು. ಒಂದು ದಿನ ಬೆಳಿಗ್ಗೆ 11 ಗಂಟೆಗೆ ಮೂವರು ಗೆಳೆಯರು ದ್ವಿಚಕ್ರ ವಾಹನದಲ್ಲಿ ಚನ್ನರಾಯನದುರ್ಗದತ್ತ ಹೊರಟೆವು. ಬೆಟ್ಟ ತಲುಪಿದಾಗ ಮಧ್ಯಾಹ್ನ 1 ಗಂಟೆಯಾಗಿತ್ತು. ಬಿಸಿಲಿನ ತಾಪ ಶುರುವಾಗಿತ್ತು. ಮಳೆ ಬರುವ ಸೂಚನೆಯೂ ಕಾಣುತ್ತಿತ್ತು. ಈ ಹವಾಮಾನದ ಜತೆಗೆ ನಮ್ಮ ಚಾರಣವೂ ಆರಂಭವಾಯಿತು.

ಬೆಟ್ಟಕ್ಕೆ ದಾರಿ ಅಂತ ಏನು ಇಲ್ಲ. ಸುಮ್ಮನೆ ಹಾಗೆ ಒಂದು ಕಡೆ ಮಾತ್ರ ಬೆಟ್ಟ ಹತ್ತಲು ಬಣ್ಣದಿಂದ ಗುರುತು ಬರೆದಿದ್ದಾರೆ. ಅದನ್ನೇ ಆಧರಿಸಿ ಸಾಗುತ್ತಿದ್ದರೆ ನಮಗೆ ಮೊದಲನೇ ಸುತ್ತಿನ ಕೋಟೆ ಕಾಣುತ್ತದೆ. ಈ ಕೋಟೆಯನ್ನು ತಲುಪಲು ದಾರಿ ತುಂಬಾ ಕಡಿದಾಗಿದೆ, ಹತ್ತಲು ಸ್ವಲ್ಪ ಆಯಾಸ ಆಗುತ್ತದೆ.

ಬಿಸಿಲಿನ ಬೇಗೆಯಲ್ಲೂ ತಣ್ಣನೆ ಗಾಳಿ ಬೀಸುತ್ತಿದ್ದರಿಂದ ನಮಗೆ ಅಷ್ಟು ಆಯಾಸ ಆಗಲಿಲ್ಲ. ನಾವು ಸ್ವಲ್ಪ ಶಾರ್ಟ್‌ಕಟ್‌ ದಾರಿ ಬಳಸಲು ಹೋಗಿ, ತುಂಬಾ ಕಡಿದಾದ ಹಾದಿ ಹಿಡಿದೆವು. ಹಿಂದಿ ತಿರುಗಿ ನೋಡಿದರೆ ಭಯ ಹುಟ್ಟಿಸುವ ಪಾತಾಳ, ಹಿಂದೆ ನೋಡದೆ, ಮುಂದಕ್ಕೆ ಹೆಜ್ಜೆ ಹಾಕುತ್ತಿದ್ದಾಗ ಕೈ ಕಾಲು ನಡಗಲಾರಂಭಿಸಿತು ಹಾಗೂ ಹೀಗೂ ಮಾಡಿ ಕಡಿದಾದ ಬೆಟ್ಟವನ್ನು ಹತ್ತಿದೆವು. ಮೊದಲನೇ ಸುತ್ತಿನ ಕೋಟೆ ತಲುಪಿದಾಗ ಮನಸ್ಸಿಗೆ ಸಮಾಧಾನವಾಯಿತು. ಅಲ್ಲಿಂದ ಮುಂದಿನ ದಾರಿ ಅಷ್ಟು ಕಡಿದಾಗಿರಲಿಲ್ಲ. ಆದರೂ ಇನ್ನೂ ಎರಡು ಸುತ್ತಿನ ಕೋಟೆಯನ್ನು ನೋಡಲು ಬೆಟ್ಟ ಹತ್ತಲೇ ಬೇಕಿತ್ತು.

ಮೊದಲನೇ ಸುತ್ತು ಏರಿದಾಗ ಕೋಟೆಯ ವಿಹಂಗಮ ನೋಟ ಕಂಡಿತು. ಅದರ ಜತೆಗೆ ಕಲ್ಲಿನ ಮಂಟಪ, ಜನರು ವಾಸಿಸುತ್ತಿದ್ದ ಕಲ್ಲಿನ ಕೋಣೆಗಳು ಕಂಡವು. ಪಾಳು ಬಿದ್ದ ಕೋಣೆಗಳಲ್ಲಿ ಕಲ್ಲಿನ ಕಣಜಗಳಿದ್ದವು. ಕೋಣೆಯ ಒಳಗೆ ಹೋಗಿ ನೋಡಿದಾಗ, ಅಲ್ಲಿ ಸಣ್ಣ ಕಿಂಡಿಗಳು ಕಾಣಿಸಿದವು. ಕೋಟೆಯ ಒಳಹೊಕ್ಕು ನೋಡಿದಾಗ, ಅಲ್ಲಲ್ಲಿ ಗುಂಡಿಳಿದ್ದು, ಅವುಗಳಲ್ಲಿ ನೀರು ನಿಂತಿತ್ತು. ಪಕ್ಕದಲ್ಲೇ ಒಂದು ಸುಂದರ ದೇವಸ್ಥಾನ, ಅದರ ಮುಂದೆ ದೊಡ್ಡ ಕಲ್ಯಾಣಿ ಇತ್ತು. ಇವೆಲ್ಲ ನೋಡುತ್ತಾ ನಮ್ಮ ಆಯಾಸವೆಲ್ಲ ಮರೆತು ಹೋಯಿತು.

ಚನ್ನರಾಯನದುರ್ಗದ ಕೋಟೆಯನ್ನು ನೋಡುತ್ತಿದ್ದರೆ ಇಲ್ಲಿ ಒಂದು ಸಾಮ್ರಾಜ್ಯವೇ ಆಳಿ ಹೋಗಿರಬೇಕು ಎನಿಸುತ್ತಿತ್ತು. ಪಾಳು ಬಿದ್ದ ಮಂಟಪ, ಕಲ್ಲು ಕಟ್ಟಡಗಳು, ಮೂರು ಸುತ್ತಿನ ಕೋಟೆ... ಇವೆಲ್ಲ ಆಳ್ವಿಕೆಯ ಕುರುಹನ್ನು ಸೂಚಿಸುತ್ತಿದ್ದವು.

ಮೊದಲು ಸುತ್ತು ಕೋಟೆ ಏರಿದ ಜೋಶ್‌ನಲ್ಲಿ ಬಾಕಿ ಉಳಿದಿದ್ದ ಇನ್ನೆರಡು ಸುತ್ತಿನ ಕಲ್ಲಿನ ಕೋಟೆಗಳನ್ನೂ ಏರಿದೆವು.

ಮೂರನೇ ಸುತ್ತಿನ ಕೋಟೆಯ ತುದಿಯಲ್ಲಿ ಕುಳಿತು ಸುತ್ತಲಿನ ಪ್ರದೇಶವನ್ನು ಗಮನಿಸುತ್ತಿದ್ದಾಗ ದೂರದಲ್ಲಿದ್ದ ಮಧುಗಿರಿ, ಮಿಡಿಗೇಶಿಯ ಬೆಟ್ಟದ ಸಾಲುಗಳು ಕಂಡವು. ಬೆಟ್ಟಗಳನ್ನು ನೋಡುತ್ತಾ, ಸ್ನೇಹಿತರು ತಂದಿದ್ದ ಬಾಳೆಹಣ್ಣು, ಸ್ವಲ್ಪ ತಿನಿಸುಗಳನ್ನು ತಿಂದು ವಿಶ್ರಾಂತಿ ಪಡೆವು.

ಆ ವೇಳೆಗಾಗಲೇ ಆಕಾಶದಲ್ಲಿ ಮೋಡ ಮಡುಗಟ್ಟಿತ್ತು. ಬೆಟ್ಟದ ಸಾಲು, ಮೋಡಗಳು ತುಂಬಿದ ಆಕಾಶ, ಹಿತವಾದ ಗಾಳಿಯನ್ನು ಆಸ್ವಾದಿಸುತ್ತಾ ಬೆಟ್ಟ ಇಳಿಯಲು ಪ್ರಾರಂಭಿಸಿದೆವು. ಇಳಿಯುವ ಹೆಜ್ಜೆಯ ಜತೆಗೆ ಮನದಲ್ಲಿ, ಬೆಟ್ಟದ ಮೇಲೆ ಕಂಡ ದೃಶ್ಯಗಳದ್ದೇ ನೆನಪು. ಪ್ರಕೃತಿಯಲ್ಲಿ ಎಷ್ಟೆಲ್ಲ ಅಚ್ಚರಿಗಳಿವೆ, ನಿಗೂಢಗಳಿವೆ ಎಂದು ಯೋಚಿಸುತ್ತ ಬೆಂಗಳೂರಿನ ಕಡೆ ನಮ್ಮ ಪಯಣ ಶುರು ಮಾಡಿದೆವು.

ನಮಗನ್ನಿಸಿದ್ದು, ಟ್ರೆಕ್ಕಿಂಗ್‌ ಮಾಡುವವರಿಗೆ ಈ ಬೆಟ್ಟ ಹತ್ತುವುದು ಸುಲಭವಾಗಬಹುದು. ಆದರೆ ಟ್ರೆಕ್ಕಿಂಗ್‌ ಅನುಭವ ಇಲ್ಲದವರಿಗೆ ಈ ದುರ್ಗವನ್ನು ಏರಿ ಗೆಲ್ಲುವುದು ಸ್ವಲ್ಪ ಕಷ್ಟವೇ. ಹೇಗಾದರೂ ನಾನು ದಾರಿ ಮಾಡಿಕೊಂಡು ದುರ್ಗವನ್ನು ಹತ್ತಿಯೇ ಹತ್ತುತ್ತೇನೆ ಅಂತ ನೀವಂದುಕೊಂಡರೆ ಚನ್ನರಾಯನದುರ್ಗ ಕೈ ಹಿಡಿದು ಹತ್ತಿಸಿಕೊಳ್ಳುತ್ತದೆ. ಒಮ್ಮೆ ಪ್ರೀತಿಯಿಂದ ಹೋಗ್ಬನ್ನಿ.

ಚನ್ನರಾಯನದುರ್ಗಕ್ಕೆ ಹೀಗೆ ಹೋಗಿ...
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನಲ್ಲಿರುವ ಚನ್ನರಾಯನದುರ್ಗವು ಬೆಂಗಳೂರಿನಿಂದ ಸುಮಾರು 100 ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ತುಮಕೂರಿಗೆ ಹೋಗುವ ಮಾರ್ಗದಲ್ಲಿ ದಾಬಸ್ಪೇಟೆ ಮೇಲ್ಸೇತುವೆ ಹತ್ತಿರ ಬಲಕ್ಕೆ ತಿರುವು ತೆಗೆದುಕೊಳ್ಳಬೇಕು. ಅದು ಮಧುಗಿರಿಗೆ ಹೋಗುವ ದಾರಿ. ಆ ದಾರಿಯಲ್ಲಿ ಸಾಗಿದರೆ ಕೊರಟಗೆರೆ ಸಿಗುತ್ತದೆ. ಅಲ್ಲಿಂದ ಮಧುಗಿರಿಯತ್ತ 2 ಕಿ.ಮೀ ಕ್ರಮಿಸಿ ಎಡ ತಿರುವು ತೆಗೆದುಕೊಂಡು, 8.ಕಿಮೀ ಕ್ರಮಿಸಿದರೆ ಚನ್ನರಾಯನದುರ್ಗ ಸಿಗುತ್ತದೆ. ಬೆಂಗಳೂರು – ಕೊರಟಗೆರೆ ಮತ್ತು ತುಮಕೂರು –ಕೊರಟಗೆರೆ ನಡುವೆ ಸಾಕಷ್ಟು ಬಸ್ಸುಗಳಿವೆ. ಆದರೆ, ಕೊರಟಗೆರೆ– ಚನ್ನರಾಯನದುರ್ಗದ ಗ್ರಾಮಕ್ಕೆ ಹೋಗುವ ಬಸ್ಸುಗಳ ಸಂಖ್ಯೆಯು ಬಹಳ ಕಡಿಮೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.